ಅಜ್ಮೀರ್ ಸುಲ್ತಾನುಲ್ ಹಿಂದ್ ದರ್ಗಾ ಬಝಾರ್ ಗೂ ತಟ್ಟಿದ ಕೊರೊನಾ ಬಿಸಿ - Karavali Times ಅಜ್ಮೀರ್ ಸುಲ್ತಾನುಲ್ ಹಿಂದ್ ದರ್ಗಾ ಬಝಾರ್ ಗೂ ತಟ್ಟಿದ ಕೊರೊನಾ ಬಿಸಿ - Karavali Times

728x90

20 March 2020

ಅಜ್ಮೀರ್ ಸುಲ್ತಾನುಲ್ ಹಿಂದ್ ದರ್ಗಾ ಬಝಾರ್ ಗೂ ತಟ್ಟಿದ ಕೊರೊನಾ ಬಿಸಿ

ಅಜ್ಮೀರ್ (ಕರಾವಳಿ ಟೈಮ್ಸ್) : ಮಾರಕ ಕರೋನಾ ವೈರಸ್ ಭೀತಿ ವ್ಯಾಪಕವಾಗಿ ಹರಡುತ್ತಿದ್ದು, ಅಜ್ಮೀರ್ ಶರೀಫಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಸುಲ್ತಾನುಲ್‌ ಹಿಂದ್ ಖ್ವಾಜಾ ಗರೀಬ್ ನವಾಝ್ (ರ.ಅ) ದರ್ಗಾ ಗಲ್ಲಿ ಹಾಗೂ ದರ್ಗಾ ಬಝಾರ್ ಗೂ ತಟ್ಟಿದೆ.
ಶುಕ್ರವಾರ ಜುಮಾ ನಮಾಝಿಗೆ ಮೊದಲು ದರ್ಗಾದ ಮುಖ್ಯ ದ್ವಾರ ಹೊರತುಪಡಿಸಿ ಉಳಿದೆಲ್ಲಾ ಗೇಟ್ ಗಳನ್ನು ಬಂದ್ ಮಾಡುವ ಮೂಲಕ ಜನ ಸಂದಣಿ ನಿಯಂತ್ರಣಕ್ಕೆ ಪ್ರಯತ್ನ ಪಡಲಾಗಿತ್ತು. ಜುಮಾ ನಮಾಝ್ ಹಾಗೂ ಅಸರ್ ನಮಾಝ್ ಮುಗಿದ ಬಳಿಕ ದರ್ಗಾ ಮುಖ್ಯ ಗೇಟನ್ನೂ ಬಂದ್ ಮಾಡಲಾಯಿತಲ್ಲದೆ ದರ್ಗಾ‌ ಗಲ್ಲಿ ಹಾಗೂ ದರ್ಗಾ ಬಝಾರ್ ನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಸ್ಥಳಕ್ಕೆ ಅಜ್ಮೀರ್ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಜನಸಂದಣಿ ನೆರೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ದರ್ಗಾ ಆಡಳಿತ ಸಮಿತಿ ಅಧ್ಯಕ್ಷರು ದರ್ಗಾ ಹಾಗೂ ನಮಾಝ್ ಗೆ ಕಡಿವಾಣ ಹಾಕದಿರುವಂತೆ ಹಾಗೂ ಜನರನ್ನು ಬಲವಂತವಾಗಿ ಆತಂಕ ಮೂಡಿಸದಂತೆ ಪೊಲೀಸ್ ವರಿಷ್ಠಾಧಿಯೊಂದಿಗೆ ಆಗ್ರಹಿಸಿದರು.
ದರ್ಗಾ ಹಾಗೂ ಮಸೀದಿಗಳ ಧ್ವನಿವರ್ದಕಗಳ ಮೂಲಕ ಮಾರಕ ಕೊರೊನಾ ವೈರಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಂದೇಶಗಳನ್ನು ಕಳೆದ ಎರಡು ದಿನಗಳಿಂದ ನಿರಂತರವಾಗಿ ಮೊಳಗಿಸಲಾಗುತ್ತಿದ್ದು, ಜನರು ತಮ್ಮ ಮೊಹಲ್ಲಾ ವ್ಯಾಪ್ತಿ ಹಾಗೂ ಮನೆಯಲ್ಲಿಯೇ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವಂತೆ ಮನವಿ ಮಾಡಲಾಗುತ್ತಿದೆ. ಅಲ್ಲದೆ ಜನ ವಿನಾ ಕಾರಣ ಆತಂಕಕ್ಕೊಳಗಾಗದೆ ಮಾರಕ ವೈರಸ್ ನಿಂದ ರಕ್ಷಣೆ ಹೊಂದುವ ಕ್ರಮ ಹಾಗೂ ಸೂಚನೆಗಳನ್ನು ಪಾಲಿಸುವಂತೆ ಸಲಹೆ ನೀಡಲಾಗುತ್ತಿದೆ.

ದರ್ಗಾ ಬಝಾರ್ ಹೊರತುಪಡಿಸಿ ಡಿಕ್ಕಿ ಬಝಾರ್, ಅನಾ ಸಾಗರ್ ರಸ್ತೆ, ರೈಲ್ವೇ ನಿಲ್ದಾಣ ಪರಿಸರಗಳಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಅಂಗಡಿ-ಮುಂಗಟ್ಟುಗಳು ಎಂದಿನಂತೆ ವ್ಯಾಪಾರ-ವಹಿವಾಟುಗಳು ನಿರಾತಂಕವಾಗಿ ನಡೆಸುತ್ತಿದೆ..

ದರ್ಗಾ ವಠಾರಕ್ಕೆ ವಿವಿಧ ಜೀವನ ಜಂಜಾಟಗಳನ್ನು ಹೊತ್ತುಕೊಂಡು ಜಾತಿ-ಮತ ಬೇಧವಿಲ್ಲದೆ ಸಮರೋಪಾದಿಯಲ್ಲಿ ಬರುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಅಜ್ಮೀರ್ ಸುಲ್ತಾನುಲ್ ಹಿಂದ್ ದರ್ಗಾ ಬಝಾರ್ ಗೂ ತಟ್ಟಿದ ಕೊರೊನಾ ಬಿಸಿ Rating: 5 Reviewed By: karavali Times
Scroll to Top