ಸಕಲ ಸರಕಾರಿ ಗೌರವದೊಂದಿಗೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಬೂಬಕ್ಕರ್ ಅಂತ್ಯಕ್ರಿಯೆ - Karavali Times ಸಕಲ ಸರಕಾರಿ ಗೌರವದೊಂದಿಗೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಬೂಬಕ್ಕರ್ ಅಂತ್ಯಕ್ರಿಯೆ - Karavali Times

728x90

17 October 2021

ಸಕಲ ಸರಕಾರಿ ಗೌರವದೊಂದಿಗೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಬೂಬಕ್ಕರ್ ಅಂತ್ಯಕ್ರಿಯೆ

ಬಂಟ್ವಾಳ, ಅಕ್ಟೋಬರ್ 17, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆಯಲ್ಲಿ ಶುಕ್ರವಾರ ಅಪರಾಹ್ನ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಹೆಡ್ ಕಾನ್ಸ್‍ಟೇಬಲ್ ಅಬೂಬಕ್ಕರ್ ಯಾನೆ ಪೊಲೀಸ್ ಅಬ್ಬು (45) ಅವರ ಪಾರ್ಥಿವ ಶರೀರಕ್ಕೆ ಪೊಲೀಸ್ ಇಲಾಖೆಯಿಂದ ಸಕಲ ಸರಕಾರಿ ಗೌರವವನ್ನು ವೇಣೂರು ಸಮೀಪದ ಮರೋಡಿಯ ಅವರ ಸ್ವನಿವಾಸದಲ್ಲಿ ಶನಿವಾರ ನಡೆಯಿತು. 

ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ ಭಗವಾನ್, ಎಡಿಶನಲ್ ಎಸ್ಪಿ ಶಿವಕುಮಾರ್, ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಶಿವಕುಮಾರ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಟಿ ಡಿ ನಾಗರಾಜ್, ಪುತ್ತೂರು ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಉಮೇಶ್ ಉಪ್ಪಳಿಗೆ, ಬೆಳ್ತಂಗಡಿ ಪಿಎಸ್ಸೈ ನಂದಕುಮಾರ್, 

ಪೂಂಜಾಲಕಟ್ಟೆ ಪಿಎಸ್ಸೈ ಸೌಮ್ಯಾ ಜೆ, ಬೆಳ್ತಂಗಡಿ ಟ್ರಾಪಿಕ್ ಪಿಎಸ್ಸೈ ಓಡಿಯಪ್ಪ ಗೌಡ, ಬಂಟ್ವಾಳ ಗ್ರಾಮಾಂತರ ಪಿಎಸ್ಸೈ ಪ್ರಸನ್ನ ಕುಮಾರ್, ಬಂಟ್ವಾಳ ನಗರ ಪಿಎಸ್ಸೈ ಅವಿನಾಶ್ ಗೌಡ, ಮೂಡಬಿದ್ರಿ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ದಿನೇಶ್ ಕುಮಾರ್, ಬಜಪೆ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಕುಮಾರ್, ಕದ್ರಿ ಟ್ರಾಫಿಕ್ ಪೊಲೀಸ್ ಇನ್ಸ್‍ಪೆಕ್ಟರ್ ಶರೀಫ್, ಉಡುಪಿ ಟ್ರಾಪಿಕ್ ಪೊಲೀಸ್ ಇನ್ಸ್ಪೆಕ್ಟರ್ ಖಾದರ್ ಸಹಿತ ಜಿಲ್ಲೆಯ ಬಹುತೇಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸರಕಾರಿ ಗೌರವದಲ್ಲಿ ಭಾಗವಹಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರಲ್ಲದೆ ಅಬೂಬಕ್ಕರ್ ಅಕಾಲಿಕ ಮರಣಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದರು. 

ಬೆಳ್ತಂಗಡಿ ಶಾಸಕ  ಹರೀಶ್ ಪೂಂಜ, ಜಿ ಪಂ ಮಾಜಿ ಸದಸ್ಯ ಧರಣೇಂದ್ರ ಕುಮಾರ್, ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್, ಬೆಸ್ಟ್ ಫೌಂಡೇಶನ್ ಚಾರಿಟೇಬಲ್ ಸಂಸ್ಥೆ ಅಧ್ಯಕ್ಷ ರಕ್ಷಿತ್ ಶಿವರಾಮ್, ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶೈಲೇಶ್ ಕುಮಾರ್ ಕುರ್ತೊಡಿ ಸಹಿತ ಹಲವು ಮಂದಿ ಜನಪ್ರತಿನಿಧಿಗಳು, ಜನನಾಯಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ಗೌರವ ಸಲ್ಲಿಸಿದರು. 

ಬಳಿಕ ಪೇರಂದಡ್ಕದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನೆರವೇರಿಸಲಾಯಿತು. ಮಸೀದಿ ಖತೀಬ್ ಅಬ್ಬಾಸ್ ಪೈಝಿ ಅವರ ಉಪಸ್ಥಿತಿಯಲ್ಲಿ ಅಬೂಬಕ್ಕರ್ ಅವರ ಸಹೋದರ ಇಲ್ಯಾಸ್ ಮದನಿ ಅವರು ಜನಾಝ ನಮಾಝ್ ನೇತೃತ್ವ ವಹಿಸಿದ್ದರು. 

ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತ ಶರೀರವನ್ನು ಸ್ವನಿವಾಸಕ್ಕೆ ತರುವುದಕ್ಕಿಂತ ಮುಂಚಿತವಾಗಿ ಶುಕ್ರವಾರ ರಾತ್ರಿ ಪೂಂಜಾಲಕಟ್ಟೆ ಠಾಣಾ ಪರಿಸರಕ್ಕೆ ತಂದು ಪೊಲೀಸರು ಅಂತಿಮ ಗೌರವ ಸಲ್ಲಿಸಿದ್ದರು. ಸ್ಥಳೀಯ ಸಾರ್ವಜನಿಕರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಶಕ್ರವಾರ ಮಧ್ಯಾಹ್ನ ವಾಮದಪದವಿನಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಇಲಾಖಾ ಸಿಬ್ಬಂದಿಗಳ ಜೊತೆ ಭಾಗವಹಿಸಿ ವಾಪಾಸು ಬರುತ್ತಿದ್ದ ವೇಳೆ ನೇರಳಕಟ್ಟೆಯಲ್ಲಿ ಎದುರಿನಿಂದ ಬಂದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಅಬೂಬಕ್ಕರ್ ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನೊಂದು ದ್ವಿಚಕ್ರ ವಾಹನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್ ಕೂಡಾ ಗಂಭೀರ ಗಾಯಗೊಂಡಿದ್ದು, ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಕಲ ಸರಕಾರಿ ಗೌರವದೊಂದಿಗೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಬೂಬಕ್ಕರ್ ಅಂತ್ಯಕ್ರಿಯೆ Rating: 5 Reviewed By: karavali Times
Scroll to Top