ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಶಾಲಾ-ಕಾಲೇಜುಗಳು ಎಂದಿನಂತೆ ಜೂನ್ ನಲ್ಲಿ ಆರಂಭವಾಗುವುದಿಲ್ಲ, ಆಗಸ್ಟ್ ನಿಂದ ಪ್ರಾರಂಭವಾಗುತ್ತವೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾದ ಬಗ್ಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ವರ್ಷ ಪಿಯುಸಿ, ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ ತೇರ್ಗಡೆ ಮಾಡುತ್ತಾರೆ, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸದಂತೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಸಲಹೆಗಳನ್ನು ನೀಡಿದೆ ಎಂದು ಕೆಲ ಸುದ್ದಿವಾಹಿನಿಗಳಲ್ಲಿ ನಿನ್ನೆ ಸುದ್ದಿಯಾಗಿತ್ತು.
ಮೇ ನಂತರವೂ ಕೊರೋನಾ ನಿಯಂತ್ರಣಕ್ಕೆ ಬರುವುದು ಅನುಮಾನ, ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಇನ್ನು ಮೂರೂವರೆ ತಿಂಗಳು ಆರಂಭವಾಗುವುದಿಲ್ಲ, ಆಗಸ್ಟ್ ಗೆ ಆರಂಭವಾಗುತ್ತವೆ ಎಂಬ ಸುದ್ದಿ ಸತ್ಯವಲ್ಲ, ಈ ರೀತಿಯ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಗೊಂಡಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಕೂಡಲೇ ಸಚಿವರು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿದ್ದು, ಕೆಲವು ಮಾಧ್ಯಮಗಳು ಇಂದೇ ಜಗತ್ತಿನ ಕಥೆ ಮುಗೀತು ಎಂಬ ಭಾವನೆ ತಂದರೆ, ಇನ್ನು ಕೆಲವು ಮಾಧ್ಯಮಗಳು ನಾಳೆಯೂ ಜಗತ್ತು ಮತ್ತು ನಾವು ಇರುತ್ತದೆ/ತ್ತೇವೆ ಎಂಬ ವಿಶ್ವಾಸ ತರುತ್ತವೆ ಎಂದು ಕೂಡ ಮಾರ್ಮಿಕವಾಗಿ ಹೇಳಿದ್ದಾರೆ.
ಇನ್ನು ಸಚಿವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಸುದ್ದಿ ಮಾಧ್ಯಮಗಳು ವಿಷಯಗಳ ನಿಖರತೆ, ಸತ್ಯ ತಿಳಿಯದೆ ಬೇಜವಬ್ದಾರಿಯಾಗಿ ಸುದ್ದಿಗಳನ್ನು ನೀಡಬಾರದು.ಇಂತಹ ಸುದ್ದಿಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
0 comments:
Post a Comment