ಊರಿಗೆ ಬಂದ ಪ್ರವಾಸಿಗಳ ಮೇಲೆ ಅಧಿಕಾರಿಗಳ ನಿಗಾ : ಮಾರಿಪಳ್ಳದಲ್ಲಿ ನೆಟ್ಟಿಗರ ಆತಂಕದ ಸಂದೇಶಕ್ಕೆ ಆಕ್ರೋಶ - Karavali Times ಊರಿಗೆ ಬಂದ ಪ್ರವಾಸಿಗಳ ಮೇಲೆ ಅಧಿಕಾರಿಗಳ ನಿಗಾ : ಮಾರಿಪಳ್ಳದಲ್ಲಿ ನೆಟ್ಟಿಗರ ಆತಂಕದ ಸಂದೇಶಕ್ಕೆ ಆಕ್ರೋಶ - Karavali Times

728x90

24 March 2020

ಊರಿಗೆ ಬಂದ ಪ್ರವಾಸಿಗಳ ಮೇಲೆ ಅಧಿಕಾರಿಗಳ ನಿಗಾ : ಮಾರಿಪಳ್ಳದಲ್ಲಿ ನೆಟ್ಟಿಗರ ಆತಂಕದ ಸಂದೇಶಕ್ಕೆ ಆಕ್ರೋಶಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸಮೀಪದ ಪೇರಿಮಾರ್ ಎಂಬಲ್ಲಿ ಊರಿಗೆ ಬಂದ ಪ್ರವಾಸಿಗರ ಮನೆಯನ್ನು ಆರೋಗ್ಯಾಧಿಕಾರಿಗಳು ನಿಗಾ ಇಟ್ಟಿರುವುದನ್ನೇ ನೆಟ್ಟಿಗರು ಸಾಮಾಜಿಕ ತಾಣಗಳಲ್ಲಿ ಕೊರೋನಾ ಸೋಂಕು ಶಂಕತರು ಎಂಬ ಸಂದೇಶಗಳನ್ನು ವೈರಲ್ ಮಾಡುತ್ತಿರುವುದು ಇದೀಗ ಸ್ಥಳೀಯವಾಗಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಪ್ರದೇಶದಲ್ಲಿ ಇಬ್ಬರು ಇತ್ತೀಚೆಗೆ ವಿದೇಶದಿಂದ ಊರಿಗೆ ಬಂದಿದ್ದರು. ಈ ಇಬ್ಬರ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಸರಕಾರದ ಆದೇಶದಂತೆ ಈ ಮನೆಯನ್ನು ನಿಗಾ ಹಂತದಲ್ಲಿಟ್ಟಿದ್ದು, ಮನೆಗೆ ಜಿಲ್ಲಾಡಳಿತದ ನಿಯಮದಂತೆ ಸ್ಟಿಕ್ಕರ್ ಅಂಟಿಸಿ ತೆರಳಿದ್ದಾರೆ. ಆದರೆ ಈ ಇಬ್ಬರೂ ವ್ಯಕ್ತಿಗಳೂ ಆರೋಗ್ಯವಂತರಾಗಿದ್ದು, ಸರಕಾರದ ಆದೇಶದಂತೆ ಅಧಿಕಾರಿಗಳು ನಿಗಾ ವಹಿಸುವುದು ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮನೆಯನ್ನು ನಿಗಾ ವಹಿಸಲಾಗಿದೆ. ಊರಿನ ಯಾರಿಗೂ ಪ್ರವೇಶ ಮಾಡದಂತೆ ಸ್ಟಿಕ್ಕರ್‍ನಲ್ಲಿ ಸೂಚಿಸಲಾಗಿದೆ. ಆದರೆ ಕೆಲ ಕಿಡಿಗೇಡಿಗಳು ಈ ಮನೆಗೆ ಅಧಿಕಾರಿಗಳು ಅಂಟಿಸಿದ ಸ್ಟಿಕ್ಕರ್‍ನ ಭಾವಚಿತ್ರ ತೆಗೆದು ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದಲ್ಲದೆ ಸ್ಥಳೀಯವಾಗಿ ಕೊರೋನಾ ಶಂಕಿತರಿದ್ದಾರೆ ಎಂಬ ಧಾಟಿಯಲ್ಲಿ ಆತಂಕ ಹಾಗೂ ಭಯದ ಸಂದೇಶಗಳನ್ನು ರವಾನಿಸುತ್ತಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳು ಇಂತಹ ವಿಷಮ ಪರಿಸ್ಥಿತಿಯಲ್ಲಿ ಭಯದ ಸಂದೇಶ ರವಾನಿಸುವ ಮಂದಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳೀಯವಾಗಿ ಉಂಟಾಗಿರುವ ಆತಂಕದ ವಾತಾವರಣಕ್ಕೆ ಅಂತ್ಯ ಹಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಯಿಸಿರುವ ಪುದು ಗ್ರಾ.ಪಂ. ಸದಸ್ಯ ಹಾಶೀರ್ ಪೇರಿಮಾರ್ ಅವರು ವಿದೇಶದಿಂದ ಬಂದ ವ್ಯಕ್ತಿಗಳ ಬಗ್ಗೆ ಸರಕಾರದ ಆದೇಶದಂತೆ ಜಿಲ್ಲಾಡಳಿತ ನಿಗಾ ಇಡುವ ಕ್ರಮ ಅನುಸರಿಸಿದೆ ಅಷ್ಟೆ. ಈ ಬಗ್ಗೆ ಯಾವುದೇ ಆತಂಕ, ಗೊಂದಲಕ್ಕೆ ಅವಕಾಶ ಇಲ್ಲ ಎಂದಿದ್ದಾರೆ. ಹೊರ ರಾಜ್ಯದಿಂದ ಬಂದವರು ಹಾಗೂ ವಿದೇಶದಿಂದ ಊರಿಗೆ ಬಂದವರು ಆಶಾ ಕಾರ್ಯಕರ್ತೆಯರ, ಆರೋಗ್ಯಾಧಿಕಾರಿಗಳ ಹಾಗೂ ಸರಕಾರದ ನಿರ್ದೇಶನಗಳನ್ನು ತಪ್ಪದೆ ಪಾಲಿಸುವ ಮೂಲಕ ಜನರ ಆರೋಗ್ಯದ ದೃಷ್ಟಿಯಿಂದ ಆಹೋ ರಾತ್ರಿ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳ ಜೊತೆ ಸ್ಪಂದಿಸಬೇಕು ಎಂದವರು ಜನರಿಗೆ ಕರೆ ನೀಡಿದ್ದಾರೆ. 
  • Blogger Comments
  • Facebook Comments

1 comments:

Item Reviewed: ಊರಿಗೆ ಬಂದ ಪ್ರವಾಸಿಗಳ ಮೇಲೆ ಅಧಿಕಾರಿಗಳ ನಿಗಾ : ಮಾರಿಪಳ್ಳದಲ್ಲಿ ನೆಟ್ಟಿಗರ ಆತಂಕದ ಸಂದೇಶಕ್ಕೆ ಆಕ್ರೋಶ Rating: 5 Reviewed By: karavali Times
Scroll to Top