ನವದೆಹಲಿ (ಕರಾವಳಿ ಟೈಮ್ಸ್) : ಮಹಾರಾಷ್ಟ್ರದಲ್ಲಿ ಮತ್ತೋರ್ವ ಕೊರೋನಾ ಸೋಂಕು ಪೀಡಿತ ವ್ಯಕ್ತಿ ಸಾವನ್ನಪ್ಪಿದ್ದು, ಈ ಮೂಲಕ ಕೋವಿಡ್-19 ವೈರಸ್‍ಗೆ ಬಲಿಯಾದವರ ಸಂಖ್ಯೆ 56ಕ್ಕೇರಿದಂತಾಗಿದೆ.
ವಾಣಿಜ್ಯ ರಾಜಧಾನಿ ಮುಂಬೈನ ಬಹುದೊಡ್ಡ ಸ್ಲಂ ಪ್ರದೇಶ ಧಾರಾವಿಯಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇದೀಗ ಅದೇ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಬುಧವಾರ ಧಾರಾವಿಯಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಸೋಂಕಿತನನ್ನು ಸಂಜೆ ಸ್ಥಳೀಯ ಸಿಯಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಇನ್ನು ಮೃತ ವ್ಯಕ್ತಿಯ ಕುಟುಂಬಸ್ಥರು ಮತ್ತು ಅವರ ನಿವಾಸದ ಸುತ್ತಮುತ್ತಲಿನ 7 ಕುಟುಂಬಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಮೂಲಗಳ ಪ್ರಕಾರ ಸೋಂಕಿತ ವ್ಯಕ್ತಿ ಇದ್ದ ಬಿಲ್ಡಿಂಗನ್ನು ಅಧಿಕಾರಿಗಳು ಸೀಝ್ ಮಾಡಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಿದ್ದಾರೆ.
ಆಸ್ಪತ್ರೆಗೇ ಬೀಗ ಜಡಿದ ಅಧಿಕಾರಿಗಳು
ಮುಂಬೈನ ಚೆಂಬೂರ್‍ನಲ್ಲಿರುವ ಸಾಯಿ ಆಸ್ಪತ್ರೆಗೆ ಶಂಕಿತ ಸೋಂಕಿತ ವ್ಯಕ್ತಿ ದಾಖಲಾಗಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಬಿಎಂಸಿ ಅಧಿಕಾರಿಗಳು ಖಾಸಗಿ ಸಾಯಿ ಆಸ್ಪತ್ರೆಗೆ ಬೀಗ ಜಡಿದಿದ್ದಾರೆ. ಕೊರೋನಾ ಸೋಂಕು ಶಂಕಿತ ರೋಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಸರ್ಕಾರಕ್ಕೆ ಮಾಹಿತಿ ನೀಡದ ಆರೋಪದ ಮೇರೆಗೆ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಬಿಎಂಸಿ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ಬೀಗ ಜಡಿದಿದ್ದು, ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಮತ್ತು ರೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಮತ್ತೋರ್ವ ರೋಗಿಯನ್ನು ಕಸ್ತೂರ ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.
2000 ಗಡಿಯತ್ತ ಸಾಗುತ್ತಿದೆ ಸೋಂಕಿತರ ಸಂಖ್ಯೆ
ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಸೋಂಕಿತರ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗುವ ಭೀತಿ ಎದುರಾಗಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 2 ಸಾವಿರ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಕೊರೋನಾ ವೈರಸ್ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಬರೊಬ್ಬರಿ 200ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ವೈದ್ಯಕೀಯ ವರದಿ ಬಳಿಕ ಇವರಿಗೆ ಸೋಂಕು ಇರುವ ಕುರಿತು ಮಾಹಿತಿ ಲಭ್ಯವಾಗಲಿದೆ. ಅಂತೆಯೇ ಅಸ್ಸಾಂನಲ್ಲಿ ಮತ್ತೆ 8 ಮಂದಿಗೆ ಸೋಂಕು ತಗುಲಿದ ಕುರಿತು ಮಾಹಿತಿ ಲಭ್ಯವಾಗಿದೆ, ಆಂಧ್ರಪ್ರದೇಶದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಪ್ರಸ್ತುತ ಭಾರತದಲ್ಲಿ 437 ಹೊಸ ಪ್ರಕರಣಗಳು ದಾಖಲಾಗಿದ್ದು ಆ ಮೂಲಕ ಸೋಂಕಿತರ ಸಂಖ್ಯೆ 1834ಕ್ಕೆ ಏರಿಕೆಯಾಗಿದ್ದು, ಈ ಪೈಕಿ 144 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
0 comments:
Post a Comment