ಬೆಂಗಳೂರು (ಕರಾವಳಿ ಟೈಮ್ಸ್) : ನಗರದ ಕೆಲವು ಬಿಜೆಪಿ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಜಾತಿ-ಧರ್ಮಗಳನ್ನು ವಿಚಾರಿಸಿ ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಸಿದ ಹೊಟ್ಟೆಗಳಿಗೆ ಈ ಸಂದರ್ಭದಲ್ಲಿ ಆಹಾರ ಮುಖ್ಯವೇ ಹೊರತು ಜಾತಿ, ಧರ್ಮ ಊರುಗಳಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಈ ಕುರಿತು ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರುಗಳ ಗಮನಕ್ಕೆ ತಂದಿರುವ ಅವರು, ಆಹಾರ ಸಾಮಗ್ರಿ ವಿತರಣೆ ಹೊಣೆಯನ್ನು ಹಲವು ಕಡೆ ಬಿಜೆಪಿ, ಆರ್ ಎಸ್ಎಸ್ ಗೆ ಸೇರಿದ ಸಂಸ್ಥೆಗಳಿಗೆ ನೀಡುತ್ತಿದೆ ಎಂಬ ಆರೋಪಗಳು ಸಹ ಬಂದಿವೆ. ಈ ಮೂಲಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಭದ್ರತಾ ಮಂಡಳಿಯ ನಿಧಿಯಲ್ಲಿನ 8 ಸಾವಿರ ಕೋಟಿ ರೂಪಾಯಿಗಳನ್ನು ಈ ಸಂಸ್ಥೆಗಳಿಗೆ ಧಾರೆಯೆರೆಯಲು ಸರ್ಕಾರ ಹೊರಟಂತಿದೆ ಎಂದವರು ಆರೋಪಿಸಿದ್ದಾರೆ.
ಕಾರ್ಮಿಕ ಇಲಾಖೆಯ ಆಹಾರ ವಿತರಣೆಯ ಯೋಜನೆಯಲ್ಲಿ ಕಾರ್ಮಿಕರ ಜೊತೆ ಸಂಬಂಧ ಇಲ್ಲದ ಸಂಸ್ಥೆಗಳಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಹಿಂದಕ್ಕೆ ಪಡೆದು ಇಂದಿರಾ ಕ್ಯಾಂಟೀನ್ ಮೂಲಕ ಅಧಿಕೃತ ಕಾರ್ಮಿಕ ಸಂಘಗಳ ಸಹಯೋಗದೊಡನೆ ಮುಂದುವರೆಸಬೇಕೆಂದು ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
0 comments:
Post a Comment