ಸಿರಾಜ್ ಅಂತಿಮ ಎಸೆತದ ಕೈಚಳಕ : ಬೆಂಗಳೂರಿಗೆ 1 ರನ್ ರೋಚಕ ಗೆಲುವು - Karavali Times ಸಿರಾಜ್ ಅಂತಿಮ ಎಸೆತದ ಕೈಚಳಕ : ಬೆಂಗಳೂರಿಗೆ 1 ರನ್ ರೋಚಕ ಗೆಲುವು - Karavali Times

728x90

27 April 2021

ಸಿರಾಜ್ ಅಂತಿಮ ಎಸೆತದ ಕೈಚಳಕ : ಬೆಂಗಳೂರಿಗೆ 1 ರನ್ ರೋಚಕ ಗೆಲುವು

 

ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ


ಅಹಮದಾಬಾದ್, ಎಪ್ರಿಲ್ 28, 2021 (ಕರಾವಳಿ ಟೈಮ್ಸ್) : ತೀವ್ರ ಹಣಾಹಣಿ ಕಂಡ ಬೆಂಗಳೂರು-ಡೆಲ್ಲಿ ನಡುವಿನ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ವೇಗಿ ಸಿರಾಜ್ ಅವರ ಅಂತಿಮ ಎಸೆತದ ಕೈ ಚಳಕದಿಂದಾಗಿ ಬೆಂಗಳೂರು ಒಂದು ರನ್ ರೋಚಕ ಜಯ ಸಂಪಾದಿಸುವ ಮೂಲ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಪಟ್ಟಕ್ಕೇರಿತು.


ಗೆಲ್ಲಲು 172 ರನ್‍ಗಳ ಕಠಿಣ ಗುರಿ ಪಡೆದ ಡೆಲ್ಲಿ ತಂಡ ನಾಯಕ ರಿಷಭ್ ಪಂಥ್ ಅವರ ತಾಳ್ಮೆಯ ಹಾಗೂ ಶಿಮ್ರಾನ್ ಹೆಟ್ಮಿಯರ್ ಅವರ ಸ್ಫೋಟಕ ಅರ್ಧಶತಕದ ಹೊರತಾಗಿಯೂ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಭಾರಿಸಲು ಶಕ್ತವಾಗಿ ಕೇವಲ ಒಂದು ರನ್ ಅಂತರ ವಿರೋಚಿತ ಸೋಲು ಅನುಭವಿಸಿತು. ಈ ಮೂಲಕ ಒಟ್ಟು 10 ಅಂಕ ಸಂಪಾದಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ.


ಡೆಲ್ಲಿ ತಂಡಕ್ಕೆ ಗೆಲುವಿಗೆ ಕೊನೆಯ 24 ಎಸೆತದಲ್ಲಿ 56 ರನ್ ಗಳ ಅವಶ್ಯಕತೆ ಇತ್ತು. ಹರ್ಷಲ್ ಪಟೇಲ್ ಎಸೆದ 17ನೇ ಓವರಿನಲ್ಲಿ 10 ರನ್ ಬಂದರೆ, ಜೇಮಿಸನ್ ಎಸೆದ 18ನೇ ಓವರಿನಲ್ಲಿ ಹೆಟ್ಮಿಯರ್ 3 ಸಿಕ್ಸರ್ ನೆರವಿನಿಂದ  ಬರೋಬ್ಬರಿ 21 ರನ್ ಹರಿದು ಬಂತು. ಈ ಮೂಲಕ ಪಂದ್ಯ ರೋಚಕ ಘಟಕ್ಕೆ ಬಂದು ನಿಂತಿತು. ಹರ್ಷಲ್ ಪಟೇಲ್‍ಎಸೆದ 19ನೇ ಓವರಿನಲ್ಲಿ 11 ರನ್ ಬಂತು.


ಕೊನೆಯ 6 ಎಸೆತದಲ್ಲಿ 14 ರನ್ ಗಳ ಅವಶ್ಯಕತೆ ಇತ್ತು. ಸಿರಾಜ್ ಪಾಲಾದ ಈ ಓವರಿನ ಮೊದಲ ಎರಡು ಎಸೆತದಲ್ಲಿ ಒಂದೊಂದು ರನ್ ಬಂದರೆ, 3ನೇ ಎಸೆತ ಡಾಟ್ ಬಾಲ್ ಆಗಿ ಪರಿಣಮಿಸಿತು. 4ನೇ ಎಸೆತದಲ್ಲಿ 2 ರನ್ ಬಂದರೆ 5 ಮತ್ತು 6ನೇ ಎಸೆತದಲ್ಲಿ ಪಂತ್ ಬೌಂಡರಿ ಭಾರಿಸಿದರು. ಕೊನೆಯ ಎಸೆತದಲ್ಲಿ ಆರು ರನ್ ಬೇಕಿದ್ದಾಗ ಕೈ ಚಳಕ ತೋರಿದ ಸಿರಾಜ್ ರಿಷಬ್ ಪಂತ್ ಅವರಿಗೆ ಸಂಪೂರ್ಣ ಆಫ್ ಸ್ಟಂಪಿನಿಂದ ಹೊರಕ್ಕೆ ಚೆಂಡು ಎಸೆದು ಪಂತ್ ಅವರನ್ನು ವಂಚಿಸಿ ಸಿಕ್ಸರ್ ಅವಕಾಶವನ್ನು ತಪ್ಪಿಸಿದರು. ಪಂತ್ ಭಾರಿಸಿದ ಈ ಚೆಂಡು ಬೌಂಡರಿಯಾಗಿ ಮಾತ್ರ ಪರಿವರ್ತನೆಯಾಗುವ ಮೂಲಕ ಬೆಂಗಳೂರು ತಂಡ ರೋಚಕ 1 ರನ್‍ ಜಯ ಪಡೆದು ಬೀಗಿತು.


ಪೃಥ್ವಿ ಶಾ 21 ರನ್, ರಿಷಭ್ ಪಂತ್ ಅಜೇಯ 58 ರನ್ (48 ಎಸೆತ, 6 ಬೌಂಡರಿ) ಹೆಟ್ಮಿಯರ್ ಅಜೇಯ 53 ರನ್ (25 ಎಸೆತ, 2 ಬೌಂಡರಿ, 4 ಸಿಕ್ಸರ್) ಭಾರಿಸಿ ತಂಡವನ್ನು ಆಧರಿಸಿದರಾದರೂ ದಡ ಸೇರಿಸುವಲ್ಲಿ ವಿಫಲರಾದರು.

ಜೇಮಿಸನ್ ಎಸೆದ 15ನೇ ಓವರಿನ ಮೊದಲ ಎಸೆತವನ್ನು ಹೆಟ್ಮಿಯರ್ ಬಲವಾಗಿ ಹೊಡೆದಿದ್ದರು. ಆದರೆ ಆಫ್ ಸೈಡ್ ನಲ್ಲಿದ್ದ ಪಡಿಕ್ಕಲ್ ಕ್ಯಾಚ್ ಕೈ ಚೆಲ್ಲಿದ್ದರು. ಈ ವೇಳೆ ಹೆಟ್ಮೆಯರ್ 15 ರನ್ ಮಾತ್ರ ಭಾರಿಸಿದ್ದರು. ಇದರ ಪೂರ್ಣ ಲಾಭ ಪಡೆದ ಹೆಟ್ಮೈಯರ್ ಭರ್ಜರಿ ಅರ್ಧ ಶತಕ ಭಾರಿಸಿದರು.


ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 30 ರನ್ ಗಳಿಸುವಷ್ಟರಲ್ಲಿ ವಿರಾಟ್ ಕೊಹ್ಲಿ (12 ರನ್) ಹಾಗೂ ದೇವದತ್ ಪಡಿಕ್ಕಲ್ (17 ರನ್) ಅವರ ವಿಕೆಟ್ ‌ಕಳೆದುಕೊಂಡಿತು.

ರಜತ್ ಪಟೀದಾರ್ 31 ರನ್ (22 ಎಸೆತ, 2 ಬೌಂಡರಿ) ಭಾರಿಸಿದರೆ, ಗ್ಲೇನ್ ಮ್ಯಾಕ್ಸ್ ವೆಲ್ 25 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸರ್) ಭಾರಿಸಿ ಔಟಾದರು.


ತಂಡ 5 ವಿಕೆಟ್ ಕಳೆದುಕೊಂಡು 139 ರನ್‍ಗಳಿಸಿದ್ದಾಗ ಕಣಕ್ಕಿಳಿದ ಎಬಿ ಡೆವಿಲಿಯರ್ಸ್ ಸ್ಫೋಟಕ ಆಟ ಪ್ರದರ್ಶಿಸಿದರು. ಸ್ಟೋಯ್ನಿಸ್ ಎಸೆದ 20ನೇ ಓವರಿನಲ್ಲಿ ಎಬಿಡಿ 3 ಸಿಕ್ಸ್ ಸಿಡಿಸುವ ಮೂಲಕ 23 ರನ್ ಸಿಡಿಸಿದರು. ಎಬಿಡಿ 35 ಎಸೆತದಲ್ಲಿ ಅರ್ಧಶತಕ ಹೊಡೆದರೆ ಅಂತಿಮವಾಗಿ 42 ಎಸೆತದಲ್ಲಿ 3 ಬೌಂಡರಿ, 5ಸಿಕ್ಸರ್ ಒಳಗೊಂಡ ಭರ್ಜರಿ ಅಜೇಯ 75 ರನ್ ಗಳಿಸಿದರು.  ಈ ಮೂಲಕ ಬೆಂಗಳೂರು ತಂಡ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತು.

  • Blogger Comments
  • Facebook Comments

0 comments:

Post a Comment

Item Reviewed: ಸಿರಾಜ್ ಅಂತಿಮ ಎಸೆತದ ಕೈಚಳಕ : ಬೆಂಗಳೂರಿಗೆ 1 ರನ್ ರೋಚಕ ಗೆಲುವು Rating: 5 Reviewed By: karavali Times
Scroll to Top