ಬಿಜೆಪಿಯಿಂದ ಎಂ.ಎಲ್.ಎ. ಆಗಲಿ : ಮಾವೆ ದಂಪತಿ ಬಿಜೆಪಿ ಸೇರಿದ ಬಗ್ಗೆ ರಮಾನಾಥ ರೈ ಟಾಂಗ್ - Karavali Times ಬಿಜೆಪಿಯಿಂದ ಎಂ.ಎಲ್.ಎ. ಆಗಲಿ : ಮಾವೆ ದಂಪತಿ ಬಿಜೆಪಿ ಸೇರಿದ ಬಗ್ಗೆ ರಮಾನಾಥ ರೈ ಟಾಂಗ್ - Karavali Times

728x90

18 December 2020

ಬಿಜೆಪಿಯಿಂದ ಎಂ.ಎಲ್.ಎ. ಆಗಲಿ : ಮಾವೆ ದಂಪತಿ ಬಿಜೆಪಿ ಸೇರಿದ ಬಗ್ಗೆ ರಮಾನಾಥ ರೈ ಟಾಂಗ್








ಬಂಟ್ವಾಳ, ಡಿ 18, 2020 (ಕರಾವಳಿ ಟೈಮ್ಸ್) : ಜಿ ಪಂ ಮಾಣಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಮಂಜುಳಾ ಮಾವೆ, ಅವರ ಪತಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮಾಧವ ಮಾವೆ ಹಾಗೂ ಬಂಟ್ವಾಳ ತಾ ಪಂ ಸದಸ್ಯ ಕಮಾರ್ ಭಟ್ ಅವರು ಶುಕ್ರವಾರ ಕಾಂಗ್ರೆಸ್ ತೊರೆದು ಮಂಗಳೂರಿನ ಬಿಜೆಪಿ ಕಛೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಸಹಿತ ಬಿಜೆಪಿ ನಾಯಕರ ಸಮಕ್ಷಮ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಯಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು ವ್ಯಂಗ್ಯವಾಗಿ ಕುಟುಕಿದ್ದಾರೆ. ಗ್ರಾ ಪಂ ಅಧ್ಯಕ್ಷತೆಯಿಂದ ಹಿಡಿದು ಜಿ ಪಂ ವರೆಗೆ ಪಕ್ಷದಲ್ಲಿದ್ದಾಗ ಸಾಧ್ಯವಿದ್ದ ಎಲ್ಲ ಅವಕಾಶಗಳನ್ನು ಮಾವೆ ದಂಪತಿಗಳು ಪಡೆದುಕೊಂಡಿದ್ದು, ಇನ್ನು ದಕ್ಕಿಸಿಕೊಳ್ಳಲು ಉಳಿದಿರುವುದು ಎಂಎಲ್‍ಎ ಹುದ್ದೆ ಮಾತ್ರ. ಅದನ್ನು ಬಿಜೆಪಿಯಿಂದ ಪಡೆಯಲು ಸಾಧ್ಯವಾದರೆ ಪಡೆದುಕೊಳ್ಳಲಿ ಎಂದು ರಮಾನಾಥ ರೈ ಟಾಂಗ್ ನೀಡಿದ್ದಾರೆ. 

ಮಾಧವ ಮಾವೆ ಅವರ ಪತ್ನಿ, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾ ಪಂ ಅಧ್ಯಕ್ಷರಾಗಿ, ಮಾಣಿ ಕ್ಷೇತ್ರದಿಂದ ಜಿ ಪಂ ಸದಸ್ಯರಾಗಿ, ನನ್ನ ನೇತೃತ್ವದ ಸಹಕಾರಿ ಬ್ಯಾಂಕಿನಲ್ಲಿ ನಿರ್ದೇಶಕರಾಗಿ, ಮಾಧವ ಮಾವೆ ಅವರು ತಾ ಪಂ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಬಳಿಕ ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷನಾಗಿ ಪಕ್ಷದಿಂದ ಹುದ್ದೆಗಳನ್ನು ಪಡೆದುಕೊಂಡು ತಮ್ಮ ಹೆಸರನ್ನು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಇನ್ನಷ್ಟು ಅಧಿಕಾರದ ಅಭಿಲಾಷೆಯಿಂದ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರಷ್ಟೆ ಎಂದ ರಮಾನಾಥ ರೈ, ಮಾಧವ ಮಾವೆ ಅವರು ನನಗೆ ಬೆಂಗಳೂರಿನಲ್ಲಿದ್ದಾಗ ಸ್ನೇಹಿತರು. ಬಳಿಕ ಊರಿಗೆ ಬಂದಾಗ ರಾಜಕೀಯ ಅವಕಾಶ ಕೇಳಿದ್ದಕ್ಕೆ ನನ್ನಿಂದಾಗುವಷ್ಟರ ಮಟ್ಟಿಗೆ ಇತರರನ್ನು ಎದುರು ಹಾಕಿಕೊಂಡಾದರೂ ಸಹಾಯ ಮಾಡಿದ್ದೇನೆ. ಎಂಟು ಬಾರಿ ನಾನು ವಿಧಾನಸಭೆಗೆ ಸ್ಪರ್ಧಿಸಿದ್ದು, 6 ಬಾರಿ ಶಾಸಕನಾಗಿದ್ದೆ. ಈ ಪೈಕಿ ಮಾವೆ ಅವರು ನನ್ನ ಕ್ಷೇತ್ರದಲ್ಲಿ ಎರಡು ಬಾರಿ ಮಾತ್ರ ನನ್ನ ಜೊತೆ ಕೆಲಸ ಮಾಡಿದ್ದಾರೆ. ಕೇವಲ ಎರಡು ಬಾರಿ ಮಾತ್ರ ನನ್ನ ಜೊತೆ ಕೆಲಸ ಮಾಡಿದ ಮಾವೆಗೆ ಲೆಕ್ಕಕ್ಕಿಂತ ಜಾಸ್ತಿ ಅವಕಾಶ ಕೊಟ್ಟ ಕಾರಣಕ್ಕೆ ನನ್ನೊಂದಿಗೆ 8 ಬಾರಿಯೂ ಕೆಲಸ ಮಾಡಿದ ನಿಷ್ಠಾವಂತರು ಮುನಿಸಿಕೊಂಡಿದ್ದೂ ಇದೆ ಎಂದರು. ತಾ ಪಂ ಸದಸ್ಯ ಕುಮಾರ್ ಭಟ್ ಅವರು ಸ್ಥಳೀಯವಾಗಿ ಗ್ರಾ ಪಂ ಅಧ್ಯಕ್ಷರ ಜೊತೆ ಜಂಘೀ ಕುಸ್ತಿ ನಡೆಸಿ ವೈಯುಕ್ತಿಕವಾಗಿ ಮುನಿಸಿಕೊಂಡು ಪಕ್ಷ ಬಿಟ್ಟಿದ್ದಾರಷ್ಟೆ ಎಂದು ರಮಾನಾಥ ರೈ ಹೇಳಿದರು. ಈ ಬಗ್ಗೆ ಯಾರ ಬಗ್ಗೆಯೂ ನಾನು ಕೀಳಾಗಿ ವಿಮರ್ಶೆ ಮಾಡುವುದಿಲ್ಲ ಅವರಾಗಿಯೇ ಆತ್ಮಾವಲೋಕನ ನಡೆಸಿಕೊಳ್ಳಲಿ ಎಂದರು. 

ಮಾವೆ ದಂಪತಿಗಳು ಪಕ್ಷ ಬಿಟ್ಟಿರುವುದರಿಂದ ನನಗಾಗಲೀ, ನನ್ನ ಕಾಂಗ್ರೆಸ್ ಪಕ್ಷಕ್ಕಾಗಲೀ ಯಾವುದೇ ಹಿನ್ನಡೆಯಾಗಿಲ್ಲ. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ನಿಷ್ಠಾವಂತ ಮೂಲ ಕಾಂಗ್ರೆಸಿಗರು, ಹಿರಿಯರು ಇಂದಿಗೂ ಪಕ್ಷದಲ್ಲೇ ಇದ್ದಾರೆ. ಕಾಂಗ್ರೆಸ್ ಕೈಗೊಂಡ ಜಾರಿಗೆ ತಂದ ಪ್ರತಿಯೊಂದು ಕಾರ್ಯಕ್ರಮಗಳೂ ಜನಪರ ಹಾಗೂ ಬಡವರ ಪರ ಕಾರ್ಯಕ್ರಮಗಳೇ ಆಗಿದೆ ಹೊರತು ಎಲ್ಲಿಯೂ ಜನವಿರೋಧಿಯಾಗಿ ಕಾರ್ಯಕ್ರಮ ಕಾಂಗ್ರೆಸ್ ಜಾರಿಗೆ ತಂದಿಲ್ಲ. ಒಂದೊಮ್ಮೆ ಭೂಸುಧಾರಣೆ ಕಾಯ್ದೆ ಜಾರಿಗೆ ಬಂದಾಗ ನಮ್ಮ ಕುಟುಂಬದ ಜಮೀನು ಕೂಡಾ ಕೈ ತಪ್ಪಿ ಹೋಗಿತ್ತು. ಆ ಸಂದರ್ಭ ನಮಗೂ ಬೇಸರವಾಗಿತ್ತು. ಆದರೆ ಬಳಿಕ ಶಿಕ್ಷಣ ಪಡೆದಾಗ ಗೊತ್ತಾಗಿದೆ ಇದು ಒಂದು ಸಾಮಾಜಿಕ ನ್ಯಾಯ ಕಾಪಾಡುವ ನಿಟ್ಟಿನಲ್ಲಿ ಜಾರಿಗೆ ತಂದ ಕಾನೂನು ಎಂಬುದು. ಇದನ್ನೆಲ್ಲ ತಿಳಿದುಕೊಂಡೇ ಕಾಂಗ್ರೆಸ್ ಪಕ್ಷದ ತತ್ವ-ಸಿದ್ದಾಂತಗಳನ್ನು ಮನಸಾರೆ ಒಪ್ಪಿಕೊಂಡೇ ನಾನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದ ರಮಾನಾಥ ರೈ ಯಾರು ಬಿಟ್ಟು ಹೋದರೂ ಕಾಂಗ್ರೆಸ್ ಪಕ್ಷಕ್ಕೆ ಏನೂ ಸಂಭವಿಸಲಾರದು. ಇಂದು ಬಿಜೆಪಿ ಅಧಿಕಾರದಲ್ಲಿದ್ದರೂ ದೇಶಾದ್ಯಂತ ಗಮನಿಸಿದರೆ, ಬಿಜೆಪಿಯೇತರ ಪಕ್ಷಗಳೇ ಅಧಿಕ ಸ್ಥಾನಗಳನ್ನು ಒಂದಿಗೂ ಕಾಯ್ದುಕೊಂಡು ಬಂದಿದೆ. ಕೆಲವು ಕಡೆ ಆಪರೇಶನ್, ಅಪವಿತ್ರ ಮೈತ್ರಿ, ಹಿಂಬಾಗಿಲ ರಾಜಕೀಯ, ಅಪಪ್ರಚಾರ, ಅಕ್ರಮಗಳ ಮೂಲಕ ಬಿಜೆಪಿ ಅಧಿಕಾರ ಪಡೆದುಕೊಂಡಿರಬಹುದು. ಆದರೆ ರಾಜಕೀಯದಲ್ಲಿ ಯಾವುದೇ ಅಧಿಕಾರವೂ ಶಾಶ್ವತ ಅಲ್ಲವೇ ಅಲ್ಲ. ಹೀಗಿರುತ್ತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಜೊತೆ ಸೇರಿ ಮತ್ತೆ ಪಕ್ಷ ಕಟ್ಟಲು ನಾನು ಬದ್ದನಾಗಿದ್ದು, ಮುಂಬರುವ ಗ್ರಾ ಪಂ ಚುನಾವಣೆಯಲ್ಲೇ ಇದನ್ನು ಜನ ನಿರೂಪಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 









  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿಯಿಂದ ಎಂ.ಎಲ್.ಎ. ಆಗಲಿ : ಮಾವೆ ದಂಪತಿ ಬಿಜೆಪಿ ಸೇರಿದ ಬಗ್ಗೆ ರಮಾನಾಥ ರೈ ಟಾಂಗ್ Rating: 5 Reviewed By: karavali Times
Scroll to Top