ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ : ಮೇ 10 ರಂದು ರಾಜ್ಯಾದ್ಯಂತ ಒಂದೇ ಹಂತದ ಚುನಾವಣೆ, ಮೇ 13 ರಂದು ಕೌಂಟಿಂಗ್ - Karavali Times ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ : ಮೇ 10 ರಂದು ರಾಜ್ಯಾದ್ಯಂತ ಒಂದೇ ಹಂತದ ಚುನಾವಣೆ, ಮೇ 13 ರಂದು ಕೌಂಟಿಂಗ್ - Karavali Times

728x90

28 March 2023

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ : ಮೇ 10 ರಂದು ರಾಜ್ಯಾದ್ಯಂತ ಒಂದೇ ಹಂತದ ಚುನಾವಣೆ, ಮೇ 13 ರಂದು ಕೌಂಟಿಂಗ್

ನವದೆಹಲಿ, ಮಾರ್ಚ್ 29, 2023 (ಕರಾವಳಿ ಟೈಮ್ಸ್) :  ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲಾಗಿದ್ದು, ಮೇ 10 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ ಎಂದು ಬುಧವಾರ ಬೆಳಗ್ಗೆ 11.30ಕ್ಕೆ ದೆಹಲಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಈ ದಿನಾಂಕ ಘೋಷಣೆ ಮಾಡಿದ್ದಾರೆ. 

ಬೆಂಗಳೂರು ನಗರದಲ್ಲಿ ಕುಸಿಯುತ್ತಿರುವ ಮತದಾನ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಚುನಾವಣಾ ಆಯೋಗ, ಮತದಾನ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. 

ಕರ್ನಾಟಕದಲ್ಲಿ 2,62,42,561 ಮಂದಿ ಪುರುಷ ಮತದಾರರಿದ್ದು, 2,59,26,319 ಮಂದಿ ಮಹಿಳಾ ಮತದಾರದಿದ್ದಾರೆ. 4,699 ತೃತೀಯ ಲಿಂಗಿ ಮತದಾರರಿದ್ದು, 12.15 ಲಕ್ಷ ಯುವ ಮತದಾರರು ಈ ಬಾರಿ ಮತ ಚಲಾಯಿಸಲು ಅರ್ಹರಿದ್ದಾರೆ. 

ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಮತದಾನ ಮಾಡುವ 18-19 ವಯಸ್ಸಿನ ಮತದಾರರ ಸಂಖ್ಯೆ 9,17,241 ಇದ್ದು, 5.55 ಲಕ್ಷ ವಿಕಲಚೇತನ ಮತದಾರರರು ಕರ್ನಾಟಕ ರಾಜ್ಯದಲ್ಲಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯೊಂದಿಗೇ ಮಾದರಿ ನೀತಿ ಸಂಹಿತೆ  ಜಾರಿಗೆ ಬಂದಿದೆ. ರಾಜಕೀಯ ನಾಯಕರು, ಪಕ್ಷಗಳು, ಅಧಿಕಾರಿಗಳು, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ನೀತಿ ಸಂಹಿತೆಗೆ ಬದ್ಧರಾಗಿರಬೇಕಾಗುತ್ತದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಗೆಜೆಟ್ ನೋಟಿಫಿಕೇಷನ್ ಎಪ್ರಿಲ್ 13, ಎಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದ್ದು, ಎಪ್ರಿಲ್ 21 ನಾಮಪತ್ರ ಪರಿಶೀಲನೆಗೆ ಅಂತಿಮ ದಿನಾಂಕವಾಗಿದೆ. ಎಪ್ರಿಲ್ 24 ರಂದು ನಾಮಪತ್ರ ವಾಪಸಾತಿಗೆ ಅಂತಿಮ ದಿನಾಂಕವಾಗಿದ್ದು, ಮೇ 10 ರಂದು ಒಂದೇ ಹಂತದಲ್ಲಿ ಚುನಾವಣೆ  ನಡೆಯಲಿದ್ದು, ಮೇ 13 ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. 

ಚುನಾವಣಾ ಆಯುಕ್ತರಾದ ಅರುಣ್ ಗೋಯಲ್, ಅನುಪ್ ಚಂದ್ರ ಪಾಂಡೆ, ನಿತೇಶ್ ವೈಷ್ಯ, ಧರ್ಮೇಂದ್ರ ಶರ್ಮ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ವಿಧಾನಸಭೆಯ 224 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ಘೋಷಣೆಯಾಗಿದ್ದು, ಮೇ 24ಕ್ಕೆ ಹಾಲಿ ಸರಕಾರದ ಅವಧಿ ಮುಕ್ತಾಯವಾಗಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ : ಮೇ 10 ರಂದು ರಾಜ್ಯಾದ್ಯಂತ ಒಂದೇ ಹಂತದ ಚುನಾವಣೆ, ಮೇ 13 ರಂದು ಕೌಂಟಿಂಗ್ Rating: 5 Reviewed By: karavali Times
Scroll to Top