ಜಗತ್ತು ಸಂಕಷ್ಟ ಎದುರಿಸುತ್ತಿದೆ, ಗಂಭೀರವಾಗಿ ಪರಿಗಣಿಸಿ : ದೇಶದ ಜನತೆಗೆ ಪ್ರಧಾನಿ ಮೋದಿ ತಾಕೀತು - Karavali Times ಜಗತ್ತು ಸಂಕಷ್ಟ ಎದುರಿಸುತ್ತಿದೆ, ಗಂಭೀರವಾಗಿ ಪರಿಗಣಿಸಿ : ದೇಶದ ಜನತೆಗೆ ಪ್ರಧಾನಿ ಮೋದಿ ತಾಕೀತು - Karavali Times

728x90

19 March 2020

ಜಗತ್ತು ಸಂಕಷ್ಟ ಎದುರಿಸುತ್ತಿದೆ, ಗಂಭೀರವಾಗಿ ಪರಿಗಣಿಸಿ : ದೇಶದ ಜನತೆಗೆ ಪ್ರಧಾನಿ ಮೋದಿ ತಾಕೀತು
ನವದೆಹಲಿ (ಕರಾವಳಿ ಟೈಮ್ಸ್) :  ಕರಾಳ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ‌ ಮೋದಿ ಗುರುವಾರ ರಾತ್ರಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.

ಜಗತ್ತು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಪ್ರಥಮ, ದ್ವಿತೀಯ ವಿಶ್ವಯುದ್ದದ ಸಂದರ್ಭದಲ್ಲಿ ಆಗದ ಅನಾಹುತಗಳು ಕೊರೊನಾ ವೈರಸ್ ನಿಂದ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.

ದೇಶದ 130 ಕೋಟಿ ಜನತೆ ಸರ್ಕಾರದ ಜತೆಗೆ ಸಹಕಾರ ನೀಡಬೇಕು. ಕೊರೊನಾ ಕಾಯಿಲೆಗೆ ಇದುವರೆಗೆ ಯಾವುದೇ ಚಿಕಿತ್ಸೆ, ಮದ್ದು ಕಂಡುಹಿಡಿದಿಲ್ಲ. ಇದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ.
ಭಾರತದಂತ ದೇಶದಲ್ಲಿ ಕೊರೊನಾ ಭೀತಿಯನ್ನು ಕಡೆಗಣಿಸುವುದು ಸರಿಯಲ್ಲ. ಸಂಕಲ್ಪ ಮತ್ತು ಸಂಯಮದಿಂದ ದೇಶದ ಜನತೆ ಧೃಡ ನಿರ್ಧಾರ ಮಾಡಬೇಕಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಲಹೆ, ನಿರ್ದೇಶನಗಳನ್ನು ಪಾಲಿಸಬೇಕು. ಕೊರೊನಾದಿಂದ ದೂರ ಉಳಿಯಲು ಜನರು ಸ್ವಯಂಪ್ರೇರಿತ ತೀರ್ಮಾನ ಮಾಡಬೇಕಿದೆ.
ಕೊರೊನಾ ಹರಡುವಿಕೆ ತಡೆಯಲು ಜನತೆ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಮನೆಗಳಿಂದ ಹೊರಬರಬಾರದು. ಮನೆಯಿಂದಲೇ ಕಚೇರಿ ಕೆಲಸ ಕಾರ್ಯ ಮಾಡಲು ತೀರ್ಮಾನ ಕೈಗೊಳ್ಳಬೇಕು.

ಹಿರಿಯ ನಾಗರಿಕರು ಮನೆಯಿಂದ ಹೊರ ಬರಬಾರದು ಎಂದಿರುವ ಪ್ರಧಾನಿ ಮೋದಿ 60 ವರ್ಷ ಮೀರಿದ ಹಿರಿಯ ನಾಗರಿಕರು ಕಡ್ಡಾಯವಾಗಿ ಮನೆಯಲ್ಲಿ ಉಳಿಯಬೇಕು. ಜನತಾ ಕರ್ಪ್ಯೂ ವ್ಯವಸ್ಥೆ ಜಾರಿಯಾಗಬೇಕು. ಇದನ್ನು ಜನರೇ ಜಾರಿ‌ಮಾಡಬೇಕು. ಮಾರ್ಚ್ 22 ರಂದು ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಜನತಾ ಕರ್ಪ್ಯೂ ಜಾರಿ‌ಮಾಡಲಾಗಿದೆ. ಈ ವೇಳೆ ನಾಗರಿಕರು ಮನೆಯಿಂದ ಹೊರಬರಬಾರದು. ಇದು ಯಶಸ್ವಿಯಾದರೆ ಮುಂದಿನ ಸವಾಲುಗಳನ್ನು ಎದುರಿಸಲು ಸಜ್ಜಾಗಬಹುದು.
ಪ್ರತಿ ದಿನ ಸಾರ್ವಜನಿಕರು ಹತ್ತು ಮಂದಿಗೆ ಜನತಾ ಕರ್ಪ್ಯೂ ಬಗ್ಗೆ ಮಾಹಿತಿ ನೀಡಬೇಕು. ಕೊರೊನಾ ವಿರುದ್ಧ ಹೋರಾಟಕ್ಕೆ ದೇಶ ಹೇಗೆ ಸಜ್ಜಾಗಿದೆ ಎಂಬುದನ್ನು ಸಾಬೀತುಪಡಿಸಬೇಕಿದೆ.

ಕೊರೊನಾ ಮಹಾಮಾರಿ ವಿರುದ್ದ ಸರ್ಕಾರ ಹಾಗೂ ಜನತೆ ಸಂಕಲ್ಪಿತ ಹೋರಾಟ ಮಾಡಬೇಕಿದೆ.
ಕೊರೊನಾ ತಡೆಯುವ ನಿಟ್ಟಿನಲ್ಲಿ ಅವಿರತ ಶ್ರಮವಹಿಸಿದ ವೈದ್ಯರು ‌ಹಾಗೂ ಇತರೆ‌ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಬೇಕಿದೆ. ಭಾನುವಾರ ಸಂಜೆ 5 ಗಂಟೆಗೆ‌ ಜನತೆ ತಮ್ಮ ಮನೆ ಬಾಗಿಲಿನಲ್ಲೇ ನಿಂತು ಈ ಶ್ರಮಜೀವಿಗಳಿಗೆ ಧನ್ಯವಾದ ಅರ್ಪಿಸಬೇಕು.

ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಕುಟುಂಬ ವೈದ್ಯರ ಸಲಹೆ ಪಡೆಯಬಹುದು. ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ಹೇರಬಾರದು.

ದೇಶದ ಆರ್ಥಿಕತೆ ಮೇಲೂ ಕೊರೊನಾ ಗಂಭೀರ ಪರಿಣಾಮ ಬೀರುತ್ತಿದೆ.‌ ಇದನ್ನು ತಡೆಯುವ ‌ನಿಟ್ಟಿನಲ್ಲಿ ವಿತ್ತ ಸಚಿವರ ನೇತೃತ್ವದಲ್ಲಿ ‌ಟಾಸ್ಕ್ ಪೋರ್ಸ್ ರಚಿಸಲಾಗುವುದು. ರಾಜ್ಯಗಳ ಜತೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ದೇಶದಲ್ಲಿ ಔಷಧ, ಹಾಲು ಹಾಗೂ ಜೀವನಾವಶ್ಯಕ ವಸ್ತುಗಳಿಗೆ ಯಾವುದೇ ತೊಂದರೆಯಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಅನಗತ್ಯ ಗೊಂದಲ ಸೃಷ್ಟಿಸಿಕೊಳ್ಳಬೇಕಿಲ್ಲ.

ಇಂತಹ ಕ್ಲಿಷ್ಟ ಪರಿಸ್ಥಿತಿ ಯಲ್ಲಿ ಕೆಲವು ಸಮಸ್ಯೆಗಳಾಗುತ್ತದೆ. ಆದರೆ ಜನತೆ ಧೃಡ ಸಂಕಲ್ಪದಿಂದ ಈ ಸಮಸ್ಯೆಯನ್ನು ಎದುರಿಸಬೇಕಿದೆ.

ಕೊರೊನಾ‌ ಎದುರಿಸಲು‌‌  ಕೇಂದ್ರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಯಾರೂ ಆತಂಕಪಡಬೇಕಿಲ್ಲ ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಧೈರ್ಯ ತುಂಬಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಜಗತ್ತು ಸಂಕಷ್ಟ ಎದುರಿಸುತ್ತಿದೆ, ಗಂಭೀರವಾಗಿ ಪರಿಗಣಿಸಿ : ದೇಶದ ಜನತೆಗೆ ಪ್ರಧಾನಿ ಮೋದಿ ತಾಕೀತು Rating: 5 Reviewed By: karavali Times
Scroll to Top