ದಫ್ ಕಲೆಗೆ ವಿಶೇಷ ಮೆರುಗು ನೀಡುತ್ತಿರುವ ಸ್ಪರ್ಧಾ ಕಾರ್ಯಕ್ರಮಗಳು - Karavali Times ದಫ್ ಕಲೆಗೆ ವಿಶೇಷ ಮೆರುಗು ನೀಡುತ್ತಿರುವ ಸ್ಪರ್ಧಾ ಕಾರ್ಯಕ್ರಮಗಳು - Karavali Times

728x90

9 March 2020

ದಫ್ ಕಲೆಗೆ ವಿಶೇಷ ಮೆರುಗು ನೀಡುತ್ತಿರುವ ಸ್ಪರ್ಧಾ ಕಾರ್ಯಕ್ರಮಗಳು

ಕರಾವಳಿ ಟೈಮ್ಸ್ ವಿಶೇಷ ಕಲಾ ಅಂಕಣ
ದಫ್ ಕಲೆಯೆಂಬುದು ಪವಿತ್ರ ಇಸ್ಲಾಮಿನ ಪ್ರಾಚೀನ ಕಲಾ ಪ್ರಕಾರಗಳಲ್ಲಿ ಒಂದಾಗಿದೆ. ಪ್ರವಾದಿ ಕಾಲದಿಂದಲೇ ದಫ್ ಕಲೆಯೆಂಬುದು ಅನುವದನೀಯ ಕಲೆಯಾಗಿ ಗುರುತಿಸಿಕೊಂಡಿದೆ. ದಫ್ ಕಲೆಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್‍ರ ಕಾಲದಿಂದಲೇ ಅಂಗೀಕಾರದ ಮುದ್ರೆಯೊತ್ತಲಾಗಿದೆ ಎಂಬುದಕ್ಕೆ ದಫ್ ಬಗ್ಗೆ ಇರುವ ಹಲವು ಮಹಾ ಪಂಡಿತರುಗಳು ಉದ್ದರಿಸಿ ವರದಿ ಮಾಡಿದ ಹದೀಸ್‍ಗಳೇ ಸಾಕ್ಷಿಯಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಜೀವಿತ ಕಾಲದಲ್ಲೊಮ್ಮೆ ವಿದ್ಯಾರ್ಥಿನಿಯರು ಬದ್ರ್ ಶುಹದಾಗಳ ಸ್ಮರಣೆಯ ಹಾಡುಗಳನ್ನು ಹಾಡುತ್ತಾ ದಫ್ ಮುಟ್ಟುತ್ತಿರುವ ಸ್ಥಳಕ್ಕೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಬಂದಾಗ ವಿದ್ಯಾರ್ಥಿನಿಯರು ತಕ್ಷಣ ಬದ್ರ್ ಶುಹದಾಗಳ ಅನುಸ್ಮರಣಾ ಹಾಡುಗಳನ್ನು ನಿಲ್ಲಿಸಿ ಸ್ವತಃ ಪ್ರವಾದಿಯವರ ಗುಣಗಾನ ಮಾಡುತ್ತಾ ದಫ್ ಭಾರಿಸಲು ಪ್ರಾರಂಭಿಸಿದಾಗ ಅವರೊಂದಿಗೆ ಪ್ರವಾದಿಯವರು ತಾವು ಮೊದಲು ಹಾಡುತ್ತಿದ್ದ ಬದ್ರ್ ಶುಹದಾಗಳ ಸ್ಮರಣೆಯನ್ನು ಮಾಡುತ್ತಲೆ ದಫ್ ಭಾರಿಸಿ ಎಂದು ಹೇಳುವ ಮೂಲಕ ದಫ್ ಕಲೆಗೆ ಅನುವದನೀಯ ಸ್ಥಾನವನ್ನು ನೀಡುವುದರ ಜೊತೆಗೆ ನಮ್ಮಿಂದ ಅಗಲಿದ ಸಜ್ಜನ ಮಹಾತ್ಮರ ಅನುಸ್ಮರಣೆಗೂ ಮಹತ್ತರ ಪ್ರಾಧಾನ್ಯತೆ ಇದೆ ಎಂಬುದನ್ನು ಸಾರಿ ಹೇಳಿದ್ದರು.

ಪ್ರವಾದಿ ಕಾಲದಲ್ಲೊಮ್ಮೆ ಮಹಿಳೆಯೋರ್ವರು ಪ್ರವಾದಿಯವರು ಒಂದು ಧರ್ಮ ಯುದ್ದದಲ್ಲಿ ಭಾಗವಹಿಸಲು ತೆರಳಿದ ಸಂದರ್ಭ ಪ್ರವಾದಿಯವರು ಈ ಯುದ್ದಲ್ಲಿ ವಿಜಯ ಪತಾಕೆಯೊಂದಿಗೆ ಮರಳಿದರೆ ದಫ್ ಭಾರಿಸುವುದಾಗಿ ಹರಕೆ ಹೊರುತ್ತಾರೆ. ಯುದ್ದದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ವಿಜಯಶಾಲಿಯಾಗಿ ಹಿಂದುರುಗಿದಾಗ ಆ ಮಹಿಳೆ ತನ್ನ ಹರಕೆಯ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್‍ರಲ್ಲಿ ಪ್ರಸ್ತಾಪಿಸಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಆ ಮಹಿಳೆಯ ಬೇಡಿಕೆಗೆ ಸಮ್ಮತಿಸುತ್ತಾರೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್‍ರ ಅಂಗೀಕಾರದಂತೆ ಆ ಮಹಿಳೆ ತನ್ನ ಹರಕೆಯನ್ನು ಪ್ರವಾದಿ ಮುಂಭಾಗದಲ್ಲೇ ಪೂರೈಸುತ್ತಾರೆ ಎಂಬ ಘಟನೆಯನ್ನು ಇಸ್ಲಾಮೀ ಚರಿತ್ರೆಗಳು ವಿವರಿಸುತ್ತದೆ.

ಪ್ರವಾದಿ ಕಾಲದ ಬಳಿಕ ದಫ್‍ನೊಂದಿಗೆ ತಳುಕು ಹಾಕಿಕೊಂಡಿರುವ ಓರ್ವ ಮಹಾನುಭಾವರಾಗಿದ್ದಾರೆ ಶೈಖ್ ರಿಫಾಯಿ (ರ). ಇಂದಿಗೂ ಮುಸ್ಲಿಂ ಮೊಹಲ್ಲಾ-ಮಸೀದಿಗಳಲ್ಲಿ ರಿಫಾಯಿ ಶೇಖ್ ಅವರ ಅನುಸ್ಮರಣಾ ಪ್ರಯುಕ್ತ ದಫ್ ರಾತೀಬ್ ಎಂಬ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವ ಮೂಲಕ ದಫ್ ಸಾರ್ವಭೌಮತ್ವವನ್ನು ಪ್ರಸ್ತುತಪಡಿಸುತ್ತಿರುವುದು ಕಂಡುಬರುತ್ತಿದೆ. ಶೈಖ್ ರಿಫಾಯಿ ತನ್ನ ಆಧ್ಯಾತ್ಮಿಕ ಶಕ್ತಿಯ ಮೂಲಕ ದಫ್ ಭಾರಿಸುವುದಕ್ಕಿರುವ ಮಹತ್ವವನ್ನು ಲೋಕಕ್ಕೆ ಸಾರಿದ ಮಹತ್ವಪೂರ್ಣ ಘಟನೆ ಮುಸ್ಲಿಂ ಜಗತ್ತಿನ ಮುಂದೆ ಇಂದಿಗೂ ಪ್ರಸ್ತುತ : “ಒಂದೊಮ್ಮೆ ನಶೀದಾಗಳನ್ನು ಹಾಡುತ್ತಾ ದಫ್ ಭಾರಿಸುತ್ತಾ ಶೈಖ್ ರಿಫಾಯಿ ನೇತೃತ್ವದ ಸೂಫಿಗಳ ತಂಡ ಕೈಯಲ್ಲಿ ದಫ್ ಹಿಡಿದು ಮಕ್ಕಾದಲ್ಲಿ ಕಅಬಾ ತ್ವವಾಫ್ (ಪ್ರದಕ್ಷಿಣೆ) ಮಾಡುತ್ತಿರುವುದನ್ನು ಕಂಡ ಅಲ್ಲಿನ ಅಧಿಕಾರಿ ವರ್ಗ ಅವರನ್ನು ತಡೆಯಲೆತ್ನಿಸಿದರು. ದಫ್ ಭಾರಿಸುವ ಸಂಪ್ರದಾಯ ಇಲ್ಲಿ ರೂಢಿಯಲ್ಲಿಲ್ಲ. ದಫ್ ಭಾರಿಸುತ್ತಾ ಇದುವರೆಗೂ ಕಅಬಾ ತ್ವವಾಫ್ ಯಾರೂ ಮಾಡಿಲ್ಲ. ಸೂಫಿಗಳು ಒಂದೊಂದು ಹೊಸತನವನ್ನು ರೂಢಿಗೆ ತರುವುದು ಬೇಡ. ಸಾಕು ನಿಲ್ಲಿಸಿ ಎಂಬ ತಾಕೀತನ್ನು ಅಧಿಕಾರಿಗಳು ಮಾಡಿದಾಗ ಶೈಖ್ ರಿಫಾಯಿ ಹೇಳಿದರು. ನಿಲ್ಲಿಸಲು ಸಾಧ್ಯವಿಲ್ಲ. ನಮಗೆ ದಫ್ ಭಾರಿಸಲೇಬೇಕು ಎಂದಾಗ ಅಧಿಕಾರಿಗಳು ಹಾಗಾದರೆ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದರು. ಈ ಸಂದರ್ಭ ನೀವು ಬಂಧಿಸುವುದು ದಫ್ ಭಾರಿಸಿದ್ದಕ್ಕೆ ತಾನೇ? ಬೇರೇ ಯಾವ ಅಪರಾಧವನ್ನು ನಾವು ಮಾಡಿಲ್ಲವಲ್ಲ ಎಂದು ಶೈಖ್ ರಿಫಾಯಿ ಪ್ರಶ್ನಿಸಿದಾಗ ಹೌದು ದಫ್ ಭಾರಿಸಿದ ಕಾರಣಕ್ಕೆ ಮಾತ್ರ ಬಂಧಿಸುತ್ತೇವೆ ಎಂದರು. ಹಾಗಾದರೆ ದಫ್‍ನ್ನು ಬಂಧಿಸಿ ಎಂದು ಶೈಖ್ ರಿಫಾಯಿ ದಫ್ಫನ್ನು ಮೇಲಕ್ಕೆ ಗಾಳಿಯಲ್ಲಿ ಎಸೆದರು. ಪರಮಾಶ್ಚರ್ಯ... ಆ ಸಂದರ್ಭ ಸಂಭವಿಸುತ್ತದೆ. ಹವೆಯಲ್ಲಿ ತೇಲಿದ ದಫ್ ಅಲ್ಲಿ ತಾನಾಗಿಯೇ ಭಾರಿಸಿಕೊಳ್ಳತೊಡಗುತ್ತದೆ. ಅಷ್ಟೇ ಅಲ್ಲ ಅದು ತನ್ನಷ್ಟಕ್ಕೇ ಗಾಳಿಯಲ್ಲಿ ತೇಲುತ್ತಾ ಕಅಬಾಲಯಕ್ಕೆ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿತು. ಈ ಸಂದರ್ಭ ತಬ್ಬಬ್ಬಾದ ಅಧಿಕಾರಿಗಳು ಶೈಖ್ ರಿಫಾಯಿ ಅವರ ಘನತೆ ಅರ್ಥೈಸಿಕೊಂಡು ಕ್ಷಪಾಪಣೆ ಕೇಳಿಕೊಂಡರು”.

ಇಂತಹ ದಫ್ ಕಲೆ ಹಿಂದಿನಿಂದಲೂ ಮದ್ರಸ, ದರ್ಸ್‍ಗಳಲ್ಲಿ, ಮಸೀದಿ-ಮೊಹಲ್ಲಾಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ, ಮುಸ್ಲಿಮರ ಮದುವೆ, ಮುಂಜಿ ಇತ್ಯಾದಿ ಶುಭ ಸೂಚಕ ಕಾರ್ಯಕ್ರಮಗಳಲ್ಲಿ ಬಳಕೆಯಾಗುತ್ತಿತ್ತು. ಬಳಿಕ ಆಧುನಿಕ ಫ್ಯಾಶನ್ ಯುಗದ ಕರಾಳ ದಾಳಿಯು ಉಳಿದೆಲ್ಲ ಸಂಸ್ಕøತಿಯ ಮೇಲೆ ಪ್ರಭಾವ ಬೀರಿದಂತೆ ದಫ್ ಕಲೆಯ ಮೇಲೂ ತನ್ನ ಕಬಂಧಬಾಹುವನ್ನು ವಿಸ್ತಿರಿಸಿದ್ದರಿಂದಾಗಿ ಕಾಲ ಕ್ರಮೇಣವಾಗಿ ಈ ದಫ್ ಕಲೆ ಕೂಡಾ ಮುಸ್ಲಿಂ ಸಮುದಾಯದಿಂದ ನಿಧಾನಕ್ಕೆ ಕಣ್ಮರೆಯಾಗುವ ಹಂತಕ್ಕೆ ಬಂದು ಮುಟ್ಟಿತ್ತು. ಅದೃಷ್ಟಕ್ಕೆ ಈ ಕಲೆಯನ್ನು ಮುಸ್ಲಿಂ ಧಾರ್ಮಿಕ ಮತ ಪಂಡಿತರು ಕನಿಷ್ಠ ಮದ್ರಸ-ಮಸೀದಿಗಳ ಆವರಣದೊಳಗಾದರೂ ಬಂಧಿಸಿ ಉಳಿಸಿಕೊಂಡು ಬಂದಿರುವುದರಿಂದ ಈ ಒಂದು ವಿಶಿಷ್ಟ ಇಸ್ಲಾಮೀ ಸಾಂಸ್ಕøತಿಕ ಕಲೆಯು ಸಮುದಾಯದಿಂದ ಸಂಪೂರ್ಣವಾಗಿ ಕಣ್ಮರೆಯಾಗುವ ಸನ್ನಿವೇಶ ಬರುವುದು ತಪ್ಪಿಹೋಗಿದೆ.

ನಂತರ ಈ ಒಂದು ಸಾಂಸ್ಕøತಿಕ ಕಲೆಗೆ ಪುನಶ್ಚೇತನವನ್ನು ನೀಡಿ ಗತ ವೈಭವಕ್ಕೆ ಮರಳಿಸುವ ಕಾರ್ಯ ವಿವಿಧ ದಫ್ ಸಮಿತಿಗಳು, ಸಾಮಾಜಿಕ, ಧಾರ್ಮಿಕ ಸಂಘಟನೆಗಳು, ದಫ್ ಅಭಿಮಾನಿ ಯುವಕರು, ದಫ್ ಕಲಾ ಪ್ರೇಮಿಗಳು ನಡೆಸುತ್ತಾ ಬಂದ ಪರಿಣಾಮ ದಕ್ಷಿಣ ಕನ್ನಡ ಹಾಗೂ ಉಡುಪಿ ಸಹಿತ ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ದಫ್ ತಂಡಗಳನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಡಿ ಪ್ರದರ್ಶನಕ್ಕೆ ಅವಕಾಶವನ್ನು ನೀಡುವ ಸ್ಪರ್ಧಾ ರೂಪದ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡುವ ಮೂಲಕ ದಫ್ ಕಲೆಯ ಉಳಿವಿಗೆ ಶ್ರಮಿಸುತ್ತಿರುವ ಪರಿಣಾಮ ಇಂದು ದಫ್ ಕಲಾ ಪ್ರಕಾರ ಯಥಾ ಪ್ರಕಾರ ಉಳಿದುಕೊಂಡು ಬಂದಿದೆ. ಈ ಒಂದು ಪ್ರಯತ್ನದಿಂದ ಚಾಲ್ತಿಯಲ್ಲಿರುವ ದಫ್ ಕಲಾ ತಂಡಗಳು, ಕಲಾಕಾರರು ಹಾಗೂ ದಫ್ ಕಲಾಭಿಮಾನಿಗಳಿಗೆ ಅವಕಾಶ ಒದಗಿಸಿದಂತಾಗಿದೆ. ಈ ಒಂದು ಅವಕಾಶ ಬಳಸಿಕೊಂಡು ದಫ್ ತಂಡಗಳು ಇಂದು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರದರ್ಶನವನ್ನು ನೀಡುತ್ತಾ ಬರುತ್ತಿದೆ.

ಕೇವಲ ಇಸ್ಲಾಮೀ ಕಾರ್ಯಕ್ರಮಗಳಿಗೆ ಮಾತ್ರ ಹೊಂದಿಕೊಂಡಿದ್ದ ಈ ಒಂದು ವಿಶಿಷ್ಟ ಕಲೆ ಇಂದು ಸಮಾಜದ ಸಹೋದರ ಸಮುದಾಯದ ಕಲಾಭಿಮಾನಿಗಳ ಹೃದಯಕ್ಕೂ ತಲುಪಿಸುವ ಮೂಲಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನೂ ಇಸ್ಲಾಮೀ ಸಾಂಸ್ಕøತಿಕ ಕಲೆಯಾಗಿರುವ ದಫ್ ಕಲೆ ಪ್ರಸ್ತುತಗೊಳ್ಳುತ್ತಿದೆ. ಈ ಹಿಂದೆ ಕೇವಲ ಮಳಯಾಳಂ, ಅರಬಿಕ್ ಹಾಡುಗಳಿಗೆ ಸೀಮಿತಗೊಂಡಿದ್ದ ದಫ್ ಕಲೆಯನ್ನು ಇಂದು ಇತರ ಭಾಷೆಗಳಾದ ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್ ಸಹಿತ ಬಹುಭಾಷೆಗಳಿಗೂ ವಿಸ್ತರಿಸಿ ದಫ್ ಕಲೆಯ ಮೂಲಕ ಸಮಾಜಕ್ಕೆ ಉದಾತ್ತ ಸಂದೇಶವನ್ನು ನೀಡುವ ಪ್ರಯತ್ನ ಸಾಗಿದೆ.

ಪರಸ್ಪರ ಹಣ ಕಟ್ಟಿಕೊಂಡು ಸ್ಪರ್ಧಾ ಕಣಕ್ಕಿಳಿಯುವುಕ್ಕೆ ಪವಿತ್ರ ಇಸ್ಲಾಂ ಜೂಜಿನ ಸ್ಥಾನ ನೀಡಿ ಅದನ್ನು ನಿಷೇಧಿಸಿದೆ. ಆದರೆ ಕಲಾ ಪ್ರೋತ್ಸಾಹದ ನಿಟ್ಟಿನಲ್ಲಿ ತಂಡಗಳನ್ನು ಕಣಕ್ಕಿಳಿಸಿ ಮೂರನೇ ವ್ಯಕ್ತಿ ತಂಡಗಳಿಗೆ ಬಹುಮಾನ ನೀಡುವುದನ್ನು ಇಸ್ಲಾಂ ಅನುವದನೀಯಗೊಳಿಸಿದ್ದು, ಈ ನಿಟ್ಟಿನಲ್ಲಿ ದಫ್ ಸ್ಪರ್ಧಾ ಕಾರ್ಯಕ್ರಮಗಳು ದಫ್ ಕಲೆಯ ಉಳಿವಿಗೆ ಸಂಘ ಸಂಸ್ಥೆಗಳು ಕಂಡುಕೊಂಡ ಮಾರ್ಗವಾಗಿ ಗುರುತಿಸಲ್ಪಟ್ಟಿದೆ. ಅಲ್ಲದೆ ದಫ್ ಕಲೆಯಲ್ಲಿ ಇಸ್ಲಾಮೀ ಶಿಷ್ಟಾಚಾರಗಳಿಗೆ ಭಂಗ ಬಾರದ ರೀತಿಯಲ್ಲಿ ಆಧುನಿಕ ಸ್ಪರ್ಶ ನೀಡುವುದನ್ನು ಕರ್ನಾಟಕ ಹಾಗೂ ಕೇರಳದಲ್ಲಿ ದಫ್ ಉಸ್ತಾದ್ ಎಂದೇ ಪ್ರಖ್ಯಾತಿ ಪಡೆಯುವುದರ ಜೊತೆಗೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದ ಶೈಖುನಾ ಮರ್‍ಹೂಂ ಮಂಡೆಕೋಲು ಉಸ್ತಾದ್, ಇಂದಿನ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್‍ಹರಿ, ಉಡುಪಿ ಖಾಝಿ ಶೈಖುನಾ ಬೇಕಲ ಉಸ್ರಾದ್ ಸಹಿತ ಮುಸ್ಲಿಂ ಧಾರ್ಮಿಕ ಪಂಡಿತರು ಸಮ್ಮತಿಸಿ, ಇಂತಹ ದಫ್ ಕಲಾ ಬೆಳವಣಿಗೆಯ ಕಾರ್ಯಕ್ರಮಕ್ಕೆ ಪ್ರೋತ್ಸಾಹವನ್ನು ನೀಡುತ್ತಲೇ ಬರುತ್ತಿದ್ದಾರೆ. ದಫ್ ಸ್ಪರ್ಧೆಗಳು ತಾವು ಕಲಿತ ಕಲೆಯನ್ನು ಪ್ರಸ್ತುತಪಡಿಸಲಿಕ್ಕಿರುವ ವೇದಿಕೆಯಾಗಿದೆಯೇ ಹೊರತು ಮೇಲು-ಕೀಳೆಂಬ ವರ್ಗೀಕರಣದ ವೇದಿಕೆಯಲ್ಲ ಎಂಬ ಸತ್ಯವನ್ನು ಮನಗಂಡು ಎಲ್ಲಾ ದಫ್ ಕಲಾಕಾರರು ಈ ನಿಟ್ಟಿನಲ್ಲಿ ದಫ್ ಕಲೆಯ ಉಳಿವಿಗೆ ತಮ್ಮ ಅಮೂಲ್ಯ ಕಿಂಚಿತ್ ಕೊಡುಗೆಯನ್ನು ನೀಡಿ ದಫ್ ಕಲೆಯ ಉಳಿವಿನಲ್ಲಿ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕಾಗಿರುವ ಕಾಲದ ಬೇಡಿಕೆಯಾಗಿದೆ.
- ಪಿ.ಎಂ.ಎ. ಪಾಣೆಮಂಗಳೂರು

  • Blogger Comments
  • Facebook Comments

0 comments:

Post a Comment

Item Reviewed: ದಫ್ ಕಲೆಗೆ ವಿಶೇಷ ಮೆರುಗು ನೀಡುತ್ತಿರುವ ಸ್ಪರ್ಧಾ ಕಾರ್ಯಕ್ರಮಗಳು Rating: 5 Reviewed By: zakeerzaid
Scroll to Top