ಮಂಜೇಶ್ವರ, ಮೇ 24, 2021 (ಕರಾವಳಿ ಟೈಮ್ಸ್) : ಕೇರಳ ವಿಧಾನಸಭೆಗೆ ಆಯ್ಕೆಯಾದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸೋಮವಾರ ನಡೆದಿದ್ದು, ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕ ಮಂದಿ ಕನ್ನಡಿಗ ಭಾಷಿಗರಿದ್ದಾರೆ. ಈ ಜಿಲ್ಲೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವುದರಿಂದ ಕನ್ನಡ ಭಾಷೆಯ ಪ್ರಭಾವ ಇಲ್ಲಿ ಹೆಚ್ಚು. ಭೌಗೋಳಿಕವಾಗಿ ಕೇರಳಕ್ಕೆ ಸೇರಿದ್ದರೂ ಕೂಡ ಇಲ್ಲಿನ ಜನರ ಕನ್ನಡ ಪ್ರೀತಿಗೇನು ಕೊರತೆಯಿಲ್ಲ. ಮಂಜೇಶ್ವರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರೇ ಇದ್ದು, ಕೇರಳ ರಾಜ್ಯ ಮಂಜೇಶ್ವರ ತಾಲೂಕನ್ನು ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಎಂದು ಘೋಷಿಸಿದೆ.
ಇಲ್ಲಿನ ಶಾಸಕರು ಈ ಹಿಂದೆ ಕೂಡ ವಿಧಾನಸಭೆಯಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ಆ ಸಂಪ್ರದಾಯವನ್ನು ಅಶ್ರಫ್ ಮುಂದುವರಿಸಿದ್ದಾರೆ. ಸೋಮವಾರ ಅಧಿವೇಶನ ಆರಂಭಕ್ಕೆ ಮುನ್ನ ಪ್ರಮಾಣ ವಚನ ಸ್ವೀಕಾರ ವೇಳೆ, ಎ.ಕೆ.ಎಂ. ಅಶ್ರಫ್ ಅವರು ಅಚ್ಚ ಕನ್ನಡದಲ್ಲಿ ಅಲ್ಲಾಹನ ಹೆಸರಿನಲ್ಲಿ ಪ್ರತಿಜ್ಞೆಗೈದು ಗಮನ ಸೆಳೆದರು.
ಅಶ್ರಫ್ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ರಾಜ್ಯ ಘಟಕಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.















0 comments:
Post a Comment