ಹಣ ಬೇಕಿದ್ರೆ ಭಿಕ್ಷೆ ಎತ್ತಿಯಾದರೂ ನೀಡುತ್ತೇವೆ, ಹೊಲಸು ರಾಜಕೀಯ ನಡೆಸಬೇಡಿ : ಬಿಜೆಪಿ ವಿರುದ್ದ ಡಿಕೆಶಿ ಕಿಡಿ - Karavali Times ಹಣ ಬೇಕಿದ್ರೆ ಭಿಕ್ಷೆ ಎತ್ತಿಯಾದರೂ ನೀಡುತ್ತೇವೆ, ಹೊಲಸು ರಾಜಕೀಯ ನಡೆಸಬೇಡಿ : ಬಿಜೆಪಿ ವಿರುದ್ದ ಡಿಕೆಶಿ ಕಿಡಿ - Karavali Times

728x90

2 May 2020

ಹಣ ಬೇಕಿದ್ರೆ ಭಿಕ್ಷೆ ಎತ್ತಿಯಾದರೂ ನೀಡುತ್ತೇವೆ, ಹೊಲಸು ರಾಜಕೀಯ ನಡೆಸಬೇಡಿ : ಬಿಜೆಪಿ ವಿರುದ್ದ ಡಿಕೆಶಿ ಕಿಡಿಬೆಂಗಳೂರು (ಕರಾವಳಿ ಟೈಮ್ಸ್) : ಬಾಣಂತಿ, ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಆಹಾರದ ಪ್ಯಾಕೆಟ್ ಮೇಲೆ ಬಿಜೆಪಿ ನಾಯಕರು, ಮುಖ್ಯಮಂತ್ರಿ, ಪ್ರಧಾನಿ ಚಿಹ್ನೆ ನಮೂದಿಸಿ ಹಂಚುತ್ತಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರಕ್ಕೆ ಹಣ ಬೇಕಾದರೆ ಹೇಳಲಿ‌ ಭಿಕ್ಷೆ ಎತ್ತಿಯಾದರೂ ಕೊಡುತ್ತೇವೆ. ಆದರೆ ಇಂತಹ ಹೊಲಸು ರಾಜಕಾರಣ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಾಪ್ರಹಾರ ನಡೆಸಿದ್ದಾರೆ
ಸರ್ಕಾರದ ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಬಿಜೆಪಿ ಚಿಹ್ನೆ ವಿರೋಧಿಸಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

 ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರದ ವತಿಯಿಂದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮೀಸಲಿಟ್ಟ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಬಿಜೆಪಿ ನಾಯಕರು ತಮ್ಮ ಹೆಸರಿನ ಪ್ಯಾಕೆಟ್ ನಲ್ಲಿ ಹಾಕಿಕೊಂಡು ಹಂಚಿಕೆ ಮಾಡುತ್ತಿರುವುದು ಅಪರಾಧವಾಗಿದೆ. ಸಂಸದ ಡಿ.ಕೆ ಸುರೇಶ್ ಹಾಗೂ ವಿ.ಎಸ್ ಉಗ್ರಪ್ಪ ಅವರು ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಖ್ಯಮಂತ್ರಿಯವರೇ ಈ ವಿಚಾರದಲ್ಲಿ ನಾನಿನ್ನು ಮನವಿ ಮಾಡಿಕೊಳ್ಳುವುದಿಲ್ಲ. ಮನವಿ ಮಾಡಿಕೊಳ್ಳುವ ಕಾಲ ಮುಗಿದುಹೋಗಿದೆ. ಶನಿವಾರದೊಳಗಾಗಿ ಈ ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಿಸಬೇಕು. ಒಂದು ವೇಳೆ ಆಗ್ರಹಿಸದಿದ್ದರೆ ಪಕ್ಷದ ವತಿಯಿಂದ ರಸ್ತೆಗಿಳಿದು ಹೋರಾಟ ಮಾಡಬೇಕಾಗುವುದೆಂದು ಎಚ್ಚರಿಸಿದರು.
ಕಳೆದ ವಾರ ಅಕ್ರಮವಾಗಿ ಬಡವರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರುತ್ತಿದ್ದುದನ್ನು ಬಯಲು ಮಾಡಿದ ನಂತರ ಸರ್ಕಾರದಿಂದ ಅದನ್ನು ಮುಚ್ಚಿಹಾಕಲು ಸಾಕಷ್ಟು ಪ್ರಯತ್ನ ನಡೆಯಿತು‌. ಯಾವ ಜಿಲ್ಲೆಯಿಂದ ಎಷ್ಟು ಅಕ್ಕಿ ಜನರಿಗೆ ಹೋಗುತ್ತಿದೆ. ಎಷ್ಟು ಅಕ್ಕಿ ಬಿಜೆಪಿ ನಾಯಕರ ಪಾಲಾಗುತ್ತಿದೆ ಎಂಬುದು ತಮಗೆ ತಿಳಿದಿದೆ. ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಪ್ರಕರಣದ ಬಗ್ಗೆ ಈವರೆಗೂ ಒಂದು ಕೇಸ್ ಕೂಡ ದಾಖಲಾಗಿಲ್ಲ. ಒಬ್ಬರನ್ನೂ ಬಂಧಿಸಿಲ್ಲ‌ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಅಕ್ರಮ ಮಾಡುತ್ತಿದ್ದಾರೆ ಎಂಬುದು ತಮ್ಮ ಆರೋಪವಲ್ಲ. ಆದರೆ ಯಡಿಯೂರಪ್ಪ‌ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಹೇಗೆ ಬಡವರ ಅಕ್ಕಿ, ದುಡ್ಡು ದುರುಪಯೋಗವಾಗುತ್ತಿದೆ ಎಂಬುದನ್ನು ಗಮನಕ್ಕೆ ತರಲಾಗಿದೆಯಷ್ಟೆ. ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣ ಮಾಡಬಾರದೆಂದು ಇಷ್ಟು ದಿನ ಎಲ್ಲವನ್ನು ನೋಡಿಯೂ ಸುಮ್ಮನಿದ್ದೆವು. ಆದರೆ ಈಗ ವಿಧಿ ಇಲ್ಲ. ಈಗಾಗಲೇ ಸರ್ಕಾರದ ಆಹಾರವನ್ನು ಬಿಜೆಪಿ ನಾಯಕ ಲಿಂಬಾವಳಿ ತಮ್ಮ ಕ್ಷೇತ್ರದಲ್ಲಿ ಅವರ ಫೋಟೋ ಜತೆಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮೋದಿ ಅವರ ಫೋಟೋ ಹಾಕಿ ಹಂಚಿಕೆ ಮಾಡುವ ವೀಡಿಯೋವನ್ನು ನಿಮಗೆ ಕಳುಹಿಸಿಕೊಡಲಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
 ಕಾಂಗ್ರೆಸ್ ಶಾಸಕ, ಕಾಂಗ್ರೆಸ್ ಸಂಸದರಿರುವ ಕ್ಷೇತ್ರದಲ್ಲಿ ಈ‌ ರೀತಿ‌ ಬಿಜೆಪಿಯಿಂದ ಅಕ್ರಮ ಆಗುತ್ತಿದೆ ಎಂದರೆ ಇನ್ನು ರಾಜ್ಯದ ಬೇರೆ ಭಾಗಗಳಲ್ಲಿ ಏನಾಗುತ್ತಿರಬಹುದು. ಇಂತಹ ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಇದಕ್ಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು‌ ಎಂದು‌ ಶಿವಕುಮಾರ್ ತೀಕ್ಷ್ಣವಾಗಿ ಯಡಿಯೂರಪ್ಪರನ್ನು ಚುಚ್ಚಿದರು.
ಮಕ್ಕಳು, ಬಾಣಂತಿಯರು, ಬಡವರ ಆಹಾರದಲ್ಲಿ ರಾಜಕಾರಣ ಮಾಡಬೇಕೇ? ಇಡೀ ರಾಜ್ಯ ಹಾಗೂ ದೇಶದಲ್ಲಿ ಎಲ್ಲ ವರ್ಗದ ಜನ ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ. ಹಸಿದವರಿಗೆ, ಬಡವರಿಗೆ ಊಟ ಹಾಕುತ್ತಿದ್ದಾರೆ. ಆದರೆ ಅಧಿಕಾರದಲ್ಲಿರುವ ಬಿಜೆಪಿ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು.
ಒಂದೂವರೆ ತಿಂಗಳಿಂದ ಕೆಲಸ ಮಾಡಬೇಡಿ. ಮನೆಯಿಂದಾಚೆ ಬರಬೇಡಿ ಎಂದು ವಲಸೆ ಕಾರ್ಮಿಕರಿಗೆ ನಿರ್ದೇಶಿಸಿದ್ದ ಸರ್ಕಾರವೀಗ ಊರಿಗೆ ತೆರಳುವ ವಲಸೆ ಕಾರ್ಮಿಕರಿಂದ ಟಿಕೆಟ್‌ಗಾಗಿ ದುಪ್ಪಟ್ಟು ಹಣ ಕಿತ್ತು, ಈಗ ಮಾಮೂಲಿ ದರ ನಿಗದಿ ಮಾಡುವುದಾಗಿ ಹೇಳಿದೆ. ಆ ಬಡ ಕಾರ್ಮಿಕರಿಂದ ದುಡ್ಡು ಪಡೆಯುವಷ್ಟರ ಮಟ್ಟಿಗೆ ಸರ್ಕಾರದ ಖಜಾನೆ ಬಡವಾಗಿದೆಯೇ?ಎಂದು ಶಿವಕುಮಾರ್ ಪ್ರಶ್ನಿಸಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಅಂಗನವಾಡಿಗೆ ಹೋಗುವ ಬಡ ಮಕ್ಕಳ ಅನ್ನವನ್ನು ಬಿಜೆಪಿಯವರು ಕದ್ದು ತಿನ್ನುತ್ತಿದ್ದಾರೆ. ಈ ಇಲಾಖೆಯಲ್ಲಿ ಆಹಾರ ಪದಾರ್ಥ ಹೆಚ್ಚಾಗಿ ಉಳಿದಿದ್ದರೆ ಸರ್ಕಾರದ ಹೆಸರಲ್ಲಿಯೇ ಬಡವರಿಗೆ ಕೂಲಿ ಕಾರ್ಮಿಕರಿಗೆ ಹಂಚಬಹುದಿತ್ತು. ಆದರೆ ಬಿಜೆಪಿ ನಾಯಕರ ಹೆಸರಲ್ಲಿ ಹಂಚುವ ಅವಶ್ಯಕತೆ ಏನಿತ್ತು? ನಿಮ್ಮ ಬಳಿ ಹಣವಿಲ್ಲದಿದ್ದರೆ ಸುಮ್ಮನಿರಬೇಕಿತ್ತು. ಆದರೆ ಪಕ್ಷಕ್ಕಾಗಿ ಪ್ರಚಾರ ಪಡೆಯಲು ಮಕ್ಕಳು ಹಾಗೂ ಗರ್ಭಿಣಿಯರ ಅನ್ನಕ್ಕೆ ಕೈಹಾಕದ್ದು ಸರಿಯಲ್ಲ. ಮುಖ್ಯಮಂತ್ರಿಗಳೇ ಈ ರಾಜ್ಯದಲ್ಲಿ ನ್ಯಾಯಾ ಇದೆಯೇ ಎಂದು ಪ್ರಶ್ನಿಸಿದರು.
ಕಳೆದ 15-20 ದಿನಗಳಿಂದ ಬಿಜೆಪಿ ನಾಯಕರು ತಾವು ದಾನಶೂರರಂತೆ ಬಿಂಬಿಸಿಕೊಳ್ಳುತ್ತಿರುವುದು ಸರ್ಕಾರದ ಅಕ್ಕಿ ಬೇಳೆಯನ್ನು ನೀಡಿ ಎಂಬುದು ಗೊತ್ತಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಇರುವುದೇ ಆದರೆ, ಬಡವರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ತಪ್ಪು ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದಾದ್ಯಂತ ಎಲ್ಲ ಪಕ್ಷಗಳು ನಿಮಗೆ ಸಹಕಾರ ನೀಡುತ್ತಿದ್ದರೆ ನೀವು ಮಾತ್ರ ಕಾರ್ಯಕರ್ತರನ್ನು ಬೀದಿಗೆ ಬಿಟ್ಟು, ಈ ರೀತಿ ಅಕ್ರಮ ಮಾಡಿಸುತ್ತಿದ್ದೀರಾ. ಇದು ಕೇವಲ ಒಂದು ಕಡೆ ನಡೆಯುತ್ತಿಲ್ಲ. ರಾಜ್ಯದ ಅನೇಕ ಭಾಗಗಳಲ್ಲಿ ನಡೆಯುತ್ತಿದೆ. ಇನ್ನು ಮುಂದೆ ಈ ಅಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ. ಈ ಅಕ್ರಮಗಳ ವಿಚಾರದಲ್ಲಿ ಹೈ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು‌ ಆಗ್ರಹಿಸಿದರು.
ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮಾತನಾಡಿ, ಅಕ್ರಮದಲ್ಲಿ ಮುನಿರಾಜು ಎಂಬ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರು, ಬಿಜೆಪಿಯ ಹಾಲಿ ಸದಸ್ಯರು ಹಾಗೂ ನಾಯಕರು ಸೊಸೈಟಿಯ ಸದಸ್ಯರು‌ ಆರೋಪಿಗಳಾಗಿದ್ದಾರೆ. ಆರೋಪಿತರ ವಿರುದ್ಧ ಜಾಮೀನು ರಹಿತ, ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆಗೆ ಒಳಪಡಬಹುದಾದ ಅಪರಾಧದಡಿ ಐಪಿಸಿ 403,406, 420 ಪ್ರಕರಣ ದಾಖಲಿಸಲಾಗಿದೆ. ಅಪರಾಧಿಗಳಿಗೆ 7 ವರ್ಷ ಜೈಲು ಹಾಗೂ ದಂಡ ವಿಧಿಸಬಹುದು. ಇಲಾಖೆ ಅಧಿಕಾರಿಗಳು ದಾಖಲಿಸಿರುವ ಪ್ರಕಣವಾದರೂ 12 ಗಂಟೆಯಾದರೂ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ನೋಡಿದರೆ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಯಡಿಯೂರಪ್ಪನವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ ಅವರು ಇದರಲ್ಲಿ ಭಾಗಿಯಾಗಿರುವ ಅನುಮಾನ ಮೂಡುತ್ತಿದೆ‌ ಎಂದರು.
ಇವರಿಗೆ ನೈತಿಕತೆ ಇದ್ದರೆ ಕನಿಷ್ಠ ಸಚಿವರಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಹಾಗೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಹಣ ಬೇಕಿದ್ರೆ ಭಿಕ್ಷೆ ಎತ್ತಿಯಾದರೂ ನೀಡುತ್ತೇವೆ, ಹೊಲಸು ರಾಜಕೀಯ ನಡೆಸಬೇಡಿ : ಬಿಜೆಪಿ ವಿರುದ್ದ ಡಿಕೆಶಿ ಕಿಡಿ Rating: 5 Reviewed By: karavali Times
Scroll to Top