ಶಅಬಾನ್ 18 : ತಾಜುಲ್ ಉಲಮಾ ಖುದುವತುಲ್ ಮುಹಖ್ಖಿಕೀನ್ ಶೈಖುನಾ ಸ್ವದಖತುಲ್ಲಾ ಉಸ್ತಾದ್ ಅನುಸ್ಮರಣೆ - Karavali Times ಶಅಬಾನ್ 18 : ತಾಜುಲ್ ಉಲಮಾ ಖುದುವತುಲ್ ಮುಹಖ್ಖಿಕೀನ್ ಶೈಖುನಾ ಸ್ವದಖತುಲ್ಲಾ ಉಸ್ತಾದ್ ಅನುಸ್ಮರಣೆ - Karavali Times

728x90

1 April 2020

ಶಅಬಾನ್ 18 : ತಾಜುಲ್ ಉಲಮಾ ಖುದುವತುಲ್ ಮುಹಖ್ಖಿಕೀನ್ ಶೈಖುನಾ ಸ್ವದಖತುಲ್ಲಾ ಉಸ್ತಾದ್ ಅನುಸ್ಮರಣೆ


ಶೈಖುನಾ ತಾಜುಲ್ ಉಲಮಾ ಖುದುವತುಲ್ ಮುಅಖ್ಖಿಕೀನ್ ಕೆ.ಕೆ. ಸದಕತುಲ್ಲಾ ಮೌಲವಿ (ನ.ಮ)  


ಶಅಬಾನ್ 17 ಎಂದಾಕ್ಷಣ ಓರ್ವ ಮಹಾಪುರುಷರ ಅನುಸ್ಮರಣೆ ಕೇರಳ, ಕರ್ನಾಟಕದಾದ್ಯಂತ ಪುಳಕಿತಗೊಳ್ಳುತ್ತದೆ. ಆ ಮಹಾನುಭಾವರೇ ಕೇರಳದ ವಂಡೂರಿನಲ್ಲಿ ಅಂತ್ಯವಿಶ್ರಮ ಹೊಂದುತ್ತಿರುವ ಶೈಖುನಾ ತಾಜುಲ್ ಉಲಮಾ ಖುದುವತುಲ್ ಮುಅಖ್ಖಿಕೀನ್ ಕೆ.ಕೆ. ಸದಕತುಲ್ಲಾ ಮೌಲವಿ (ನ.ಮ) ಮಹಾಪುರುಷರಾಗಿರುತ್ತಾರೆ. ಕೇರಳದಲ್ಲಿ ಸುನ್ನತ್ ಜಮಾಅತಿನ ಪಂಡಿತ ಶಿರೋಮಣಿಗಳ ಅಧಿಕೃತ ಸಂಘಟನೆಯಾದ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದಲ್ಲಿ ತನ್ನ 19ನೇ ವರ್ಷ ಪ್ರಾಯದಲ್ಲೇ ಸದಸ್ಯತ್ವವನ್ನು ಪಡೆದು ಪಂಡಿತ ಲೋಕದಲ್ಲಿ ಮಿಂಚಿನ ಸಂಚಾರ ಮೂಡಿಸಿದ ಓರ್ವ ಮಹಾನ್ ಮೇಧಾವಿ. ಅಂದಿನ ಸಮಸ್ತ ಅಧ್ಯಕ್ಷರಾದ ಪಾಂಞÂಲ ಅಹ್ಮದ್ ಕುಟ್ಟಿ ಮುಸ್ಲಿಯಾರ್‍ರವರು ಶೈಖುನಾ ತಾಜುಲ್ ಉಲಮಾ ಅವರ ಕಾಲಿನ ಪಾದದ ಸ್ವರೂಪವನ್ನು ನೋಡಿ 19ನೇ ವರ್ಷದ ಯುವ ಪ್ರಾಯದಲ್ಲೇ ಸಮಸ್ತ ಸದಸ್ಯತ್ವವನ್ನು ನೀಡಿದರು. ಶೈಖುನಾರವರ ಪಾದ ಎಲ್ಲರಂತೆ ನೆಲಕ್ಕೆ ಇಟ್ಟಾಗ ಅದು ಸೆಳೆ ಬಿಟ್ಟು ಕಾಣುತ್ತಿರಲಿಲ್ಲ. ಕಾಲಿನ ಪಾದ ನೆಲಕ್ಕಿಟ್ಟರೆ ಸಂಪೂರ್ಣವಾಗಿ ನೆಲಕ್ಕೆ ಸಮನಾಗಿ ನಿಲ್ಲುತ್ತಿತ್ತು. ಅಂದರೆ ಈ ಹುಡುಗ ಸಾಮಾನ್ಯನಲ್ಲ. ಒಂದು ವಿಷಯದಲ್ಲಿ ಒಂದು ನಿರ್ಧಾರವನ್ನು ತೆಗೆದುಕೊಂಡರೆ ಅದರಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದೆ ಅದನ್ನೇ ಅಚಲ ನಿರ್ಧಾರವಾಗಿ ಪಾಲಿಸುವ ಪರಿಪಾಠವನ್ನು ರೂಢಿಸಿಕೊಳ್ಳುವ ಸ್ವಭಾವವನ್ನು ಅರ್ಥೈಸಿದ ಪಾಂಞÂಲ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಅವರು ಅತ್ಯಂತ ಕಿರಿಯ ವಯಸ್ಸಿನ ಶೈಖುನಾ ತಾಜುಲ್ ಉಲಮಾರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದನ್ನು ಮನಗಂಡು ಉಲಮಾಗಳ ಸಂಘಟನೆಯಲ್ಲಿ ಪಾಲನ್ನು ನೀಡಿದರು.

1906 ರಲ್ಲಿ ಜನಿಸಿದ ತಾಜುಲ್ ಉಲಮಾ ಶೈಖುನಾ ಸ್ವದಖತುಲ್ಲಾ ಮೌಲವಿ ಅವರು 1985 ಮೇ 9 ರಂದು ಹಿಜರಿ ಶಕೆ 1406 ರ ಶಅಬಾನ್ ತಿಂಗಳ ಚಾಂದ್ 18 ರಂದು ಅಸರ್ ಬಳಿಕ ಮಹಾನರು ಈ ಐಹಿಕ ಲೋಕಕ್ಕೆ ವಿದಾಯ ಹೇಳಿದ್ದರು. ನಮ್ಮನ್ನಗಲಿ ಬರೋಬ್ಬರಿ ಮೂರೂವರೆ ದಶಕಗಳೇ ಕಳೆದರೂ ತಾಜುಲ್ ಉಲಮಾರ ಮಹಿಮೆ-ಪವಾಡಗಳನ್ನು ಹೇಳುವುದಾದರೆ ಅಪಾರವಾಗಿದೆ. 1921ರಲ್ಲಿ ಕೇರಳದಲ್ಲಿ ಬಿದಈ ಪ್ರಸ್ಥಾನ (ನೂತನವಾದ) ಸ್ಥಾಪನೆಗೊಂಡಾಗ ಕೇರಳದ ಪೆರಿಂದಲ್‍ಮನ್ನ ಎಂಬಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇರಳದ ಇತಿಹಾಸದಲ್ಲಿ ಐತಿಹಾಸಿಕವಾದ ಎಂಟು ಮಹಾ ಪಂಡಿತರುಗಳನ್ನೊಳಗೊಂಡ ಅಷ್ಟ ಪಂಡಿತ ಉಲಮಾ ಕಾನ್ಫರೆನ್ಸ್‍ವೊಂದನ್ನು ಕರೆಯಿತು. ಈ ಅಷ್ಟ ಪಂಡಿತ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಿದ ಮಹಾ ಮೇಧಾವಿ ಇಸ್ಲಾಮೀ ಪಂಡಿತರುಗಳಲ್ಲಿ ತಾಜುಲ್ ಉಲಮಾ ಶೈಖುನಾ ಸದಕತುಲ್ಲಾ ಮೌಲವಿ (ನ.ಮ) ಓರ್ವರಾಗಿದ್ದರು ಎಂದರೆ ಇವರ ಮೇಧಾವಿತ್ವವನ್ನು ಅರ್ಥೈಸಿಕೊಳ್ಳಲು ಹೆಚ್ಚೇನನ್ನೂ ಹೇಳಬೇಕಾದಂತಿಲ್ಲ. ಅದೇ ರೀತಿ 1953ರಲ್ಲಿ ಮೈಕ್‍ನಲ್ಲಿ (ಧ್ವನಿವರ್ದಕ ಬಳಸಿ) ಕುತುಬ, ಬಾಂಗ್ ನಿರ್ವಹಿಸುವ ಬಗ್ಗೆ ಪಂಡಿತರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದಾಗ ಫತ್ವಾಕ್ಕೆ ಆರಿಸಲ್ಪಟ್ಟ ಮೂವರು ಮಹಾ ಪಂಡಿತರುಗಳಾದ ಕುತುಬೀ, ಅಹ್ಮದ್ ಕೋಯ ಸ್ವಾಲಿಹಾತಿ ಸಾಲಿನಲ್ಲಿ ಮತ್ತೋರ್ವ ಪಂಡಿತ ತಾರೆ ತಾಜುಲ್ ಉಲಮಾ ಆಗಿದ್ದರು ಎಂಬುದು ಗಮನಾರ್ಹ.

ಇಸ್ಲಾಮೀ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಬಹಳಷ್ಟು ಸೂಕ್ಷ್ಮತೆಯನ್ನು ಪರಿಪಾಲಿಸುತ್ತಿದ್ದ ಶೈಖುನಾ ತಾಜುಲ್ ಉಲಮಾ ತಾನು ಜೀವನದಲ್ಲಿ ಅಳವಡಿಸಿದ್ದ, ಇಮಾಮಿಗಳ ನಡುವೆ ಭಿನ್ನಾಭಿಪ್ರಾಯವಿದ್ದ ಧ್ವನಿವರ್ಧಕ ಬಳಸಿ ಬಾಂಗ್, ಕುತುಬಾ ನಿರ್ವಹಣೆ ಎಂಬ ಸೂಕ್ಷ್ಮ ವಿಷಯದಲ್ಲಿ ಭಿನ್ನಾಭಿಪ್ರಾಯದಿಂದ ಮುಕ್ತಗೊಳ್ಳಲು  ಧ್ವನಿವರ್ದಕ ಬಳಸದೆ ಕೇವಲ ಬಾಯಿ ಮೂಲಕ ಬಾಂಗ್, ಕುತುಬಾ ನಿರ್ವಹಣೆ ಸರಿಯಾದ ಕ್ರಮವೆಂದು ನಂಬಿದ್ದ ಆಶಯಕ್ಕೆ ವಿರುದ್ದವಾಗಿ ಸಮಸ್ತ ಸಭೆ ತೀರ್ಮಾನವೊಂದನ್ನು ಕೈಗೊಂಡಾಗ ಶೈಖುನಾ ತಾಜುಲ್ ಉಲಮಾರವರು ಸಮಸ್ತಕ್ಕೆ ರಾಜೀನಾಮೆ ನೀಡಿ ಹೊರಬಂದರು. ಈ ರೀತಿಯಾಗಿ ಹೊರಬಂದ ಶೈಖುನಾ ಅದೇ ಹೆಸರಿನ ಮತ್ತೊಂದು ಸಮಸ್ತವನ್ನು ಹುಟ್ಟು ಹಾಕಲು ಹೊರಡಲಿಲ್ಲ. ಆದರೆ ಕ್ರಮೇಣ ತನ್ನ ಹಿಂಬಾಲಕರಾಗಿದ್ದ ಘಟಾನುಘಟಿ ಪಂಡಿತ ಮೇಧಾವಿಗಳು ನಮಗೂ ನಮ್ಮ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಸಂಘಟನೆಯೊಂದು ಅನಿವಾರ್ಯ ಎಂದು ಒತ್ತಾಯಪಡಿಸಿದಾಗ ಕೊನೆಗೆ ಕೇರಳ ಸಂಸ್ಥಾನ ಜಂ-ಇಯ್ಯತುಲ್ ಉಲಮಾ ಎಂಬ ಸಂಘಟನೆಯೊಂದಕ್ಕೆ ರೂಪ ನೀಡಿದರು. ಇದು ಇಂದು ಕೇರಳ, ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಏಕನಾಮ ಸಮಸ್ತಗಳಿಂದ ಸಮಾನ ದೂರದಲ್ಲಿ ನಿಂತು ಗುರುತಿಸಲ್ಪಡುತ್ತಿದೆ.

ಶೈಖುನಾರವರು ಯಾವುದಾದರೊಂದು ವಿಷಯದಲ್ಲಿ ಒಂದು ನಿರ್ಧಾರವನ್ನು ತಳೆದರೆ ಅದರಿಂದ ಹಿಂದೆ ಸರಿಯುವುದಾಗಲೀ, ಅಥವಾ ಅದನ್ನು ತಿದ್ದಿ ಮರು ನಿರ್ಧಾರವನ್ನು ಪ್ರಕಟಿಸಿದ ಉದಾಹರಣೆಗಳೇ ತನ್ನ ಜೀವಮಾನದಲ್ಲಿ ಘಟಿಸಿಲ್ಲ ಎಂದರೆ ಅವರು ಶರಈ ಸಂಬಂಧವಾಗಿ ಎಷ್ಟೊಂದು ಆಳವಾದ ಪಾಂಡಿತ್ಯವನ್ನು ಕರಗತ ಮಾಡಿಕೊಂಡಿದ್ದರು ಎಂಬುದನ್ನು ಮನನ ಮಾಡಿಕೊಳ್ಳಬಹುದು. ಅಲ್ಲದೆ ಶೈಖುನಾ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಒಂದು ಫತ್ವಾ ಹೊರಡಿಸಿದರೆ ಕರ್ನಾಟಕ, ಕೇರಳದಾದ್ಯಂತ ಇದ್ದ ಘಟಾನುಘಟಿ ಉಲಮಾ ಪಾಮರರು ಅದರ ಬಗ್ಗೆ ಅಪಸ್ವರವಾಗಲೀ, ಸದ್ರಿ ಫತ್ವಾ ಸರಿಯಾಗಿಲ್ಲ ಎಂದಾಗಲೀ ಇದುವರೆಗೆ ಪ್ರತಿಪಾದಿಸಿದ್ದಿಲ್ಲ ಎಂಬುದು ಶೈಖುನಾ ತಾಜುಲ್ ಉಲಮಾ ರವರ ಘನ ಪಾಂಡಿತ್ಯವನ್ನು ಎತ್ತಿ ಹಿಡಿಯುತ್ತದೆ.

    ಸರ್ವ ಉಲಮಾ ದಿಗ್ಗಜರಿಂದಲೂ ಪ್ರಶಂಸೆಗೆ, ಗೌರವಕ್ಕೆ ಪಾತ್ರರಾದ ಶೈಖುನಾ ತಾಜುಲ್ ಉಲಮಾರನ್ನು ಘಟಾನುಘಟಿ ವಿದ್ವಾಂಸರು ಅವರಾಗಿಯೇ ಸ್ವತಃ ಶೈಖುನಾರನ್ನು ಕಂಡು ಪುಳಕಿತಗೊಳ್ಳಲು ತವಕಿಸುತ್ತಿದ್ದರು. ಇದಕ್ಕೊಂದು ಉದಾಹರಣೆಯೆಂಬಂತೆ ಶೈಖುನಾ ತಾಜುಲ್ ಉಲಮಾ ತಲಕ್ಕಡತ್ತೂರಿನಲ್ಲಿ ದರ್ಸ್ ನಡೆಸುತ್ತಿದ್ದ ವೇಳೆ ವಲಿಯ್ಯ್ ಎಂದೇ ಸುಪ್ರಸಿದ್ದರಾಗಿದ್ದ ಆಲುವಾಯಿ ಮಾಡವನ ಅಬೂಬಕ್ಕರ್ ಮುಸ್ಲಿಯಾರ್ ಅವರು ಶೈಖುನಾ ದರ್ಸ್ ನಡೆಸುತ್ತಿದ್ದ ಮಸೀದಿಗೆ ಸ್ವತಃ ಬಂದು ಕಂಡಿದ್ದರು. ಈ ಸಂದರ್ಭ ಮಧುಮೇಹ ರೋಗಿಯಾಗಿದ್ದ ಶೈಖುನಾ ತಾಜುಲ್ ಉಲಮಾರಿಗೆ ಸಕ್ಕರೆ ಹಾಕಿದ ಚಹಾವನ್ನೇ ಕುಡಿಸಿ ತೆರಳಿದ್ದರು. ಅಂದಿನಿಂದ ವಲಿಯ್ಯ್ ಅವರ ಕರಾಮತ್ ಎಂಬಂತೆ ಶೈಖುನಾ ಅವರ ಮಧುಮೇಹ ರೋಗ ಸಂಪೂರ್ಣ ವಾಸಿಯಾಗಿದ್ದು, ಬಳಿಕ ಮರಣದವರೆಗೂ ಶೈಖುನಾ ತಾಜುಲ್ ಉಲಮಾ ಸಕ್ಕರೆ ಹಾಕಿದ ಚಹಾವನ್ನೇ ಸೇವಿಸಿ ಜೀವನ ಸಾಗಿಸಿದ್ದರು. ಅದೇ ರೀತಿ ಶೈಖುನಾ ಕಕ್ಕಿಡಿಪುರಂ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಶೈಖ್ ಮಡವೂರು ವಲಿಯುಲ್ಲಾಹ್ ಅವರೂ ಶೈಖುನಾ ತಾಜುಲ್ ಉಲಮಾ ಅವರನ್ನು ಸಂದರ್ಶಿಸಿ ಬರುತ್ತಿದ್ದರು ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ. 

    ಇಂತಹ ಮಹಾನುಭಾವರ ಅನುಸ್ಮರಣೆ ಶಅಬಾನ್ ತಿಂಗಳ 18ನೇ ಚಾಂದ್ ಆಗಿರುತ್ತದೆ. ಅಲ್ಲಾಹನು ಗೌರವಿಸಿದ ಪವಿತ್ರ ಮಾಸ ಶಅಬಾನ್ ತಿಂಗಳಲ್ಲಿ ಅಲ್ಲಾಹನ ಇಷ್ಟದಾಸರಲ್ಲೊಬ್ಬರಾದ ಶೈಖುನಾ ತಾಜುಲ್ ಉಲಮಾ ಅಲ್ಲಾಹನ ಪಾದವನ್ನು ಸೇರಿದುದರಿಂದ ಸದ್ರಿ ಮಾಸದಲ್ಲಿ ಕೇರಳದಾದ್ಯಂತ ಶೈಖುನಾ ತಾಜುಲ್ ಉಲಮಾರವರ ಅನುಸ್ಮರಣಾ ಸಮ್ಮೇಳನಗಳು ನಡೆಯುತ್ತದೆ. ಆದರೆ ಈ ಬಾರಿ ಕೊರೋನಾ ವೈರಸ್ ಮಾರಕವಾಗಿ ವ್ಯಾಪಿಸಿರುವುದರಿಂದ ಶೈಖುನಾರವರ ಅನುಸ್ಮರಣಾ ಸಮ್ಮೇಳನಗಳು ನಡೆಯುವುದು ಸಮಶಯವಾಗಿದ್ದು, ಎಲ್ಲೆಡೆಯೂ ಶೈಖುನಾರ ಗುಣಗಾನ ಹಾಗೂ ಮನಸ್ಸಿನಂತರಾಳದ ಅನುಸ್ಮರಣೆಗಳು ನಿತ್ಯ-ನಿರಂತರವಾಗಿ ಪುಳಕಿತಗೊಳ್ಳುತ್ತಲೇ ಇರುತ್ತದೆ. ಆಧ್ಯಾತ್ಮಿಕ ಮಹಾನುಭಾವರ ಆಶಯಾದರ್ಶಗಳನ್ನು ಜೀವನದಲ್ಲಿ ಪಾಲಿಸಿ ಇಹ-ಪರ ವಿಜಯದ ಹಾದಿಯಲ್ಲಿ ಸಾಗಲು ನಮಗೆಲ್ಲರಿಗೂ ಅಲ್ಲಾಹನು ತೌಫೀಕ್ ನೀಡಲಿ ಆಮೀನ್ ಯಾರಬ್ಬಲ್ ಆಲಮೀನ್.
  • Blogger Comments
  • Facebook Comments

0 comments:

Post a Comment

Item Reviewed: ಶಅಬಾನ್ 18 : ತಾಜುಲ್ ಉಲಮಾ ಖುದುವತುಲ್ ಮುಹಖ್ಖಿಕೀನ್ ಶೈಖುನಾ ಸ್ವದಖತುಲ್ಲಾ ಉಸ್ತಾದ್ ಅನುಸ್ಮರಣೆ Rating: 5 Reviewed By: karavali Times
Scroll to Top