ನೂತನ ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಕ್ಯಾಬಿನೆಟ್ ಅಸ್ತು : ಇನ್ನು ಮುಂದೆ 2 ತಿಂಗಳ ಅಡ್ವಾನ್ಸ್ ಮಾತ್ರ ಡೆಪಾಸಿಟ್ ಆಗಿ ಪಡೆಯಲು ಅವಕಾಶ - Karavali Times ನೂತನ ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಕ್ಯಾಬಿನೆಟ್ ಅಸ್ತು : ಇನ್ನು ಮುಂದೆ 2 ತಿಂಗಳ ಅಡ್ವಾನ್ಸ್ ಮಾತ್ರ ಡೆಪಾಸಿಟ್ ಆಗಿ ಪಡೆಯಲು ಅವಕಾಶ - Karavali Times

728x90

2 June 2021

ನೂತನ ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಕ್ಯಾಬಿನೆಟ್ ಅಸ್ತು : ಇನ್ನು ಮುಂದೆ 2 ತಿಂಗಳ ಅಡ್ವಾನ್ಸ್ ಮಾತ್ರ ಡೆಪಾಸಿಟ್ ಆಗಿ ಪಡೆಯಲು ಅವಕಾಶ

ನವದೆಹಲಿ, ಜೂನ್ 03, 2021 (ಕರಾವಳಿ ಟೈಮ್ಸ್) : ನೂತನ ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಕ್ಯಾಬಿನೆಟ್ ಬುಧವಾರ ಒಪ್ಪಿಗೆ ನೀಡಿದೆ. ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೆ ಈ ಕಾಯ್ದೆಯನ್ನು ಸಹಾಯಕವಾಗುವಂತೆ ರೂಪಿಸಲಾಗಿದೆ ಎನ್ನಲಾಗಿದೆ.

  ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ‘ಮಾದರಿ ಬಾಡಿಗೆ ಕಾಯ್ದೆ’ಗೆ ಅನುಮೋದನೆ ನೀಡಲಾಗಿದ್ದು, ಪ್ರಸ್ತುತ ಈಗ ಬಾಡಿಗೆದಾರರಿಂದ 10 ತಿಂಗಳ ಮುಂಗಡ ಬಾಡಿಗೆಯನ್ನು ಪಡೆಯುವ ಕ್ರಮಕ್ಕೆ ಹೊಸ ಕಾಯ್ದೆ ಬ್ರೇಕ್ ಹಾಕಲಿದ್ದು, ಹೊಸ ಕಾಯ್ದೆ ಪ್ರಕಾರ ಇನ್ನು ಮುಂದೆ ಮನೆ ಮಾಲಿಕರು ಕೇವಲ 2 ತಿಂಗಳ ಬಾಡಿಗೆಯನ್ನು ಮಾತ್ರ ಮುಂಗಡವಾಗಿ ಡೆಪಾಸಿಟ್ ಆಗಿ ಪಡೆಯಲು ಅನುಮತಿಸಲಾಗಿದೆ.

ಹೊಸ ಕಾಯ್ದೆಯನ್ನು  ಕೇಂದ್ರ ಸರ ಕಾರ ನೇರವಾಗಿ ಜಾರಿ ಮಾಡುವುದಿಲ್ಲ. ಶೀಘ್ರವೇ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿ ಕೊಡಲಿದೆ. ರಾಜ್ಯಗಳಲ್ಲಿ ಪ್ರತ್ಯೇಕ ಕಾಯ್ದೆಗಳು ಇರುವ ಕಾರಣ ಹಾಲಿ ಬಾಡಿಗೆ ಕಾಯ್ದೆಗಳಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಮನೆಗಳನ್ನು ಬಾಡಿಗೆ ನೀಡುವ ವ್ಯವಸ್ಥೆಗೆ ಉದ್ಯಮ ಸ್ವರೂಪ ನೀಡಿ, ಈ ಉದ್ಯಮದಲ್ಲಿ ಪಾಲ್ಗೊಳ್ಳುವಂತೆ ಖಾಸಗಿ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಇದರಿಂದ ವಸತಿ ಕ್ಷೇತ್ರ ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭೂ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆಯ ಕರಡನ್ನು ಸರ್ಕಾರ  2019 ರಲ್ಲಿ ಬಿಡುಗಡೆ ಮಾಡಿತ್ತು.

ಮಾಲೀಕರು ಮತ್ತು ಬಾಡಿಗೆದಾರರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಬಾಡಿಗೆ ಪ್ರಾಧಿಕಾರ ರಚನೆ ಮಾಡಬೇಕು. ಮಾಲೀಕರು ಭದ್ರತಾ ಠೇವಣಿಯಾಗಿ ಬಾಡಿಗೆದಾರರಿಂದ ಕೇವಲ 2 ತಿಂಗಳ ಬಾಡಿಗೆಯನ್ನು ಮಾತ್ರ ಪಡೆಯಬೇಕು.
 
ವಾಣಿಜ್ಯ ಕಟ್ಟಡಗಳಿಗೆ ಭದ್ರತಾ ಠೇವಣಿಯಾಗಿ 6 ತಿಂಗಳ ಹಣವನ್ನು ಮಾತ್ರ ಪಡೆಯಬೇಕು. ಬಾಡಿಗೆ ವಿಚಾರದಲ್ಲಿ ಸಮಸ್ಯೆಯಾದಲ್ಲಿ ಜಿಲ್ಲಾ ಬಾಡಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.

ಒಪ್ಪಂದ ಮುಗಿದ ಬಳಿಕವೂ ಮನೆಯನ್ನು ಖಾಲಿ ಮಾಡದೇ ಇದ್ದಲ್ಲಿ ಮಾಲೀಕ ಮುಂದಿನ 2 ತಿಂಗಳ ಅವಧಿಗೆ ಬಾಡಿಗೆಯನ್ನು ದ್ವಿಗುಣ ಮಾಡಬಹುದು. 2 ತಿಂಗಳ ಬಳಿಕವೂ ಮನೆ ಖಾಲಿ ಮಾಡದೇ ಇದ್ದರೆ ಬಾಡಿಗೆಯನ್ನು 4 ಪಟ್ಟು ಹೆಚ್ಚಿಸಬಹುದು.

ಮನೆ ಮಾಲೀಕ ಪೂರ್ವ ಸೂಚನೆ ನೀಡದೇ ಬಾಡಿಗೆದಾರನ ಮನೆಯನ್ನು ಪ್ರವೇಶಿಸುವಂತಿಲ್ಲ. 24 ಗಂಟೆಗಳ ಮೊದಲು ನೋಟಿಸ್ ನೀಡಿದರೆ ಮಾತ್ರ ಮಾಲೀಕ ಮನೆಯನ್ನು ಪ್ರವೇಶಿಸುವ ಹಕ್ಕನ್ನು ಹೊಂದಿರುತ್ತಾನೆ. ಕಟ್ಟಡಕ್ಕೆ ಹಾನಿಯಾಗಿದ್ದರೆ ರಿಪೇರಿಗೆ ಬಾಡಿಗೆದಾರನೇ ಹಣವನ್ನು ನೀಡಬೇಕು.
ವಿವಾದದ ಸಂದರ್ಭದಲ್ಲಿ ಮಾಲೀಕರು ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸುವಂತಿಲ್ಲ. ಒಪ್ಪಂದದ ಅವಧಿ ಇರುವವರೆಗೆ ಬಾಡಿಗೆ ದರವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲು ಸಾಧ್ಯವಿಲ್ಲ. ಬಾಡಿಗೆ ಪರಿಷ್ಕರಿಸುವ 3 ತಿಂಗಳ ಮೊದಲು ಮಾಲೀಕ ನೋಟಿಸ್ ನೀಡಬೇಕಾಗುತ್ತದೆ ಇತ್ಯಾದಿ ನಿಯಮಗಳು ಹೊಸ ಬಾಡಿಗೆ ಕಾಯ್ದೆ ಒಳಗೊಂಡಿದೆ.

  • Blogger Comments
  • Facebook Comments

0 comments:

Post a Comment

Item Reviewed: ನೂತನ ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಕ್ಯಾಬಿನೆಟ್ ಅಸ್ತು : ಇನ್ನು ಮುಂದೆ 2 ತಿಂಗಳ ಅಡ್ವಾನ್ಸ್ ಮಾತ್ರ ಡೆಪಾಸಿಟ್ ಆಗಿ ಪಡೆಯಲು ಅವಕಾಶ Rating: 5 Reviewed By: lk
Scroll to Top