ರಸ್ತೆ ನಿರ್ಮಾಣ ಅಭಿವೃದ್ದಿಯಲ್ಲ ಎನ್ನುತ್ತಿದ್ದವರು ಇದೀಗ ತುಂಡು ರಸ್ತೆ ನಿರ್ಮಿಸಿ ಬ್ಯಾನರ್-ಕಟೌಟ್ ಮೂಲಕ ಮಿಂಚುತ್ತಿದ್ದಾರೆ : ರಮಾನಾಥ ರೈ ಲೇವಡಿ - Karavali Times ರಸ್ತೆ ನಿರ್ಮಾಣ ಅಭಿವೃದ್ದಿಯಲ್ಲ ಎನ್ನುತ್ತಿದ್ದವರು ಇದೀಗ ತುಂಡು ರಸ್ತೆ ನಿರ್ಮಿಸಿ ಬ್ಯಾನರ್-ಕಟೌಟ್ ಮೂಲಕ ಮಿಂಚುತ್ತಿದ್ದಾರೆ : ರಮಾನಾಥ ರೈ ಲೇವಡಿ - Karavali Times

728x90

1 March 2023

ರಸ್ತೆ ನಿರ್ಮಾಣ ಅಭಿವೃದ್ದಿಯಲ್ಲ ಎನ್ನುತ್ತಿದ್ದವರು ಇದೀಗ ತುಂಡು ರಸ್ತೆ ನಿರ್ಮಿಸಿ ಬ್ಯಾನರ್-ಕಟೌಟ್ ಮೂಲಕ ಮಿಂಚುತ್ತಿದ್ದಾರೆ : ರಮಾನಾಥ ರೈ ಲೇವಡಿ

ನನ್ನ ಅವಧಿಯಲ್ಲಿ ನಡೆದ ಅಭಿವೃದ್ದಿ ಕಾಮಗಾರಿಗಳು ಲೆಕ್ಕಕ್ಕೆ ಮೀರಿದ್ದು, ಬಿಜೆಪಿಗರ ಸಾಧನೆ ಶೂನ್ಯ : ಆಡಳಿತ ವೈಫಲ್ಯ ಜನರಿಗೆ ತಿಳಿಸಲು ಬಂಟ್ವಾಳದಲ್ಲಿ ಮಾ 10 ರಿಂದ ರಥ ಯಾತ್ರೆ  


ಬಂಟ್ವಾಳ, ಮಾರ್ಚ್ 01, 2023 (ಕರಾವಳಿ ಟೈಮ್ಸ್) : ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ನಾನು ಬಂಟ್ವಾಳದಲ್ಲಿ ರಾಜಕೀಯಕ್ಕೆ ಬಂದಿಲ್ಲ. ವಿದ್ಯಾರ್ಥಿ ಜೀವನದಿಂದಲೇ ಜನಸೇವೆ ಹಾಗೂ ಸಮಾಜ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದು, ಆ ಬಳಿಕ ಜನ ಆಶೀರ್ವಾದ ಮಾಡಿ ಈ ಮಟ್ಟಕ್ಕೆ ನನ್ನನ್ನು ಬೆಳೆಸಿದ್ದಾರೆ. ಕ್ಷೇತ್ರದ ಜನರ ಮೇಲೆ ಜನ್ಮಜನ್ಮಾಂತರಕ್ಕೂ ಮುಗಿಯದ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಸಾಧ್ಯವಾಗದಿದ್ದರೂ ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಶಕ್ತಿ ಮೀರಿ ವೈಯುಕ್ತಿಕ ಹಿತಾಸಕ್ತಿ ಬದಿಗಿರಿಸಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಈ ಬಾರಿ ನಾನು ಕೊನೆಯ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ಮತ್ತೆ ಕ್ಷೇತ್ರದ ಜನ ಆಶೀರ್ವಾದ ಮಾಡಿದರೆ ವಿಶೇಷ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದಾರೆ. 

ಬುಧವಾರ ಬಂಟ್ವಾಳದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯ ನನ್ನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಐದು ಸಾವಿರ ಕೋಟಿಗೂ ಮಿಕ್ಕಿದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕ್ಷೇತ್ರಕ್ಕೆ ಬಂದು ಈ ಎಲ್ಲಾ ಅಭಿವೃದ್ದಿ ಕಾರ್ಯಗಳ ಉದ್ಘಾಟನೆ ಮಾಡಿದ್ದಾರೆ. ಆ ಸಂದರ್ಭ ಮುಖ್ಯಮಂತ್ರಿಗಳೇ ಹೇಳಿದ್ದಾರೆ, ಎಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಘಾಟನೆ ನಡೆಸಿದ್ದಲ್ಲ. ಉದ್ಘಾಟನೆಗಿಂತ ಶಿಲಾನ್ಯಾಸಗಳೇ ಹೆಚ್ಚಿರುತ್ತದೆ. ಆದರೆ ರಮಾನಾಥ ರೈ ಅವರ ಕ್ಷೇತ್ರದಲ್ಲಿ ಶಿಲಾನ್ಯಾಸಕ್ಕಿಂತ ಉದ್ಘಾಟನೆಗಳೇ ಎಲ್ಲವೂ ಆಗಿದೆ ಎಂದು ಪೂರ್ಣ ಅಂಕ ನೀಡಿದ್ದಾರೆ ಎಂದರು. 

ಸರಕಾರದಲ್ಲಿ ಉಸ್ತುವಾರಿ ಮಂತ್ರಿಯಾಗಿ ಸ್ವಕ್ಷೇತ್ರದ ಜೊತೆಗೆ ಇಡೀ ಜಿಲ್ಲೆಯನ್ನು ಅಭಿವೃದ್ದಿ ವಿಚಾರದಲ್ಲಿ ಸಮಾನವಾಗಿ ಕಂಡಿದ್ದೇನೆ. ಎಲ್ಲೂ ತಾರತಮ್ಯ ನೀತಿ ಅನುಸರಿಸಿಲ್ಲ. ಅನುದಾನವಾಗಲೀ, ಅಭಿವೃದ್ದಿ ಕಾಮಗಾರಿಯಾಗಲೀ ಎಲ್ಲೂ ತಾರತಮ್ಯ ಮಾಡದೆ ಮನಪೂರ್ವಕವಾಗಿ ನಡೆಸಿದ್ದೇನೆ. ಬಿ ಸಿ ರೋಡಿನಿಂದ ಪೂಂಜಾಲಕಟ್ಟೆವರೆಗೆ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಸಿದ್ದು ನಾನೇ. ಯಾರೋ ಮಾಡಿದ ಕೆಲಸವನ್ನು ನಾನು ಮಾಡಿದ್ದು ಎಂದು ಹೇಳುವ ಜಾಯಮಾನವೇ ನನ್ನದಲ್ಲ ನಾನು ಮಾಡಿದ್ದನ್ನು ಹೃದಯಪೂರ್ವಕವಾಗಿ ಹೇಳಿಕೊಳ್ಳುತ್ತೇನೆ ಎಂದರು. 

ಪಶ್ಚಿಮ ವಾಹಿನಿ ಯೋಜನೆ ಪ್ರಕಾರ ನದಿಗೆ ಡ್ಯಾಂ ಹಾಗೂ ಸೇತುವೆ ಕಟ್ಟಲು ಕಾರಣ ರಮಾನಾಥ ರೈ ಆಗಿದ್ದು, ಸ್ವತಃ ನಾನೇ ಸಿಎಂ ಸಿದ್ದರಾಮಯ್ಯ ಅವರಲ್ಲಿಗೆ ನಿಯೋಗ ಕೊಂಡೊಯ್ದು ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಯೋಜನೆ ಜಾರಿಗೆ ಪ್ರಯತ್ನಿಸಿದ್ದೇನೆ ಎಂದ ರೈ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಸಭಾ ಭವನ, ಶಾಲಾ-ಕಾಲೇಜುಗಳಿಗೆ ಕೊಠಡಿಗಳು, ರಸ್ತೆಗಳು, ತಾಲೂಕಿನಲ್ಲಿ 100 ಬೆಡ್ ಆಸ್ಪತ್ರೆಗೆ ಕಟ್ಟಡ ನಿರ್ಮಾಣ, ಒನ್ ಟೈಮ್ ಇಂಪ್ರೂವ್ ಮೆಂಟ್ ನನ್ನ ಕಾಲದಲ್ಲಿ ಮಂಜೂರುಗೊಂಡಿದೆ ಎಂದರು. 

ರಸ್ತೆಗೆ ಕೇವಲ ಡಾಮರು ಹಾಕಿದ್ದಲ್ಲ ... ರಸ್ತೆಯನ್ನೇ ನಿರ್ಮಿಸುವ ಕಾರ್ಯ ಮಾಡಿದ್ದೇನೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ರಸ್ತೆ ಕಾಂಕ್ರಿಟಿಕರಣ ನನ್ನ ಕಾಲದಲ್ಲಿ ಆಗಿದೆ. ಅರುವತ್ತು ಕೋಟಿ ಒಳಚರಂಡಿ ಕಾಮಗಾರಿ, ಪಂಜೆ ಮಂಗೇಶರಾಯರ ಭವನ, ಅಂಬೇಡ್ಕರ್ ಭವನ, ಕಡೇಶ್ವಾಲ್ಯ-ಅಜಿಲಮೊಗರು ಸೌಹಾರ್ದ ಸೇತುವೆ, ಬೆಂಜನಪದವು ಕ್ರೀಡಾಂಗಣ ಎಲ್ಲವೂ ನನ್ನ ಕಾಲದಲ್ಲಿ ಮಂಜೂರಾತಿಯಾಗಿದ್ದು, ಆದರೆ ಇದೀಗ ಅದೆಲ್ಲವೂ ನೆನೆಗುದಿಗೆ ಬಿದ್ದಿದೆ ಎಂದು ವಿಷಾದ ವ್ಯಕ್ತಪಡಿಸಿದರು. 

ಪಾಣೆಮಂಗಳೂರು ಪೇಟೆಗೆ ಸಂಪರ್ಕಿ ಕಲ್ಪಿಸುವ ಕಿರು ಸೇತುವೆ ಹಾಗೂ ಗೂಡಿನಬಳಿಯಿಂದ ಬಂಟ್ವಾಳಕ್ಕೆ ಸಂಪರ್ಕ ಕಲ್ಪಿಸುವ ಕಂಚಿಕಾರ ಕಿರು ಸೇತುವೆಯನ್ನೂ ಹೊಸದಾಗಿ ನಿರ್ಮಿಸಿದ್ದೇನೆ. ಕಾರಿಂಜೇಶ್ವರ, ಪೆÇಳಲಿ ಹಾಗೂ ಶ್ರೀ ನಿಟಿಲಾಪುರ ದೇವಸ್ಥಾನದ ಸುತ್ತಮುತ್ತ ರಸ್ತೆಗಳು ಹಾಗೂ ದೇವಸ್ಥಾನದ ಅಭಿವೃದ್ದಿ ಮಾಡಿದ್ದೇನೆ. ದೇವಸ್ಥಾನಗಳಿಗೆ ಬೇಕಾದ ಎಲ್ಲಾ ಮರಗಳನ್ನು ಒದಗಿಸಿದ್ದೇನೆ. ದೇವಸ್ಥಾನ, ಚರ್ಚ್, ಮಸೀದಿ ಎನ್ನದೆ ಎಲ್ಲ ಧಾರ್ಮಿಕ ಕ್ಷೇತ್ರಗಳನ್ನೂ ಏಕಪ್ರಕಾರವಾಗಿ ಕಂಡು ಅಭಿವೃದ್ದಿಗೆ ಶ್ರಮಿಸಿದ್ದೇನೆ. ಎಲ್ಲ ಒತ್ತಡ ವಿರೋಧಗಳನ್ನು ಮೆಟ್ಟಿ ನಿಂತು ಜಿಲ್ಲಾಧಿಕಾರಿ ಕಚೇರಿ ಪಡೀಲಿನಲ್ಲಿ ನಿರ್ಮಿಸಲು ಯೋಜನೆ ಪೂರ್ಣಗೊಂಡಿದೆ. ಆದರೆ ನಮ್ಮ ಸರಕಾರದ ನಂತರ ಅದೂ ಕೂಡಾ ನೆನೆಗುದಿಗೆ ಬಿದ್ದಿದೆ ಎಂದು. 

ರಾಜ್ಯದಲ್ಲಿ ಅತ್ಯಂತ ಹೆಚ್ಚು ಹೊಸ ಪಂಚಾಯತ್ ಸ್ಥಾಪನೆಯಾದದ್ದು ಬಂಟ್ವಾಳದಲ್ಲಿ. ಅದು ನನ್ನ ಅವಧಿಯಲ್ಲಿ. ರಾಜ್ಯದಲ್ಲೇ ಹೆಚ್ಚು ಅಂಗನವಾಡಿ ನಿರ್ಮಾಣವಾಗಿರುವುದೂ ಬಂಟ್ವಾಳದಲ್ಲಿ. ಅತೀ ಹೆಚ್ಚು ಅಂದರೆ ಸುಮಾರು ಐದು ಸಾವಿರ ಕೋಟಿ ಕಾಮಗಾರಿ ನಡೆದದ್ದು ಬಂಟ್ವಾಳದಲ್ಲಿ. ಸಿದ್ದರಾಮ್ಯ ಸರಕಾರದ ಅವಧಿಯಲ್ಲಿ ಲೆಕಕ್ಕಿಂತ ಹೆಚ್ಚು ಮನೆಗಳನ್ನು ಪ್ರತಿ ಪಂಚಾಯತಿನಲ್ಲೂ ಕೊಡಲಾಗಿದೆ.  ಇದರಲ್ಲೂ ತಾರತಮ್ಯ ಮಾಡಿಲ್ಲ. ಬಡವರ ಸೇವೆ ಮಾಡುವ ಸಂದರ್ಭ ಯಾವತ್ತೂ ರಾಜಕೀಯ ಮಾಡಿಲ್ಲ. ತಾರತಮ್ಯ ಮಾಡಿಲ್ಲ. ಅನ್ಯಾಯವೆಸಗಿಲ್ಲ. ಆದರೆ ಇದೀಗ ಕೇವಲ ಆದೇಶ ಪತ್ರ ಮಾತ್ರ ನೀಡಲಾಗುತ್ತಿದೆ, ಮನೆ ನೀಡುತ್ತಿಲ್ಲ ಎಂದರು. 

ರಸ್ತೆ ನಿರ್ಮಾಣ ಮಾತ್ರ ಅಭಿವೃದ್ದಿ ಮಾತ್ರ ಅಲ್ಲ ಎನ್ನುತ್ತಿದ್ದವರು ಇಂದು ತುಂಡು ರಸ್ತೆಗಳನ್ನೇ ಅಭಿವೃದ್ದಿ ಎಂದು ಹೇಳಿ ಗ್ರಾಮದ ಮೂಲೆ-ಮೂಲೆಗಳಲ್ಲಿ ಬ್ಯಾನರ್-ಕಟೌಟ್ ಅಳವಡಿಸುವ ದುಸ್ಥಿತಿ ಬಂದೊದಗಿದೆ ಎಂದು ರಮಾನಾಥ ರೈ ಲೇವಡಿ ಮಾಡಿದರು. 

ಅನಂತಾಡಿ ಪಂಚಾಯತಿನಲ್ಲಿ ಕಾಂಗ್ರೆಸ್ ಇದುವರೆಗೆ ಗೆದ್ದಿಲ್ಲ. ಆದರೆ ಇದೀಗ ನಡೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಸಂಖ್ಯಾತರೇ ಮತ ನೀಡಿ ಗೆಲ್ಲಿಸಿದ್ದಾರೆ. ಇಲ್ಲಿನ ಗೆಲುವು ನನ್ನ ಪಾಲಿಗೆ ಅತ್ಯಂತ ಹೆಚ್ಚು ಸಂತೋಷ ತಂದಿದೆ ಎಂದರು. 

ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಲೇ ಇದೆ. ಜೊತೆಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಈಗೇನಾದರೂ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಬಿಜೆಪಿಗರ ಬೊಬ್ಬೆ ಆಕಾಶಕ್ಕೇರುತ್ತಿತ್ತು ಎಂದ ರಮಾನಾಥ ರೈ ಬಿಜೆಪಿ ವೈಫಲ್ಯದ ವಿರುದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತೀ ಗ್ರಾಮ ಪಂಚಾಯತಿಯ ಮೂಲೆ ಮೂಲೆಗೂ ಸಂಚರಿಸುವಂತೆ ರಥ ಯಾತ್ರೆ ನಡೆಯಲಿದ್ದು, ಮಾರ್ಚ್ 10 ರಿಂದ ಪೊಳಲಿಯಿಂದ ಆರಂಭವಾಗಿ 14 ದಿನಗಳ ಕಾಲ ಈ ರಥ ಯಾತ್ರೆ ನಡೆಯಲಿದೆ. ಜೊತೆಗೆ ಪ್ರಜಾಧ್ವನಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು. 

ಕಾಂಗ್ರೆಸ್ ಭರವಸೆ ಇದುವರೆಗೂ ಸುಳ್ಳಾಗಿಲ್ಲ. ಕಾಂಗ್ರೆಸ್ ಹೇಳಿದ್ದೆಲ್ಲವನ್ನೂ ಕೊಟ್ಟಿದೆ. ಮುಂದೆಯೂ ಈ ಬಗ್ಗೆ ಸಂಶಯಪಡುವ ಅಗತ್ಯವಿಲ್ಲ ಎಂದ ರಮಾನಾಥ ರೈ ಒಂದು ಲಕ್ಷ ಕೋಟಿ ರೈತರ ಸಾಲ ಮನ್ನಾ ಕಾಂಗ್ರೆಸ್ ಮಾಡಿದರೆ ಅದನ್ನು ದೇಶಕ್ಕೆ ನಷ್ಟ ಎಂದು ಮೂದಲಿಸುವ ಸಂಸದರು ಬಿಜೆಪಿಯಲ್ಲಿದ್ದಾರೆ. ಆದರೆ ಬಿಜೆಪಿ ಸರಕಾರ ಬಡವರನ್ನು ಕಡೆಗಣಿಸಿ ಹತ್ತು ಲಕ್ಷ ಕೋಟಿ ರೂಪಾಯಿ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದರೆ ಆ ಬಗ್ಗೆ ಚಕಾರವೆತ್ತುವ ಯೋಗ್ಯತೆ ಯಾವ ಬಿಜೆಪಿಗರಿಗೂ ಇಲ್ಲ ಎಂದು ಕಿಡಿ ಕಾರಿದರು. 

ನಾನು ಅಧಿಕಾರದಲ್ಲಿರುವಾಗ ಜನರ ಸೇವೆ ಮಾಡುವಾಗ, ಅಭಿವೃದ್ದಿ ಕಾಮಗಾರಿ ಕೈಗೊಳ್ಳುವಾಗ ಪಕ್ಷ, ಜಾತಿ, ವರ್ಗ, ಪಂಗಡ ಯಾವುದನ್ನೂ ನೋಡಿಲ್ಲ. ಎಲ್ಲರನ್ನೂ ಒಂದೇ ರೀತಿ ಕಂಡು ಜನರ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆಯೇ ಹೊರತು ಸ್ವಜನಪಕ್ಷಪಾತ, ಭ್ರಷ್ಟಾಚಾರ ಯಾವುದನ್ನೂ ನಡೆಸಿಲ್ಲ. ಸುಳ್ಳು ಆರೋಪ-ಆಪಾದನೆಗಳು ಅದೆಲ್ಲವೂ ಕ್ಷಣಿಕ. ಅದು ಇದೀಗ ಜನರಿಗೆ ಎಲ್ಲವೂ ಮನವರಿಕೆಯಾಗಿದೆ. ಇದೀಗ ಬಂಟ್ವಾಳದಲ್ಲಿ ಮರಳು ಮಾಫಿಯಾ ಮೇರೆ ಮೀರಿದೆ. ಪರ್ಸೆಂಟೇಜ್ ಮೂಲಕ ಭ್ರಷ್ಠಾಚಾರವೂ ಮೇರೆ ಮೀರಿದೆ ಎಂದರು.

ಬಾಡಿಗೆ ಕೋಣೆಯಲ್ಲಿದ್ದ ಕಾಲೇಜುಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಪಾಲಿಟೆಕ್ನಿಕ್ ಕಾಲೇಜಿಗೂ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ನಾನು ಯಾವತ್ತೂ ಸುಳ್ಳು ಹೇಳಲಾರೆ. ಹೇಳಿದ್ದನ್ನು ಮಾಡುತ್ತೇನೆ. ಮಾಡಿದ್ದನ್ನು ಮಾತ್ರ ಹೇಳುತ್ತೇನೆ. ಮುಂದೆಯೂ ಈ ಮಾತಿಗೆ ನಾನು ಬದ್ದನಾಗಿದ್ದೇನೆ. ಕೊರೊನಾ ಸಂದರ್ಭ 35 ಸಾವಿರ ಕಿಟ್ ವಿತರಿಸಲಾಗಿದೆ. ಅದೂ ಕೂಡಾ ಪಕ್ಷದ ಕಾರ್ಯಕರ್ತರ ಸ್ಪಂದನೆಯಿಂದ ಈ ಕಾರ್ಯ ಮಾಡಲಾಗಿದೆ. ಕೊರೋನಾ ಪೀಡಿತರಿಗೆ ಪಕ್ಷಾತೀತವಾಗಿ ನೆರವಾಗಿದ್ದೇನೆ ಎಂದು ರಮಾನಾಥ ರೈ ತಿಳಿಸಿದರು. 

ಪಕ್ಷ ನನಗೆ ಎಲ್ಲ ರೀತಿಯ ಜವಾಬ್ದಾರಿ, ಅಧಿಕಾರ ಎಲ್ಲವನ್ನೂ ಕೊಟ್ಟಿದೆ. ನಾನು ಪಕ್ಷಕ್ಕೆ ಜೀವಮಾನವಿಡೀ ಕೆಲಸ ಮಾಡಿದರೂ ಋಣ ತೀರದು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಪಕ್ಷದ ನಾಯಕರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. 

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಲೋಕೇಶ್ ಸುವರ್ಣ, ಬಿ ಮೋಹನ್, ಜಗದೀಶ್ ಕೊಯಿಲ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ರಸ್ತೆ ನಿರ್ಮಾಣ ಅಭಿವೃದ್ದಿಯಲ್ಲ ಎನ್ನುತ್ತಿದ್ದವರು ಇದೀಗ ತುಂಡು ರಸ್ತೆ ನಿರ್ಮಿಸಿ ಬ್ಯಾನರ್-ಕಟೌಟ್ ಮೂಲಕ ಮಿಂಚುತ್ತಿದ್ದಾರೆ : ರಮಾನಾಥ ರೈ ಲೇವಡಿ Rating: 5 Reviewed By: karavali Times
Scroll to Top