ಎಲಿಮಿನೇಟರ್ ಹಂತದಲ್ಲಿ ಹೈದರಾಬಾದಿಗೆ ಶರಣಾಗಿ ಐಪಿಎಲ್ ನಿಂದ ಹೊರ ನಡೆದ ಆರ್ಸಿಬಿ - Karavali Times ಎಲಿಮಿನೇಟರ್ ಹಂತದಲ್ಲಿ ಹೈದರಾಬಾದಿಗೆ ಶರಣಾಗಿ ಐಪಿಎಲ್ ನಿಂದ ಹೊರ ನಡೆದ ಆರ್ಸಿಬಿ - Karavali Times

728x90

6 November 2020

ಎಲಿಮಿನೇಟರ್ ಹಂತದಲ್ಲಿ ಹೈದರಾಬಾದಿಗೆ ಶರಣಾಗಿ ಐಪಿಎಲ್ ನಿಂದ ಹೊರ ನಡೆದ ಆರ್ಸಿಬಿ

 


ಅಬುಧಾಬಿ, ನ. 07, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ  ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ಆರ್ಸಿಬಿ ವಿರುದ್ದ 6 ವಿಕೆಟ್‍ಗಳಿಂದ ಗೆದ್ದು, ದ್ವಿತೀಯ ಎಲಿಮಿನೇಟರ್ ಹಂತಕ್ಕೆ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹೈದರಾಬಾದ್ ತಂಡ ಎದುರಿಸಲಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೇಸನ್ ಹೋಲ್ಡರ್ ಅವರ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಯ್ತು. ಆದರೆ ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಕುಸಿದ  ಆರ್‌ಸಿಬಿಗೆ ಆಸರೆಯಾದರು. ಪರಿಣಾಮ ನಿಗದಿತ 20 ಓವರ್ ಗಳಲ್ಲಿ 131 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ 2 ಎಸೆತಗಳು ಉಳಿದಂತೆ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿಯನ್ನು ಐಪಿಎಲ್‍ನಿಂದ ಹೊರಗಟ್ಟಿತು.

ಕೊನೆಯ 18 ಎಸೆತಗಳಲ್ಲಿ 28 ರನ್‌ಗಳ ಅಗತ್ಯವಿತ್ತು. ನವದೀಪ್‌ ಸೈನಿ ಎಸೆದ 18ನೇ ಓವರಿನಲ್ಲಿ 10 ರನ್‌ ಬಂದರೆ ಸಿರಾಜ್‌ ಎಸೆದ 19ನೇ ಓವರಿನಲ್ಲಿ 9 ರನ್‌ ನೀಡಿದರು. ಕೊನೆಯ 6 ಎಸೆತದಲ್ಲಿ 9 ರನ್‌ ಬೇಕಿತ್ತು. ಸೈನಿ ಎಸೆದ ಮೊದಲ ಎಸೆತದಲ್ಲಿ ವಿಲಿಯಮ್ಸನ್‌ 1 ರನ್‌ ತೆಗೆದರೆ 2ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. ಹೀಗಾಗಿ ಪಂದ್ಯ ರೋಚಕ ಘಟಕ್ಕೆ ತಿರುಗಿತ್ತು. ಆದರೆ 3 ಮತ್ತು 4ನೇ ಎಸೆತದಲ್ಲಿ ಹೋಲ್ಡರ್‌ ಸತತ 2 ಬೌಂಡರಿ ಹೊಡೆದು ತಂಡಕ್ಕೆ ಜಯ ತಂದು ಕೊಟ್ಟರು.

ಸತತ ನಾಲ್ಕು ಸೋಲಿನ ನಂತರವೂ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್‍ಗೆ ಆಯ್ಕೆಯಾಗಿದ್ದ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದನೇ ಸೋಲಿನ ಮೂಲಕ ಟೂರ್ನಿಯಿಂದ ಹೊರ ಬಿದ್ದಿದೆ. ಈ ಮೂಲಕ ‘ಈ ಸಲ ಕಪ್ ನಮ್ದೆ’ ಎಂದು ಕಾತುರದಿಂದ ಕಾಯುತ್ತಿದ್ದ ಬೆಂಗಳೂರು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇಂದಿನ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‍ನಿಂದ ಆರ್‍ಸಿಬಿ ಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. ಎಲಿಮಿನೇಟರ್ ಪಂದ್ಯದಲ್ಲಿ ಕೊಹ್ಲಿ ಇದೇ ಮೊದಲ ಬಾರಿಗೆ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದರು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 131 ರನ್‍ಗಳ ಗುರಿ ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ಈ ಮೂಲಕ ಆರಂಭಿಕನಾಗಿ ಕಣಕ್ಕಿಳಿದ ಶ್ರೀವಾತ್ಸ್ ಗೋಸ್ವಾಮಿ ಅವರನ್ನು ಮೊದಲ ಓವರಿನಲ್ಲೇ ಔಟ್ ಮಾಡಿದರು. ನಂತರ ಜೊತೆಯಾದ ನಾಯಕ ಡೇವಿಡ್ ವಾರ್ನರ್ ಮತ್ತು ಮನೀಶ್ ಪಾಂಡೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದರು.

ಆದರೆ ಐದನೇ ಓವರ್ ನ ನಾಲ್ಕನೇ ಎಸೆತದಲ್ಲಿ 17 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‍ನಲ್ಲಿ ಎಬಿ ಡಿವಿಲಿಯರ್ಸ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇವರ ನಂತರ 21 ಎಸೆತಗಳಲ್ಲಿ 24 ರನ್ ಸಿಡಿಸಿ ಆಡುತ್ತಿದ್ದ ಮನೀಶ್ ಪಾಂಡೆಯನ್ನು ಆಡಮ್ ಜಂಪಾ ಅವರು ಔಟ್ ಮಾಡಿದರು. ನಂತರ ಪ್ರಿಯಮ್ ಗರ್ಗ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಚಹಲ್ ಗೆ ವಿಕೆಟ್ ಒಪ್ಪಿಸಿದರು.

ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇದರ ಜೊತೆಗೆ ತಾಳ್ಮೆಯಿಂದ ಆಡಿಕೊಂಡು ಬಂದ ಕೇನ್ ವಿಲಿಯಮ್ಸನ್ ಅವರು 44 ಬಾಲಿಗೆ ಅರ್ಧಶತಕರ ಸಿಡಿಸಿ ಮಿಂಚಿದರು. ಜೊತೆಗೆ ಇವರಿಗೆ ಉತ್ತಮ ಸಾಥ್ ನೀಡಿದ ಜೇಸನ್ ಹೋಲ್ಡರ್ ಅವರು 20 ಎಸೆತಗಳಲ್ಲಿ 24 ರನ್ ಸಿಡಿಸಿ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಎಲಿಮಿನೇಟರ್ ಹಂತದಲ್ಲಿ ಹೈದರಾಬಾದಿಗೆ ಶರಣಾಗಿ ಐಪಿಎಲ್ ನಿಂದ ಹೊರ ನಡೆದ ಆರ್ಸಿಬಿ Rating: 5 Reviewed By: karavali Times
Scroll to Top