ಮೊದಲ ಎಸೆತದಲ್ಲೇ ಸಿಕ್ಸರ್, ಚೊಚ್ಚಲ ಪಂದ್ಯದಲ್ಲೇ ಫಿಫ್ಟಿ : ಸೂರ್ಯಕುಮಾರ್ ಯಾದವ್ ದಾಖಲೆಯೊಂದಿಗೆ ಸರಣಿ ಸಮಬಲಕ್ಕೆ ಕೊಂಡೊಯ್ದ ಟೀಂ ಇಂಡಿಯಾ : ಶನಿವಾರದ ಪಂದ್ಯಕ್ಕೆ ಫೈನಲ್ ಮಹತ್ವ - Karavali Times ಮೊದಲ ಎಸೆತದಲ್ಲೇ ಸಿಕ್ಸರ್, ಚೊಚ್ಚಲ ಪಂದ್ಯದಲ್ಲೇ ಫಿಫ್ಟಿ : ಸೂರ್ಯಕುಮಾರ್ ಯಾದವ್ ದಾಖಲೆಯೊಂದಿಗೆ ಸರಣಿ ಸಮಬಲಕ್ಕೆ ಕೊಂಡೊಯ್ದ ಟೀಂ ಇಂಡಿಯಾ : ಶನಿವಾರದ ಪಂದ್ಯಕ್ಕೆ ಫೈನಲ್ ಮಹತ್ವ - Karavali Times

728x90

18 March 2021

ಮೊದಲ ಎಸೆತದಲ್ಲೇ ಸಿಕ್ಸರ್, ಚೊಚ್ಚಲ ಪಂದ್ಯದಲ್ಲೇ ಫಿಫ್ಟಿ : ಸೂರ್ಯಕುಮಾರ್ ಯಾದವ್ ದಾಖಲೆಯೊಂದಿಗೆ ಸರಣಿ ಸಮಬಲಕ್ಕೆ ಕೊಂಡೊಯ್ದ ಟೀಂ ಇಂಡಿಯಾ : ಶನಿವಾರದ ಪಂದ್ಯಕ್ಕೆ ಫೈನಲ್ ಮಹತ್ವ

 
ಅಹಮದಾಬಾದ್, ಮಾ. 19, 2021 (ಕರಾವಳಿ ಟೈಮ್ಸ್) :
ಟಿ-20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಅವರು ಚೊಚ್ಚಲ ಪಂದ್ಯದ ಪ್ರಥಮ ಎಸೆತದಲ್ಲೇ ಸಿಕ್ಸರ್ ಭಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರನೆಂಬ ದಾಖಲೆ ಮಾಡಿದರಲ್ಲದೆ, ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಭಾರಿಸುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ. 


    ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ಗುರುವಾರ ನಡೆದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ 8 ರನ್‍ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಸರಣಿ ಇದೀಗ 2-2 ರಲ್ಲಿ ಸಮಬಲಗೊಂಡಿದ್ದು, ಶನಿವಾರ ನಡೆಯುವ 5ನೇ ಹಾಗೂ ಅಂತಿಮ ಪಂದ್ಯ ಫೈನಲ್ ಹಣಾಹಣಿಯ ಮಹತ್ವ ಪಡೆದುಕೊಂಡಿದೆ. 


    ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಭಾರತಕ್ಕೆ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಬಿಟ್ಟುಕೊಟ್ಟರು. ನಾಯಕನ ನಿರ್ಧಾರದಂತೆ ಉತ್ತಮ ಬೌಲಿಂಗ್ ಮಾಡಿದ ಇಂಗ್ಲೆಂಡ್ ಬೌಲರ್‍ಗಳು  ಭಾರತದ ಆರಂಭಿಕ ಆಟಗಾರರನ್ನು ಕಟ್ಟಿ ಹಾಕಿದರು. ರೋಹಿತ್ ಶರ್ಮಾ 12 ರನ್ (12 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ  ಜೊಫ್ರಾ ಆರ್ಚರ್‍ಗೆ ವಿಕೆಟ್ ಒಪ್ಪಿಸಿದರು. ಕೆ.ಎಲ್. ರಾಹುಲ್ 14 ರನ್ (17 ಎಸೆತ, 2 ಬೌಂಡರಿ) ಹಾಗೂ ನಾಯಕ ವಿರಾಟ್ ಕೊಹ್ಲಿ 1 ರನ್ ಸಿಡಿಸಿ ಬಹಳಷ್ಟು ಅಗ್ಗದಲ್ಲಿ ಎದುರಾಳಿ ಬೌಲರ್‍ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ 3ನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದ ಸೂರ್ಯಕುಮಾರ್ ಯಾದವ್ 57 ರನ್ (31 ಎಸೆತ, 6 ಬೌಂಡರಿ, 3 ಸಿಕ್ಸರ್) ಅರ್ಧಶತಕ ಬಾರಿಸಿದರು. ಅಲ್ಲದೆ ವಿಕೆಟ್ ಕೀಪರ್ ಬ್ಯಾಟ್ಸ್‍ಮೆನ್ ರಿಷಬ್ ಪಂತ್ ಜೊತೆ ಸೇರಿ 4ನೇ ವಿಕೆಟ್‍ಗೆ 28 ಎಸೆತಗಳಲ್ಲಿ 48 ರನ್‍ಗಳ ಜೊತೆಯಾಟ ನೀಡಿದರು. ಪಂತ್ 23 ಎಸೆತಗಳಲ್ಲಿ 30 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ ವೇಗದ ಬ್ಯಾಟಿಂಗ್ ನಡೆಸಿ 18 ಎಸೆತಗಳಲ್ಲೇ 37 ರನ್ (5 ಬೌಂಡರಿ, 1 ಸಿಕ್ಸರ್) ಭಾರಿಸಿದರು. ಅಂತಿಮವಾಗಿ ಟೀಂ ಇಂಡಿಯಾ 20 ಒವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 185 ರನ್ ಒಟ್ಟುಗೂಡಿಸಿ ಆಂಗ್ಲರಿಗೆ 186 ರನ್‍ಗಳ ಗುರಿ ನಿಗದಿಪಡಿಸಿತು. 


    186 ರನ್‍ಗಳ ಸವಾಲಿಗೆ ಉತ್ತರಿಸಿದ ಇಂಗ್ಲೆಂಡ್ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೇವಲ 9 ರನ್ (6 ಎಸೆತ, 1 ಸಿಕ್ಸರ್) ಸಿಡಿಸಿ ಭುವನೇಶ್ವರ್ ಕುಮಾರ್‍ಗೆ ವಿಕೆಟ್ ಒಪ್ಪಿಸಿದರು. ಡೇವಿಡ್ ಮಲಾನ್ 14 ರನ್ (17 ಎಸೆತ, 1 ಸಿಕ್ಸರ್) ಗಳಿಸಿ ಔಟಾದರು. ಜೇಸನ್ ರಾಯ್ 40 ರನ್ (27 ಎಸೆತ, 6 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದರಾದರೂ ಕೊನೆಯವರೆಗೆ ಹೋರಾಡಲು ವಿಫಲರಾದರು. ಬೆನ್ ಸ್ಟೋಕ್ ಅಬ್ಬರಿಸಿ 46 ರನ್ (23 ಎಸೆತ, 4 ಬೌಂಡರಿ, 3 ಸಿಕ್ಸರ್) ಬಾರಿಸಿ ಔಟಾದರು. ಕೊನೆಯಲ್ಲಿ ಗೆಲುವಿಗಾಗಿ ಹೋರಾಡಿದ ಜೋಫ್ರಾ ಆರ್ಚರ್ 18 ರನ್ (8 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿದರಾದರೂ ಕೂಡಾ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಇಂಗ್ಲಂಡ್ ನಿಗದಿತ ಒವರ್‍ಗಳು ಮುಕ್ತಾಗೊಳ್ಳುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಗಳಿಸಲಷ್ಟೆ ಶಕ್ತವಾಗಿ 8 ರನ್‍ಗಳಿಂದ ಟೀಂ ಇಂಡಿಯಾ ಮುಂದೆ ಮಂಡಿಯೂರಿತು. ಈ ಮೂಲಕ  ಟಿ-20 ಸರಣಿ ಇದೀಗ 2-2ರಲ್ಲಿ ಸಮಬಲಗೊಂಡಿದೆ. ಸರಣಿಯ ಅಂತಿಮ ಪಂದ್ಯ ಶನಿವಾರ ನಡೆಯಲಿದ್ದು, ಫೈನಲ್ ಹಣಾಹಣಿಯ ಮಹತ್ವ ಪಡೆದುಕೊಂಡಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮೊದಲ ಎಸೆತದಲ್ಲೇ ಸಿಕ್ಸರ್, ಚೊಚ್ಚಲ ಪಂದ್ಯದಲ್ಲೇ ಫಿಫ್ಟಿ : ಸೂರ್ಯಕುಮಾರ್ ಯಾದವ್ ದಾಖಲೆಯೊಂದಿಗೆ ಸರಣಿ ಸಮಬಲಕ್ಕೆ ಕೊಂಡೊಯ್ದ ಟೀಂ ಇಂಡಿಯಾ : ಶನಿವಾರದ ಪಂದ್ಯಕ್ಕೆ ಫೈನಲ್ ಮಹತ್ವ Rating: 5 Reviewed By: karavali Times
Scroll to Top