ಆಧುನಿಕ ತಂತ್ರಜ್ಞಾನಕ್ಕೇ ಸವಾಲೆಸೆದ ಮಿಅ್ ರಾಜ್ ಸಂಭವ : ಖಡ್ಡಾಯ ನಮಾಝ್ ವಾರ್ಷಿಕೋತ್ಸವ ರಜಬ್ 27 - Karavali Times ಆಧುನಿಕ ತಂತ್ರಜ್ಞಾನಕ್ಕೇ ಸವಾಲೆಸೆದ ಮಿಅ್ ರಾಜ್ ಸಂಭವ : ಖಡ್ಡಾಯ ನಮಾಝ್ ವಾರ್ಷಿಕೋತ್ಸವ ರಜಬ್ 27 - Karavali Times

728x90

20 March 2020

ಆಧುನಿಕ ತಂತ್ರಜ್ಞಾನಕ್ಕೇ ಸವಾಲೆಸೆದ ಮಿಅ್ ರಾಜ್ ಸಂಭವ : ಖಡ್ಡಾಯ ನಮಾಝ್ ವಾರ್ಷಿಕೋತ್ಸವ ರಜಬ್ 27

- ಪಿ.ಎಂ.ಎ. ಪಾಣೆಮಂಗಳೂರು


ಕರಾವಳಿ ಟೈಮ್ಸ್ ಮಿಅ್ ರಾಜ್ ವಿಶೇಷ ಲೇಖನ

ಅಲ್ಪಾಯುಷಿಗಳಾದ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಅನುಯಾಯಿಗಳಿಗೆ ಪೂರ್ವಿಕ ಪ್ರವಾದಿಗಳ ಅನುಯಾಯಿ ವರ್ಗದ ಸಹಸ್ರ ವರ್ಷಗಳ ಆಯುಷ್ಯದೊಂದಿಗೆ ಸತ್ಕರ್ಮಗಳನ್ನು ತುಲ್ಯಗೊಳಿಸಲು ಜಗದೊಡೆಯನಾದ ಅಲ್ಲಾಹನು ಕೆಲವೊಂದು ಸತ್ಸಂದರ್ಭಗಳನ್ನು ದಯಪಾಲಿಸಿದ್ದಾನೆ. ಅವುಗಳಲ್ಲಿ ಪ್ರಮುಖವಾದವುಗಳು ರಜಬ್, ಶಅಬಾನ್ ಹಾಗೂ ರಂಝಾನ್ ಎಂಬ ಅನುಗ್ರಹೀತ ಮೂರು ತಿಂಗಳುಗಳು. ಅವುಗಳ ಆರಂಭಿಕ ಮಾಸವಾಗಿದೆ ಪವಿತ್ರ ರಜಬ್ ತಿಂಗಳು. ಈ ತಿಂಗಳನ್ನು ಹತ್ತು ಹಲವು ಕಾರಣಗಳಿಗಾಗಿ ಅಲ್ಲಾಹು ಗೌರವಿಸಿದ್ದಾನೆ. ಅದರಂತೆ ಆತನ ಸೃಷ್ಟಿಗಳಲ್ಲಿಯೂ ಆ ಮಾಸವನ್ನು ಗೌರವಿಸುವಂತೆ ಆಜ್ಞಾಪಿಸಿದ್ದಾನೆ. ಹದಿನಾಲ್ಕು ಶತಮಾನಗಳಿಗೂ ಮೊದಲು ಅಂದರೆ ಅಂಧಕಾರದ ಕಾರ್ಗತ್ತಲು ಜಗತ್ತನ್ನು ಆಳುತ್ತಿದ್ದ ಕಾಲಘಟ್ಟದಲ್ಲಿ ಇಂದಿನ ಆಧುನಿಕ ಯುಗದ ಸಕಲ ವಿಜ್ಞಾನಿ, ತತ್ವಜ್ಞಾನಿಗಳನ್ನೂ ಬೆಕ್ಕಸ ಬೆರಗಾಗಿಸುವಂತಹ ವಿದ್ಯಾಮಾನವೊಂದು ಅಂದು ನಡೆದುಹೋಯಿತು. ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಮಸ್ಜಿದುಲ್ ಹರಾಂನಿಂದ ಅದೆಷ್ಟೋ ಕಿ.ಮೀ.ಗಳಷ್ಟು ದೂರದಲ್ಲಿರುವ ಮಸ್ಜಿದುಲ್ ಅಖ್ಸಾಕ್ಕೂ, ಅಲ್ಲಿಂದ ಏಳನೇ ಆಕಾಶದವರೆಗೂ ಒಂದೇ ರಾತ್ರಿಯಲ್ಲಿ ಬುರಾಖ್ ಎಂಬ ಕ್ಷಿಪ್ರ ವೇಗದೂತ ವಾಹನದಲ್ಲಿ ಅಲ್ಲಾಹನು ಪ್ರಯಾಣವನ್ನು ಮಾಡಿಸಿದ, ಮಾತ್ರವಲ್ಲದೆ ಸದ್ರಿ ನಿಶಾ ಯಾತ್ರೆಯ ಸಂದರ್ಭದಲ್ಲಿ ಹತ್ತು ಹಲವು ಅದ್ಭುತ ಘಟನೆಗಳನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರಿಗೆ ಕಾಣಿಸಿಕೊಡಲಾಯಿತು.

*ಇಸ್‍ರಾಅ್- ಮಿಅ್ ರಾಜ್* ಎಂದು ಇಸ್ಲಾಮೀ ಚರಿತ್ರೆಯಲ್ಲಿ ಉಲ್ಲೇಖಿಸಲ್ಪಡುವ ಈ ಒಂದು ಅದ್ಭುತ ನಿಶಾ ಪ್ರಯಾಣದ ವೇಳೆ ಏಳಾಕಾಶಗಳ ಭೇಟಿಯ ಬಳಿಕ ಸಿದ್‍ರತುಲ್ ಮುಂತಹಾ, ಬೈತುಲ್ ಮಅïಮೂರ್ ಎಂಬ ಸ್ಥಳ ಸಂದರ್ಶನದ ಬಳಿಕ ಹಿಂತಿರುಗುವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್‍ರು ತನ್ನ ಉಮ್ಮತ್‍ಗೆ ಜಗದೊಡೆಯನಿಂದ ಪಾರಿತೋಷಕವಾಗಿ ದಿನವೊಂದಕ್ಕೆ 50 ಬಾರಿಯ ನಮಾಝ್‍ನೊಂದಿಗೆ ಹಿಂತಿರುಗಿ ಬರುತ್ತಿದ್ದಾಗ ಆರನೇ ಆಕಾಶದಲ್ಲಿ ಅಂತ್ಯ ಪ್ರವಾದಿಯವರನ್ನು ಎದುರುಗೊಂಡ ಪ್ರವಾದಿ ಮೂಸಾ (ಅ) ರವರು ಇಷ್ಟೊಂದು ಅಧಿಕ ಹೊತ್ತಿನ ನಮಾಝ್ ದಿನವೊಂದರಲ್ಲಿ ನಿರ್ವಹಿಸಲು ತಮ್ಮ ಉಮ್ಮತ್‍ಗಳಿಗೆ ಸಾಧ್ಯವಾಗದು ಅದನ್ನು ಕಡಿತಗೊಳಿಸುವಂತೆ ಅಲ್ಲಾಹನಲ್ಲಿ ಮೊರೆಯಿಡುವಂತೆ ವಾಪಾಸು ಕಳುಹಿಸಿದರು. ಆದರೆ ವಾಪಾಸು ಹೋದ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರಿಗೆ ಪ್ರತೀ ಬಾರಿಯೂ ಐದೈದು ಬಾರಿಯನ್ನು ಕಡಿತಗೊಳಿಸುವ ಮೂಲಕ ಇದು 9 ಸಲ ಪುನರಾವರ್ತನೆಗೊಂಡ ಬಳಿಕ ಅಂತಿಮವಾಗಿ 5 ಸಮಯದ ನಮಾಝ್ ಎಂಬ ಪಾರಿತೋಷಕದೊಂದಿಗೆ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಹಿಂದುರುಗಿದರು. ಈ ಘಟನೆ ನಡೆದದ್ದು ಹಿಜಿರಾ 2ನೇ ವರ್ಷದ ರಜಬ್ ತಿಂಗಳ 27 ರ ರಾತ್ರಿಯಲ್ಲಾಗಿತ್ತು. ಅದೇ ದಿನ ಮಧ್ಯಾಹ್ನ (ಲುಹ್‍ರ್)ದ ನಮಾಝ್‍ನೊಂದಿಗೆ ಮುಸ್ಲಿಂ ಉಮ್ಮತ್‍ಗೆ ದಿನದ ಐದು ಹೊತ್ತಿನ ನಮಾಝ್ ಕಡ್ಡಾಯಗೊಳ್ಳುತ್ತದೆ.  ರಜಬ್ 27 ರ ಬೆಳಿಗ್ಗೆ (ಸುಬ್‍ಹಿ) ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್‍ರಿಗೆ ನಮಾಝ್ ನಿರ್ವಹಿಸುವ ವಿಧಿ ವಿಧಾನಗಳು ತಿಳಿಯದ ಕಾರಣ ಅಂದಿನ ಸುಬ್‍ಹ್ ನಮಾಝ್ ಕಡ್ಡಾಯವಾಗಲಿಲ್ಲ. ನಂತರ ಜಿಬ್‍ರೀಲ್ (ಅ) ಬಂದು ನಮಾಝ್ ನಿರ್ವಹಿಸುವ ಪೂರ್ಣ ರೂಪವನ್ನು ಕಲಿಸಿಕೊಟ್ಟ ಬಳಿಕ ಅಂದಿನ ಲುಹ್‍ರ್ ನಮಾಝ್‍ನೊಂದಿಗೆ ಇಸ್ಲಾಮ್ ಕಾರ್ಯದ ಎರನೇ ಕಡ್ಡಾಯ ಕರ್ಮವಾದ ನಮಾಝ್ ಕಡ್ಡಾಯಗೊಳ್ಳುತ್ತದೆ.

ಈ ಒಂದು ಘಟನೆಯಿಂದ ಪುನೀತವಾದ ರಜಬ್ ತಿಂಗಳಿಗೆ ಹತ್ತು ಹಲವು ಪ್ರಾಧಾನ್ಯತೆಗಳನ್ನು ಪವಿತ್ರ ಇಸ್ಲಾಂ ಕಲ್ಪಿಸಿದೆ. ಈ ತಿಂಗಳಲ್ಲಿ ಯಾವುದಾದರೊಂದು ದಿನ ಉಪವಾಸ ವೃತ ಕೈಗೊಳ್ಳುವ ಮೂಲಕ ಒಬ್ಬ ಮುಸಲ್ಮಾನ ರಜಬ್ ತಿಂಗಳನ್ನು ಗೌರವಿಸಿದರೆ ಆತ ಸ್ವರ್ಗ ಪ್ರವೇಶಿಸುತ್ತಾನೆ ಎಂದು ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಹದೀಸ್ ಮೂಲಕ ಮುಸ್ಲಿಂ ಉಮ್ಮತ್‍ಗೆ ಸಾರಿ ಹೇಳಿದ್ದಾರೆ. ಅಲ್ಲದೆ ಮುಸಲ್ಮಾನನೊಬ್ಬ ತನ್ನೆಲ್ಲ ಕೆಡುಕು ಕಾರ್ಯಗಳಿಂದ, ದೇಹೇಚ್ಛೆಗಳಿಂದ ದೂರ ಸರಿದು, ಅಲ್ಲಾಹನ ಸಾನ್ನಿಧ್ಯ ತಲುಪುವ ಹಾದಿಯಾದ ಇಬಾದತ್ (ಆರಾಧನಾ ಕರ್ಮ) ಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮಾಸ ಇದಾಗಿದೆ ಎಂದು ಇಸ್ಲಾಮೀ ಪಂಡಿತರು ವಿಶ್ಲೇಷಿದ್ದಾರೆ. ಅದೇ ರೀತಿ ತನ್ನ ದೈನಂದಿನ ಜೀವನದಲ್ಲಿ ನಿರ್ವಹಿಸುತ್ತಿದ್ದ ಸತ್ಕರ್ಮಗಳನ್ನು ರಜಬ್ ತಿಂಗಳಲ್ಲಿ ಇಮ್ಮಡಿಗೊಳಿಸಿ ಅದನ್ನು ಮುಂದಿನ ಶಅಬಾನ್, ರಮಳಾನ್ ತಿಂಗಳುಗಳಿಗೂ ವಿಸ್ತರಿಸುವಂತೆ ಪ್ರವಾದಿಗಳು ಕಲ್ಪಿಸಿದ್ದಾರೆ. ರಜಬ್ ತಿಂಗಳಲ್ಲಿ ಇಬಾದತ್ (ಆರಾಧನಾ ಕವರ್i) ಗಳಿಗೆ ಬೀಜವನ್ನು  ಬಿತ್ತಿ, ಶಅಬಾನ್ ತಿಂಗಳಲ್ಲಿ ಅದಕ್ಕೆ ನೇರೆರೆದು ಪೋಷಿಸಿ, ಪವಿತ್ರ ರಮಳಾನ್ ತಿಂಗಳಲ್ಲಿ ಅದರ ಫಸಲನ್ನು ಕೊಯ್ಯುವ ಸನ್ನಿವೇಶವನ್ನು ನಿರ್ಮಿಸುವಂತೆ ಪೂರ್ವಿಕ ಮಹಾತ್ಮರು ಘೋಷಿಸಿದ್ದಾರೆ. ಈ ದಿಸೆಯಲ್ಲಿ ಮುಸ್ಲಿಂ ಜಗತ್ತು ರಜಬ್ ತಿಂಗಳು ಸೇರಿದಂತೆ ಮುಂಬರುವ ತ್ರಿಮಾಸಗಳನ್ನು ತಮ್ಮ ಆಧ್ಯಾತ್ಮಿಕ ಯಶಸ್ಸಿಗೆ ಪೂರಕವಾಗುವಂತೆ ಬಳಸಿಕೊಳ್ಳುವಂತಾಗಬೇಕು.

ಇಸ್ಲಾಮೀ ಚರಿತ್ರೆಯಲ್ಲಿ ಮಹತ್ತರ ಮೈಲುಗಲ್ಲಾಗಿರುವ ಪವಿತ್ರ ಮಿಹ್‍ರಾಜ್ ರಾತ್ರಿಗೆ ಇಸ್ಲಾಮೀ ಮತ ಪಂಡಿತರು ಮಹತ್ತರ ಸ್ಥಾನಮಾನವನ್ನು ಕಲ್ಪಿಸಿದ್ದಾರೆ. ಆ ದಿನ-ರಾತ್ರಿಯಲ್ಲಿ ವಿಶೇಷ ಆರಾಧನಾ ಕರ್ಮಗಳಲ್ಲಿ ಏರ್ಪಡುವ ಮೂಲಕ ಸರ್ವಶಕ್ತನಾದ ಜಗದೊಡೆಯನಿಗೆ ಸ್ತುತಿ ಅರ್ಪಿಸಲು ಆಜ್ಞಾಪಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಆಧುನಿಕ ತಂತ್ರಜ್ಞಾನಕ್ಕೇ ಸವಾಲೆಸೆದ ಮಿಅ್ ರಾಜ್ ಸಂಭವ : ಖಡ್ಡಾಯ ನಮಾಝ್ ವಾರ್ಷಿಕೋತ್ಸವ ರಜಬ್ 27 Rating: 5 Reviewed By: karavali Times
Scroll to Top