ಮೇ 17 ರ ಬಳಿಕ ಪದವಿ ಪರೀಕ್ಷೆಗಳ ನಿರ್ಧಾರ
ಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ಲಾಕ್‍ಡೌನ್‍ನಿಂದ ಪದವಿ ವಿದ್ಯಾರ್ಥಿಗಳ ಶಿಕ್ಷಣ ಮತ್ತಷ್ಟು ವಿಳಂಬವಾಗದಂತೆ ನೋಡಿಕೊಳ್ಳುವ ಸಲುವಾಗಿ ಪದವಿ ತರಗತಿಗಳ ಪಠ್ಯಕ್ರಮವನ್ನು ಆನ್‍ಲೈನ್‍ನಲ್ಲಿ ಮುಂದುವರಿಸಿ, ಮೇ 30ರೊಳಗೆ ಪೂರ್ಣಗೊಳಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರಾಗಿರುವ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ್‌ನಾರಾಯಣ್ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಶನಿವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದ ಡಿಸಿಎಂ, ಪದವಿ ಪರೀಕ್ಷೆಗಳ ಕುರಿತು ಮೇ 17ರ ನಂತರ ಮತ್ತೊಮ್ಮೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಲ್ಲಾ ಪ್ರಾಧ್ಯಾಪಕರು ಕಾಲೇಜಿಗೆ ಬಂದು ಆನ್‍ಲೈನ್ ಮೂಲಕ ಪಾಠ, ಪ್ರವಚನ ಮಾಡಬೇಕು. ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರು ಕಾಲೇಜಿಗೆ ಬರುತ್ತಿದ್ದು, ಖಾಸಗಿ ಕಾಲೇಜಿನವರೂ ಈ ಕ್ರಮ ಪಾಲಿಸಬೇಕು. ಮೇ 30ರೊಳಗೆ ಪ್ರಥಮ, ದ್ವಿತೀಯ ಹಾಗೂ ಅಂತಿಮ ವರ್ಷದ ಪದವಿ ತರಗತಿಗಳ ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.
ಕೊರೊನಾ ಲಾಕ್‍ಡೌನ್‍ನಿಂದ ಪದವಿ ಪರೀಕ್ಷೆ ಕುರಿತು ಇರುವ ಗೊಂದಲ ನಿವಾರಣೆ ಆಗಿಲ್ಲ. ಮಹಾರಾಷ್ಟ್ರ ಮಾದರಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ತರಗತಿಗೆ ತೇರ್ಗಡೆ ಮಾಡಬಹುದು ಎಂಬ ಸಲಹೆ ಕೇಳಿಬಂದಿದೆ. ಆದರೆ ಈ ಬಗ್ಗೆ ಮೇ 17ರ ನಂತರ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಏಕರೂಪ ಪಠ್ಯಕ್ರಮ
ಈ ಮಧ್ಯೆ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಜಾರಿಗೊಳಿಸಲು ಉದ್ಧೇಶಿಸಿರುವ ಏಕರೂಪದ ಪಠ್ಯಕ್ರಮದ ಬಗ್ಗೆ 15 ದಿನದೊಳಗೆ ವರದಿ ಸಲ್ಲಿಸುವಂತೆ ಅಶ್ವತ್ಥ್‌ನಾರಾಯಣ್ ಸೂಚಿಸಿದರು.
ಏಕರೂಪ ಪಠ್ಯಕ್ರಮದ ಸಂಬಂಧ ಈಗಾಗಲೇ ಐದು ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಯು ಉನ್ನತ ಶಿಕ್ಷಣದ ವಿಷನ್‍ಗ್ರೂಪ್ ಅಡಿ ರಚಿಸಿರುವ ಟಾಸ್ಕ್ ಫೋರ್ಸ್ ಜೊತೆ ಚರ್ಚಿಸಿ, ಅಂತಿಮ ವರದಿ ಸಲ್ಲಿಸಬೇಕು. ಅದನ್ನು ಆಧರಿಸಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಡೀನ್‍ಗಳು, ಸಿಂಡಿಕೇಟ್ ಸದಸ್ಯರು, ವಿಷಯ ತಜ್ಞರು, ಕೈಗಾರಿಕೋದ್ಯಮಿಗಳು ಹಾಗೂ ಅಗತ್ಯಬಿದ್ದಲ್ಲಿ ವಿದೇಶಿ ತಜ್ಞರೊಡನೆ ಚರ್ಚಿಸಿ ‘ಏಕರೂಪ ಪಠ್ಯಕ್ರಮ’ದ ರೂಪುರೇಷೆ ಸಿದ್ಧವಾಗಲಿದೆ. ಈ ಪ್ರಕ್ರಿಯೆ ತ್ವರಿತವಾದರೆ ಮುಂದಿನ ವರ್ಷದಿಂದಲೇ ಏಕರೂಪ ಪಠ್ಯಕ್ರಮ ಜಾರಿಗೊಳಿಸಲು ಅನುಕೂಲವಾಗುತ್ತದೆ ಎಂದರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್ ಸಿದ್ದೇಗೌಡ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ ಹೇಮಂತ್ ಕುಮಾರ್, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಾಮಚಂದ್ರಗೌಡ, ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್ ವಿದ್ಯಾಶಂಕರ್ ಅವರನ್ನೊಳಗೊಂಡ ಸಮಿತಿಯು ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಲಿದೆ.
ಮೌಲ್ಯಮಾಪನ ವ್ಯವಸ್ಥೆ ಸುಧಾರಣೆ
ಇದರ ಜೊತೆಗೆ ಪದವಿ ಶಿಕ್ಷಣದ ಮೌಲ್ಯ ಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಸಂಬಂಧ ಸೋಮವಾರದೊಳಗೆ ಸಮಿತಿ ರಚಿಸಿ, ಆ ಸಮಿತಿ ಮುಂದಿನ 15 ದಿನದೊಳಗೆ ತನ್ನ ವರದಿ ಸಲ್ಲಿಸಬೇಕು ಎಂದು ಡಿಸಿಎಂ ಸೂಚಿಸಿದರು.
ಖಾಸಗಿ ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯದ ಕುಲಪತಿಗಳು, ಉನ್ನತ ಶಿಕ್ಷಣ ಪರಿಷತ್‍ನ ಕಾರ್ಯನಿರ್ವಾಯಹಕ ನಿರ್ದೇಶಕ ಡಾ.ಎಸ್.ಎ ಕೋರಿ, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು.
0 comments:
Post a Comment