ಗುರುಗಳ ಆಶೀರ್ವಾದ ವ್ಯಕ್ತಿಯ ಇಹ-ಪರ ವಿಜಯಕ್ಕೆ ಮೊದಲ ಹೆಜ್ಜೆ : ನೌಫಲ್ ಸಖಾಫಿ ಕಳಸ - Karavali Times ಗುರುಗಳ ಆಶೀರ್ವಾದ ವ್ಯಕ್ತಿಯ ಇಹ-ಪರ ವಿಜಯಕ್ಕೆ ಮೊದಲ ಹೆಜ್ಜೆ : ನೌಫಲ್ ಸಖಾಫಿ ಕಳಸ - Karavali Times

728x90

24 December 2022

ಗುರುಗಳ ಆಶೀರ್ವಾದ ವ್ಯಕ್ತಿಯ ಇಹ-ಪರ ವಿಜಯಕ್ಕೆ ಮೊದಲ ಹೆಜ್ಜೆ : ನೌಫಲ್ ಸಖಾಫಿ ಕಳಸ

ಕಿಲ್ಲೂರು ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಸಂಘಟನೆಯ 22ನೇ ವಾರ್ಷಿಕ ಪ್ರಯುಕ್ತ ವಿವಿಧ ಆಧ್ಯಾತ್ಮಿಕ ಮಜ್ಲಿಸ್ 


ಬಂಟ್ವಾಳ, ಡಿಸೆಂಬರ್ 24, 2022 (ಕರಾವಳಿ ಟೈಮ್ಸ್) : ವ್ಯಕ್ತಿಯ ವಿಜಯದ ರಹಸ್ಯ ತಂದೆ-ತಾಯಿ ಹಾಗೂ ಗುರುವಿನ ಆಶೀರ್ವಾದವಾಗಿದೆ. ಪ್ರತಿಯೊಬ್ಬ ವಿಜಯೀ ವ್ಯಕ್ತಿಯ ಹಿಂದೆ ಹೆತ್ತವರು ಹಾಗೂ ಗುರುವರ್ಯರ ಆಶೀರ್ವಾದ ಇದ್ದೇ ಇರುತ್ತದೆ ಎಂದು ಯುವ ಧಾರ್ಮಿಕ ವಿದ್ವಾಂಸ ನೌಫಲ್ ಸಖಾಫಿ ಕಳಸ ಹೇಳಿದರು. 



ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಅವರ ಶಿಷ್ಯಂದಿರ ಸಂಘಟನೆ ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಕಿಲ್ಲೂರು ಇದರ 22ನೇ ವಾರ್ಷಿಕ ಪ್ರಯುಕ್ತ ಶನಿವಾರ ಕಿಲ್ಲೂರು ದಾರುಶ್ಶರೀಫ್ ಇಲ್ಲಿನ ಮರ್‍ಹೂಂ ಹಾಜಿ ಅಬ್ದುಲ್ ಖಾದಿರ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆದ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದ ಅವರು, ಗುರು-ಶಿಷ್ಯರ ಸಂಬಂಧ ಅದು ಇಹ-ಪರ ವಿಜಯಕ್ಕಿರುವ ಮೊದಲ ಹೆಜ್ಜೆಯಾಗಿದೆ. ಅಭಿಪ್ರಾಯ ವ್ಯತ್ಯಾಸದ ಹೆಸರಿನಲ್ಲೂ ಗುರು-ಶಿಷ್ಯರ ಸಂಬಂಧಕ್ಕೆ ಯಾವುದೇ ಚ್ಯುತಿ ಬರುವಂತಾಗಬಾರದು. ಗುರುಗಳ ಆದೇಶ ಎಂಬುದು ಸೇತುವೆಯನ್ನು ದಾಟಿದಂತೆ. ಮತ್ತೆ ವಾಪಾಸು ಬರಲು ಅದೇ ಸೇತುವೆ ದಾಟಬೇಕಾದ ಅನಿವಾರ್ಯತೆ ಇದ್ದಂತೆ ವ್ಯಕ್ತಿ ಎಷ್ಟೇ ದೊಡವನಾದರೂ ದಡ ಸೇರಬೇಕಾದರೆ ಗುರುಗಳ ಆಶೀರ್ವಾದ ಇರಲೇಬೇಕಾಗಿದೆ ಎಂದರು. 

ಧಾರ್ಮಿಕ ಪಂಡಿತರಿಗೆ ಉಪನ್ಯಾಸ ಸಹಿತ ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಮಿಗಿಲಾಗಿ ದರ್ಸ್ ರಂಗ ಪ್ರಥಮ ಆದ್ಯತೆಯಾಗಬೇಕು. ಪವಿತ್ರ ಇಸ್ಲಾಮಿನ ಆಧಾರಸ್ಥಂಭವೇ ದರ್ಸ್-ಮದ್ರಸಗಳಾಗಿವೆ ಎಂದ ನೌಫಲ್ ಸಖಾಫಿ ಅರಿವು (ಇಲ್ಮ್) ಎಂಬುದು ಲೋಕದ ಅಸ್ತಿತ್ವವಾಗಿದೆ. ಅರಿವು ಇಲ್ಲದ ಮನುಷ್ಯ ಪಶುವಿಗಿಂತಲೂ ಕೀಳಾದ ಸ್ಥಾನದಲ್ಲಾಗಿದೆ. ಇಲ್ಮ್ (ಅರಿವು) ಗಿಂತ ದೊಡ್ಡ ಸಂಪತ್ತು ಈ ಲೋಕದಲ್ಲಿ ಬೇರೆ ಯಾವುದೂ ಇಲ್ಲ. ಮುತ-ಅಲ್ಲಿಮರು (ವಿದ್ಯಾರ್ಥಿಗಳು) ಕಲಿಕಾ ಸಂದರ್ಭ ಮೊಬೈಲ್ ಸಂಬಂಧಿ ವಿಷಯ ಸಹಿತ ಅನ್ಯಥಾ ಕಾರ್ಯಗಳನ್ನು ಸಾಧ್ಯವಾದಷ್ಟು ದೂರವಿಟ್ಟು ಅರಿವು ಸಂಪಾದಿಸುವ ನಿಟ್ಟಿನಲ್ಲಿ ಸದಾ ಸಮಯ ವ್ಯಯಿಸಬೇಕಾಗಿದೆ. ಕಿತಾಬ್ (ಧಾರ್ಮಿಕ ಹೊತ್ತಗೆ) ಸಂಬಂಧವಾಗಿ ಆಳವಾದ ಜ್ಞಾನ ಸಂಪಾದಿಸಿದಾಗ ಸಮುದಾಯವನ್ನು ಅತ್ಯುತ್ತಮ ಸಮುದಾಯವಾಗಿ ಮುನ್ನಡೆಸಲು ಸಾಧ್ಯವಿದೆ ಎಂದರಲ್ಲದೆ ದರ್ಸ್ ವಿದ್ಯಾರ್ಥಿಗಳು ಕಿತಾಬ್ ಬಿಟ್ಟು ಮೊಬೈಲ್ ಫೋನಿನಂತಹ ಆಧುನಿಕ ಲೋಕಕ್ಕೆ ಅತಿಯಾಗಿ ಹೊಂದಿಕೊಂಡದ್ದೇ ಇಲ್ಮ್ ಗೆ ಮಾಡುವ ದೊಡ್ಡ ಅಗೌರವ ಎಂದವರು ಎಚ್ಚರಿಸಿದರು. 

ದುಆ ಹಾಗೂ ಖತಮುಲ್ ಕುರ್‍ಆನ್ ನೇತೃತ್ವ ವಹಿಸಿ ಮಾತನಾಡಿದ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅವರು, ಧಾರ್ಮಿಕ ಪಂಡಿತರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಇದ್ದುದಾಗಲೀ, ಹೆಚ್ಚುವರಿಯಾಗಿ ವೈಭವೀಕರಿಸಿಯಾಗಲೀ ಉನ್ನತೀಕರಿಸುವುದು ತರವಲ್ಲ. ಅದನ್ನು ಧಾರ್ಮಿಕ ವಿದ್ವಾಂಸರು ಒಪ್ಪಿಕೊಳ್ಳಲೂ ಬಾರದು. ಹೇಳುವವರೂ ಕೂಡಾ ಈ ಬಗ್ಗೆ ಸ್ವ ಆತ್ಮವಿಮರ್ಶೆ ಮಾಡಿಕೊಂಡು ವ್ಯಕ್ತಿ ಬಣ್ಣನೆಗೆ ಅಂತ್ಯ ಹಾಡಬೇಕು ಎಂದು ತಾಕೀತು ಮಾಡಿದರು. 

ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೆರ್ನೆ ಉಸ್ತಾದ್ ಅಬ್ಬಾಸ್ ಸಅದಿ ಪೆರ್ನೆ, ಎಸ್ ಜೆ ಯು ದ ಕ ಜಿಲ್ಲಾಧ್ಯಕ್ಷ ಖಾಸಿಂ ಮದನಿ ಕರಾಯ, ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಪ್ರಾಂಶುಪಾಲ ಬಿ ಎ ಶರೀಫ್ ಸಅದಿ ಅಲ್-ಕಾಮಿಲಿ ಕಿಲ್ಲೂರು, ಕಿಲ್ಲೂರು ಜುಮಾ ಮಸೀದಿ ಖತೀಬ್ ಉಮರ್ ಅಶ್ರಫಿ, ಅಧ್ಯಕ್ಷ ಕೆ ಮುಹಮ್ಮದ್, ಆಲಡ್ಕ ಜುಮಾ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್ ಮೋನಾಕ, ಕಾಜೂರು ಜುಮಾ ಮಸೀದಿ ಅಧ್ಯಕ್ಷ ಕೆ ಯು ಇಬ್ರಾಹಿಂ, ಗಂಟಾಲ್ಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಇಬ್ರಾಹಿಂ ಸಅದಿ ಮಾಣಿ ಮೊದಲಾದವರು ಭಾಗವಹಿಸಿದ್ದರು. 

ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಅಧ್ಯಕ್ಷ ಹಾಜಿ ಎನ್ ಎಚ್ ಆದಂ ಫೈಝಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಪಿ ಎಸ್ ತ್ವಾಹಾ ಸಅದಿ ಸ್ವಾಗತಿಸಿ, ಅಬ್ದುಲ್ ಖಾದರ್ ಮದನಿ ವಂದಿಸಿದರು. ಇರ್ಶಾದ್ ಕಿರಾಅತ್ ಪಠಿಸಿದರು. 

ಇದೇ ವೇಳೆ ಸ್ಥಳೀಯ ಬೆಸ್ಟ್ ಫ್ರೆಂಡ್ಸ್ ಅಧ್ಯಕ್ಷ ರಕ್ಷಿತಾ ಶಿವರಾಂ ಅವರನ್ನು ಸನ್ಮಾನಿಸಲಾಯಿತು. ಸಯ್ಯಿದುಲ್ ಬಶರ್ ಬುರ್‍ದಾ ಸಂಘ ಅಜಿಲಮೊಗರು ಹಾಗೂ ಆಶಿಕುರ್ರಸೂಲ್ ಬುರ್‍ದಾ ಸಂಘ ಆಲಡ್ಕ-ಪಾಣೆಮಂಗಳೂರು ಇದರ ಸದಸ್ಯರಿಂದ ಬುರ್‍ದಾ ಆಲಾಪನೆ ನಡೆಯಿತು. ಮೌಲಿದ್ ಪಾರಾಯಣ ಹಾಗೂ ಖತಮುಲ್ ಕುರ್ ಆನ್ ಕಾರ್ಯಕ್ರಮ ನಡೆಯಿತು. ಬಳಿಕ ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಸಂಘಟನೆಯ 22ನೇ ವಾರ್ಷಿಕ ಮಹಾಸಭೆ ಬಿ ಎಚ್ ಉಸ್ತಾದ್ ನೇತೃತ್ವದಲ್ಲಿ ನಡೆಯಿತು. ಕೊನೆಯಲ್ಲಿ ಅನ್ನದಾನ ನಡೆಯಿತು.

  • Blogger Comments
  • Facebook Comments

0 comments:

Post a Comment

Item Reviewed: ಗುರುಗಳ ಆಶೀರ್ವಾದ ವ್ಯಕ್ತಿಯ ಇಹ-ಪರ ವಿಜಯಕ್ಕೆ ಮೊದಲ ಹೆಜ್ಜೆ : ನೌಫಲ್ ಸಖಾಫಿ ಕಳಸ Rating: 5 Reviewed By: karavali Times
Scroll to Top