ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಬೇಡ : ಆಮ್ ಆದ್ಮಿ ಆಗ್ರಹ - Karavali Times ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಬೇಡ : ಆಮ್ ಆದ್ಮಿ ಆಗ್ರಹ - Karavali Times

728x90

17 November 2020

ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಬೇಡ : ಆಮ್ ಆದ್ಮಿ ಆಗ್ರಹ




ಬೆಂಗಳೂರು, ನ 17, 2020 (ಕರಾವಳಿ ಟೈಮ್ಸ್) : ಲೋಕಾಯುಕ್ತರ ಆದೇಶಕ್ಕೂ ಬೆಲೆ ಕೊಡದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಗಮಿತ 124 ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸದೆ ದ್ರೋಹ ಎಸಗಿದ್ದು, ಇವರುಗಳಿಗೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಹಾಗೆಯೇ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019 ರ ಆಗಸ್ಟ್ 28ರಂದು ಆದೇಶ ಹೊರಡಿಸಿದ್ದ ಲೋಕಾಯುಕ್ತರು, 198 ವಾರ್ಡ್‍ಗಳ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದ್ದರು. ಈ ಆದೇಶ ನೀಡಿ ಒಂದು ವರ್ಷವಾದರೂ, 124 ಸದಸ್ಯರು ಇನ್ನೂ ತಮ್ಮ ವಿವರಗಳನ್ನು ಸಲ್ಲಿಸಿಲ್ಲ ಇಂತಹ ಸದಸ್ಯರುಗಳ ಹೆಚ್ಚುವರಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದವರು ಆಗ್ರಹಿಸಿದರು. 

ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದ ಜನಪ್ರತಿನಿಧಿಗಳ ಆಸ್ತಿ ಗಳಿಕೆಯ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದರಿಂದ ಜನಪ್ರತಿನಿಧಿಗಳಾಗಿ ಆರಿಸಿ ಬಂದವರು, ತಮ್ಮ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಬೇಕೆಂಬ ನಿಯಮ 2009 ರಲ್ಲೇ ಜಾರಿಗೆ ಬಂದಿತ್ತು. ಆದರೆ ಈಗ ಲೋಕಾಯುಕ್ತರ ಆದೇಶಕ್ಕೆ ಕನಿಷ್ಠ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯ ಮುಖಾಂತರ ಜನಪ್ರತಿನಿಧಿಗಳಾಗಿ ಆರಿಸಿ ಬಂದವರು, ಪ್ರತಿ ವರ್ಷ ಜೂನ್ 30ರೊಳಗಾಗಿ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಬೇಕೆಂಬ ನಿಯಮ 2009ರಲ್ಲೇ ರೂಪಿತವಾಗಿತ್ತು. ಒಂದು ದಶಕದಷ್ಟು ಸಮಯ ಕಳೆದರೂ, ಈ ನಿಯಮವನ್ನು ಕಠಿಣವಾಗಿ ಜಾರಿಗೆ ಬರುವುದರಲ್ಲೇ ಇದೆ. ಕಾನೂನಿನ ಭಯವಿಲ್ಲದ, ಆಸ್ತಿ ವಿವರ ಸಲ್ಲಿಸದ 124 ನಿರ್ಗಮಿತ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಹಾಗೂ ಲೋಕಾಯುಕ್ತ ಸಂಸ್ಥೆಗೆ ಆಗ್ರಹಿಸಿದರು. ಆಸ್ತಿ ವಿವರ ಸಲ್ಲಿಸದ ನಿರ್ಗಮಿತ ಬಿಬಿಎಂಪಿ ಸದಸ್ಯರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ತಾಕತ್ತಿದೆಯೇ ಎಂದವರು ಪ್ರಶ್ನಿಸಿದರು.









  • Blogger Comments
  • Facebook Comments

0 comments:

Post a Comment

Item Reviewed: ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಬೇಡ : ಆಮ್ ಆದ್ಮಿ ಆಗ್ರಹ Rating: 5 Reviewed By: karavali Times
Scroll to Top