ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಸವಲತ್ತು ಪಡೆಯಲು ಅಂಚೆ ಕಚೇರಿಯಲ್ಲಿ ಝೀರೋ ಬ್ಯಾಲೆನ್ಸ್ ಖಾತೆ ಆರಂಭಿಸಲು ಅವಕಾಶ - Karavali Times ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಸವಲತ್ತು ಪಡೆಯಲು ಅಂಚೆ ಕಚೇರಿಯಲ್ಲಿ ಝೀರೋ ಬ್ಯಾಲೆನ್ಸ್ ಖಾತೆ ಆರಂಭಿಸಲು ಅವಕಾಶ - Karavali Times

728x90

10 September 2021

ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಸವಲತ್ತು ಪಡೆಯಲು ಅಂಚೆ ಕಚೇರಿಯಲ್ಲಿ ಝೀರೋ ಬ್ಯಾಲೆನ್ಸ್ ಖಾತೆ ಆರಂಭಿಸಲು ಅವಕಾಶ

ಮಂಗಳೂರು, ಸೆಪ್ಟಂಬರ್ 10, 2021 (ಕರಾವಳಿ ಟೈಮ್ಸ್) : ಸರಕಾರದಿಂದ ಶಾಲಾ ವಿದ್ಯಾರ್ಥಿಗಳಿಗೆ ಪಾವತಿಯಾಗುವ ವಿವಿಧ ನೇರ ನಗದು ಹಣ ವರ್ಗಾವಣೆಯ ಸವಲತ್ತು ಪಡೆಯಲು ಅಂಚೆ ಕಚೇರಿಗಳಲ್ಲಿ ಶೂನ್ಯ ಶಿಲ್ಕು (ಝೀರೋ ಬ್ಯಾಲೆನ್ಸ್) ಖಾತೆ ಆರಂಭಿಸಲು ವಿಶೇಷ ಸೌಲಭ್ಯ ಲಭ್ಯವಿದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ. 

ಈ ಬಗ್ಗೆ ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರಿಗೆ ತಿಳುವಳಿಕೆ ಮೂಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಅವರಿಗೆ ಅಂಚೆ ಅಧೀಕ್ಷಕರು ಲಿಖಿತ ಪತ್ರ ಬರೆದಿದ್ದಾರೆ. ಅಂಚೆ ಕಚೇರಿಗಳು ಬಹುತೇಕ ಹಳ್ಳಿಗಳಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಇತ್ಯಾದಿ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳಿಗೆ ಅಂಚೆ ಕಚೇರಿ ಖಾತೆಯು ಅತ್ಯಂತ ಸೂಕ್ತ ಹಾಗೂ ಸಮಯ ಉಳಿತಾಯದ ಮಾರ್ಗವಾಗಿದೆ. ಅಂಚೆ ಕಚೇರಿಗಳು ಇದೀಗ ಐ.ಎಫ್.ಎಸ್.ಸಿ. ಕೋಡ್ ಹೊಂದಿದ್ದು, ಬ್ಯಾಂಕ್ ಖಾತೆಗೆ ಸರಿಸಮಾನವಾಗಿದೆ. ಯಾವುದೇ ರೀತಿಯ ಡಿಬಿಟಿ (ನೇರ ನಗದು ವರ್ಗಾವಣೆ) ಯೋಜನೆಗಳಿಗೆ ಅಂಚೆ ಉಳಿತಾಯ ಖಾತೆ ಬಳಸಬಹುದಾಗಿದೆ. 

ಮಧ್ಯಾಹ್ನದ ಉಪಾಹಾರ ಯೋಜನೆಯಡಿಯಲ್ಲಿ ಸರಕಾರದಿಂದ ಪಾವತಿಯಾಗುವ ನೇರ ನಗದು ಹಣವನ್ನು ವಿದ್ಯಾರ್ಥಿಗಳಿಗೆ ಪಾವತಿಸಲು ಈಗಾಗಲೇ ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳಲ್ಲಿ ಅಂಚೆ ಶೂನ್ಯ ಶಿಲ್ಕು ಉಳಿತಾಯ ಖಾತೆಯನ್ನು ಆಧಾರ್ ಸೀಡಿಂಗ್ ಪ್ರಕ್ರಿಯೆಯೊಂದಿಗೆ ತೆರೆಯಲಾಗುತ್ತಿದೆ. 

ಇದು ಈ ಯೋಜನೆಗೆ ಮಾತ್ರ ಸೀಮಿತವಾಗದೆ ಇನ್ನಿತರ ಯೋಜನೆಗಳಾದ ವಿದ್ಯಾರ್ಥಿ ವೇತನ ಪಾವತಿ ಇತ್ಯಾದಿ ಯೋಜನೆಗಳಿಗೂ ಆಧಾರ್ ಸೀಡಿಂಗ್ ಸಹಿತವಾಗಿ ಪ್ರತಿ ವಿದ್ಯಾರ್ಥಿಗಳಿಗೂ ಶೂನ್ಯ ಶಿಲ್ಕು (ಝೀರೋ ಬ್ಯಾಲೆನ್ಸ್) ಅಂಚೆ ಉಳಿತಾಯ ಖಾತೆ ತೆರೆಯಲು ಅಂಚೆ ಕಚೇರಿಗಳಲ್ಲಿ ಅವಕಾಶವಿದೆ. 

ಶಾಲೆಗಳಲ್ಲಿ ಒಂದನೇ ತರಗತಿ ಸೇರ್ಪಡೆ ಸಂದರ್ಭದಲ್ಲಿಯೇ ಬ್ಯಾಂಕ್ ಖಾತೆ ಒದಗಿಸಲು ಶಾಲಾ ಮುಖ್ಯಸ್ಥರು ಸೂಚಿಸುತ್ತಿದ್ದು, ಈ ಸಂದರ್ಭ ವಿದ್ಯಾರ್ಥಿಗಳು ಒದಗಿಸುವ ಅಂಚೆ ಖಾತೆಗಳನ್ನು ಕೆಲವೊಂದು ಶಾಲೆಗಳಲ್ಲಿ ಪರಿಗಣಿಸದೆ ಕೇವಲ ಬ್ಯಾಂಕ್ ಖಾತೆ ಪಾಸ್ ಪುಸ್ತಕ ಮಾತ್ರ ನೀಡುವಂತೆ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಶಾಲಾ ಮುಖ್ಯಸ್ಥರಲ್ಲಿ ಇರುವ ಗೊಂದಲ ನಿವಾರಣೆಗೆ ಡಿಡಿಪಿಐ ಅವರು ಶಾಲಾ ಮುಖ್ಯಸ್ಥರಿಗೆ ಸೂಕ್ತ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳಲ್ಲಿ ಅಂಚೆ ಖಾತೆ ತೆರೆಯಲು ಅವಕಾಶ ಒದಗಿಸುವಂತೆ ಅಂಚೆ ಅಧೀಕ್ಷಕರು ಡಿಡಿಪಿಐ ಅವರಿಗೆ ಪತ್ರ ಮೂಲಕ ತಿಳಿಸಿದ್ದಾರೆ. 

ಅಂಚೆ ಕಚೇರಿಗಳಲ್ಲಿ ವಿದ್ಯಾರ್ಥಿಗಳು ಶೂನ್ಯ ಶಿಲ್ಕು ಖಾತೆ ತೆರೆಯಲು ಶಾಲೆಗಳಿಂದ ನಿಗದಿತ ಮಾದರಿಯಲ್ಲಿ ದೃಢೀಕರಣ ಅಗತ್ಯವಿದ್ದು, ವಿದ್ಯಾರ್ಥಿಗಳು ಅವರ ಹಾಗೂ ಪೋಷಕರ ಆಧಾರ್ ಪ್ರತಿ, ಒಂದು ಭಾವಚಿತ್ರ ಹಾಗೂ ಆಧಾರ್ ಸೀಡಿಂಗ್ ಅರ್ಜಿಯನ್ನು ಸಮೀಪದ ಅಂಚೆ ಕಚೇರಿಗೆ ಸಲ್ಲಿಸಿ ಖಾತೆ ತೆರೆಯಲು ಅವಕಾಶ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಮೀಪದ ಅಂಚೆ ಕಚೇರಿಗಳಿಗೆ ಸಂಪರ್ಕಿಸಬಹುದು ಎಂದು ಅಂಚೆ ಅಧೀಕ್ಷರು ಜಿಲ್ಲೆಯ ಡಿಡಿಪಿಐ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಸವಲತ್ತು ಪಡೆಯಲು ಅಂಚೆ ಕಚೇರಿಯಲ್ಲಿ ಝೀರೋ ಬ್ಯಾಲೆನ್ಸ್ ಖಾತೆ ಆರಂಭಿಸಲು ಅವಕಾಶ Rating: 5 Reviewed By: karavali Times
Scroll to Top