ಪತ್ರಿಕೆಗಳು ಸಾಮಾಜಿಕ ನ್ಯಾಯ ವಂಚಿತರ ಧ್ವನಿಯಾಗಬೇಕು : ರಮಾನಾಥ ರೈ - Karavali Times ಪತ್ರಿಕೆಗಳು ಸಾಮಾಜಿಕ ನ್ಯಾಯ ವಂಚಿತರ ಧ್ವನಿಯಾಗಬೇಕು : ರಮಾನಾಥ ರೈ - Karavali Times

728x90

10 March 2020

ಪತ್ರಿಕೆಗಳು ಸಾಮಾಜಿಕ ನ್ಯಾಯ ವಂಚಿತರ ಧ್ವನಿಯಾಗಬೇಕು : ರಮಾನಾಥ ರೈ

ಕರಾವಳಿ ಟೈಮ್ಸ್ 5ನೇ ವಾರ್ಷಿಕ ಹಾಗೂ ವೆಬ್ ಸೈಟ್ ಅನಾವರಣ 

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು.

ಕರಾವಳಿ ಟೈಮ್ಸ್ ವೆಬ್ ಸೈಟ್ ರಮಾನಾಥ ರೈ ಅನಾವರಣಗೊಳಿಸಿದರು. 

 ಕರಾವಳಿ ಟೈಮ್ಸ್ ಪತ್ರಿಕಾ ಸಂಚಿಕೆ ಬಿಡುಗಡೆಗೊಳಿಸಲಾಯಿತು. 


ಪುರಸಭಾ ಮಾಜಿ ಸದಸ್ಯೆ ಚಂಚಲಾಕ್ಷಿ ಅವರನ್ನು ಸನ್ಮಾನಿಸಲಾಯಿತು. 

ಬಂಟ್ವಾಳ (ಕರಾವಳಿ ಟೈಮ್ಸ್) : ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವವರ ಪರವಾಗಿ ಪತ್ರಿಕೆಗಳು ನಿರಂತರ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಮಾಧ್ಯಮಗಳು ಉಳ್ಳವರನ್ನು ಓಲೈಸುವ ಬುಲೆಟಿನ್‍ಗಳಾಗಬಾರದು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.

ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ಸಂಜೆ ನಡೆದ ಕರಾವಳಿ ಟೈಮ್ಸ್ ಪಾಕ್ಷಿಕದ 5ನೇ ವಾರ್ಷಿಕ ಹಾಗೂ ಪತ್ರಿಕೆಯ ವೆಬ್ ಸೈಟ್ ಆವೃತ್ತಿ ಲೋಕಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಣ್ಣ ಪತ್ರಿಕೆಗಳು ಜನರ ನೇರ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತದೆ. ದೊಡ್ಡ ಪತ್ರಿಕೆಗಳು ಕೆಲವೊಮ್ಮೆ ಪತ್ರಕರ್ತರ ಅಭಿಪ್ರಾಯವನ್ನು ಮನ್ನಣೆ ನೀಡುತ್ತದೆ ಎಂದು ಹೇಳಲಾಗದು. ಅವುಗಳು ಪತ್ರಿಕಾ ಮಾಲಕರ ಹತೋಟಿಯಲ್ಲಿರುತ್ತದೆ. ಆದರೆ ಸಣ್ಣ ಪತ್ರಿಕೆಗಳು ಜನರ ನೇರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಸಣ್ಣ ಪತ್ರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ, ಪತ್ರಿಕೆಗಳನ್ನು ಹೊರ ತರುವುದು ಸಾಧನೆಯಲ್ಲ. ಅದನ್ನು ನಿಖರ ಹಾಗೂ ಸಮಾಜಕ್ಕೆ ಪೂರಕವಾಗುವ ರೀತಿಯಲ್ಲಿ ದೀರ್ಘ ಕಾಲ ಮುನ್ನಡೆಸುವುದು ಸಾಧನೆ. ಕರಾವಳಿ ಟೈಮ್ಸ್ ಪಾಕ್ಷಿಕ ಪತ್ರಿಕೆಯನ್ನು 5 ವರ್ಷಗಳ ಕಾಲ ಮುನ್ನಡೆಸಿ ಇದೀಗ ಡಿಜಿಟಲ್ ಯುಗಕ್ಕೆ ಹೊಂದುವಂತೆ ಪತ್ರಿಕೆಯ ವೆಬ್ ತಾಣವನ್ನೂ ಆರಂಭಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.

ಪತ್ರಿಕಾ ಸಂಚಿಕೆ ಬಿಡುಗಡೆಗೊಳಿಸಿದ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಮಾತನಾಡಿ, ಪತ್ರಿಕೆಗಳು ಸಮಾಜದ ಜ್ವಲಂತ ಸಮಸ್ಯೆಗೆ ಧ್ವನಿಯಾದಾಗ ಸಮಾಜವೇ ಪತ್ರಿಕೆಯನ್ನು ಬೆಳೆಸುತ್ತದೆ ಎಂದರು.

ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಮಾತನಾಡಿ ಪತ್ರಿಕೆಗಳು ರಾಜಕಾರಣಿಗಳ ಹಾಗೂ ವಸಾಹತುಶಾಹಿಗಳ ಬಿಗಿ ಹಿಡಿತದಿಂದ ಮುಕ್ತಗೊಂಡು ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಿದಾಗ ಸಾರ್ಥಕವಾಗುತ್ತದೆ. ಕರಾವಳಿ ಟೈಮ್ಸ್ ಆ ನಿಟ್ಟಿನಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಮಾತನಾಡಿ, ಕಠಿಣ ಪರಿಶ್ರಮದಿಂದಾಗಿ ಕರಾವಳಿ ಟೈಮ್ಸ್ ಇಂದು ಐದು ವರ್ಷಗಳನ್ನು ಪೂರೈಸಿದ್ದಲ್ಲೆ, ವೆಬ್ ಸೈಟ್ ಆವೃತ್ತಿಯನ್ನೂ ಲೋಕಾರ್ಪಣೆಗೊಳಿಸುತ್ತಿದೆ. ಸಾಮಾಜಿಕ ಕಳಕಳಿಯ ಕಾರ್ಯನಿರ್ವಹಣೆಯೇ ಪತ್ರಿಕೆಯ ಅಭಿವೃದ್ದಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮಾತನಾಡಿ, ಸಾಮಾಜಿಕ ಸಮಸ್ಯೆಗಳ ಬಗ್ಗೆ, ಸರಕಾರ ಹಾಗೂ ಅಧಿಕಾರಿಗಳ ಜನವಿರೋಧಿ ನೀತಿಯ ಬಗ್ಗೆ ದಿಟ್ಟ ವರದಿಗಳ ಮೂಲಕ ಕರಾವಳಿ ಟೈಮ್ಸ್ ಜನರ ಹತ್ತಿರಕ್ಕೆ ತಲುಪಿದ್ದು, ಇನ್ನಷ್ಟು ಸಾಮಾಜಿಕ ಕಳಕಳಿಯ ಕಾರ್ಯನಿರ್ವಹಣೆಯ ಮೂಲಕ ಮತ್ತಷ್ಟು ಉತ್ತುಂಗಕ್ಕೆ ಏರಲಿ. ದೊಡ್ಡ ಪತ್ರಿಕೆಗಳ ಭರಾಟೆಯ ನಡುವೆ ಸಣ್ಣ ಪತ್ರಿಕೆಗಳ ಅಭಿವೃದ್ದಿ ಸಮಾಜ ಪಣತೊಡಬೇಕಿದೆ ಎಂದು ಕರೆ ನೀಡಿದರು.

ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ಮಾತನಾಡಿ ಬ್ರೇಕಿಂಗ್ ನ್ಯೂಸ್‍ಗಳ ಭರಾಟೆಯಲ್ಲಿ ಇಂದು ಸುದ್ದಿಗಳ ರೂಪವೇ ಬದಲಾಗುತ್ತಿರುವುದು ದುರಂತ. ಜನರಿಗೆ ಸ್ಪಷ್ಟ ಹಾಗೂ ನಿಖರ ಸುದ್ದಿಗಳನ್ನು ನೀಡುವ ನಿಟ್ಟಿನಲ್ಲಿ ಪತ್ರಕರ್ತರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಆಶಿಸಿದರು.

ಕರ್ನಾಟಕ ಪತ್ರಕರ್ತರ ಸಂಘದ ಬಂಟ್ವಾಳ ಘಟಕಾಧ್ಯಕ್ಷ ಫಾರೂಕ್ ಬಂಟ್ವಾಳ ಮಾತನಾಡಿ, ಪತ್ರಕರ್ತರು ಸಮಾಜದ ಆಗು-ಹೋಗುಗಳಿಗೆ ಧ್ವನಿಯಾದಾಗ ಪ್ರತಿಕೆಗಳು ಸಮಾಜದ ಕೈಗನ್ನಡಿಯಾಗಿ ಬೆಳೆಯುತ್ತದೆ ಎಂದರು.

ಇದೇ ವೇಳೆ ಬಂಟ್ವಾಳ ಪುರಸಭಾ ಮಾಜಿ ಸದಸ್ಯೆ ಚಂಚಲಾಕ್ಷಿ ಅವರನ್ನು ಗಣ್ಯರ ಸಮ್ಮುಖ ಸನ್ಮಾನಿಸಲಾಯಿತು. ಪಾಣೆಮಂಗಳೂರು ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ, ಬಂಟ್ವಾಳ ಹಾಗೂ ಪಾಣೆಮಂಗಳೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಇರಾ ಗ್ರಾ ಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್, ಉದ್ಯಮಿಗಳಾದ ಹಂಝ ಆನಿಯಾ ಬಸ್ತಿಕೋಡಿ, ವಿಶ್ವನಾಥ ಬಂಟ್ವಾಳ, ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಪತ್ರಕರ್ತರಾದ ರತ್ನದೇವ್ ಪೂಂಜಾಲಕಟ್ಟೆ, ಸಂದೀಪ್ ಸಾಲ್ಯಾನ್, ಇಂತಿಯಾಝ್ ಷಾ ತುಂಬೆ, ಪ್ರಮುಖರಾದ ಲತೀಫ್ ಖಾನ್ ಗೂಡಿನಬಳಿ, ಮುಹಮ್ಮದ್ ನಂದಾವರ, ಇರ್ಶಾದ್ ಡಿ.ಎಸ್.ಐ.ಬಿ., ಆಶಿಕ್ ಕುಕ್ಕಾಜೆ, ಶರೀಫ್ ಭೂಯಾ, ಉಬೈದ್ ಯು, ಸಮದ್ ಆಲಡ್ಕ, ಅಝರ್ ಬಂಗ್ಲೆಗುಡ್ಡೆ, ಅಝೀಝ್ ಬಂಗ್ಲೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

ಪತ್ರಿಕೆಯ ಪ್ರಧಾನ ಸಂಪಾದಕ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹ ಸಂಪಾದಕ ಯು ಮುಸ್ತಫಾ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಪತ್ರಿಕೆಗಳು ಸಾಮಾಜಿಕ ನ್ಯಾಯ ವಂಚಿತರ ಧ್ವನಿಯಾಗಬೇಕು : ರಮಾನಾಥ ರೈ Rating: 5 Reviewed By: karavali Times
Scroll to Top