ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾವೈರಸ್ ವಿರುದ್ಧದ ಸಮರವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಾಳೆಯಿಂದ ಮತ್ತಷ್ಟು ಬಿಗಿಯಾಗಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಈಗಾಗಲೇ ಲಾಕ್ ಡೌನ್ ಜಾರಿಯಾಗಿದ್ದರೂ ಜನರು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾಳೆಯಿಂದ ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಲಾಕ್ ಡೌನ್ ಜಾರಿಯಲ್ಲಿದ್ದರೂ ಜನರು ಗಂಭೀರವಾಗಿ ಪರಿಗಣಿಸದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮೊಂದಿಗೆ ಮಾತನಾಡಿದ್ದು, ನಾಳೆಯಿಂದ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸಲಾಗುವುದು, ಜಿಲ್ಲೆಗಳಲ್ಲಿನ ಲಾಕ್ ಡೌನ್‍ಗೆ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.
ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್‍ನಿಂದ ಪುಡ್ ಪ್ಯಾಕೆಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಇಂದಿರಾ ಕ್ಯಾಂಟೀನ್‍ಗಳಲ್ಲಿ ಪುಡ್ ಪ್ಯಾಕೆಟ್ ಮಾದರಿಯಲ್ಲಿ ಆಹಾರವನ್ನು ವಿತರಿಸಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳಾದ ಆಹಾರ ಧಾನ್ಯ, ಬೆಳೆ, ದಿನಸಿ, ಮಾಂಸ, ಔಷಧಿ ಮತ್ತಿತರ ವಸ್ತುಗಳಿಗೆ ತೊಂದರೆಯಾಗದಂತೆ ಗಮನ ಹರಿಸಲಾಗಿದೆ. ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ನಿರತರಾಗಿರುವವರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ನೆರವು ನೀಡಬೇಕಾಗಿದೆ. ರಾಜ್ಯದಲ್ಲಿ ಸಾಕಷ್ಟು ಆಹಾರ ಧಾನ್ಯಗಳ ಸಂಗ್ರಹವಿದ್ದು, ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.
ಕೊರೋನಾಪಾಸಿಟಿವ್ ಇದ್ದರೂ ಅನೇಕ ಮಂದಿ ಗುಣಮುಖರಾಗಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಔಷಧಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
0 comments:
Post a Comment