ಲಾಕ್‍ಡೌನ್ ಸಂಕಷ್ಟಕ್ಕೆ ಸಿಎಂ ತೇಪೆ : 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ - Karavali Times ಲಾಕ್‍ಡೌನ್ ಸಂಕಷ್ಟಕ್ಕೆ ಸಿಎಂ ತೇಪೆ : 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ - Karavali Times

728x90

6 May 2020

ಲಾಕ್‍ಡೌನ್ ಸಂಕಷ್ಟಕ್ಕೆ ಸಿಎಂ ತೇಪೆ : 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ



ನೇಕಾರರಿಗೆ ಬಂಪರ್ ಗಿಫ್ಟ್: ನೇಕಾರರ ಸಾಲಮನ್ನಾಗೆ 80 ಕೋಟಿ ಬಿಡುಗಡೆ


ಬೆಂಗಳೂರು (ಕರಾವಳಿ ಟೈಮ್ಸ್) : ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾಗಿರುವ ಅಗಸರು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ಜನರಿಗೆ ರಾಜ್ಯ ಸರ್ಕಾರ 1,610 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಪ್ರಕಟಿಸುವ ಮೂಲಕ ಜನರ ಸಂಕಷ್ಟಕ್ಕೆ ತೇಪೆ ಹಚ್ಚುವ ಪ್ರಯತ್ನ ನಡೆಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಅಗಸರು ಹಾಗೂ ಕ್ಷೌರಿಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಇದರಿಂದ ಸುಮಾರು 60 ಸಾವಿರ ಅಗಸರು ಹಾಗೂ 2 ಲಕ್ಷದ 30 ಸಾವಿರ ಕ್ಷೌರಿಕ ಸಮುದಾಯದವರಿಗೆ ಈ ನೆರವು ದೊರೆಯಲಿದೆ ಎಂದರು.

ರಾಜ್ಯದಲ್ಲಿರುವ 7 ಲಕ್ಷದ 75 ಸಾವಿರ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ತರಕಾರಿ ಹಾಗೂ ಹಣ್ಣು ಬೆಳೆಗಾರರು ಸಂಕಷ್ಟದಲ್ಲಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಲಾಗುವುದು ಎಂದ ಸಿಎಂ ನೇಕಾರರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿ 54 ಸಾವಿರ ನೇಕಾರರಿಗೆ ವರ್ಷಕ್ಕೆ 2 ಸಾವಿರ ರೂಪಾಯಿ ನೆರವು ನೀಡಲಾಗುವುದು ಎಂದರು.

ಕಳೆದ ಒಂದೂವರೆ ತಿಂಗಳಿನಿಂದ ಲಾಕ್‍ಡೌನ್ ಪರಿಣಾಮವಾಗಿ ವಿವಿಧ ನಿರ್ಬಂಧಗಳನ್ನು ಹೇರಿರುವುದರಿಂದ ಎಲ್ಲ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸಿದ್ದಾರೆ. ಲಾಕ್‍ಡೌನ್‍ನಿಂದಾಗಿ ಎಲ್ಲ ದೇವಾಲಯಗಳು ಮುಚ್ಚಿರುವುದರಿಂದ ಹಬ್ಬ, ಮದುವೆ, ಸಭೆ-ಸಮಾರಂಭಗಳು ಹಾಗೂ ಮತ್ತಿತರ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದರಿಂದ ಹೂವುಗಳ ಬೇಡಿಕೆ ಇಲ್ಲದೇ ಹೂವು ಬೆಳೆಗಾರರು ತಾವು ಬೆಳೆದಿರುವ ಎಲ್ಲ ಹೂವುಗಳನ್ನು ತಮ್ಮ ಹೊಲದಲ್ಲೇ ನಾಶ ಮಾಡುವ ಪರಿಸ್ಥಿತಿ ಉದ್ಭವಿಸಿದೆ. ಒಟ್ಟಾರೆ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವುಗಳು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಇದರಿಂದ ಎಲ್ಲ ರೀತಿಯ ಹೂವುಗಳು ಬೆಳೆದಿರುವ ರೈತರಿಗೆ ನೆರವಾಗಲು ಸರಕಾರ ಹೆಕ್ಟೇರ್‍ಗೆ ಗರಿಷ್ಠ 25,000 ರೂಪಾಯಿಗಳಂತೆ ಪರಿಹಾರ ನೀಡಲಾಗುವುದು ಎಂದರು.

ಈ ವರ್ಷ ರಾಜ್ಯದಲ್ಲಿ ತರಕಾರಿ ಮತ್ತು ಹಣ್ಣುಗಳು ಇಳುವರಿಯು ಉತ್ತಮವಾಗಿರುತ್ತದೆ. ಆದರೆ ಕೋವಿಡ್-19 ಪರಿಣಾಮ ರಾಷ್ಟ್ರಾದ್ಯಂತ ಲಾಕ್‍ಡೌನ್‍ನಿಂದಾಗಿ ರೈತರು ತಮ್ಮ ಬೆಳೆಗಳಿಗೆ ಸೂಕ್ತ ದರಗಳನ್ನು ಪಡೆಯಲು ಸಾಧ್ಯವಾಗಿಲ್ಲ. ನಷ್ಟಕ್ಕೆ ಒಳಗಾಗಿರುವ ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದ ಯಡಿಯೂರಪ್ಪ ಕೋವಿಡ್-19ನಿಂದಾಗಿ ರೈತರಷ್ಟೇ ಅಲ್ಲದೆ ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗಸರ ಹಾಗೂ ಕ್ಷೌರಿಕರ ವೃತ್ತಿಯಲ್ಲಿ ತೊಡಗಿರುವವರು ಒಂದೂವರೆ ತಿಂಗಳಿಗೆ ಮೇಲ್ಪಟ್ಟು ತಮ್ಮ ಕಸುಬನ್ನು ನಡೆಸಲಾಗದೇ ತಮ್ಮ ದೈನಂದಿನ ಆದಾಯವನ್ನು ಕಳೆದುಕೊಂಡಿರುತ್ತಾರೆ. ಇವರಿಗೆ ನೆರವಾಗಲು ನಮ್ಮ ರಾಜ್ಯದಲ್ಲಿರುವ ಅಂದಾಜು 60,000 ಅಗಸರ ವೃತ್ತಿಯಲ್ಲಿ ಇರುವ ಹಾಗೂ 2,30,000 ಕ್ಷೌರಿಕ ವೃತ್ತಿಯಲ್ಲಿ ಇರುವವರಿಗೆ 5,000 ರೂಪಾಯಿಗಳನ್ನು ಒಂದು ಬಾರಿ ಪರಿಹಾರವಾಗಿ ನೀಡಲಾಗುವುದು ಎಂದು ಹೇಳಿದರು.

ಅದೇ ರೀತಿ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗಗದೇ ತಮ್ಮ ಆದಾಯವನ್ನು ಕಳೆದುಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಇರುವ ಇಂತಹ 7,75,000 ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5,000 ರೂಪಾಯಿಗಳನ್ನು ನೀಡಲಾಗುವುದು ಎಂದರು.

ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ನಡೆಸುವ ಉದ್ದಿಮೆದಾರರು ತಮ್ಮ ಉದ್ದಿಮೆಗಳನ್ನು ತೆರೆಯಲಾಗದೆ ಹಾಗೂ ತಮ್ಮ ಉತ್ಪನ್ನಗಳನ್ನು ಸಾಗಿಸಿ ಮಾರಾಟ ಮಾಡಲಾಗದೆ ನಷ್ಟವನ್ನು ಅನುಭವಿಸಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ವಹಿವಾಟು ಚೇತರಿಕೆಯಾಗಲು ಕೆಲವು ತಿಂಗಳ ಸಮಯ ಬೇಕಾಗಿರುವುದರಿಂದ ಇವರಿಗೆ ಸರಕಾರ ನೆರವು ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ ಅತಿಸಣ್ಣ, ಸಣ್ಣ ಹಾಗೂ ಉದ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ಫಿಕ್ಸ್ಡ್ ಚಾರ್ಜ್ ಅನ್ನು ಎರಡು ತಿಂಗಳ ಅವಧಿಗೆ ಪೂರ್ತಿಯಾಗಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಹಾಗೆಯೇ ಬೃಹತ್ ಕೈಗಾರಿಕೆಗಳಿಗೆ ಅವರು ವಿದ್ಯುತ್ ಬಿಲ್ಲಿನ ಫಿಕ್ಸ್ಡ್ ಚಾರ್ಜ್ ಪಾವತಿಯನ್ನು ಎರಡು ತಿಂಗಳ ಅವಧಿಗೆ ಯಾವುದೇ ಬಡ್ಡಿ ಅಥವಾ ದಂಡ ಇಲ್ಲದೇ ಬಡ್ಡಿ ರಹಿತವಾಗಿ ಮುಂದೂಡಲಾಗುವುದು. ಎಲ್ಲ ಪ್ರವರ್ಗದ ಗ್ರಾಹಕರುಗಳಿಗೆ ವಿದ್ಯುಚ್ಚಕ್ತಿ ಮೊತ್ತವನ್ನು ಪಾವತಿಸಲು ಈ ಕೆಳಕಂಡ ಸವಲತ್ತು, ಪರಿಹಾರಗಳನ್ನು ಒದಗಿಸಲಾಗುವುದು. ನಿಗದಿತ ಸಮಯದೊಳಗೆ ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸುವ ಗ್ರಾಹಕರಿಗೆ ಪೆÇ್ರೀತ್ಸಾಹ ರಿಯಾಯಿತಿಯನ್ನು ನೀಡುವುದು. ವಿಳಂಬ ಪಾವತಿಗಾಗಿ ವಿದ್ಯುತ್ ಬಿಲ್ಲಿನ ಮೊತ್ತದ ಮೇಲೆ ವಿಧಿಸುವ ಬಡ್ಡಿಯನ್ನು ಕಡಿಮೆಗೊಳಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು. 
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಸಂಕಷ್ಟಕ್ಕೆ ಸಿಎಂ ತೇಪೆ : 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ Rating: 5 Reviewed By: karavali Times
Scroll to Top