ಪೊಲೀಸರೇ ಹೋರಾಟಕ್ಕೆ ಅಡ್ಡಿಪಡಿಸದೆ ಮುಂದೆ ನಿಂತು ರಕ್ಷಣೆ ಕೊಡಿ, ಇದು ನಿಮ್ಮ ಅಸ್ತಿತ್ವಕ್ಕಾಗಿರುವ ಹೋರಾಟ : ಭಾಸ್ಕರ್ ಪ್ರಸಾದ್ - Karavali Times ಪೊಲೀಸರೇ ಹೋರಾಟಕ್ಕೆ ಅಡ್ಡಿಪಡಿಸದೆ ಮುಂದೆ ನಿಂತು ರಕ್ಷಣೆ ಕೊಡಿ, ಇದು ನಿಮ್ಮ ಅಸ್ತಿತ್ವಕ್ಕಾಗಿರುವ ಹೋರಾಟ : ಭಾಸ್ಕರ್ ಪ್ರಸಾದ್ - Karavali Times

728x90

16 February 2020

ಪೊಲೀಸರೇ ಹೋರಾಟಕ್ಕೆ ಅಡ್ಡಿಪಡಿಸದೆ ಮುಂದೆ ನಿಂತು ರಕ್ಷಣೆ ಕೊಡಿ, ಇದು ನಿಮ್ಮ ಅಸ್ತಿತ್ವಕ್ಕಾಗಿರುವ ಹೋರಾಟ : ಭಾಸ್ಕರ್ ಪ್ರಸಾದ್





ಬಂಟ್ವಾಳ (ಕರಾವಳಿ ಟೈಮ್ಸ್) : ಮಧ್ಯ ಏಷ್ಯಾದಿಂದ ಅನ್ನಾಹಾರ ಹುಡುಕಿಕೊಂಡು ಅಸ್ತಿತ್ವಕ್ಕಾಗಿ ಅಲೆದಾಡಿ ಬಂದವರು ಈ ದೇಶದ ಮೂಲ ನಿವಾಸಿಗಳ ಪೌರತ್ವ ಸಾಬೀತಿಗೆ ಅಪೇಕ್ಷೆ ಪಟ್ಟರೆ ಅದನ್ನು ಒಪ್ಪಿಕೊಳ್ಳಲು ಅದೇಗೆ ಸಾಧ್ಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಭಾಸ್ಕರ್ ಪ್ರಸಾದ್ ಪ್ರಶ್ನಿಸಿದರು.
    ಸಿಎಎ, ಎನ್ ಆರ್ ಸಿ ಹಾಗೂ ಎನ್ ಪಿ ಆರ್ ಕಾನೂನು ವಿರೋಧಿಸಿ ಕೊಳ್ನಾಡು-ಸಾಲೆತ್ತೂರು ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಭಾನುವಾರ ಸಾಲೆತ್ತೂರಿನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಆರೆಸ್ಸೆಸ್ ಮುಖಂಡರು ಸಮಾಜದ ಕೆಳವರ್ಗದ ಜನರನ್ನು ಜಾತಿ-ಧರ್ಮದ ಆಧಾರದಲ್ಲಿ ವಿಭಜಿಸಿ ತಮ್ಮ ಆಡಳಿತ ಶಾಹಿ ಮನೋಭಾವವನ್ನು ವಿಸ್ತರಿಸುತ್ತಿದ್ದಾರೆಯೇ ವಿನಃ ಇಂತಹ ಸಮಾಜ ಬಾಹಿರ ಚಟುವಟಿಕೆಗಳಿಗೆ ಯಾವತ್ತೂ ತಮ್ಮ ಮಕ್ಕಳನ್ನು, ಕುಟುಂಬಿಕರನ್ನು ಪ್ರಚೋದಿಸುತ್ತಿಲ್ಲ ಎಂದರು.
    ಆರೆಸ್ಸೆಸ್ ಮುಂದಾಳುಗಳ ಮಕ್ಕಳು ವಿದೇಶಗಳಲ್ಲೋ ಅಥವಾ ಐಟಿ, ಬಿಟಿ ಕಂಪೆನಿಗಳಲ್ಲೋ ಉದ್ಯೋಗಗಿಟ್ಟಿಸಿಕೊಂಡು ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇತ್ತ ಸಮಾಜದ ಬಡ ಹಾಗೂ ಮಧ್ಯಮ ವರ್ಗದ ಜನರ ಮಕ್ಕಳ ಮನಸ್ಸಿಗೆ ಜಾತಿ ವಿಷ ಬೀಜ ಬಿತ್ತುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
    ಆರೆಸ್ಸೆಸ್ ಸಂಘದಲ್ಲಿರುವ ಹಿಂದುಳಿದ ಜನಾಂಗದ ಮಂದಿ ಇವರ ಹಿಡನ್ ಅಜೆಂಡಾ ಅರ್ಥ ಮಾಡಿಕೊಂಡು ಹೊರ ಬಂದರೆ ಅಲ್ಲಿ ಉಳಿಯುವುದು ಅಧಿಕಾರದ ಮಜಾ ಅನುಭವಿಸುತ್ತಿರುವ ಕೇವಲ 2 ಶೇಕಡಾ ಮಂದಿ ಬ್ರಾಹ್ಮಣಶಾಹಿಗಳು ಮಾತ್ರ. ಆರೆಸ್ಸೆಸ್ ಇಂತಹದ್ದೇ ದೇಶ ಒಡೆಯುವ ಕೆಲಸ ಮಾಡುತ್ತಲೇ ಮುಂದುವರಿದರೆ ಆರೆಸ್ಸೆಸ್ ಶಾಖೆಗಳಲ್ಲಿರುವ ಹಿಂದುಳಿದ ವರ್ಗದ ಜನ ಸಾಮೂಹಿಕವಾಗಿ ಬಹಿಷ್ಕಾರ ಹಾಕಿ ಹೊರಬರುವ ಮೂಲಕ ಬ್ರಾಹ್ಮಣಶಾಹಿಗಳನ್ನು ಒಂಟಿಯಾಗಿ ಮಾಡುವ ದಿನ ದೂರವಿಲ್ಲ ಎಂದು ಎಚ್ಚರಿಸಿದ ಭಾಸ್ಕರ ಪ್ರಸಾದ್ ಕರಾವಳಿ ಜಿಲ್ಲೆಗಳಲ್ಲಿ ವಿವಿಧ ಕಂಪೆನಿಗಳನ್ನು ನಡೆಸಿಕೊಂಡು ವ್ಯವಹಾರ ನಡೆಸುತ್ತಿರುವ ಮುಸ್ಲಿಮರು ಶೇ 80ರಷ್ಟು ಮಂದಿ ದಲಿತ, ಹಿಂದುಳಿದ ಜಾತಿಗಳ ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಕ್ರೈಸ್ತರ ವಿದ್ಯಾ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ, ಹಿಂದುಳಿದ ಜಾತಿಗಳ ಮಕ್ಕಳೇ ಶಿಕ್ಷಣ ಪಡೆಯುತ್ತಿದ್ದಾರೆ. ಅಂತಹ ಮುಸ್ಲಿಮ್ ಮತ್ತು ಕ್ರೈಸ್ತರ ವಿರುದ್ಧ ಯಾರದ್ದೋ ಮಾತು ಕೇಳಿ ದಲಿತ, ಹಿಂದುಳಿದ ಜಾತಿಗಳ ಯುವಕರು ದಾಳಿ ಮಾಡುತ್ತಿದ್ದಾರೆ. ದಾಳಿಗೆ ಪ್ರೆರೇಪಿಸುವವರು ಅವರ ಮನೆಯ ಅಂಗಳಕ್ಕೆ, ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಇಂತಹ ಸಮಾಜ ವಿರೋಧಿಗಳ ಕುತಂತ್ರದಿಂದ ದಲಿತರು, ಹಿಂದುಳಿದ ಜಾತಿಗಳ ಯುವಕರು ಜಾಗೃತರಾಗಿ ಸುಂದರ ಬದುಕು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
    20 ವರ್ಷ ಆರೆಸ್ಸೆಸ್ಸಿನ ಎಲ್ಲಾ ಹಂತಗಳಲ್ಲೂ ಕೆಲಸ ಮಾಡಿ ಅನುಭವವಿರುವ ನನಗೆ ಅದರ ಅಜೆಂಡಾ, ರಹಸ್ಯ ಕಾರ್ಯಸೂಚಿಗಳೆಲ್ಲವೂ ಚೆನ್ನಾಗಿ ಗೊತ್ತಿದೆ. ನಾನು ಅರ್ಥ ಮಾಡಿಕೊಂಡ ಸತ್ಯವನ್ನು ಸಮಾಜದ ಇತರ ಹಿಂದುಳಿದ ವರ್ಗದ ಯುವಕರೂ ಅರ್ಥ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಇದೀಗ ಬಹಿರಂಗ ಸವಾಲು ಮಾಡಲು ಹೊರಟಿದ್ದೇನೆ ಎಂದ ಭಾಸ್ಕರ ಪ್ರಸಾದ್ ಆರೆಸ್ಸೆಸ್ ಕಾರ್ಯಕರ್ತರು ನಿಮ್ಮ ನಾಯಕರಿಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ. ನಿಮ್ಮ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಅವರಿಂದ ದೊರೆತರೆ ನಿಮ್ಮ ಪಾದಪೂಜೆ ಮಾಡಿ ನಾವೂ ನಿಮ್ಮ ಜೊತೆ ಸೇರಿಕೊಳ್ಳುತ್ತೇವೆ. ನಿಮ್ಮ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಿಲ್ಲವರ ಕಪಿಮುಷ್ಠಿಯಿಂದ ಹೊರಬಂದು ಈ ದೇಶದ ಸ್ವಾತಂತ್ರ್ಯ, ಸಂವಿಧಾನ, ಕಾನೂನಿನ ಉಳಿವಿಗಾಗಿ ಹೋರಾಟಕ್ಕೆ ಸಜ್ಜಾಗಿ ಎಂದು ಕರೆ ನೀಡಿದರು.
ಪೊಲೀಸರೇ ಹೋರಾಟಕ್ಕೆ ಅಡ್ಡಿ ಪಡಿಸದಿರಿ
    ಈ ದೇಶದ ಸ್ವಾತಂತ್ರ್ಯ ಹಾಗೂ ಸಂವಿಧಾನ ಉಳಿಸಲು ನಾವು ಹೋರಾಡುತ್ತಿದ್ದೇವೆ. ಇದರಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಅಸ್ತಿತ್ವವೂ ಅಡಗಿದೆ. ಇದನ್ನು ಅರ್ಥ ಮಾಡಿಕೊಂಡು ಹೋರಾಟಗಾರರನ್ನು ದಮನಿಸುವ ಕೆಲಸಕ್ಕೆ ಕೈ ಹಾಕದೆ ನೀವೇ ಮುಂದೆ ನಿಂತು ರಕ್ಷಣೆ ನೀಡುವ ಮೂಲಕ ಯದಾರ್ಥವಾಗಿ ನಿಮ್ಮ ರಕ್ಷಣೆಯನ್ನು ನೀವು ನಮ್ಮ ಮೂಲಕ ಮಾಡಿಕೊಳ್ಳಿ ಎಂದು ಭಾಸ್ಕರ ಪ್ರಸಾದ್ ಪೊಲೀಸರಿಗೆ ಕಿವಿ ಮಾತು ಹೇಳಿದರು.
    ಆಳುವ ಸರಕಾರದ ಜನವಿರೋಧಿ ನಡೆಯ ವಿರುದ್ದ ನಮ್ಮ ಹೋರಾಟ ನಡೆಯುತ್ತಿರುವಾಗ ಇದಕ್ಕೆ ಸರಕಾರದಿಂದ ಅನುಮತಿ ಪಡೆಯುವುದು ತಪ್ಪಾಗುತ್ತದೆ. ಹೋರಾಟ-ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವ ಭಾರತದಲ್ಲಿ ಪ್ರತಿಯೊಬ್ಬರ ಹಕ್ಕಾಗಿದೆ. ಆದುದರಿಂದ ನಾವು ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ. ಇದಕ್ಕೆ ಪೊಲೀಸರ ಅನುಮತಿ ನಮಗೆ ಬೇಕಾಗಿಲ್ಲ. ನಾವೇನೂ ಕಾನೂನು ಮುರಿದು ಹೋರಾಟ ಮಾಡುತ್ತಿಲ್ಲ. ಕಾನೂನು-ಸಂವಿಧಾನದ ರಕ್ಷಣೆಗಾಗಿ ಈ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ. ಅಸಹಕಾರ ಚಳುವಳಿಯನ್ನು ನಡೆಸುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಪೊಲೀಸರು ಸ್ವತಃ ಮುಂದೆ ನಿಂತು ನಮಗೆ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಕಿವಿ ಮಾತು ಹೇಳಿದರು.    
    ಪ್ರತಿಭಟನೆಯನ್ನುದ್ದೇಶಿಸಿ ಜ್ಞಾನಪ್ರಕಾಶ್ ಸ್ವಾಮೀಜಿ ಮೈಸೂರು, ಚಿಂತಕ ಮಹೇಂದ್ರ ಕುಮಾರ್, ಮಾಜಿ ಸಚಿವ ಬಿ ರಮಾನಾಥ ರೈ, ಸಾಲೆತ್ತೂರು ನಿತ್ಯಾಧರ್ ಚರ್ಚ್ ಧರ್ಮಗುರು ಹೆನ್ರಿ ಡಿ’ಸೋಜ, ಪ್ರಮುಖರಾದ ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ, ಹಾಫಿಳ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮಾತನಾಡಿದರು.
    ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾ ಪಂ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ, ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಜಿಲ್ಲಾ ದಲಿತ ಸೇವಾ ಸಮಿತಿ ಅಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮೊದಲಾದರು ಭಾಗವಹಿಸಿದ್ದರು.
    ಕಾರ್ಯಕ್ರಮದ ಸಂಚಾಲಕರುಗಳಾದ ಎ ಬಿ ಅಬ್ದುಲ್ಲಾ ಸ್ವಾಗತಿಸಿ, ಎಂ ಎಸ್ ಮುಹಮ್ಮದ್ ಪ್ರಸ್ತಾವನೆಗೈದರು. ಅಶ್ರಫ್ ಸವಣೂರು ಕ್ರಾಂತಿ ಗೀತೆ ಹಾಡಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಪೊಲೀಸರೇ ಹೋರಾಟಕ್ಕೆ ಅಡ್ಡಿಪಡಿಸದೆ ಮುಂದೆ ನಿಂತು ರಕ್ಷಣೆ ಕೊಡಿ, ಇದು ನಿಮ್ಮ ಅಸ್ತಿತ್ವಕ್ಕಾಗಿರುವ ಹೋರಾಟ : ಭಾಸ್ಕರ್ ಪ್ರಸಾದ್ Rating: 5 Reviewed By: lk
Scroll to Top