ಇರಾ ಗ್ರಾಮದಲ್ಲಿ ರಾಜ್ಯದ ಪ್ರಥಮ ಕತ್ತೆ ಸಾಕಾಣಿಕಾ ಕೇಂದ್ರ ಜೂನ್ 8 ರಂದು ಉದ್ಘಾಟನೆ - Karavali Times ಇರಾ ಗ್ರಾಮದಲ್ಲಿ ರಾಜ್ಯದ ಪ್ರಥಮ ಕತ್ತೆ ಸಾಕಾಣಿಕಾ ಕೇಂದ್ರ ಜೂನ್ 8 ರಂದು ಉದ್ಘಾಟನೆ - Karavali Times

728x90

6 June 2022

ಇರಾ ಗ್ರಾಮದಲ್ಲಿ ರಾಜ್ಯದ ಪ್ರಥಮ ಕತ್ತೆ ಸಾಕಾಣಿಕಾ ಕೇಂದ್ರ ಜೂನ್ 8 ರಂದು ಉದ್ಘಾಟನೆ

ಬಂಟ್ವಾಳ, ಜೂನ್ 06, 2022 (ಕರಾವಳಿ ಟೈಮ್ಸ್) : ಉಳ್ಳಾಲ ತಾಲೂಕು ವ್ಯಾಪ್ತಿಗೊಳಪಟ್ಟ ಇರಾ ಗ್ರಾಮದಲ್ಲಿ ರಾಮನಗರ ಮೂಲದ ಇಂಜಿನಿಯರ್ ಶ್ರೀನಿವಾಸ ಗೌಡ ಅವರು ಕತ್ತೆ ಸಾಕಣೆ ಹಾಗೂ ಮಾದರಿ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು, ಇದು ಜೂನ್ 8 ರಂದು ಉದ್ಘಾಟನೆಗೊಳ್ಳಲಿದೆ. 

ಮಾದರಿ ಸ್ವಚ್ಚ ಗ್ರಾಮ ಪುರಸ್ಕಾರ ಪಡೆದು ಗಮನ ಸೆಳೆದಿದ್ದ ಇರಾ ಗ್ರಾಮ ಇದೀಗ ರಾಜ್ಯದಲ್ಲೇ ಮತ್ತೊಂದು ವಿನೂತನ ಪ್ರಯೋಗಕ್ಕೆ ಸಾಕ್ಷಿಯಾಗಲಿದೆ. ಈ ಕೇಂದ್ರವು ರಾಜ್ಯದ ಪ್ರಥಮ ಹಾಗೂ ದೇಶದ 2ನೇ ಕತ್ತೆ ಸಾಕಣೆ ಮತ್ತು ಮಾದರಿ ತರಬೇತಿ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. ಐಸಿರಿ ಫಾರ್ಮ್ಸ್ ಮೂಲಕ ಸಮಗ್ರ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಅನುಷ್ಠಾನಗೊಳ್ಳಲಿದೆ ಎಂದು ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. 

ಕೇಂದ್ರದ ಮೂಲಕ ಪೌಷ್ಟಿಕಾಂಶಯುಕ್ತ ಕತ್ತೆ ಹಾಲು ಉತ್ಪಾದನೆ ಮಾಡಲಾಗುತ್ತದೆ. ಕತ್ತೆ ಹಾಲು ಪೌಷ್ಟಿಕಾಂಶ ಒಳಗೊಂಡಿರುವ ಜತೆಗೆ ಬಹಳ ದುಬಾರಿ. ಇದಕ್ಕೆ ಹೆಚ್ಚಿನ ಬೇಡಿಕೆ ಇರುವ ನಿಟ್ಟಿನಲ್ಲಿ ಇದರ ಉತ್ಪಾದನೆ ಮಾಡಲಾಗುತ್ತದೆ. ಸದ್ಯ ಕೇಂದ್ರದಲ್ಲಿ 20 ಕತ್ತೆಗಳಿವೆ ಎಂದು ತಿಳಿದು ಬಂದಿದೆ.

ಮುಂದಿನ ಪೀಳಿಗೆಗೆ ಒಂದು ಹೊಸ ಕೃಷಿ ಆಯಾಮವನ್ನು ನೀಡುವುದರ ಜೊತೆಗೆ ಇತ್ತೀಚಿಗೆ ನಶಿಸುತ್ತಿರುವ ಕತ್ತೆಗಳ ಸಂತತಿಯನ್ನು ಅಭಿವೃದ್ಧಿಪಡಿಸಿ ಕೊಡುಗೆಯಾಗಿ ನೀಡಲು ಬಹಳ ಆತ್ಮ ಸಂತೋಷವಾಗುತ್ತದೆ. ಈ ಯೋಜನೆಯನ್ನು ಐಸಿರಿ-ಮೈಂಡ್ ಓವೇಷನ್ಸ್ ಮತ್ತು ಮುಗ್ಧ ಫೌಂಡೇಷನ್ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಶ್ರೀನಿವಾಸ್ ಗೌಡ ಅವರು.  

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಕತ್ತೆ ಹಾಲು ನಿರ್ದಷ್ಟ ಪೌಷ್ಠಿಕಾಂಶಗಳನ್ನು ಒಳಗೊಂಡಿದ್ದು, ತಾಯಿಯ ಎದೆಹಾಲಿಗೆ ಸಮಾನವಾಗಿದೆ ಎನ್ನಲಾಗಿದೆ. 19ನೇ ಶತಮಾನದಲ್ಲಿ ಅನಾಥ ಮಕ್ಕಳಿಗೆ ರಸ್ತೆ ಬದಿಯ ಕತ್ತೆ ಹಾಲು ಕುಡಿಸುತ್ತಿದ್ದರು. ಅದೇ ರೀತಿ ಹಸುವಿನ ಹಾಲು ಅಲರ್ಜಿ ಹೊಂದುವ ಮಕ್ಕಳಿಗೆ ಕತ್ತೆ ಹಾಲು ಪರ್ಯಾಯವಾಗಿ ಪರಿಗಣಿಸಲ್ಪಟ್ಟಿದೆ. 

ಕತ್ತೆ ಹಾಲು ರಕ್ತದ ಒತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯ ಆರೋಗ್ಯವನ್ನು ಕಾಪಾಡುತ್ತದೆ ಎನ್ನಲಾಗುತ್ತಿದೆ. ಕತ್ತೆ ಹಾಲಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದ್ದು, ಇವುಗಳು ದೇಹದ ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಯುವ ಶಕ್ತಿ ಪಡೆದಿವೆ. ಕತ್ತೆಯ ಹಾಲಿನಲ್ಲಿ ಹಸುವಿನ ಹಾಲಿನಂತೆ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ6, ವಿಟಮಿನ್ ಡಿ ಮತ್ತು ವಿಟಮಿನ್ ಇ ಅಂಶಗಳು ಹೇರಳವಾಗಿದ್ದು, ಚರ್ಮದ ಕಾಂತಿಯನ್ನು ಹೆಚ್ಚಿಸಲು ಸೂಕ್ತವಾಗಿದೆ ಎಂಬ ಅಂಶ ಕೂಡಾ ಬೆಳಕಿಗೆ ಬಂದಿದೆ ಎಂದು ಶ್ರೀನಿವಾಸ ಗೌಡ ಹೇಳುತ್ತಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಇರಾ ಗ್ರಾಮದಲ್ಲಿ ರಾಜ್ಯದ ಪ್ರಥಮ ಕತ್ತೆ ಸಾಕಾಣಿಕಾ ಕೇಂದ್ರ ಜೂನ್ 8 ರಂದು ಉದ್ಘಾಟನೆ Rating: 5 Reviewed By: karavali Times
Scroll to Top