ಇಂದಿನ ವ್ಯವಸ್ಥೆಯಲ್ಲಿ ರೈತರ ಜೀವನ ಕ್ರಮವನ್ನೇ ಅವಮಾನಿಸಲಾಗುತ್ತಿದೆ‌ : ಎಂ.ಜಿ. ಹೆಗಡೆ ವಿಷಾದ - Karavali Times ಇಂದಿನ ವ್ಯವಸ್ಥೆಯಲ್ಲಿ ರೈತರ ಜೀವನ ಕ್ರಮವನ್ನೇ ಅವಮಾನಿಸಲಾಗುತ್ತಿದೆ‌ : ಎಂ.ಜಿ. ಹೆಗಡೆ ವಿಷಾದ - Karavali Times

728x90

10 January 2021

ಇಂದಿನ ವ್ಯವಸ್ಥೆಯಲ್ಲಿ ರೈತರ ಜೀವನ ಕ್ರಮವನ್ನೇ ಅವಮಾನಿಸಲಾಗುತ್ತಿದೆ‌ : ಎಂ.ಜಿ. ಹೆಗಡೆ ವಿಷಾದ

ಕೊಟ್ಟಿಗೆಹಾರ, ಜ. 10, 2021 (ಕರಾವಳಿ ಟೈಮ್ಸ್) : ರೈತರನ್ನು ಬರೀ ಉತ್ಪಾದಕರನ್ನಾಗಿ ನೋಡಲಾಗುತ್ತಿದೆ, ಅವರನ್ನು ಗ್ರಾಹಕರನ್ನಾಗಿ ನೋಡಲಾಗುತ್ತಿಲ್ಲ. ರೈತರ ಜೀವನಕ್ರಮವನ್ನೇ ಅವಮಾನಿಸಲಾಗುತ್ತಿದೆ ಎಂದು ವಿಮರ್ಶಕ ಡಾ. ಎಂ.ಜಿ. ಹೆಗಡೆ ಹೇಳಿದರು. ಕೋಶ ಓದು, ದೇಶ ನೋಡು ಬಳಗ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ (ರಿ) ಆಯೋಜನೆಯಲ್ಲಿ, ಸಹಮತ, ಸಹಯಾನ ಸಹಭಾಗಿತ್ವದಲ್ಲಿ ತೇಜಸ್ವಿ ಪ್ರತಿಷ್ಠಾನ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ಓದು ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಓದು ಅಭಿಯಾನ ಒಂದು ಸಾಂಸ್ಕೃತಿಕ ಪಯಣ. ಸಂಸ್ಕೃತಿ ಎಂದರೆ ವೇದ, ಉಪನಿಷತ್, ಭಾರತೀಯ ಸಂಸ್ಕೃತಿ ಎಂಬುದಲ್ಲ. ಅದು ಒಂದು ಜೀವನ ಕ್ರಮ ಎಂದರು. ಭಾರತಕ್ಕೆ ಭಾರತೀಯ ಸಂಸ್ಕೃತಿ ಎಂಬುದು ಇಲ್ಲ. ದೇಶದಲ್ಲಿರುವ ಹಲವು ಜಾತಿ, ಧರ್ಮಗಳ ಜನರಿಗೆ ಅವರದ್ದೇ ಆದ ಸಂಸ್ಕೃತಿ ಇದೆ. ಹಾಗಿರುವಾಗ ದೇಶ ಒಂದು ಸಂಸ್ಕೃತಿ ಹೊಂದಿದೆ ಎಂದು ಹೇಳಲಾಗದು. ಒಂದು ಸಮುದಾಯದ ಆಹಾರ ಸಂಸ್ಕೃತಿ, ವಸ್ತ್ರ ಸಂಹಿತೆ ಮೊದಲಾದವುಗಳನ್ನು ಭಾರತೀಯ ಸಂಸ್ಕೃತಿ ಎಂದು ಹೇಳಿದಾಗ ಸಮಸ್ಯೆ ಎದುರಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳ ರೈತ ಹೋರಾಟಗಳ ವಿಚಾರವಾಗಿ ಉಲ್ಲೇಖಿಸಿದ ಅವರು, ರೈತರು ಚಳುವಳಿಯನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ಅವರು ಪಾಯಸ ತಿನ್ನುತ್ತಾರೆ, ಅವರ ಬಳಿ ಕಾರುಗಳಿಗೆ, ಜೀಪುಗಳು ಇವೆ. ಹಾಗಾದರೆ ಅವರು ರೈತರೇ ಎಂದು ಪ್ರಶ್ನಿಸಲಾಗುತ್ತಿದೆ. ಆದರೆ ಈ ಪ್ರಶ್ನೆಯ ಮೂಲಕವೇ ಜೀವನ ಕ್ರಮವನ್ನೇ ಅವಮಾನಿಸಲಾಗುತ್ತಿದೆ. ಅವರ ಊಟವೂ ಕೂಡಾ ಈಗ ಕೆಲ ಜನರ ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ ಎಂದು ಹೇಳಿದರು. ತೇಜಸ್ವಿಯವರ ಪುಸ್ತಕಗಳ ಬಗ್ಗೆ ಅವರು ಮಾತನಾಡಿ, ತೇಜಸ್ವಿ ಪುಸ್ತಕದಲ್ಲಿ ಯುವಜನರಿಗೆ ಸಂದೇಶವಿದೆ. ಅವರು ಹೆಚ್ಚಿನ ಕಾದಂಬರಿಗಳನ್ನು ಯುವಕರನ್ನು ಉದ್ದೇಶಿಸಿ ಬರೆದಿದ್ದಾರೆ. ಇದನ್ನು ನಾವು ಕರ್ವಾಲೋ ಕಾದಂಬರಿಯ ಮೂಲಕ ಕಂಡು ಕೊಳ್ಳಬಹುದು. ಯುವಜನರು ಆರು ತಿಂಗಳುಗಳ ಕಾಲ ತೇಜಸ್ವಿಯವರ ಮೂರು ಕೃತಿಗಳ ಜೊತೆಯೇ ಜೀವಿಸಿದ್ದು ಸಂತೋಷದ ವಿಚಾರ. ಅಷ್ಟೇ ಅಲ್ಲದೇ ತೇಜಸ್ವಿಯವರ ಜಾಗದಲ್ಲೇ ಈ ಕಾರ್ಯಕ್ರಮದ ಸಮಾರೋಪ ಮಾಡುತ್ತಿರುವುದು ಸಂತಸ ಎಂದು ಶ್ಲಾಘಿಸಿದರು. ತೇಜಸ್ವಿಯವರ ಕಾದಂಬರಿ ಭಿನ್ನವಾದದ್ದು ಎಂದು ಹೇಳಿದ ಅವರು, ಬೇರೆ ಕಾದಂಬರಿಗಳಲ್ಲಿ ಈ ಭಿನ್ನತೆಯಿಲ್ಲ. ನಾವು ಕೇವಲ ನೋಡುವುದು ಅಲ್ಲ, ವಿಚಾರವನ್ನು ಕಾಣಬೇಕು ಎಂದರು. ಇದೇ ವೇಳೆ ಮಾತನಾಡಿದ ನ್ಯಾಯವಾದಿ ಸುಧೀರ್ ಕುಮಾರ್ ಮುರೋಳ್ಳಿ, ಗೋ ಹತ್ಯೆ, ಪ್ರಾಣಿ ಹತ್ಯೆ ವಿರೋಧದ ಹೆಸರಲ್ಲಿ ಮನುಷ್ಯನ ಹತ್ಯೆಯಾದರೆ ಅದನ್ನು ಸಹಿಸಲಾಗದು, ಅದು ಖಂಡನಾರ್ಹ ಎಂದು ಗಾಂಧೀಜಿ ಹೇಳುತ್ತಾರೆ. ನಾವಿಂದು ಅದನ್ನು ನೆನಪಿಸಿಕೊಳ್ಳಬೇಕು ಎಂದರು. ಎಷ್ಟೋ ರೈತರು ಸಾವನ್ನಪ್ಪುತ್ತಿದ್ದಾರೆ. ಆದರೆ ನಾವು ಅಸೂಕ್ಷ್ಮರಾಗಿದ್ದೇವೆ. ನಮ್ಮ ಚಾನೆಲ್, ಮಾಧ್ಯಮಗಳು ರೈತ ಪ್ರತಿಭಟನೆಯನ್ನು ಮುಖಪುಟದ ವಿಷಯವನ್ನಾಗಿಯೇ ಪರಿಗಣಿಸುತ್ತಿಲ್ಲ. ಚಳುವಳಿ, ಚಳುವಳಿಕಾರರು, ಹೋರಾಟ, ಹೋರಾಟಗಾರರನ್ನು ಶಂಕಿಸುವ ಕೆಲಸ ಆಡಳಿತ ಮಾಡಲಿ. ನಾವು ಮಾಡಬಾರದು ಎಂದು ಹೇಳಿದರು. ಜಗತ್ತಿನ ಎಲ್ಲಾ ಹೆಣ್ಣು ಮಕ್ಕಳ ನೋವು ಒಂದೇ. ಕೋಮುಗಲಭೆ, ಪ್ರತಿಭಟನೆ ಏನೇ ನಡೆಯಲಿ ಅದರ ಮೊದಲ ಪರಿಣಾಮ ಬೀರುವುದು ಹೆಣ್ಣಿನ ಮೇಲೆ ಎಂದ ಅವರು ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ನೋಡಿದಾಗ ತೇಜಸ್ವಿ ಇರಬೇಕಿತ್ತು ಎಂದನಿಸುತ್ತದೆ. ಕುವೆಂಪು, ತೇಜಸ್ವಿಯನ್ನು ಓದದೇ ಹೊಸ ಚಿಂತನ ಕ್ರಮ ಹೊಂದಲು ಸಾಧ್ಯವಾಗದು ಎಂದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಹಯಾನದ ಡಾ. ವಿಠ್ಠಲ ಭಂಡಾರಿ ವಹಿಸಿದ್ದರು. ವೇದಿಕೆಯಲ್ಲಿ ತೇಜಸ್ವಿ ಪ್ರತಿಷ್ಠಾನದ ಬಾಪು ದಿನೇಶ್, ಓದು ಅಭಿಯಾನದ ನವೀನ್ ಮಂಡಗದ್ದೆ ಉಪಸ್ಥಿತರಿದ್ದರು. ವಿನೀತ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಇಂದಿನ ವ್ಯವಸ್ಥೆಯಲ್ಲಿ ರೈತರ ಜೀವನ ಕ್ರಮವನ್ನೇ ಅವಮಾನಿಸಲಾಗುತ್ತಿದೆ‌ : ಎಂ.ಜಿ. ಹೆಗಡೆ ವಿಷಾದ Rating: 5 Reviewed By: karavali Times
Scroll to Top