ಬದ್ದ ಪ್ರತಿಸ್ಪರ್ಧಿಗಳ ನಡುವೆ ವಿಶ್ವ ಚುಟುಕು ಸಮರದ ಫೈನಲ್ : ಅಜೇಯ ಪಾಕಿಸ್ತಾನಕ್ಕೆ ಉಪಾಂತ್ಯದಲ್ಲಿ ಸೋಲುಣಿಸಿ ಪ್ರಶಸ್ತಿ ಹಂತಕ್ಕೇರಿದ ಕಾಂಗರೂಗಳು - Karavali Times ಬದ್ದ ಪ್ರತಿಸ್ಪರ್ಧಿಗಳ ನಡುವೆ ವಿಶ್ವ ಚುಟುಕು ಸಮರದ ಫೈನಲ್ : ಅಜೇಯ ಪಾಕಿಸ್ತಾನಕ್ಕೆ ಉಪಾಂತ್ಯದಲ್ಲಿ ಸೋಲುಣಿಸಿ ಪ್ರಶಸ್ತಿ ಹಂತಕ್ಕೇರಿದ ಕಾಂಗರೂಗಳು - Karavali Times

728x90

11 November 2021

ಬದ್ದ ಪ್ರತಿಸ್ಪರ್ಧಿಗಳ ನಡುವೆ ವಿಶ್ವ ಚುಟುಕು ಸಮರದ ಫೈನಲ್ : ಅಜೇಯ ಪಾಕಿಸ್ತಾನಕ್ಕೆ ಉಪಾಂತ್ಯದಲ್ಲಿ ಸೋಲುಣಿಸಿ ಪ್ರಶಸ್ತಿ ಹಂತಕ್ಕೇರಿದ ಕಾಂಗರೂಗಳು

  ದುಬೈ, ನವೆಂಬರ್ 11, 2021 (ಕರಾವಳಿ ಟೈಮ್ಸ್) : ವಿಶ್ವ ಟಿ-20 ಟೂರ್ನಿಯಲ್ಲಿ ಅಜೇಯ ನಾಗಾಲೋಟ ಕಿತ್ತಿದ್ದ ಪ್ರಶಸ್ತಿ ಗೆಲ್ಲುವ ನೆಚ್ವಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಉಪಾಂತ್ಯದ ಮಹತ್ವದ ಪಂದ್ಯದಲ್ಲಿ ನೀರು ಕುಡಿಸಿದ ಕಾಂಗರೂಗಳು ಪ್ರಶಸ್ತಿ ಹಂತಕ್ಕೆ ತೇರ್ಗಡೆ ಪಡೆದುಕೊಂಡಿದೆ. 

 ದುಬೈ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸೀಸ್ ತಂಡ ಪಾಕಿಸ್ತಾನವನ್ನು ರೋಚಕ ಹೋರಾಟದಲ್ಲಿ 5 ವಿಕೆಟ್ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿದೆ. ಪ್ರಥಮ ಸೆಮಿ ಫೈನಲ್ ಪಂದ್ಯದಲ್ಲಿ  ಇಂಗ್ಲೆಂಡ್‌ ಮಣಿಸಿ ಚೊಚ್ಚಲ ಬಾರಿಗೆ ಫೈನಲ್‌ ತಲುಪಿರುವ ನ್ಯೂಜಿಲೆಂಡ್‌ ವಿರುದ್ಧ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೆಣಸಲಿದೆ. ಈ ಮೂಲಕ ಈ ಬಾರಿಯ ವಿಶ್ವ ಚುಟುಕು ಕ್ರಿಕೆಟ್ ಸಮರದ ಫೈನಲ್ ಹೋರಾಟ ಬದ್ದ ಪ್ರತಿಸ್ಪರ್ಧಿಗಳ ನಡುವೆ ನಡೆಯಲಿದೆ. 

 ಟಾಸ್ ಗೆದ್ದ ಆಸೀಸ್ ನಾಯಕ ಮೊದಲು ಬ್ಯಾಟ್ ಮಾಡುವ ಅವಕಾಶ ಪಾಕಿಸ್ತಾನಕ್ಕೆ ನೀಡಿದರು. ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 176 ರನ್ ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

 177 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದರೂ ಮತ್ತೆ ಚೇತರಿಸಿಕೊಂಡು ಜಯಭೇರಿ ಭಾರಿಸಿತು. ಇನ್ನಿಂಗ್ಸಿನ ಮೊದಲ ಓವರಿನ ಮೂರನೇ ಎಸತೆದಲ್ಲೇ ಪಾಕ್ ವೇಗಿ ಶಾಹಿನ್‌ ಆಫ್ರಿದಿ ಅವರು ಆಸ್ಟ್ರೇಲಿಯಾ ನಾಯಕ ಆರೋನ್‌ ಫಿಂಚ್ ವಿಕೆಟ್‌ ಕಬಳಿಸಿದರು. ಫಿಂಚ್  ಡಕೌಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದರು. ಬಳಿಕ ಬಂದ  ಮಿಚೆಲ್ ಮಾರ್ಷ್‌, ಆರಂಭಿಕ ಆಟಗಾರ ಡೆವಿಡ್‌ ವಾರ್ನರ್‌ ಜೊತೆ ಸೇರಿ ಉತ್ತಮ ಭಾಗೀದಾರಿಕೆ ನಿಭಾಯಿಸಿದರು. ಆಸ್ಟ್ರೇಲಿಯಾ ಪವರ್‌ ಪ್ಲೇ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 52 ರನ್‌ ಗಳಿಸಿತು. ಮಿಚೆಲ್  22 ಎಸೆತಗಳಲ್ಲಿ 28 ರನ್‌ ಸಿಡಿಸಿ ಶಾದಾಬ್ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಬ್ಯಾಟ್ ಹಿಡಿದು ಬಂದ  ಸ್ಟೀವನ್ ಸ್ಮಿತ್ ಕೇವಲ 5 ರನ್‌ಗಳಿಸಿ ಔಟಾದರು. 10ನೇ ಓವರ್‌ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್‌ ಕಳೆದುಕೊಂಡು 89 ರನ್‌ ಗಳಿಸಿತು.

 ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ವಾರ್ನರ್‌ 30 ಎಸೆತಗಳಲ್ಲಿ 40 ರನ್‌ ಸಿಡಿಸಿ ಹತ್ತನೇ ಓವರ್‌ನಲ್ಲಿ ಶಾದಾಬ್‌ ಖಾನೆ ಗೆ ವಿಕೆಟ್‌ ಒಪ್ಪಿಸಿದರು. ಮ್ಯಾಕ್ಸ್ ವೆಲ್ 10 ಎಸೆತಗಳಲ್ಲಿ ಕೇವಲ 7 ರನ್‌ ಸಿಡಿಸಿ ಔಟಾದರು. 14ನೇ ಓವರ್‌ ಅಂತ್ಯಕ್ಕೆ ಆಸೀಸ್‌ಗೆ 36 ಎಸೆತಗಳಲ್ಲಿ 68 ರನ್‌ ಗಳ ಅವಶ್ಯಕತೆ ಇತ್ತು. ಮಾರ್ಕಸ್ ಸ್ಟೋನಿಸ್ ಹಾಗೂ ಮ್ಯಾಥ್ಯೂ ವೇಡ್ 17 ಎಸೆತಗಳಲ್ಲೇ 50 ರನ್‌ ಗಳ ಜತೆಯಾಟ ಪೂರೈಸಿದರು.19ನೇ ಓವರಿನಲ್ಲಿ 22 ರನ್‌ ಅವಶ್ಯಕತೆ ಇದ್ದಾಗ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ವೇಡ್‌  ಆಸ್ಟ್ರೇಲಿಯಾ ತಂಡಕ್ಕೆ ಜಯ ತಂದು ಕೊಟ್ಟರು. 

 ಮೊದಲು ಬ್ಯಾಟ್ ನಡೆಸಿದ ಪಾಕಿಸ್ತಾನ ತಂಡದ ಪರ ಆರಂಭಿಕವಾಗಿ ಕಣಕ್ಕಿಲಿದ ಮೊಹಮದ್‌ ರಿಜ್ವಾನ್‌ ಹಾಗೂ ಬಾಬರ್‌ ಅಝಂ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಪವರ್‌ ಪ್ಲೇ ಮುಕ್ತಾಯದ ವೇಳೆಗೆ ಪಾಕಿಸ್ತಾನ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 47 ರನ್‌ ಬಾರಿಸಿತು. 7ನೇ ಓವರ್‌ ಕೊನೆಯಲ್ಲಿ ಬಾಬರ್‌ ರಿಜ್ವಾನ್‌ ಜೋಡಿ ಅರ್ಧಶತಕದ ಜತೆಯಾಟ ಪೂರೈಸಿತು. 

  ಹತ್ತನೇ ಒವರ್‌ ಕೊನೆ ಎಸೆತದಲ್ಲಿ ಬಾಬರ್‌ ಅಜಮ್‌,  ಡೆವಿಡ್‌ ವಾರ್ನರ್‌ಗೆ ಕ್ಯಾಚ್‌ ನೀಡುವ ಮೂಲಕ ವಿಕೆಟ್‌ ಒಪ್ಪಿಸಿದರು. ಬಾಬರ್ 4 ಬೌಂಡರಿ ಸಹಿತ 34 ಎಸೆತಗಳಲ್ಲಿ 39 ರನ್‌ ಬಾರಿಸಿದರೆ, ರಿಝ್ವಾನ್ 41 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ರಿಜ್ವಾನ್‌ ಅಂತಿಮವಾಗಿ 52 ಎಸತೆಗಳಲ್ಲಿ 67 ರನ್‌ ಗಳಿಸಿ ಔಟಾದರು. ಆಸಿಫ್ ಡಕೌಟ್‌ ಆದರು. ಶೋಯೆಬ್ ಮಲಿಕ್ ಕೇವಲ 1 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.  ಫಖರ್‌ ಝಮಾನ್ ಅಜೇಯ 55 ರನ್‌ ಸಿಡಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಬದ್ದ ಪ್ರತಿಸ್ಪರ್ಧಿಗಳ ನಡುವೆ ವಿಶ್ವ ಚುಟುಕು ಸಮರದ ಫೈನಲ್ : ಅಜೇಯ ಪಾಕಿಸ್ತಾನಕ್ಕೆ ಉಪಾಂತ್ಯದಲ್ಲಿ ಸೋಲುಣಿಸಿ ಪ್ರಶಸ್ತಿ ಹಂತಕ್ಕೇರಿದ ಕಾಂಗರೂಗಳು Rating: 5 Reviewed By: karavali Times
Scroll to Top