ಕೊರೋನಾ ತಡೆಗಟ್ಟಲು ಸಂಪೂರ್ಣ ವಿಫಲಗೊಂಡ ಸರಕಾರದಿಂದ ತಬ್ಲಿಘಿಗಳನ್ನು ಎಳೆದು ತರುವ ಹುನ್ನಾರ : ಸಿದ್ದರಾಮಯ್ಯ ಆಕ್ರೋಶ - Karavali Times ಕೊರೋನಾ ತಡೆಗಟ್ಟಲು ಸಂಪೂರ್ಣ ವಿಫಲಗೊಂಡ ಸರಕಾರದಿಂದ ತಬ್ಲಿಘಿಗಳನ್ನು ಎಳೆದು ತರುವ ಹುನ್ನಾರ : ಸಿದ್ದರಾಮಯ್ಯ ಆಕ್ರೋಶ - Karavali Times

728x90

12 May 2020

ಕೊರೋನಾ ತಡೆಗಟ್ಟಲು ಸಂಪೂರ್ಣ ವಿಫಲಗೊಂಡ ಸರಕಾರದಿಂದ ತಬ್ಲಿಘಿಗಳನ್ನು ಎಳೆದು ತರುವ ಹುನ್ನಾರ : ಸಿದ್ದರಾಮಯ್ಯ ಆಕ್ರೋಶ



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ. ಜನವರಿ 30ರಂದು ಕೇರಳದಲ್ಲಿ ಮೊದಲು ಸೋಂಕು ಪತ್ತೆಯಾಯಿತು. ಎರಡು ತಿಂಗಳಾದ ಮೇಲೆ ಮಾರ್ಚ್ 24 ರಂದು ಲಾಕ್‍ಡೌನ್ ಘೋಷಿಸಲಾಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಲಾಕ್‍ಡೌನ್‍ಗೆ ಮೊದಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯವಿತ್ತು. ಮೊದಲೇ ಅಂತಾರಾಷ್ಟ್ರೀಯ ವಿಮಾನಯಾನ ಹಾಗೂ ದೇಶೀ ವಿಮಾನಯಾನ ಸಂಪೂರ್ಣ ಬಂದ್ ಮಾಡಿದ್ದಿದ್ದರೆ ಈ ರೋಗ ಹರಡುವುದನ್ನು ತಡೆಗಟ್ಟಲು ಸಾಧ್ಯವಿತ್ತು ಎಂದರು.

ಆದರೆ ತಮ್ಮ ತಪ್ಪನ್ನು ಮರೆಮಾಚಲು ಕೇಂದ್ರ ಸರಕಾರ ತಬ್ಲಿಘಿಗಳಿಂದ ರೋಗ ಹೆಚ್ಚಾಯಿತು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಆರೆಸ್ಸೆಸ್ ಹುನ್ನಾರ. ಅಮೇರಿಕಾ, ಇಟಲಿ, ಸ್ಪೇನ್‍ನಲ್ಲಿ ಯಾವ ತಬ್ಲಿಘಿಗಳಿದ್ದರು. ಮೇಲಾಗಿ ದೆಹಲಿಯಲ್ಲಿ ತಬ್ಲಿಘಿ ಸಮಾವೇಶ ಮಾಡಲು ಅನುಮತಿ ಕೊಟ್ಟದ್ದು ಇದೇ ಕೇಂದ್ರ ಸರ್ಕಾರ ತಾನೇ ಎಂದು ಪ್ರಶ್ನಿಸಿದ ಅವರು ತಬ್ಲಿಘಿಗಳಿಂದಲೇ ರೋಗ ಹರಡಿದೆ ಎಂಬುದು ರಾಜಕೀಯ ಪ್ರೇರಿತ, ಕೋಮುವಾದಿಗಳ ಹುನ್ನಾರ ಎಂದು ಆರೋಪಿಸಿದರು.

ಪೂರ್ವಸಿದ್ಧತೆ ಮಾಡದೆ ಏಕಾಏಕಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ವಲಸೆ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಕರ್ನಾಟಕವೊಂದರಲ್ಲೇ 5.50 ಲಕ್ಷ ಜನ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 60,000 ಜನರಿಗೆ ಮಾತ್ರ ಅನುಮತಿ ನೀಡಿದ್ದಾರೆ. ಮೇಲಾಗಿ ಅವರಿಂದ ಪ್ರಯಾಣ ವೆಚ್ಚ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಅವರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕೊಡಬೇಕು ಎಂದ ಸಿದ್ದು ಪಿಎಂ ಕೇರ್ ಫಂಡ್‍ಗೆ 35,000 ಕೋಟಿ ರೂಪಾಯಿ ಹಣ ಹರಿದು ಬಂದಿದೆ. ಕರ್ನಾಟಕದಿಂದಲೇ ಸಿಎಸ್‍ಆರ್ ಫಂಡ್‍ನಿಂದ 3000 ಕೋಟಿ ರೂಪಾಯಿ ಬಂದಿದೆ. ಅದರಲ್ಲಿ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಬೇಕೆಂದವರು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ದೀಪಹಚ್ಚಿ, ಚಪ್ಪಾಳೆ ತಟ್ಟಿ ಎಂದು ಹೇಳುವ ಬದಲು ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಈ ಕಾರ್ಮಿಕರು ಆರ್ಥಿಕತೆಯ ಬೆನ್ನುಮೂಳೆ ಇದ್ದಂತೆ. ಈ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರವೇನಾದರೂ ಪ್ರಯಾಣ, ವೆಚ್ಚ ಭರಿಸದೇ ಹೋದರೆ ಕಾಂಗ್ರೆಸ್ ಪಕ್ಷವೇ ಆ ವೆಚ್ಚ ಭರಿಸಬೇಕೆಂದು ಸೋನಿಯಾ ಗಾಂಧಿಯವರು ಪತ್ರ ಬರೆದಿದ್ದಾರೆ ಎಂದರು.

ಸರ್ವ ಪಕ್ಷ ಸಭೆಯಲ್ಲಿ ನಾವು ಕೊಟ್ಟ ಯಾವ ಸಲಹೆಯನ್ನೂ ಸರಕಾರ ಪರಿಗಣಿಸಿಲ್ಲ. ಕೋರೊನಾ ಮತ್ತು ಕಾರ್ಮಿಕರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮುಂದೆ 16 ಬೇಡಿಕೆಗಳನ್ನು ಇಟ್ಟಿದ್ದೆವು. ಅದಕ್ಕೂ ಯಡಿಯೂರಪ್ಪ ಅವರು ಪರಿಗಣಿಸಿಲ್ಲ. ನಂತರ ಕಾರ್ಮಿಕರ ಕಷ್ಟಗಳ ಬಗ್ಗೆ ಸುದೀರ್ಘ ಪತ್ರ ಬರೆದೆ. ಅದಕ್ಕೂ ಮುಖ್ಯಮಂತ್ರಿ ಸ್ಪಂದಿಸಿಲ್ಲ. ಸರ್ವ ಪಕ್ಷಗಳ ಸಭೆ ಮಾಡಿ ಮುಖ್ಯಮಂತ್ರಿಗಳ ಮುಂದೆ 24 ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದೆವಾದರೂ ಯಡಿಯೂರಪ್ಪ ಕ್ರಮಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ತೀವ್ರ ಅಸಮಾಧಾನ ಹೊರಹಾಕಿದರು.

ಕಾರ್ಮಿಕ ಇಲಾಖೆ ಹಾಗೂ ಬಿಬಿಎಂಪಿಯಿಂದ ಆಹಾರ ಕಿಟ್ ವಿತರಿಸಿರುವುದು ಕೇವಲ ಶೇಕಡಾ 10ರಷ್ಟು ಮಾತ್ರ. ಉಳಿದೆಲ್ಲ ಆಹಾರ ಕಿಟ್‍ಗಳನ್ನು ವಿವಿಧ ಶಾಸಕರು ಎನ್‍ಜಿಓಗಳು ಹಂಚಿದ್ದರು. ನಾವು ಹಾಗೆ ಮಾಡದೇ ಇದ್ದಿದ್ದರೆ ರಾಜ್ಯಾದ್ಯಂತ ಹಾಹಾಕಾರ ಆಗಿ ಜನ ಹಸಿವಿನಿಂದ ಸಾಯುತ್ತಿದ್ದರು. ಈಗ ಉರಿಯುವುದರ ಮೇಲೆ ಉಪ್ಪು ಹಾಕುವಂತೆ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಹೊರಟಿದ್ದಾರೆ. ರೈತರು ಬೆಳೆದ ತರಕಾರಿ, ಆಹಾರ ಧಾನ್ಯಗಳನ್ನು ಯಾರೂ ಖರೀದಿಸುವವರೇ ಇಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಚಟುವಟಿಕೆ ಕ್ರಿಯಾಶೀಲವಾಗಬೇಕಾದರೆ ಜನರ ಕೈಯಲ್ಲಿ ದುಡ್ಡಿರಬೇಕು. ಕೊಳ್ಳುವ ಶಕ್ತಿ ಇರಬೇಕು ಎಂದರು.

ನಾವು ಒಂದು ಕೋಟಿ ರೂಪಾಯಿ ಚೆಕ್ ಕೊಟ್ಟ ಮೇಲೆ ವಲಸೆ ಕಾರ್ಮಿಕರ ಅಂತರ ಜಿಲ್ಲಾ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದೆ. ಅತ್ಯಲ್ಪ ಪ್ರಮಾಣದಲ್ಲಿ ಕೆಲವೇ ವರ್ಗದ ಜನರಿಗೆ 1,240 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದಾರೆ. ಇದು ಕೂಡ ಯಾರಿಗೂ ಇನ್ನು ತಲುಪಿಲ್ಲ ಎಂದು ಆರೋಪಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ತಡೆಗಟ್ಟಲು ಸಂಪೂರ್ಣ ವಿಫಲಗೊಂಡ ಸರಕಾರದಿಂದ ತಬ್ಲಿಘಿಗಳನ್ನು ಎಳೆದು ತರುವ ಹುನ್ನಾರ : ಸಿದ್ದರಾಮಯ್ಯ ಆಕ್ರೋಶ Rating: 5 Reviewed By: karavali Times
Scroll to Top