ಬಂಟ್ವಾಳ (ಕರಾವಳಿ ಟೈಮ್ಸ್) : ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿ, ಪೊಳಲಿ, ಕರಿಯಂಗಳ ಗ್ರಾಮ, ಬಂಟ್ವಾಳ ಇದರ ವತಿಯಿಂದ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ಸಮಸ್ತ ದೇವಾಡಿಗ ಸಮಾಜದ ವತಿಯಿಂದ ನೂತನ ಷಷ್ಠಿ ರಥ ಸಮರ್ಪಣಾ ಕಾರ್ಯಕ್ರಮ ಮಾ 11 ರಂದು ಬೆಳಿಗ್ಗೆ 6 ರಿಂದ ರಾತ್ರಿ 2ರವರೆಗೆ ನಡೆಯಲಿದೆ ಎಂದು ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದರು.
ಶನಿವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಪ್ರಯುಕ್ತ ಮಾ 8 ರಿಂದ 12ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಕ್ಷೇತ್ರದ ಪವಿತ್ರವಾಣಿ ಪೊಳಲಿ ಶ್ರೀ ಮಾಧವ ಭಟ್ ಮತ್ತು ಕ್ಷೇತ್ರದ ಅರ್ಚಕ ವಂದದವರ ಮಾರ್ಗದರ್ಶನದಲ್ಲಿ ಹೊರೆ ಕಾಣಿಕೆ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದ ಅವರು ಷಷ್ಠಿ ರಥ ಸಮರ್ಪಣಾ ಕಾರ್ಯಕ್ರಮದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶಿರ್ವಚನಗೈಯಲಿದ್ದು, ಕಲ್ಲಡ್ಕ ಡಾ. ಪ್ರಭಾಕರ ಭಟ್ ಉದ್ಘಾಟಿಸುವರು. ಶ್ರೀ ಪೊಳಲಿ ಮಾಧವ ಭಟ್ ಗೌರವ ಉಪಸ್ಥಿತಿ ಇರುವರು. ಸಮಿತಿಯ ಗೌರವಾಧ್ಯಕ್ಷ ಗೋಪಾಲ ಎಂ ಮೊೈಲಿ ಅಧ್ಯಕ್ಷತೆ ವಹಿಸುವರು ಎಂದರು.
ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಬೆಲೆ ಬಾಳುವ ಮರಗಳಿಂದ ಈ ರಥವನ್ನು ಸಮರ್ಪಿಸಲಾಗುತ್ತಿದ್ದು, ದೇವಾಡಿಗ ಸಮಾಜಕ್ಕೆ ದೇವರು ನೀಡಿದ ಒಂದು ವಿಶೇಷ ಅನುಗ್ರಹ ಎಂದು ಭಾವಿಸುತ್ತೇವೆ ಎಂದು ರಾಮದಾಸ ಈಗಾಗಲೇ ನಮ್ಮ ಯೋಚನೆಯ ಎಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಾ ಬರುತ್ತಿದ್ದು, ದೇಶ-ವಿದೇಶಗಳ ಎಲ್ಲ ದೇವಾಡಿಗ ಬಾಂಧವರು ಸ್ವ ಇಚ್ಛೆಯಿಂದ ಶಕ್ತಿ ಮೀರಿ ಸಹಕಾರ ನೀಡಿದ್ದಾರೆ. ಮುಂದೆಯೂ ಇನ್ನಷ್ಟು ಸಹಕಾರದ ಅಗತ್ಯವಿದ್ದು, ಇಚ್ಛಿಸುವವರು ತಮ್ಮ ಸಹಕಾರ ನೀಡಲು ಕೋರುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 25-30 ಸಾವಿರ ಮಂದಿ ಸೇರುವ ನಿರೀಕ್ಷೆ ಇದ್ದು, ಯಾವುದೇ ದುಂದು ವೆಚ್ಚ ಹಾಗೂ ದುರುಪಯೋಗ ರಹಿತ ಕಾರ್ಯಕ್ರಮವಾಗಿ ಮೂಡಿಬರಲಿದೆ ಎಂದ ರಾಮದಾಸ ಬಂಟ್ವಾಳ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ, ಶ್ರೀಮತಿ ಮಾಲತಿ ವೀರಪ್ಪ ಮೊಯಿಲಿ, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯು ರಾಜೇಶ್ ನಾಯಕ್, ಮಾಜಿ ಸಚಿವ ಬಿ ರಮಾನಾಥ ರೈ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತುಂಬೆ ಸಹಿತ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


















0 comments:
Post a Comment