ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ಸರಕಾರ ಮತ್ತೊಮ್ಮೆ ಅನುಮತಿ ನಿರಾಕರಣೆ - Karavali Times ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ಸರಕಾರ ಮತ್ತೊಮ್ಮೆ ಅನುಮತಿ ನಿರಾಕರಣೆ - Karavali Times

728x90

9 June 2020

ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ಸರಕಾರ ಮತ್ತೊಮ್ಮೆ ಅನುಮತಿ ನಿರಾಕರಣೆ



ಅಮಿತ್ ಷಾಗೆ ಅನ್ವಯವಾಗದ ಕಾನೂನು ನಮಗೇಕೆ ಅನ್ವಯ : ಸಿದ್ದರಾಮಯ್ಯ ಗರಂ 


ಬೆಂಗಳೂರು (ಕರಾವಳಿ ಟೈಮ್ಸ್) : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೊರೊನಾ ಲಾಕ್‍ಡೌನ್ ಕಾರಣ ನೀಡಿ ರಾಜ್ಯ ಸರಕಾರ ಮತ್ತೊಮ್ಮೆ ಅನುಮತಿ ನಿರಾಕರಿಸಿದೆ.

ಜೂನ್ 14ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ 150 ನಾಯಕರ ಸಮ್ಮುಖದಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲು ಡಿ ಕೆ ಶಿವಕುಮಾರ್ ಮುಂದಾಗಿದ್ದರು. ಈ ಕಾರ್ಯಕ್ರಮ ನಡೆಸಲು ರಾಜ್ಯ ಸರಕಾರದ ಅನುಮತಿ ಕೇಳಿತ್ತು. ಡಿ ಕೆ ಶಿವಕುಮಾರ್ ಅವರೇ ಸಿಎಂ ಯಡಿಯೂರಪ್ಪನವರ ಬಳಿ ಅನುಮತಿ ಕೇಳಿದ್ದರು.

ಜೂನ್ 31 ರವರೆಗೆ ಲಾಕ್‍ಡೌನ್ ಜಾರಿಯಲ್ಲಿರುವ ಕಾರಣ, ಕೇಂದ್ರ ಸರಕಾರದ ಮಾರ್ಗಸೂಚಿಗಳ ಅನ್ವಯ ತಮ್ಮ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಆಗುವುದಿಲ್ಲ ಎಂದು ರಾಜ್ಯ ಸರಕಾರ ಪ್ರತಿಕ್ರಿಯೆ ನೀಡಿದೆ. ಈ ಮೊದಲು ಮೇ 31ಕ್ಕೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್ ನಿಯಮದಿಂದಾಗಿ ಜೂನ್ 7ಕ್ಕೆ ಮುಂದೂಡಲಾಗಿತ್ತು. ಈ ದಿನಾಂಕದಂದು ಅನುಮತಿ ಸಿಗದ ಕಾರಣ ಜೂನ್ 14ಕ್ಕೆ ಮುಂದೂಡಲಾಗಿತ್ತು.

ಕೆಪಿಸಿಸಿಯ ನೂತನ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಮತ್ತೊಮ್ಮೆ ಅನುಮತಿ ನಿರಾಕರಿಸಿರುವ ಸರಕಾರದ ಕ್ರಮವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಸರಕಾರದ ಈ ನಿರ್ಧಾರ ರಾಜಕೀಯ ಪ್ರೇರಿತ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪದಗ್ರಹಣ ಸಮಾರಂಭಕ್ಕೆ ಎರಡನೇ ಬಾರಿ ಸರಕಾರ ಅನುಮತಿ ನಿರಾಕರಿಸಿದೆ. ಇದು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಸರಕಾರ ರಾಜಕೀಯ ದುರುದ್ದೇಶದಿಂದ ಈ ತೀರ್ಮಾನ ಕೈಗೊಂಡಿದೆ ಎಂದು ಸಿದ್ದರಾಯ್ಯ ಪ್ರತಿಕ್ರಿಯಿಸಿದ್ದಾರೆ.

ದೇಶದ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ಕಾರ್ಯಕ್ರಮ  ನಡೆಸುವಾಗ ಅನ್ವಯ ಆಗದ ನಿಯಮಗಳು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಅನ್ವಯ ಆಗುವುದೇ ಎಂದು ಸಿದ್ದರಾಮಯ್ಯ ಅವರು ತೀವ್ರವಾಗಿ ಪ್ರತಿಕ್ರಯಿಸಿದ್ದಾರೆ.

ಸರಕಾರ ಕೂಡಲೇ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಬೇಕು. ಸರಕಾರ ಏನೇ ದಮನಕಾರಿ ಪ್ರವೃತ್ತಿ ತೋರಿಸಿದರೂ ನಾವು ಕಾರ್ಯಕ್ರಮ ಮಾಡುತ್ತೇವೆ. ನಾವು ಕಾನೂನು ಗೌರವಿಸುವವರೇ ಹೊರತು ಕಾನೂನು ಭಂಗ ಮಾಡುವವರಲ್ಲ. ಕಾನೂನಿನ ಅಡಿಯಲ್ಲೇ ನಾವು ಕಾರ್ಯಕ್ರಮ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ಸರಕಾರ ಮತ್ತೊಮ್ಮೆ ಅನುಮತಿ ನಿರಾಕರಣೆ Rating: 5 Reviewed By: karavali Times
Scroll to Top