ಭಾರೀ ಮಳೆ ಹಿನ್ನಲೆ : ಶಿವಮೊಗ್ಗ-ಆಗುಂಬೆ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ - Karavali Times ಭಾರೀ ಮಳೆ ಹಿನ್ನಲೆ : ಶಿವಮೊಗ್ಗ-ಆಗುಂಬೆ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ - Karavali Times

728x90

20 September 2020

ಭಾರೀ ಮಳೆ ಹಿನ್ನಲೆ : ಶಿವಮೊಗ್ಗ-ಆಗುಂಬೆ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಶಿವಮೊಗ್ಗ, ಸೆ. 20, 2020 (ಕರಾವಳಿ ಟೈಮ್ಸ್): ರಾಜ್ಯಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಹಾಮಳೆಯೇ ಸುರಿಯುತ್ತಿದ್ದು, ಬಹುತೇಕ ಗ್ರಾಮಗಳು ಅಕ್ಷರಶಃ ಮುಳುಗಿ ಹೋಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆಗುಂಬೆಯಲ್ಲೂ ಕೂಡಾ ಭಾರೀ ಮಳೆ ಸುರಿಯುತ್ತಿದೆ. ಪರಿಣಾಮ ಶಿವಮೊಗ್ಗ-ಆಗುಂಬೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಮಾಲತಿ ಮತ್ತು ಸೀತಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅಪಾರ ಪ್ರಮಾಣದ ನೀರು ಆಗುಂಬೆ ಭಾಗಗಳ ತೋಟ, ಗದ್ದೆಗಳಿಗೆ ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಣಾಮವಾಗಿ ಶಿವಮೊಗ್ಗ-ಆಗುಂಬೆ-ಮಂಗಳೂರು ಎನ್.ಎಚ್-169ಎ ರಸ್ತೆಯನ್ನು ಆಗುಂಬೆಯ ಸೋಮೇಶ್ವರದ ಬಳಿ ಬಂದ್ ಮಾಡಲಾಗಿದ್ದು, ವಾಹನ ಸವಾರರು ಪರದಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ. 

ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭದ್ರಾವತಿಯ ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ವಾಹನ ಹಾಗೂ ಜನ ಸಂಚಾರವನ್ನು ಪೆÇಲೀಸರು ನಿರ್ಬಂಧಿಸಿದ್ದಾರೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಅತಿಯಾದ ಮಳೆ ಹಿನ್ನೆಲೆ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು, ಜಲಾಶಯಕ್ಕೆ 55 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಬರುತ್ತಿದೆ. ಜಲಾಶಯದಿಂದ 47,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡುತ್ತಿರುವುದರಿಂದ ನದಿಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಇಂಜಿನಿಯರ್ ಸೂಚಿಸಿದ್ದಾರೆ. ಈಗಾಗಲೇ ಭದ್ರಾವತಿ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಉಡುಪಿ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಬ್ರಹ್ಮಾವರ ತಾಲೂಕಿನ ಸೀತಾ ನದಿ ಅಪಾಯ ಮಟ್ಟ ತಲುಪಿದೆ. ಕಿಂಡಿ ಅಣೆಕಟ್ಟಿನ ಮೇಲೆ ನೀರು ಹರಿಯುತ್ತಿದೆ. ಸುತ್ತಮುತ್ತಲಿನ ಮನೆ ಕೃಷಿ ಭೂಮಿಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಮುಳುಗಡೆಯಾದ ಪ್ರದೇಶಗಳ ಜನರ ರಕ್ಷಣೆ ಮಾಡುವ ಕಾರ್ಯ ಭರದಿಂದ ಸಾಗಿದೆ. ಸ್ಥಳೀಯ ನಾಡದೋಣಿ, ಮೀನುಗಾರಿಕೆ, ಮರಳುಗಾರಿಕೆ ನಡೆಸುವವರ ದೋಣಿಗಳನ್ನೂ ಜನರ ರಕ್ಷಣೆಗೆ ಬಳಸಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯಿತಿ ಪಿಡಿಓಗಳು, ಜನಪ್ರತಿನಿಧಿಗಳು ಸ್ಥಳದಲ್ಲೇ ಮೊಕ್ಕಾಂ ಇದ್ದು, ಜನರ ರಕ್ಷಣೆಗೆ ಪ್ರಾಮುಖ್ಯತೆ ನೀಡಿದ್ದಾರೆ. ಸಮೀಪದ ಶಾಲೆ ಹಾಗೂ ಪೂಜಾ ಸ್ಥಳಗಳಲ್ಲೂ ಜನರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. 


  • Blogger Comments
  • Facebook Comments

0 comments:

Post a Comment

Item Reviewed: ಭಾರೀ ಮಳೆ ಹಿನ್ನಲೆ : ಶಿವಮೊಗ್ಗ-ಆಗುಂಬೆ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ Rating: 5 Reviewed By: karavali Times
Scroll to Top