ಪುದು ಗ್ರಾ ಪಂ ಫಲಿತಾಂಶ ಪ್ರಕಟ : ಅಧಿಕಾರ ಚುಕ್ಕಾಣಿ ಉಳಿಸಿಕೊಂಡರೂ ಬರೋಬ್ಬರಿ 8 ಸ್ಥಾನ ಖೋತಾ ಅನುಭವಿಸಿದ ಕಾಂಗ್ರೆಸ್, ಬಿಜೆಪಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಎಸ್.ಡಿ.ಪಿ. ಬೆಂಬಲಿತರು 1ರಿಂದ 7ಕ್ಕೇರಿಕೆ - Karavali Times ಪುದು ಗ್ರಾ ಪಂ ಫಲಿತಾಂಶ ಪ್ರಕಟ : ಅಧಿಕಾರ ಚುಕ್ಕಾಣಿ ಉಳಿಸಿಕೊಂಡರೂ ಬರೋಬ್ಬರಿ 8 ಸ್ಥಾನ ಖೋತಾ ಅನುಭವಿಸಿದ ಕಾಂಗ್ರೆಸ್, ಬಿಜೆಪಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಎಸ್.ಡಿ.ಪಿ. ಬೆಂಬಲಿತರು 1ರಿಂದ 7ಕ್ಕೇರಿಕೆ - Karavali Times

728x90

28 February 2023

ಪುದು ಗ್ರಾ ಪಂ ಫಲಿತಾಂಶ ಪ್ರಕಟ : ಅಧಿಕಾರ ಚುಕ್ಕಾಣಿ ಉಳಿಸಿಕೊಂಡರೂ ಬರೋಬ್ಬರಿ 8 ಸ್ಥಾನ ಖೋತಾ ಅನುಭವಿಸಿದ ಕಾಂಗ್ರೆಸ್, ಬಿಜೆಪಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಎಸ್.ಡಿ.ಪಿ. ಬೆಂಬಲಿತರು 1ರಿಂದ 7ಕ್ಕೇರಿಕೆ

ಬಂಟ್ವಾಳ, ಫೆಬ್ರವರಿ 28, 2023 (ಕರಾವಳಿ ಟೈಮ್ಸ್) : ತಾಲೂಕಿನ, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಅವಧಿ ಪೂರ್ಣಗೊಂಡ ಪುದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಮಂಗಳವಾರ ಬಿ ಸಿ ರೋಡಿನ ವಿಧಾನಸೌಧದಲ್ಲಿ ನಡೆದಿದ್ದು, ಕಳೆದ ಬಾರಿಯ ರಮ್ಲಾನ್ ಮಾರಿಪಳ್ಳ ನೇತೃತ್ವದ ಕಾಂಗ್ರೆಸ್ ಬೆಂಬಲಿತರ ಆಡಳಿತ ವಿರೋಧಿ ಅಲೆಯ ಲಾಭ ಪಡೆದುಕೊಂಡ ಎಸ್ ಡಿ ಪಿ ಐ ಕೇವಲ ಒಂದು ಸ್ಥಾನದಿಂದ ಇದೀಗ 7ಕ್ಕೇರಿದೆ. ಕಾಂಗ್ರೆಸ್ ಬೆಂಬಲಿತರು 8 ಸ್ಥಾನಗಳ ಖೋತಾ ಅನುಭವಿಸಿದರೂ ಮತ್ತೆ ಅತೀ ಹೆಚ್ಚು ಅಂದರೆ 19 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದೆ. ಬಿಜೆಪಿ ಬೆಂಬಲಿತರು ಆರಕ್ಕೇರದೆ ಮೂರಕ್ಕಿಳಿಯದ ಪರಿಸ್ಥಿತಿ ಅನುಭವಿಸಿ ಪಂಚಾಯತಿನಲ್ಲಿ ತನ್ನ ಪ್ರಭಾವ ಇದ್ದಷ್ಟೇ ಉಳಿಸಿಕೊಂಡಿದೆ. 

ಕಾಂಗ್ರೆಸ್ ಬೆಂಬಲಿತರು 19 ಸದಸ್ಯ ಸ್ಥಾನಗಳನ್ನು ಗೆದ್ದುಕೊಂಡರೆ, ಎಸ್ ಡಿ ಪಿ ಐ ಬೆಂಬಲಿತ 7 ಸದಸ್ಯರನ್ನು ಪಡೆದು ಕೊಂಡರೆ, ಬಿಜೆಪಿ ಬೆಂಬಲಿತರು 6 ಸದಸ್ಯ ಸ್ಥಾನಗಳನ್ನು ಹಾಗೂ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಬೆಂಬಲಿಸಿದ್ದು, ಇವರು ಸ್ಪರ್ಧಿಸಿದ್ದ ಕಡೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದ್ದರರಿಂದ ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎನ್ನಲಾಗಿದೆ. 

ಕಳೆದ ಬಾರಿ ಇಲ್ಲಿನ ಪಂಚಾಯತಿನಲ್ಲಿ 34 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 27 ಸದಸ್ಯ ಬಲ ಹೊಂದಿತ್ತು. ಈ ಬಾರಿ ಪಕ್ಷದ ನಾಯಕರ ಕೆಲ ತಪ್ಪು ನಿರ್ಧಾರಗಳಿಂದಾಗಿ ಬಂಡಾಯದ ಬಿಸಿ ಅನುಭವಿಸಿ 8 ಸ್ಥಾನಗಳನ್ನು ಕಳೆದುಕೊಂಡಿದೆ. ಶಾಸಕ ಬಲ ಇದ್ದುದರಿಂದ ಕಾಂಗ್ರೆಸ್ 30ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನು ಪಕ್ಷದ ನಾಯಕರು ವ್ಯಕ್ತಪಡಿಸಿದ್ದರು. ಚುನಾವಣಾ ಪೂರ್ವದಲ್ಲಿ ಹೇಳಿಕೆ ನೀಡಿದ್ದ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಫೀಲ್ಡಿಗೆ ಇಳಿಯದೆ ಮನೆಯಲ್ಲಿ ಕೂತರೂ ಜನ 30ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಬೆಂಬಲಿತರಿಗೆ ನೀಡಲಿದ್ದಾರೆ ಎಂದಿದ್ದರು. ಇದೀಗ ನಾಯಕರ ಅತಿ ಆತ್ಮವಿಶ್ವಾಸವೇ ಮುಳ್ಳಾಗಿದ್ದು 8 ಸ್ಥಾನ ಖೋತಾ ಆಗಿದೆ. ಪುದು ಪಂಚಾಯತಿಯ ಆಡಳಿತ ವಿರೋಧಿ ಧೋರಣೆ ಬಗ್ಗೆ ಗ್ರಾಮಸ್ಥರು ವ್ಯಕ್ತಪಡಿಸಿದ್ದ ಆಕ್ರೋಶವನ್ನು ಕರಾವಳಿ ಟೈಮ್ಸ್ ವರದಿ ಪ್ರಕಟಿಸಿತ್ತು ಎಂಬುದು ಗಮನಾರ್ಹ.

ಕಾಂಗ್ರೆಸ್ ನಾಯಕರ ಆನೆ ನಡೆದದ್ದೇ ದಾರಿ ಎಂಬ ನೀತಿ ಪರೋಕ್ಷವಾಗಿ ಎಸ್ ಡಿ ಪಿ ಐ ಬೆಂಬಲಿತರಿಗೆ ವರದಾನವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಪರಿಣಾಮ ಕೇವಲ ಒಂದು ಸ್ಥಾನದಲ್ಲಿದ್ದ ಎಸ್ ಡಿ ಪಿ ಐ ತನ್ನ ಬಲವನ್ನು 7ಕ್ಕೇರಿಸಿಕೊಂಡಿದೆ. ಬಿಜೆಪಿ ತನ್ನ ಇದ್ದ ಸ್ಥಾನಗಳನ್ನು ಹಾಗೇ ಉಳಿಸಿಕೊಂಡು ಆರಕ್ಕೇರಿಲ್ಲ, ಮೂರಕ್ಕಿಳಿಯಲಿಲ್ಲ ಎಂಬ ತೃಪ್ತಿಯಲ್ಲಿದೆ. 

ಈ ಬಾರಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿದ್ದು, ಮಂಗಳವಾರ ರಾತ್ರಿವರೆಗೂ ಮತಗಳ ಎಣಿಕೆ ಕಾರ್ಯ ಮುಂದುವರಿದಿತ್ತು. ರಾತ್ರಿ 9 ಗಂಟೆ ಬಳಿಕ ಗೆದ್ದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆರಂಭಿಸಿದ್ದಾರೆ. ಈ ಮಧ್ಯೆ ಪುದು ಪಂಚಾಯತ್ ವ್ಯಾಪ್ತಿ ರಾಜಕೀಯ ಹಾಗೂ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಿನ್ನಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಂತೋಷ್ ಶೆಟ್ಟಿ ಅವರ ಕೋರಿಕೆ ಮೇರೆಗೆ ಪಂಚಾಯತ್ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ 12 ಗಂಟೆವರೆಗೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುದು ಗ್ರಾ ಪಂ ಫಲಿತಾಂಶ ಪ್ರಕಟ : ಅಧಿಕಾರ ಚುಕ್ಕಾಣಿ ಉಳಿಸಿಕೊಂಡರೂ ಬರೋಬ್ಬರಿ 8 ಸ್ಥಾನ ಖೋತಾ ಅನುಭವಿಸಿದ ಕಾಂಗ್ರೆಸ್, ಬಿಜೆಪಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಎಸ್.ಡಿ.ಪಿ. ಬೆಂಬಲಿತರು 1ರಿಂದ 7ಕ್ಕೇರಿಕೆ Rating: 5 Reviewed By: karavali Times
Scroll to Top