ಮಾರಿಪಳ್ಳ ಹೆದ್ದಾರಿ ಬದಿ ತ್ಯಾಜ್ಯ ಮಿಶ್ರಿತ ಮಣ್ಣು ಸುರಿದ ಟಿಪ್ಪರ್ ಚಾಲಕ : ಆತನಿಂದಲೇ ತೆರವುಗೊಳಿಸಿ ಎಚ್ಚರಿಕೆ ನೀಡಿದ ಪಂಚಾಯತ್ ಅಧ್ಯಕ್ಷ - Karavali Times ಮಾರಿಪಳ್ಳ ಹೆದ್ದಾರಿ ಬದಿ ತ್ಯಾಜ್ಯ ಮಿಶ್ರಿತ ಮಣ್ಣು ಸುರಿದ ಟಿಪ್ಪರ್ ಚಾಲಕ : ಆತನಿಂದಲೇ ತೆರವುಗೊಳಿಸಿ ಎಚ್ಚರಿಕೆ ನೀಡಿದ ಪಂಚಾಯತ್ ಅಧ್ಯಕ್ಷ - Karavali Times

728x90

15 October 2021

ಮಾರಿಪಳ್ಳ ಹೆದ್ದಾರಿ ಬದಿ ತ್ಯಾಜ್ಯ ಮಿಶ್ರಿತ ಮಣ್ಣು ಸುರಿದ ಟಿಪ್ಪರ್ ಚಾಲಕ : ಆತನಿಂದಲೇ ತೆರವುಗೊಳಿಸಿ ಎಚ್ಚರಿಕೆ ನೀಡಿದ ಪಂಚಾಯತ್ ಅಧ್ಯಕ್ಷ

ಬಂಟ್ವಾಳ, ಅಕ್ಟೋಬರ್ 15, 2021 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾ ಪಂ ವ್ಯಾಪ್ತಿಯ ಫರಂಗಿಪೇಟೆ ಸಮೀಪದ ಹತ್ತನೇ ಮೈಲುಗಲ್ಲು ಬಳಿ ರಾಷ್ಟ್ರೀಯ ಹೆದ್ದಾರಿ ಬದಿಗೆ ಟಿಪ್ಪರ್ ಲಾರಿಯಲ್ಲಿ ತ್ಯಾಜ್ಯ ಮಿಶ್ರಿತ ಮಣ್ಣು ತಂದು ಹಾಕಿದ ಅದೇ ಚಾಲಕನೊಂದಿಗೆ ತೆರವು ಮಾಡಿಸುವಲ್ಲಿ ಪಂಚಾಯತ್ ಆಡಳಿತ ಶುಕ್ರವಾರ ಯಶಸ್ವಿಯಾಗಿದೆ. 

ತುಂಬೆ ಕಡೆಯಿಂದ ಟಿಪ್ಪರ್ ಲಾರಿಯಲ್ಲಿ ತ್ಯಾಜ್ಯ ಮಿಶ್ರಿತ ಮಣ್ಣು ತಂದು ರಸ್ತೆ ಬದಿ ಹಾಕುತ್ತಿರುವುದನ್ನು ಗಮನಿಸಿದ ಪುದು ಗ್ರಾಪಂ ಸದಸ್ಯ ಇಕ್ಬಾಲ್ ಸುಜೀರ್ ಅವರು ಲಾರಿಯನ್ನು ನಿಲ್ಲಿಸಿ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಧ್ಯಕ್ಷ ರಮ್ಲಾನ್ ಅವರು ತ್ಯಾಜ್ಯವನ್ನು ತೆರವುಗೊಳಿಸುವಂತೆ ಟಿಪ್ಪರ್ ಚಾಲಕಗೆ ಸೂಚಿಸಿದರು. ಅಧ್ಯಕ್ಷರ ಸೂಚನೆ ಮೇರೆಗೆ ಟಿಪ್ಪರ್ ಚಾಲಕ ತನ್ನ ಮಾಲಕಗೆ ಕರೆ ಮಾಡಿ ಜೆಸಿಬಿ ತರಿಸಿ ಅದಾಗಲೇ ಹೆದ್ದಾರಿ ಬದಿ ಹಾಕಲಾಗಿದ್ದ ಸುಮಾರು ಐದಾರು ಲೋಡ್ ತ್ಯಾಜ್ಯವನ್ನು ತೆರವು ಮಾಡಿದ್ದಾರೆ. 

ಹೆದ್ದಾರಿ ಬದಿಯ ತ್ಯಾಜ್ಯ ಮಿಶ್ರಿತ ಮಣ್ಣು ಸಂಪೂರ್ಣ ತೆರವುಗೊಳ್ಳುವವರೆಗೆ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಸ್ಯರಾದ ಇಕ್ಬಾಲ್ ಸುಜೀರ್, ಹುಸೈನ್ ಪಾಡಿ, ಅಖ್ತರ್ ಹುಸೈನ್, ಸಿಬ್ಬಂದಿ ಸಲಾಂ, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಹಾಗೂ ಸ್ಥಳೀಯರು ಸ್ಥಳದಿಂದ ತೆರಳಲಿಲ್ಲ. 

ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ, ರಸ್ತೆ ಬದಿಯಲ್ಲಿ ಹೊರ ಊರಿನ ಜನರು ಕಸ ಹಾಗೂ ತ್ಯಾಜ್ಯಗಳನ್ನು ತಂದು ರಾಶಿ ಹಾಕುತ್ತಿರುವ ಬಗ್ಗೆ ಈಗಾಗಲೇ ಪಂಚಾಯತ್ ಆಡಳಿತ ಸಮರ ಸಾರಿದ್ದು, ಇತ್ತೀಚೆಗಷ್ಟೆ ಓಮ್ನಿ ಕಾರಿನಲ್ಲಿ ತ್ಯಾಜ್ಯ ಎಸೆಯಲು ಬಂದಿದ್ದ ಬಂಟ್ವಾಳದ ವ್ಯಕ್ತಿಗೆ ಪಂಚಾಯತ್ 3 ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿರುವುದನ್ನು ಈ ಸಂದರ್ಭ ಸ್ಮರಿಸಬಹುದು. 

ತ್ಯಾಜ್ಯ ಮಿಶ್ರಿತ ಮಣ್ಣು ದುರ್ನಾತ ಬೀರುತ್ತಿದ್ದು, ಅದನ್ನು ಹೆದ್ದಾರಿ ಬದಿ ರಾಶಿ ಹಾಕಿರುವುದು ಅಕ್ಷಮ್ಯ. ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲೂ ಪುದು ಪಂಚಾಯತ್ ವ್ಯಾಪ್ತಿಯ ಎಲ್ಲಿಯೇ ಆದರೂ ಯಾರೂ ತ್ಯಾಜ್ಯ-ಕಸ ಎಸೆಯುವಂತಹ ಕೃತ್ಯ ನಡೆಸಿದರೆ ಇದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವ ಅಧ್ಯಕ್ಷ ರಮ್ಲಾನ್ ಈ ಬಗ್ಗೆ ಈಗಾಗಲೇ ಗ್ರಾಮಸ್ಥರಿಗೆ ತ್ಯಾಜ್ಯ ಎಸೆಯುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.  ಮುಂದಕ್ಕೆ ಪಂಚಾಯತ್ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಸೀಸಿ ಕ್ಯಾಮೆರಾ ಅಳವಡಿಸಿ ಈ ಬಗ್ಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರಿಪಳ್ಳ ಹೆದ್ದಾರಿ ಬದಿ ತ್ಯಾಜ್ಯ ಮಿಶ್ರಿತ ಮಣ್ಣು ಸುರಿದ ಟಿಪ್ಪರ್ ಚಾಲಕ : ಆತನಿಂದಲೇ ತೆರವುಗೊಳಿಸಿ ಎಚ್ಚರಿಕೆ ನೀಡಿದ ಪಂಚಾಯತ್ ಅಧ್ಯಕ್ಷ Rating: 5 Reviewed By: karavali Times
Scroll to Top