ಸುಳ್ಳು ಹಾಗೂ ಕೋಮು ಪ್ರಚೋದಕ ಪೋಸ್ಟ್‍ಗಳು ಬಹಿಷ್ಕಾರ ಹಾಕುವ ಮಟ್ಟಕ್ಕೆ ಬೆಳೆದಿದೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆತಂಕ - Karavali Times ಸುಳ್ಳು ಹಾಗೂ ಕೋಮು ಪ್ರಚೋದಕ ಪೋಸ್ಟ್‍ಗಳು ಬಹಿಷ್ಕಾರ ಹಾಕುವ ಮಟ್ಟಕ್ಕೆ ಬೆಳೆದಿದೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆತಂಕ - Karavali Times

728x90

7 April 2020

ಸುಳ್ಳು ಹಾಗೂ ಕೋಮು ಪ್ರಚೋದಕ ಪೋಸ್ಟ್‍ಗಳು ಬಹಿಷ್ಕಾರ ಹಾಕುವ ಮಟ್ಟಕ್ಕೆ ಬೆಳೆದಿದೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆತಂಕ
ಸರಕಾರಿ ನೌಕರರ ವೇತನ ಕಡಿತ ಮಾಡಲೇಬಾರದು

ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‍ರಾಜ್ ಸಚಿವರು ಕಾಣೆಯಾಗಿದ್ದಾರೆ

ಸಹಕಾರಿ ಸಂಘ ಬಳಸಿಕೊಂಡು ರೈತರ ಹಿತ ಕಾಪಾಡಿ

ಖಾಸಗಿ ವೈದ್ಯರಿಗೆ ವಿಶೇಷ ಗುರುತು ಚೀಟಿ ನೀಡಿ ಸೇವೆಗೆ ಬಳಸಿಕೊಳ್ಳಬೇಕು

ಕಾಂಗ್ರೆಸ್ ಟಾಸ್ಕ್‍ಫೋರ್ಸ್ ಸಮಿತಿಯಿಂದ ಸರಕಾರಕ್ಕೆ ಸಲಹೆ


ಬೆಂಗಳೂರು (ಕರಾವಳಿ ಟೈಮ್ಸ್) : ಕೆಲವು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಮಾಡಿಕೊಂಡು ಕೊರೋನಾ ವಿಷಯದಲ್ಲಿ ಒಂದು ಕೋಮಿನ ವಿರುದ್ಧ ಅಪಪ್ರಚಾರ ಮಾಡಿ ಸಮಾಜದಲ್ಲಿ ಶಾಂತಿ ಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಊರುಗಳಲ್ಲಿ ಈ ಸಮುದಾಯದವರನ್ನು ಗಡಿಪಾರು ಮಾಡುವ ಹಾಗೂ ಸಾಮಾಜಿಕವಾಗಿ ಬಹಿಷ್ಕಾರ ಹಾಕುವ ಮಟ್ಟಕ್ಕೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿರುವ ಹೇಳಿಕೆಯನ್ನು ತಾವು ಅಭಿನಂದಿಸುತ್ತಿದ್ದು, ಕೊರೋನಾವನ್ನು ಕೋಮುವಾದಕ್ಕೆ ಬಳಸಿಕೊಳ್ಳಬಾರದೆಂಬ ಅವರ ಹೇಳಿಕೆ ಕೇವಲ ಮಾತಿಗೆ ಸೀಮಿತವಾಗಬಾರದು. ಅದು ಗ್ರಾಮ ಪಂಚಾಯಿತಿ ಮಟ್ಟಕ್ಕೂ ತಲುಪಬೇಕು. ಮುಖ್ಯಮಂತ್ರಿಗಳು ಹಾಗೂ ಅವರ ಪಕ್ಷದ ಹೆಸರು ಹೇಳಿಕೊಂಡೇ ಈ ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರ ಸೈಬರ್ ಕ್ರೈಂ ವಿಭಾಗವನ್ನು ಬಳಸಿಕೊಂಡು ಈ ರೀತಿ ಅಪಪ್ರಚಾರ ಮಾಡುತ್ತಿರುವವರನ್ನು ಪತ್ತೆ ಹಚ್ಚಬೇಕಿದೆ. ಇದರ ಜೊತೆಗೆ ಈ ಕೃತ್ಯ ಮಾಡಿದವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಈ ವಿಚಾರವಾಗಿ ಶೀಘ್ರದಲ್ಲಿ ಮುಖ್ಯಮಂತ್ರಿಗಳು ಸೂಚನೆ ಹೊರಡಿಸಬೇಕು, ಅಥವಾ ವಾಟ್ಸಪ್‍ಗಳಲ್ಲಿ ವಿಡಿಯೋ ಮೂಲಕ ಈ ರೀತಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದರು.

ಸರಕಾರಿ ನೌಕರರ ವೇತನ ಕಡಿತ ಮಾಡಲೇಬಾರದು


ಎಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿದರೆ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರ, ಸಿಬ್ಬಂದಿಗಳ ವೇತನ ಕಡಿತ ಮಾಡಬಾರದು. ಸರ್ಕಾರಿ ಸಿಬ್ಬಂದಿಗಳಿಗೆ ಸಂಬಳ ನೀಡದಿರುವಷ್ಟರ ಮಟ್ಟಿಗೆ ಸರ್ಕಾರಕ್ಕೆ ದಾರಿದ್ರ್ಯ ಬಂದಿಲ್ಲ. ಅವರಿಗೆ ಕೆಲಸ ಮಾಡಬೇಡಿ ಎಂದು ನಾವು ಹೇಳಿದ್ದೇವೆ. ಹೀಗಾಗಿ ಅವರ ಸಂಬಳ ನೀಡದಿರುವುದು ಸರಿಯಲ್ಲ. ಅವರು ಮನೆಯಲ್ಲೇ ಇದ್ದರೂ ಅವರಿಗೆ ಮನೆ ಬಾಡಿಗೆ, ಇಎಂಐ, ಸಾಲದ ಬಡ್ಡಿ ಸೇರಿದಂತೆ ಅನೇಕ ಖರ್ಚುಗಳಿವೆ. ಸರ್ಕಾರ ಬೇಕಾದರೆ ಕೆಲವು ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಿ. ಆ ದುಡ್ಡನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಿ. ಸದ್ಯ ಜನರು ನೆಮ್ಮದಿಯಾಗಿ ಉಸಿರಾಡಿ ಜೀವನ ನಡೆಸುವಂತೆ ಮಾಡುವುದು ಮುಖ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರ ವೇತನ ನಿಲ್ಲಿಸಬಾರದು ಎಂದು ಡಿಕೆಶಿ ಒತ್ತಾಯಿಸಿದರು.

ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‍ರಾಜ್ ಸಚಿವರು ಕಾಣೆಯಾಗಿದ್ದಾರೆ


ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಲಗಿದೆ. ಈ ಇಲಾಖೆ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಬೇಸಿಗೆ ಆರಂಭವಾಗಿದ್ದು, ಬರ ಎದುರಾಗುವ ಪರಿಸ್ಥಿತಿ ಇದೆ. ಈ ಹಂತದಲ್ಲಿ ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಇನ್ನು ನರೇಗಾ ಉದ್ಯೋಗ ಖಾತರಿ ಯೋಜನೆ ಮುಂದುವರಿಸಿ ದಿನಕ್ಕೆ 275 ರೂಪಾಯಿ ನೀಡುವುದಾಗಿ ಪ್ರಧಾನಮಂತ್ರಿಗಳೇ ತಿಳಿಸಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೆ ತಿಂಗಳಿಗೆ 8-9 ಸಾವಿರ ನೀಡಲು ಹಾಗೂ ಒಂದು ಪಂಚಾಯ್ತಿಯಲ್ಲಿ 4-5 ಕೋಟಿ ಖರ್ಚು ಮಾಡಲು ಅವಕಾಶವಿದೆ. ನನ್ನ ಕ್ಷೇತ್ರ ಕನಕಪುರದಲ್ಲಿ ಈ ಅನುದಾನವನ್ನು ಹೆಚ್ಚು ಬಳಸಿಕೊಂಡಿರುವುದಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಜನರು ವೈಯಕ್ತಿಕವಾಗಿ ಉದ್ಯೋಗ ಮಾಡಲು ಪಂಚಾಯ್ತಿ ಮಟ್ಟದಲ್ಲಿ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಯೋಜನೆಯಡಿ ಉದ್ಯೋಗ ಮಾಡಲು ಬರುವವರ ನೋಂದಣಿ ಮಾಡಿಕೊಂಡು, ಪರಿಶೀಲನೆ ನಡೆಸಿ ದುಡ್ಡು ಕೊಡುವುದಷ್ಟೇ ನಿಮ್ಮ ಕೆಲಸ. ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಮುಂದಿನ ಎರಡು ಮೂರು ದಿನಗಳಲ್ಲಿ ಸರ್ಕಾರ ಈ ಕೆಲಸ ಮಾಡದಿದ್ದರೆ ಕಾಂಗ್ರೆಸ್ ಪಕ್ಷದ ಪರವಾಗಿ ನಾನು ವಿಡಿಯೋ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

ಮುಂದಿನ ದಿನಗಳಲ್ಲಿ ಉದ್ಯೋಗ ಇಲ್ಲದೇ ಹಣ ಸಿಗದಿದ್ದರೆ ಜನ ಎಲ್ಲಿ ಕಳ್ಳತನದಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಇಳಿಯುತ್ತಾರೋ ಎಂಬ ಭಯ ಹುಟ್ಟಿಕೊಂಡಿದೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ಎಚ್ಚರಿಕೆ ವಹಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಇಲಾಖೆಯ ಕೆಲಸ ಎಂದು ಡಿಕೆ ಶಿವಕುಮಾರ್ ಸಲಹೆ ನೀಡಿದರು.

ಸಹಕಾರಿ ಸಂಘ ಬಳಸಿಕೊಂಡು ರೈತರ ಹಿತ ಕಾಪಾಡಿ


ನಮ್ಮಲ್ಲಿ ಹಾಲು ಒಕ್ಕೂಟ ಸೇರಿದಂತೆ ಅನೇಕ ಸಹಕಾರಿ ಸಂಸ್ಥೆಗಳು ಬಲಿಷ್ಠವಾಗಿದ್ದು, ಪ್ರತಿಯೊಂದು ಹಳ್ಳಿಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ. ಈ ಸಹಕಾರಿ ಸಂಘಗಳನ್ನು ಬಳಸಿಕೊಂಡು ರೈತರು ಬೆಳೆದ ಹಣ್ಣು, ತರಕಾರಿ, ಸೊಪ್ಪುಗಳನ್ನು ಸರ್ಕಾರ ಖರೀದಿಸಿ ಅವುಗಳನ್ನು ತಾಲೂಕು, ಜಿಲ್ಲಾ ಮಟ್ಟದ ನಗರಗಳಲ್ಲಿ ಗ್ರಾಹಕರಿಗೆ ಕೈಗೆಟಕುವ ಬೆಲೆಗೆ ಮಾರಾಟ ಮಾಡಬೇಕು. ಇದು ಲಾಭ ಮಾಡುವ ಕೆಲಸವಲ್ಲ. ಈ ಕೆಲಸ ಮಾಡಲು ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯೂ ಬೀಳುವುದಿಲ್ಲ. ಇನ್ನು ಶಿವಮೊಗ್ಗ ಹಾಗೂ ಮಲೆನಾಡು ಭಾಗಗಳಿಂದಲೂ ನನಗೆ ಹೆಚ್ಚಿನ ಕರೆ ಬರುತ್ತಿದ್ದು, ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಖಾಸಗಿ ವೈದ್ಯರಿಗೆ ವಿಶೇಷ ಗುರುತು ಚೀಟಿ ನೀಡಿ ಸೇವೆಗೆ ಬಳಸಿಕೊಳ್ಳಬೇಕು


ಇಂದು ವಿಶ್ವ ಆರೋಗ್ಯ ದಿನ. ಸದ್ಯ ವೈದ್ಯರು ನಮ್ಮ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಔಷಧ, ವೈದ್ಯಕೀಯ ಉಪಕರಣ ತಯಾರಕರಿಂದ ಹಿಡಿದು, ವೈದ್ಯರು, ನರ್ಸ್‍ಗಳಿಗೆ ಅಭಿನಂದನೆ ಸಲ್ಲಿಸಿ ಶುಭಕೋರುತ್ತೇನೆ. ಸದ್ಯ ಕೆಲವು ಆಸ್ಪತ್ರೆ ಕ್ಲಿನಿಕ್‍ಗಳನ್ನು ಮುಚ್ಚಲಾಗಿದೆ. ಹೀಗಾಗಿ ಅನೇಕ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಇಚ್ಛೆ ಇದ್ದರೂ ಮನೆಯಲ್ಲೇ ಸಿಲುಕಿದ್ದಾರೆ. ಇವರನ್ನು ಗುರುತಿಸಿ ಇವರಿಗೆ ವಿಶೇಷ ಕಾರ್ಡ್ ನೀಡಿ ಅವರು ಆರೋಗ್ಯ ಸೇವೆ ನೀಡಲು ಅವಕಾಶ ಮಾಡಿಕೊಡಬೇಕು. ಸರ್ಕಾರಿ ಆಸ್ಪತ್ರೆಗಳು ಕೇವಲ ಕೊರೋನಾ ಪ್ರಕರಣ ಮಾತ್ರ ನೋಡುವುದಾಗಿ ಹೇಳಿದ್ದು, ಬೇರೆ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಹೊತ್ತಲ್ಲಿ ಈ ವೈದ್ಯರ ಸೇವೆ ಬಳಸಿಕೊಳ್ಳಬೇಕು. ರಾಜ್ಯದಲ್ಲಿ ಯಾವುದೇ ವ್ಯಕ್ತಿಯೂ ಚಿಕಿತ್ಸೆ ಸಿಗದೇ ಸಾಯಬಾರದು ಎಂಬುದೇ ತಮ್ಮ ಕಾಳಜಿ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಟಾಸ್ಕ್‍ಫೋರ್ಸ್ ಸಮಿತಿಯಿಂದ ಸರಕಾರಕ್ಕೆ ಸಲಹೆ


ಕೆಪಿಸಿಸಿ ವತಿಯಿಂದ ಮಾಜಿ ಸಚಿವ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಟಾಸ್ಕ್‍ಫೆÇೀರ್ಸ್ ರಚನೆ ಮಾಡಲಾಗಿದ್ದು, ಈ ಸಮಿತಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಘೋಷಣೆಗಳು ಜನರಿಗೆ ತಲುಪುತ್ತಿದೆಯೇ, ವೈದ್ಯರಿಗೆ ಪಿಪಿಇ ಕಿಟ್ ಕೊರತೆ, ಪ್ರಯೋಗಾಲಯಗಳ ಕೊರತೆ ಸೇರಿದಂತೆ ಜನರ ಸಮಸ್ಯೆಗಳೇನು? ಎಂಬುದನ್ನು ಸ್ಥಳೀಯರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದೆ. ಈ ಬಗ್ಗೆ ನಿನ್ನೆ ಚರ್ಚೆ ಮಾಡಿದ್ದು, ಸರ್ಕಾರಕ್ಕೆ ಸಲಹೆಗಳ ಪಟ್ಟಿಯನ್ನು ನೀಡುತ್ತೇವೆ. ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದೇವೆ. ಕೊರೋನಾ ಸಮಸ್ಯೆ ಮುಗಿದ ನಂತರ ನಾವು ದೊಡ್ಡ ಆರ್ಥಿಕ ಸವಾಲು ಎದುರಿಸಬೇಕಾಗುತ್ತದೆ. ಐಟಿ ಕ್ಷೇತ್ರದಲ್ಲಿ ಶೇ.30ರಷ್ಟು ಉದ್ಯೋಗ ಕಡಿತ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ನಾವು ನಮ್ಮ ಐಟಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ವಿಶ್ವದಾದ್ಯಂತ ಜನರು ರಾಜ್ಯವನ್ನು ಗಮನಿಸುತ್ತಿದ್ದಾರೆ. ಉದ್ಯೋಗಿಗಳ ಜತೆಗೆ ಉದ್ಯೋಗದಾತರ ಹಿತಾಸಕ್ತಿಯನ್ನು ಕಾಪಾಡಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಎದುರಿಸಿ ರಾಜ್ಯ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದರ ಕುರಿತೂ ಮಾರ್ಗಸೂಚಿ ಸಿದ್ಧಪಡಿಸಲು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಅವರು ಸಂಚಾಲಕರಾಗಿ ಸಮತಿ ರಚಿಸಲಾಗಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಹೊಸ ಆರ್ಥಿಕ ನೀತಿಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ. ಕೈಗಾರಿಕೆ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರದ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ ಸ್ಥಾನದಲ್ಲಿ ಕೂತು ಕರ್ತವ್ಯ ನಿರ್ವಹಿಸುತ್ತಿದೆ ಎಂದು ಡಿಕೆಶಿ ಹೇಳಿದರು.

ಈ ಸಂದರ್ಭದಲ್ಲಿ ಸರ್ಕಾರದ ಸಚಿವರ ನಡುವಿನ ಅಸಮಾಧಾನ, ಸಿಂಧನೂರಿನ ಮಹಿಳೆ ಸಾವು ಪ್ರಕರಣಗಳನ್ನು ನಾವು ದೊಡ್ಡ ವಿವಾದ ಮಾಡಲು ಹೋಗುವುದಿಲ್ಲ. ಸರ್ಕಾರ ಈ ವಿಚಾರಗಳಲ್ಲಿ ಸೂಕ್ಷ್ಮವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡುವುದಾಗಿ ಶಿವಕುಮಾರ್ ಸರ್ಕಾರಕ್ಕೆ ತಿಳಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಸುಳ್ಳು ಹಾಗೂ ಕೋಮು ಪ್ರಚೋದಕ ಪೋಸ್ಟ್‍ಗಳು ಬಹಿಷ್ಕಾರ ಹಾಕುವ ಮಟ್ಟಕ್ಕೆ ಬೆಳೆದಿದೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆತಂಕ Rating: 5 Reviewed By: karavali Times
Scroll to Top