ಅಕ್ರಮ ಮರಳು ಸಾಗಾಟಗಾರರಿಂದ ಪೊಲೀಸರಿಗೇ ಧಮ್ಕಿ : ಟಿಪ್ಪರ್ ಮೈಮೇಲೆ ಹರಿಸಲು ಯತ್ನಿಸಿ ಪರಾರಿ - Karavali Times ಅಕ್ರಮ ಮರಳು ಸಾಗಾಟಗಾರರಿಂದ ಪೊಲೀಸರಿಗೇ ಧಮ್ಕಿ : ಟಿಪ್ಪರ್ ಮೈಮೇಲೆ ಹರಿಸಲು ಯತ್ನಿಸಿ ಪರಾರಿ - Karavali Times

728x90

20 October 2021

ಅಕ್ರಮ ಮರಳು ಸಾಗಾಟಗಾರರಿಂದ ಪೊಲೀಸರಿಗೇ ಧಮ್ಕಿ : ಟಿಪ್ಪರ್ ಮೈಮೇಲೆ ಹರಿಸಲು ಯತ್ನಿಸಿ ಪರಾರಿ

ಬಂಟ್ವಾಳ, ಅಕ್ಟೋಬರ್ 20, 2021 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪಿಯ ಫರಂಗಿಪೇಟೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪೊಲೀಸ್ ಸಿಬ್ಬಂದಿಗಳಾದ ಶೇಖರ ಚೌಗಾಲಾ ಹಾಗೂ ಹೋಂ ಗಾರ್ಡ್ ವೇಣುಗೋಪಾಲ ಅವರು ಮಂಗಳವಾರ ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ಟಿಪ್ಪರ್ ಲಾರಿ ಹಾಗೂ ಆಲ್ಟೋ ಕಾರು ಚಾಲಕರು ನಿಲ್ಲಿಸಲು ಸೂಚಿಸಿದರೂ ಪೊಲೀಸರ ಸೂಚನೆ ನಿರ್ಲಕ್ಷಿಸಿ ಪರಾರಿಯಾದುದಲ್ಲದೆ, ಪರಾರಿಯಾಗುವ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿದ ಬಂಟ್ವಾಳ ಪ್ರಕರಣ ದಾಖಲಾಗಿದೆ. 

ಮಂಗಳವಾರ ರಾತ್ರಿ ಸುಮಾರು 2.20 ರ ವೇಳೆಗೆ ಪೊಲೀಸ್ ಸಿಬ್ಬಂದಿ ಶೇಖರ ಹಾಗೂ ಹೋಂಗಾರ್ಡ್ ವೇಣುಗೋಪಾಲ ಅವರು ಮಂಗಳೂರು ಕಡೆಯಿಂದ ವೇಗವಾಗಿ ಬಂದ ನೋಂದಣಿ ಸಂಖ್ಯೆ ಕೆಎ51 ಸಿ 6229ರ ಟಿಪ್ಪರ್ ಲಾರಿಯನ್ನು ಅದರ ಚಾಲಕ ಸಿಬ್ಬಂದಿಗಳ ಮೇಲೆ ಹತ್ತಿಸಲು ಯತ್ನಿಸಿದ್ದಾನೆ. ಈ ಸಂದರ್ಭ ಸಿಬ್ಬಂದಿಗಳು ತಪ್ಪಿಸಿಕೊಂಡಿದ್ದಾರೆ. ಬಳಿಕ ಟಿಪ್ಪರ್ ಲಾರಿಯನ್ನು ಚೆಕ್ ಪೋಸ್ಟ್ ಬ್ಯಾರಿಕೇಡಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿರುತ್ತಾನೆ. 

ಬಳಿಕ ಅದರ ಹಿಂದೆ ಅದೇ ವೇಗದಲ್ಲಿ ಬರುತ್ತಿದ್ದ ನೋಂದಣಿ ಸಂಖ್ಯೆ ಕೆಎ19 ಎಂಸಿ 2269 ರ ಆಲ್ಟೋ ಕಾರಿನ ಚಾಲಕನಲ್ಲಿ ಕೂಡಾ ಪೊಲೀಸರು ನಿಲ್ಲಿಸಲು ಸೂಚಿಸಿದ ವೇಳೆ ಅದರ ಚಾಲಕ ಹಾಗೂ 3 ಮಂದಿ ಸಹ ಪ್ರಯಾಣಿಕರು ಪೊಲೀಸರಿಗೆ ಅವ್ಯಾಚ್ಯವಾಗಿ ನಿಂದಿಸಿ ಪರಾರಿಯಾಗಿರುತ್ತಾನೆ. ಈ ಬಗ್ಗೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಟಿಪ್ಪರ್ ಹಾಗೂ ಕಾರು ಚಾಲಕರ ವಿರುದ್ದ ಅಪರಾಧ ಕ್ರಮಾಂಕ 121-2021 ಕಲಂ 279, 353, 307, 504 ಜೊತೆಗೆ 34 ಐಪಿಸಿ ಮತ್ತು 2ಎ ಕೆಪಿಡಿಎಲ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. 

 ಇದೇ ಲಾರಿ ಹಾಗೂ ಕಾರು ಚಾಲಕರು ಮಂಗಳೂರು ನಗರ ಪೆÇಲೀಸ್ ತಂಡದವರು ಅಡ್ಯಾರ್ ಗ್ರಾಮದ ಸಹ್ಯಾದ್ರಿ ಕಾಲೇಜ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅದೇ ದಿನ ಸಹ್ಯಾದ್ರಿ ಕಾಲೇಜಿನ ಪಕ್ಕದಲ್ಲಿರುವ ನೇತ್ರಾವತಿ ನದಿ ಹಾಗೂ ಅರಾಫಾ ಮರಳು ಧಕ್ಕೆ ಸಮೀಪ ಪೊಲೀಸರು ನಿಲ್ಲಿಸಲು ಸೂಚಿಸಿದ ವೇಳೆ ಪೊಲೀಸರ ಸೂಚನೆ ನಿರ್ಲಕ್ಷಿಸಿ ಪರಾರಿಯಾಗಿರುವ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 84/2021 ಕಲಂ 379, 353 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. 

ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಪ್ರವೃತ್ತರಾದ ಪೊಲೀಸರು ಅಕ್ರಮ ಮರಳು ಕಳ್ಳತನ ಮಾಡಿ ತಪ್ಪಿಸಿಕೊಂಡ ಬಗ್ಗೆ ಖಚಿತಪಡಿಸಿಕೊಂಡು ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್ ಹಾಗೂ ಕಾರು ಚಾಲಕ ಮೊಯಿದ್ದೀನ್ ಅಪ್ಸರ್ ಅವರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದು, ಅಕ್ರಮ ಮರಳುಗಾರಿಕೆಗೆ ಬಳಸಿದ್ದ ಟಿಪ್ಪರ್ ಲಾರಿ ಮತ್ತು ಆಲ್ಟೋ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮರಳು ಸಾಗಾಟಗಾರರಿಂದ ಪೊಲೀಸರಿಗೇ ಧಮ್ಕಿ : ಟಿಪ್ಪರ್ ಮೈಮೇಲೆ ಹರಿಸಲು ಯತ್ನಿಸಿ ಪರಾರಿ Rating: 5 Reviewed By: karavali Times
Scroll to Top