ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಪಡಿಸಿರುವುದನ್ನು ರದ್ದುಗೊಳಿಸಿ, ಉಚಿತ ಚಿಕಿತ್ಸೆ ನೀಡಲು ವಿಟ್ಲ ಡಿ.ವೈ.ಎಫ್.ಐ ಆಗ್ರಹ - Karavali Times ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಪಡಿಸಿರುವುದನ್ನು ರದ್ದುಗೊಳಿಸಿ, ಉಚಿತ ಚಿಕಿತ್ಸೆ ನೀಡಲು ವಿಟ್ಲ ಡಿ.ವೈ.ಎಫ್.ಐ ಆಗ್ರಹ - Karavali Times

728x90

23 June 2020

ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಪಡಿಸಿರುವುದನ್ನು ರದ್ದುಗೊಳಿಸಿ, ಉಚಿತ ಚಿಕಿತ್ಸೆ ನೀಡಲು ವಿಟ್ಲ ಡಿ.ವೈ.ಎಫ್.ಐ ಆಗ್ರಹ




ವಿಟ್ಲ (ಕರಾವಳಿ ಟೈಮ್ಸ್) : ರಾಜ್ಯದಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳು ಆಳುವ ಸರಕಾರಗಳ ನಿರ್ಲಕ್ಷ್ಯದಿಂದಾಗಿ  ಅಗತ್ಯ ಡಾಕ್ಟರ್-ಸಿಬ್ಬಂದಿ ಕೊರತೆ, ಔಷಧ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಇದರಿಂದಾಗಿ ಸಾಮಾನ್ಯ ಜನತೆಗೆ ಉತ್ತಮ ಆರೋಗ್ಯ ಲಭಿಸದೇ ಖಾಸಗೀ ಆಸ್ಪತ್ರೆಗಳ ಧನದಾಹಿಕೋರತನಕ್ಕೆ ಬಲಿಯಾಗುತ್ತಿರುವ ಈ ಸ್ಥಿತಿಯಲ್ಲಿ ಕೋವಿಡ್-19 ರೋಗ ಸಾಮಾನ್ಯ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಸಾಮಾನ್ಯ ರೋಗಿಗಳು ಈಗ ಆಸ್ಪತ್ರೆಗಳಿಗೆ ಹೋಗಲಾರದ ಸ್ಥಿತಿ ಬಂದೊದಗಿದೆ.

ರಾಜ್ಯ ಸರಕಾರ ಇಂತಹ ಗಂಭಿರ ಸ್ಥಿತಿಯಲ್ಲಿ  ಕೋವಿಡ್ -19 ಸೋಂಕಿತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆ ಗಳನ್ನು ಡಾಕ್ಟರ್, ಸಿಬ್ಬಂದಿ,  ಔಷಧ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಸಜ್ಜುಗೊಳಿಸಬೇಕು. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಎಲ್ಲರಿಗೂ ಉಚಿತ ಚಿಕಿತ್ಸೆ ಕೊಡಬೇಕು. ಆದರೆ ಕರ್ನಾಟಕ ರಾಜ್ಯ ಸರಕಾರದ (ಉಪಮುಖ್ಯಮಂತ್ರಿ, ಗೃಹ ಸಚಿವ, ಆರೋಗ್ಯ ಸಚಿವರನ್ನೊಳಗೊಂಡ) ಕಾರ್ಯಪಡೆಯು ಕರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದರ ನಿಗದಿಗೊಳಿಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಗೆ ಸಚಿವ ಸಂಪುಟದ ಒಪ್ಪಿಗೆಯಷ್ಟೆ ಬಾಕಿಯಿದೆ. ಕಾರ್ಯಪಡೆಯು ಸಿದ್ಧಪಡಿಸಿದ ವರದಿ ಪ್ರಕಾರ, ಸಮಾನ್ಯ ರೋಗಿಗೆ ಸಾಮಾನ್ಯ ವಾರ್ಡ್‍ನಲ್ಲಿ 10,000/-, ಆಮ್ಲಜನಕ ಸಹಿತ ವಾರ್ಡ್‍ನಲ್ಲಿ 12,000/-, ಐಸಿಯು ಹಾಸಿಗೆ-15,000/-, ವೆಂಟಿಲೇಟರ್ ಸಹಿತ ಐಸಿಯುಗೆ-25,000/- ದರ ನಿಗದಿಗೊಳಿಸಿದೆ.

ಇದಕ್ಕೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬದ ರೋಗಿಗಳಿಗೆ ಕ್ರಮವಾಗಿ ಸಾಮಾನ್ಯ ವಾರ್ಡ್‍ಗೆ 5,200/-, ಆಮ್ಲಜನಕ ಸಹಿತ ವಾರ್ಡ್‍ಗೆ 7000/-, ತೀವ್ರ ನಿಗಾ ಘಟಕಕ್ಕೆ-8,500/- ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ 10,000/- ನಿಗದಿಗೊಳಿಸಿ ವರದಿ ಸಿದ್ದಪಡಿಸಿದೆ. ಆದರೆ ಗ್ರಾಮೀಣ, ನಗರ ಪ್ರದೇಶದ ಬಹುತೇಕರು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೊಳಪಟ್ಟಿಲ್ಲವೆಂಬುದು ವಾಸ್ತವ.

ಈ ಹಂತದಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಯು ಜನ ಸಾಮಾನ್ಯರಿಗೆ ಗಂಭೀರ ಹೊರೆಯಾಗಿ ಪರಿಣಮಿಸುವುದು. ಈಗಾಗಲೇ ಕರೋನಾ ಲಾಕ್‍ಡೌನ್‍ನಿಂದಾಗಿ ಉದ್ಯೋಗವಿಲ್ಲದೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಈ ಚಿಕಿತ್ಸೆಯ ದರ ನಿಗದಿಯು ಗಾಯದ ಮೇಲೆ ಬರೆ ಎಳೆದಂತಾಗುವುದು. ಇದನ್ನು ಸಹಿಸಲಾಗದು.

ಕರೋನಾ ಸೋಂಕಿತ ರೋಗಿ ಉದಾಹರಣೆಗೆ ಚಿಕಿತ್ಸೆಗಾಗಿ ಕನಿಷ್ಠ ಹತ್ತು ದಿನಗಳವರೆಗೆ ಸಾಮಾನ್ಯ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆದರೂ ದಿನಕ್ಕೆ 10,000/- ದಂತೆ ಹತ್ತು ದಿನಕ್ಕೆ ಒಂದು ಲಕ್ಷ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮತ್ತೆ ಕೋವಿಡ್ ಸಾಂಕ್ರಾಮಿಕ ಅಂಟು ರೋಗವಾದ್ದರಿಂದ ಮನೆಯಲ್ಲಿ ಎರಡ್ಮೂರು ಜನಕ್ಕೇನಾದರೂ ಸೋಂಕು ತಗಲಿದರೆ 2-3 ಲಕ್ಷ ರೂಪಾಯಿ ಹಣವನ್ನು ಭರಿಸಬೇಕಾಗುತ್ತದೆ. ಸರಕಾರವೇ ಮುಂದೆ ನಿಂತು ಖಾಸಗಿಯವರಿಗೆ ಸುಲಿಗೆಗೆ ಅವಕಾಶ ಮಾಡಿಕೊಡುವ ರೀತಿಯ ಈ ನಡೆ ನ್ಯಾಯಯುತವಾದುದಲ್ಲ.  ಈ ವರದಿಯನ್ನು ಕೂಡಲೇ ರದ್ದುಗೊಳಿಸಿ ಕರೋನಾ ಸೋಂಕಿತರೆಲ್ಲರಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಬೇಕಾದ ಸಕಲ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಸರಕಾರದ ವಶಕ್ಕೆ ಪಡೆದು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ವಿಟ್ಲ ವಲಯ ಸಮಿತಿ ವತಿಯಿಂದ ರಾಜ್ಯ ಸರಕಾರಕ್ಕೆ ವಿಟ್ಲ ಉಪತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಡಿ.ವೈ.ಎಫ್.ಐ ವಿಟ್ಲ ವಲಯಾಧ್ಯಕ್ಷ ನುಜುಂ ಅಳಿಕೆ, ಕಾರ್ಯದರ್ಶಿ ಜಮೀಲ್ ಎಂ., ಕಾರ್ಮಿಕ ಮುಖಂಡರಾದ ಎ. ರಾಮಣ್ಣ ವಿಟ್ಲ, ಡಿ.ವೈ.ಎಫ್.ಐ ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ತುಳಸೀದಾಸ್ ವಿಟ್ಲ, ಪ್ರಮುಖರಾದ ಇರ್ಪಾನ್ ಒಕ್ಕೆತ್ತೂರು, ತಮೀಮ್, ಆರೀಫ್ ಬಿ.ಕೆ. ಮೊದಲಾದವರು ಇದ್ದರು.








  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಪಡಿಸಿರುವುದನ್ನು ರದ್ದುಗೊಳಿಸಿ, ಉಚಿತ ಚಿಕಿತ್ಸೆ ನೀಡಲು ವಿಟ್ಲ ಡಿ.ವೈ.ಎಫ್.ಐ ಆಗ್ರಹ Rating: 5 Reviewed By: karavali Times
Scroll to Top