ವಿಶ್ವ ಚುಟುಕು ಕ್ರಿಕೆಟ್ ಬಲಿಷ್ಠ ತಂಡಗಳ ಕಾದಾಟ ಆರಂಭ : ಮೊದಲ ಪಂದ್ಯದಲ್ಲಿ ಕಾಂಗರೂಗಳಿಗೆ ಶರಣಾದ ಹರಿಣಗಳು  - Karavali Times ವಿಶ್ವ ಚುಟುಕು ಕ್ರಿಕೆಟ್ ಬಲಿಷ್ಠ ತಂಡಗಳ ಕಾದಾಟ ಆರಂಭ : ಮೊದಲ ಪಂದ್ಯದಲ್ಲಿ ಕಾಂಗರೂಗಳಿಗೆ ಶರಣಾದ ಹರಿಣಗಳು  - Karavali Times

728x90

23 October 2021

ವಿಶ್ವ ಚುಟುಕು ಕ್ರಿಕೆಟ್ ಬಲಿಷ್ಠ ತಂಡಗಳ ಕಾದಾಟ ಆರಂಭ : ಮೊದಲ ಪಂದ್ಯದಲ್ಲಿ ಕಾಂಗರೂಗಳಿಗೆ ಶರಣಾದ ಹರಿಣಗಳು 

 ಅಬುಧಾಬಿ, ಅಕ್ಟೋಬರ್ 24, 2021) : ಐಸಿಸಿ ಪ್ರಾಯೋಜಿಸುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ಪಂದ್ಯಗಳಿಗೆ ಶನಿವಾರ ಚಾಲನೆ ದೊರೆತಿದ್ದು, ಕೂಟದಲ್ಲಿ ಬಲಿಷ್ಠ ತಂಡಗಳ ಕಾದಾಟ ಆರಂಭಗೊಂಡಿದೆ. 

 ಶನಿವಾರ ಅಬುಧಾಬಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕ ಹೋರಾಟದಲ್ಲಿ ಕೊನೆಯ 2 ಎಸೆತಗಳು ಮಾತ್ರ ಬಾಕಿ ಉಳಿದಿರುವಂತೆ 5 ವಿಕೆಟ್ ಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 

ಹರಿಣಗಳು ನಿಗದಿಪಡಿಸಿದ್ದ 119 ರನ್‌ಗಳ ಅಲ್ಪ ಮೊತ್ತ ಬೆನ್ನತ್ತಿದ ಕಾಂಗರೂಗಳು ಕುಸಿತ ಕಂಡರೂ ಅಂತಿಮ 2 ಎಸೆತಗಳು ಬಾಕಿ ಉಳಿದಂತೆ ರೋಚಕ ಜಯ ಸಾಧಿಸಿತು. ದಕ್ಷಿಣ ಆಫ್ರಿಕಾ ದಾಂಡಿಗರು ಆಸೀಸ್ ಬೌಲರ್ ಗಳ ಮುಂದೆ ಪರದಾಡಿ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 119 ರನ್‌ ಗಳಿಸಿತು. 

 ಸಾದಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೂಡಾ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ಆ್ಯರೋನ್ ಫಿಂಚ್‌ ಶೂನ್ಯ ಸಂಪಾದಿಸಿ ಪೆವಿಲಿಯನ್ ಸೇರಿಕೊಂಡರೆ, ಡೇವಿಡ್ ವಾರ್ನರ್ ಮೂರು ಬೌಂಡರಿ ಭಾರಿಸಿ ಸ್ಪೋಟಕ ಆಟದ ಸೂಚನೆ ನೀಡಿದರೂ ಕಗಿಸೋ ರಬಾಡ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. 

ಮಿಚೆಲ್ ಮಾರ್ಷ್ ಕೇವಲ 11 ರನ್‌ ಗಳಿಸಿ ಔಟಾದರು. 8 ಓವರ್ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 38 ರನ್‌ ಕಳೆದುಕೊಂಡು ಆಸೀಸ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ನಾಲ್ಕನೇ ವಿಕೆಟ್ ಗೆ ಜೊತೆಯಾದ ಅನುಭವಿ ಆಟಗಾರರಾದ ಸ್ಟೀವ್ ಸ್ಮಿತ್ (35 ರನ್, 34 ಎಸೆತ, 3 ಬೌಂಡರಿ) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್ (18 ರನ್) ಚೇತರಿಕೆಯ ಆಟವಾಡಿತು. ಈ ಜೋಡಿ 42 ರನ್‌ಗಳ ಜತೆಯಾಟವಾಡಿ ತಂಡಕ್ಕೆ ಆಸರೆಯಾಯಿತು. ಸ್ಟೀವ್ ಸ್ಮಿತ್ ಏಯ್ಡನ್ ಮಾರ್ಕ್‌ರಮ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಬಳಿಕ ಗ್ಲೆನ್‌ ಮ್ಯಾಕ್ಸ್‌ವೆಲ್ ರಿವರ್ಸ್‌ ಸ್ವೀಪ್ ಮಾಡುವ ಯತ್ನದಲ್ಲಿ ಶಂಸಿಗೆ ಕ್ಲೀನ್‌ ಬೌಲ್ಡ್ ಆದರು. ಗೆಲುವಿಗೆ 38 ರನ್ ಗಳ ಅವಶ್ಯಕತೆ ಇರುವ ವೇಳೆ 6ನೇ ವಿಕೆಟ್‌ಗೆ ಜತೆಯಾದ ಮಾರ್ಕಸ್‌ ಸ್ಟೋಯ್ನಿಸ್ (24 ರನ್, 16 ಎಸೆತ) ಹಾಗೂ ಮ್ಯಾಥ್ಯೂ ವೇಡ್ (15 ರನ್) ಜೋಡಿ ತಂಡವನ್ನು ಗೆಲುವಿನ ದಡ ಸೇರಿಸಿತು. 

 ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ಆಸೀಸ್‌ ದಾಳಿಗಾರರ ನಿಖರ ಬೌಲಿಂಗ್ ಮುಂದೆ ಮಂಕಾದರು. ದಕ್ಷಿಣ ಆಫ್ರಿಕಾ ಪವರ್‌ ಪ್ಲೇ ಅವಧಿಯಲ್ಲೇ ಕೇವಲ 23 ರನ್ ಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಏಯ್ಡನ್‌ ಮಾರ್ಕ್‌ರಮ್‌ ಸಮಯೋಚಿತ 40 ರನ್‌ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಕೊನೆಯಲ್ಲಿ ಕಗಿಸೋ ರಬಾಡ ಅಜೇಯ 19 ರನ್ ಬಾರಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. 

ದಕ್ಷಿಣ ಆಫ್ರಿಕಾದ ಆರು ಮಂದಿ ಆಟಗಾರರು ಒಂದಂಕಿಗೆ ಸೀಮಿತಗೊಂಡು ಪೆವಿಲಿಯನ್ ಸೇರಿದರು. ಈ ಮೂಲಕ ತಂಡ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಅಭಿಯಾನ ಮುಗಿಸಿ ಆಸೀಸ್ ಗೆ ಸುಲಭ ಗುರಿ ನೀಡಿತು.

  • Blogger Comments
  • Facebook Comments

0 comments:

Post a Comment

Item Reviewed: ವಿಶ್ವ ಚುಟುಕು ಕ್ರಿಕೆಟ್ ಬಲಿಷ್ಠ ತಂಡಗಳ ಕಾದಾಟ ಆರಂಭ : ಮೊದಲ ಪಂದ್ಯದಲ್ಲಿ ಕಾಂಗರೂಗಳಿಗೆ ಶರಣಾದ ಹರಿಣಗಳು  Rating: 5 Reviewed By: karavali Times
Scroll to Top