5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್ : 5 ಬಾರಿಯೂ ತಂಡ ಮುನ್ನಡೆಸಿ ದಾಖಲೆ ಬರೆದ ರೋಹಿತ್ ಶರ್ಮಾ - Karavali Times 5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್ : 5 ಬಾರಿಯೂ ತಂಡ ಮುನ್ನಡೆಸಿ ದಾಖಲೆ ಬರೆದ ರೋಹಿತ್ ಶರ್ಮಾ - Karavali Times

728x90

10 November 2020

5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್ : 5 ಬಾರಿಯೂ ತಂಡ ಮುನ್ನಡೆಸಿ ದಾಖಲೆ ಬರೆದ ರೋಹಿತ್ ಶರ್ಮಾ
ದುಬೈ, ನ 11, 2020 (ಕರಾವಳಿ ಟೈಮ್ಸ್) : ರೋಹಿತ್ ಶರ್ಮಾ ನೇತೃತ್ವದ ಮುಂಬಯಿ ಇಂಡಿಯನ್ಸ್ ತಂಡ 5ನೇ ಬಾರಿಗೆ ಐಪಿಎಲ್ ಟೂರ್ನಿಯನ್ನು ಗೆದ್ದುಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್-2020ರ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಮತ್ತೆ ತನ್ನ ಪ್ರಭುತ್ವವನ್ನು ಸಾಬೀತುಪಡಿಸಿತು. 

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದ ನಿಗದಿತ 20 ಓವರ್ ಗಳಲ್ಲಿ 156 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ ಅವರ ಜವಾಬ್ದಾರಿಯುತ ಹಾಗೂ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ 8 ಎಸೆತಗಳು ಬಾಕಿಯಿರುವಂತೆ ಮುಂಬೈ ತಂಡ 157 ರನ್ ಬಾರಿಸಿ ಟ್ರೋಫಿ ಮೇಲೆ ಹಕ್ಕು ಚಲಾಯಿಸಿತು. 

ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಕೂಟದಲ್ಲಿ 5 ಬಾರಿ ಟ್ರೋಫಿ ಜಯಿಸಿ ದಾಖಲೆ ನಿರ್ಮಿಸಿತು. ಮುಂಬೈ ಇಂಡಿಯನ್ಸ್ ತಂಡ 2013, 2015, 2017 ಮತ್ತು 2019ರಲ್ಲಿ ಕಪ್ ಗೆದ್ದು ಅತೀ ಹೆಚ್ಚು ಬಾರೀ ಐಪಿಎಲ್ ಟ್ರೋಫಿ ಗೆದ್ದ ತಂಡವಾಗಿತ್ತು. ಇದೀಗ ಮತ್ತೆ ಈ ಬಾರಿಯೂ ಟ್ರೋಫಿ ಗೆದ್ದು, 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಬರೆದಿದೆ. ಜೊತೆಗೆ ನಾಯಕನಾಗಿ ರೋಹಿತ್ ಕೂಡ 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ನಾಯಕನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಡೆಲ್ಲಿ ನೀಡಿದ 157 ರನ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ನಿಧಾನವಾಗಿ ಆರಂಭ ಪಡೆಯಿತು. ತಂಡದ ಮೊತ್ತ 45 ರನ್ ಆಗಿದ್ದಾಗ ಕ್ವಿಂಟನ್ ಡಿ ಕಾಕ್ ಅವರು ಮಾರ್ಕಸ್ ಸ್ಟೋಯಿನಿಸ್ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ಈ ಮೂಲಕ ಪವರ್ ಪ್ಲೇ ಹಂತದಲ್ಲಿ ಒಂದು ವಿಕೆಟ್ ಕಳೆದುಕೊಂಡರು ಮುಂಬೈ ಇಂಡಿಯನ್ಸ್ ಆರು ಓವರ್ ಮುಕ್ತಾಯಕ್ಕೆ 61 ರನ್ ಗಳಿಸಿ ಉತ್ತಮ ಸ್ಥಿತಿ ಕಾಪಾಡಿಕೊಂಡು ಬಂತು.

ಎರಡನೇ ವಿಕೆಟ್‍ಗೆ ಜೊತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ 45 ರನ್‍ಗಳ ಜೊತೆಯಾಟವಾಡಿದರು. ಆದರೆ 10ನೇ ಓವರಿನ 5ನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅವರು ಔಟ್ ಆದರು. ಈ ಮಧ್ಯೆ ನಾಯಕ ರೋಹಿತ್ ಶರ್ಮಾ 36 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. 

ಮುಂಬೈ ಟ್ರೋಫಿ ಗೆಲ್ಲಲು 20 ರನ್‍ಗಳ ಅವಶ್ಯಕತೆ ಇದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ ರೋಹಿತ್ ಶರ್ಮಾ, 51 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‍ಗಳುಳ್ಳ 68 ರನ್ ಸಿಡಿಸಿ ಔಟಾದರು. ರೋಹಿತ್ ನಂತರ ಕ್ರೀಸಿಗೆ ಬಂದ ಕೀರನ್ ಪೊಲಾರ್ಡ್ 2 ಬೌಂಡರಿ ಸಿಡಿಸಿ ಅಬ್ಬರಿಸಿದ್ದರೂ ಕೇವಲ 9 ರನ್ ಗಳಿಸಿ ಕಗಿಸೊ ರಬಾಡಾಗೆ ಕ್ಲೀನ್ ಬೌಲ್ಡ್ ಆದರು. ವಿಜಯಕ್ಕೆ ಅಂತಿಮ ರನ್ ಮಾತ್ರ ಅವಶ್ಯಕತೆ ಇದ್ದಾಗ ಹಾರ್ದಿಕ್ ಪಾಂಡ್ಯ ಕ್ಯಾಚ್ ಔಟಾದರು. ಕೊನೆಯವರೆಗೂ ಔಟಾಗದೇ ಉಳಿದ ಇಶಾನ್ ಕಿಶನ್ 19 ಎಸೆತಗಳಲ್ಲಿ 33 ರನ್ ಸಿಡಿಸಿ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ತಂಡ ಆರಂಭದಲ್ಲೇ ಟ್ರೆಂಟ್ ಬೌಲ್ಟ್ ಅವರ ದಾಳಿಗೆ ನಲುಗಿ ಬಹುಬೇಗನೆ 3 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಕ್ರೀಸಿನಲ್ಲಿ ಜೊತೆಗೂಡಿದ ಶ್ರೇಯಾಸ್ ಐಯ್ಯರ್ (65 ರನ್, 50 ಎಸೆತ, 6 ಬೌಂಡರಿ. 2 ಸಿಕ್ಸರ್) ಮತ್ತು ರಿಷಬ್ ಪಂತ್ ಇಬ್ಬರೂ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಏರಿಸಿದರು. ಪರಿಣಾಮ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ತಂಡಕ್ಕೆ ಸಾಧಾರಣ 157 ರನ್‍ಗಳ ಗುರಿ ನಿಗದಿಪಡಿಸಿತ್ತು. 

  • Blogger Comments
  • Facebook Comments

0 comments:

Post a Comment

Item Reviewed: 5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್ : 5 ಬಾರಿಯೂ ತಂಡ ಮುನ್ನಡೆಸಿ ದಾಖಲೆ ಬರೆದ ರೋಹಿತ್ ಶರ್ಮಾ Rating: 5 Reviewed By: karavali Times
Scroll to Top