ಮಂಗಳೂರು, ನವೆಂಬರ್ 08, 2021 (ಕರಾವಳಿ ಟೈಮ್ಸ್) : ದೇಶದ ಅತ್ಯುನ್ನತ ಗೌರವ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಈ ಬಾರಿ ಕರಾವಳಿಯ ಬಡ ಹಾಗೂ ಸಾಮಾನ್ಯ ಬ್ಯಾರಿಗೆ ಒಲಿದು ಬಂದಿದೆ. ಯಾವುದೇ ಜಾತಿ-ಧರ್ಮದ ಲೇಬಲಿನಲ್ಲಿ ಈ ಪ್ರಶಸ್ತಿ ಒಲಿದು ಬಂದಿಲ್ಲ. ತಾನು ಸ್ವತಃ ಅನಕ್ಷಸ್ಥನಾಗಿದ್ದರೂ ತನ್ನ ಊರಿನ ಮುಂದಿನ ಪೀಳಿಗೆ ನನ್ನಂತಾಗಬಾರದು ಎಂಬ ಮಹೋನ್ನತ ಉದ್ದೇಶ ಇಟ್ಟುಕೊಂಡು ಕಿತ್ತಳೆ ವ್ಯಾಪಾರಿಯಾಗಿದ್ದರೂ ಸತತ ಪ್ರಯತ್ನದಿಂದ ತನ್ನೂರಿನಲ್ಲಿ ಶಾಲೆ ಸ್ಥಾಪಿಸಿ ಅಕ್ಷರ ಸಂತನಾಗಿ ಮೆರೆದುದಕ್ಕಾಗಿ ಕೇಂದ್ರ ಸರಕಾರ ಈ ಬಾರಿ ಪದ್ಮಶ್ರೀ ಪ್ರಶಸ್ತಿಯನ್ನು ಹರೇಕಳ ಹಾಜಬ್ಬ ಅವರಿಗೆ ನೀಡಿ ಗೌರವಿಸಿದೆ. ಪ್ರತಿಷ್ಠಿತರ, ಆಸ್ತಿ-ಅಂತಸ್ತಿನವರ, ಸೂಟು-ಬೂಟಿಗೆ ಮಾತ್ರ ಸೀಮಿತ ಎಂದು ಜನಸಾಮಾನ್ಯರು ಎಂದುಕೊಂಡಿದ್ದ ದೇಶದ ಈ ಅತ್ಯುನ್ನತ ಗೌರವ ಇಂದು ದೇಶದ ಓರ್ವ ಬಡ, ಸಾಮಾನ್ಯ ಕಿತ್ತಳೆ ವ್ಯಾಪಾರಿಯ ಸಾಧನೆಯನ್ನು ಅರಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾಜಬ್ಬ ಇಂದು ದೆಹಲಿಯಲ್ಲಿ ರಾಷ್ಟಪತಿಯಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಇಡೀ ಕಡಲ ನಗರಿಯ ಜನ ಸಂತೋಷ-ಅಭಿಮಾನದಿಂದ ಪುಳಕಿತಗೊಂಡರು.
2020ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ಹರೇಕಳ ಹಾಜಬ್ಬ ಅವರಿಗೆ ಸೋಮವಾರ (ನವೆಂಬರ್ 8) ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಈ ಗೌರವ ಪ್ರಶಸ್ತಿ ಪ್ರದಾನ ಮಾಡಿದರು.
ಈ ಹಿಂದೆ 2020ರ ಗಣರಾಜ್ಯೋತ್ಸವ ಸಂದರ್ಭ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರ ಘೋಷಣೆ ಮಾಡಿತ್ತು. ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಬಳಿಕ ತಲೆದೋರಿದ ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ಕಾರಣದಿಂದ ಪ್ರಶಸ್ತಿ ಪ್ರದಾನ ಮುಂದೂಡಲಾಗಿತ್ತು. ಇದೀಗ ಕೊರೋನಾ ನಿಯಂತ್ರಣಕ್ಕೆ ಬಂದ ಹಿನ್ನಲೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.









0 comments:
Post a Comment