ಫಿತ್ರ್ ಝಕಾತ್ ಹಾಗೂ ಈದ್ ನಮಾಝ್ - Karavali Times ಫಿತ್ರ್ ಝಕಾತ್ ಹಾಗೂ ಈದ್ ನಮಾಝ್ - Karavali Times

728x90

18 May 2020

ಫಿತ್ರ್ ಝಕಾತ್ ಹಾಗೂ ಈದ್ ನಮಾಝ್ಸಂಪತ್ತಿನ ಝಕಾತ್‍ನಂತೆ ಶರೀರದ ಝಕಾತ್ ಆಗಿರುವ ಫಿತ್‍ರ್ ಝಕಾತ್‍ಗೂ ಇಸ್ಲಾಮಿನಲ್ಲಿ ಮಹತ್ವದ ಸ್ಥಾನಮಾನ ಕಲ್ಪಿಸಲಾಗಿದೆ. ಹಿಜ್‍ರಾ 2ನೇ ವರ್ಷ ಈದುಲ್ ಫಿತ್ರ್‍ನ ಎರಡು ದಿನ ಮೊದಲು ಫಿತ್ರ್ ಝಕಾತ್ ಕಡ್ಡಾಯವಾಯಿತು. ಉಪವಾಸಿಗರ ಉಪವಾಸದ ಪೂರ್ಣತೆಗೆ ಫಿತ್ರ್ ಝಕಾತ್ ನೀಡುವುದು ಅತ್ಯಗತ್ಯ. ಫಿತ್ರ್ ಝಕಾತ್‍ನ್ನು ಝಕಾತುಲ್ ಬದನ್, ಝಕಾತುಲ್ ರಮಳಾನ್, ಝಕಾತುಸ್ಸೌಮ್ ಮೊದಲಾದ ವಿವಿಧ ನಾಮಗಳಿಂದ ಪ್ರಸ್ತಾಪಿಸಲ್ಪಟ್ಟಿದೆ. 
 
    ಫಿತ್ರ್ ಝಕಾತ್‍ನ ಮಹತ್ವವನ್ನು ತಿಳಿಸುವ ಹಲವು ಹದೀಸ್‍ಗಳು ಉದ್ದರಿಸಲ್ಪಟ್ಟಿವೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು, ‘ಫಿತ್ರ್ ಝಕಾತ್ ಎಲ್ಲ ಅನಗತ್ಯ ಕಾರ್ಯಗಳಿಂದಲೂ ಉಪವಾಸಿಗನಿಗೆ ಶುದ್ದತೆಯನ್ನು ನೀಡುತ್ತದೆ’. ರಮಳಾನ್ ತಿಂಗಳ ಉಪವಾಸ ಆಕಾಶ-ಭೂಮಿ ಮಧ್ಯೆ ಬಂಧಿಸಲ್ಪಟ್ಟಿರುತ್ತದೆ. ಅದನ್ನು ಫಿತ್ರ್ ಝಕಾತ್ ಇಲ್ಲದೆ ಮೇಲ್ಭಾಗಕ್ಕೆ ಎತ್ತಲ್ಪಡುವುದಿಲ್ಲ. ಇಮಾಂ ಶಾಫಿಈ (ರ) ರವರು ಹೇಳಿದರು, ‘ಫಿತ್ರ್ ಝಕಾತ್ ನಮಾಝ್‍ನ ಸಹ್‍ವಿನ ಸುಜೂದ್‍ನ ಸ್ಥಾನದಲ್ಲಿ ನಿಲ್ಲುತ್ತದೆ. ನಮಾಝ್‍ನಲ್ಲಿ ಬರುವ ಸಣ್ಣಪುಟ್ಟ ನ್ಯೂನ್ಯತೆಗಳನ್ನು ಸಹ್‍ವಿನ ಸುಜೂದಿನಿಂದ ಪರಿಹರಿಸಲ್ಪಡುವಂತೆ ಉಪವಾಸದ ಅಲ್ಪ-ಸ್ವಲ್ಪ ಕೊರತೆಗಳು ಫಿತ್ರ್ ಝಕಾತಿನಿಂದ ಪರಿಹರಿಸಲ್ಪಡುತ್ತದೆ.

    ರಮಳಾನಿನ ಕೊನೆಯ ನಿಮಿಷ ಮತ್ತು ಶವ್ವಾಲಿನ ಪ್ರಾರಂಭ ನಿಮಿಷಗಳಲ್ಲಿ ಒಬ್ಬ ಬದುಕಿದ್ದರೆ ಅವನ ಮೇಲೆ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ. ರಮಳಾನಿನ ಕೊನೆಯ ನಿಮಿಷದಲ್ಲಿ ಅರ್ಧ ಭಾಗ ಮತ್ತು ನಂತರ ಅರ್ಧ ಭಾಗ ಹೊರ ಬಂದು ಹೆರಿಗೆಯಾಗಲ್ಪಟ್ಟ ಮಗುವಿಗೆ ಝಕಾತ್ ಕಡ್ಡಾಯವಿಲ್ಲ. ರಮಳಾನ್ ಸಮಾಪ್ತಿಗೊಳ್ಳುವ ಹಗಲಿನ ಸೂರ್ಯಾಸ್ತಕ್ಕಿಂತ ಮುಂಚೆ ಅಥವಾ ನಂತರ ಹೆತ್ತದ್ದೋ ಎಂದು ಸಂಶಯಿಸಲ್ಪಟ್ಟ ಮಗುವಿನ ಮೇಲೆ ಫಿತ್ರ್ ಝಕಾತ್ ಕಡ್ಡಾಯವಿಲ್ಲ. ಆದರೆ ಸೂರ್ಯಾಸ್ತಕ್ಕಿಂತ ಮುಂಚೆ ಅಥವಾ ನಂತರ ಮರಣ ಹೊಂದಿದ್ದಾರೆ ಎಂಬ ವಿಷಯದಲ್ಲಿ ಸಂದೇಹ ಬಂದರೆ ಆ ವ್ಯಕ್ತಿಯ ಮೇಲೆ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ.

ಯಾವಾಗ ಕಡ್ಡಾಯ

    ಸ್ವಯಂ ಸಾಲ, ಅವನು ಮತ್ತು ಅವನು ಖರ್ಚು ನೀಡಲು ನಿರ್ಬಂಧವಿರುವವರಿಗೆ ಅನಿವಾರ್ಯವಾದ ವಸ್ತ್ರ, ವಸತಿ ಸೌಕರ್ಯ ಮತ್ತು ಪೆರ್ನಾಳಿನ ರಾತ್ರಿ ಹಗಲಿಗೆ ಸಾಕಾಗುವ ಆಹಾರ, ಪಾನೀಯಗಳ ಹೊರತು ಏನಾದರೂ ಅವನ ಬಳಿ ಬಾಕಿಯಿದ್ದರೆ ಅವನ ಮೇಲೆ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ. ಖರ್ಚು ನೀಡಲು ಕಡ್ಡಾಯವಾದವರು ಎಂಬ ಪಟ್ಟಿಯಲ್ಲಿ ಮನುಷ್ಯರು ಮಾತ್ರವಲ್ಲ ಜಾನುವಾರುಗಳೂ ಕೂಡಾ ಒಳಪಡುತ್ತದೆ. ಶವ್ವಾಲ್ ಆಗಮನ ಸಮಯದಲ್ಲಿ ಝಕಾತ್ ನೀಡಲು ಅರ್ಹತೆಯಿಲ್ಲದ ವ್ಯಕ್ತಿಗೆ ಪೆರ್ನಾಳ್ ಸೂರ್ಯಾಸ್ತಕ್ಕಿಂತ ಮುಂಚಿತವಾಗಿ ಅರ್ಹತೆಯುಂಟಾದರೆ ಝಕಾತ್ ನೀಡುವುದು ಅವನಿಗೆ ಸುನ್ನತ್ತಾಗುತ್ತದೆ.

ಫಿತ್ರ್ ಝಕಾತ್ ನೀಡಬೇಕಾದ ಸಮಯ

    ರಮಳಾನಿನ ಮೊದಲ ರಾತ್ರಿಯ ಆರಂಭದಲ್ಲಿಯೇ ಫಿತ್ರ್ ಝಕಾತ್ ನೀಡುವುದು ಅನುವದನೀಯ. ಆದರೆ ಹಾಗೆ ನೀಡಬಾರದೆಂದು ಹೇಳುವವರ ಅಭಿಪ್ರಾಯಗಳನ್ನು ಪರಿಗಣಿಸಿ ರಮಳಾನ್ ಆರಂಭದಲ್ಲಿ ನೀಡದಿರುವುದೇ ಉತ್ತಮ. ಇನ್ನು ಹಾಗೆ ನೀಡಿದರೆ ನೀಡಿದ ವ್ಯಕ್ತಿ ಶವ್ವಾಲ್ ಆರಂಭದಲ್ಲಿ ನೀಡಲು ಅರ್ಹತೆಯಿರುವವನಾಗಿರಬೇಕು. ಅದೇ ರೀತಿ ನೀಡಲ್ಪಟ್ಟ ವ್ಯಕ್ತಿ ಪಡೆಯಲು ಅರ್ಹನಾಗಿರಬೇಕು.

    ಫಿತ್ರ್ ಝಕಾತ್ ನೀಡಲು ನಿಂತರೆ ಪೆರ್ನಾಳ್ ನಮಾಝಿನ ಜಮಾಅತ್ ನಷ್ಟ ಹೊಂದುತ್ತದೆಯೆಂಬ ಭಯವಿದ್ದರೆ ಅಲ್ಲಿ ಜಮಾಅತ್‍ಗೆ ಪ್ರಾಮುಖ್ಯತೆ ನೀಡಬೇಕು. ಆದರೆ ಝಕಾತ್ ಪಡೆಯುವವರಿಗೆ ಧಾನ್ಯದ ತುರ್ತು ಅಗತ್ಯವಿದ್ದರೆ ಅಂತಹ ಸಂದರ್ಭದಲ್ಲಿ ಜಮಾಅತ್‍ಗಿಂತ ಫಿತ್ರ್ ಝಕಾತ್‍ಗೆ ಆದ್ಯತೆ ನೀಡಬೇಕು.

ಫಿತ್ರ್ ಝಕಾತನ್ನು ಮುಂದೂಡಬಹುದೇ?

    ಪೆರ್ನಾಳ್ ನಮಾಝಿಗಿಂತ ಮೊದಲು ಝಕಾತ್ ನೀಡುವುದು ಸುನ್ನತ್. ನಮಾಝ್‍ನ ಬಳಿಕ ನೀಡುವುದು ಕರಾಹತ್. ಇನ್ನು ಕುಟುಂಬಿಕರು, ನೆರೆಮನೆಯವರು ಅಥವಾ ಸಜ್ಜನರಿಗೆ ನೀಡಲೋಸ್ಕರ ಪೆರ್ನಾಲಿನ ಸೂರ್ಯಾಸ್ತಮಾನದ ತನಕವೂ ಹಿಂದೂಡಬಹುದು. ಅದು ಸುನ್ನತ್ ಕೂಡಾ ಆಗಿರುತ್ತದೆ. ವಿನಾ ಕಾರಣ ಪೆರ್ನಾಳ್ ದಿನಕ್ಕಿಂತ ಮುಂದೂಡುವುದು ನಿಷಿದ್ದವಾಗಿದೆ.

ಆಶ್ರಿತರ ಝಕಾತ್

    ತಂದೆ ಮತ್ತು ತಂದೆಯ ಪತ್ನಿಯ ಖರ್ಚು ನೀಡಲು ಕಡ್ಡಾಯವಾದ ಮಕ್ಕಳಿಗೆ ತಂದೆಯ ಪತ್ನಿಯ ಫಿತ್ರ್ ಝಕಾತ್ ನೀಡಲು ಕಡ್ಡಾಯವಿಲ್ಲ. ವ್ಯಭಿಚಾರದಿಂದ ಉಂಟಾದ ಮಕ್ಕಳ ಝಕಾತನ್ನು ಅವರ ತಾಯಂದಿರು ನೀಡಬೇಕು.

    ಪೆರ್ನಾಳ್‍ನ ರಾತ್ರಿ ಹಗಲಿಗೆ ಬೇಕಾದ ಆಹಾರ ಪದಾರ್ಥಗಳು ಕೈವಶವಿರುವ ಮಗನ ಫಿತ್ರ್ ಝಕಾತ್ ನೀಡಲು ತಂದೆಗೆ ಕಡ್ಡಾಯವಿಲ್ಲ. ಅದೇ ರೀತಿ ಈ ರೂಪದಲ್ಲಿರುವ ತಂದೆಯ ಝಕಾತ್ ನೀಡಲು ಮಗನಿಗೂ ಕಡ್ಡಾಯವಿಲ್ಲ. ಇನ್ನು ಅವರು ನೀಡುವುದಾದರೆ ಪರಸ್ಪರ ಸಮ್ಮತಿ ಪ್ರಕಾರವಲ್ಲದೆ ನೀಡುವಂತಿಲ್ಲ.

    ಪತ್ನಿಯ ಫಿತ್ರ ಝಕಾತ್ ನೀಡಲು ಪತಿಗೆ ಸಾಧ್ಯವಿಲ್ಲದಿದ್ದರೆ ಅವಳಿಗೆ ಸ್ವತಃ ತನ್ನ ಫಿತ್ರ್ ಝಕಾತ್ ಸಂದಾಯ ಮಾಡುವುದು ಸುನ್ನತ್ತಾಗಿದೆ. ಅದೇ ರೀತಿ ತನ್ನ ಫಿತ್ರ್ ಝಕಾತ್ ಇತರರ ಮೇಲೆ ಕಡ್ಡಾಯವಾಗಿದ್ದು, ಅದನ್ನವರು ನೀಡುತ್ತಿಲ್ಲವಾದರೆ ಸ್ವತಃ ಅದನ್ನು ನೀಡುವುದು ಪ್ರತಿಯೊಬ್ಬರಿಗೂ ಪ್ರತ್ಯೇಕ ಸುನ್ನತ್ತಾಗಿದೆ.

    ಫಿತ್ರ್ ಝಕಾತ್ ನೀಡಲು ಸಾಧ್ಯವಿರುವ ಸಣ್ಣ ಮಕ್ಕಳ ಝಕಾತನ್ನು ಅವರ ಸೊತ್ತಿನಿಂದಲೇ ಅವರ ರಕ್ಷಕರ್ತನು ನೀಡಬೇಕು. ಇನ್ನು ಸಾಧ್ಯವಿರುವ ಸಣ್ಣ ಮಗನ ಝಕಾತನ್ನು ತಂದೆಯು ಸ್ವತಃ ತನ್ನ ಸಂಪತ್ತಿನಿಂದಲೇ ಸಂದಾಯ ಮಾಡಿದ್ದರೆ ಬಳಿಕ ಇವನಿಗೆ ಮಗನ ಸೊತ್ತಿನಿಂದ ಅದನ್ನು ಹಿಂದಕ್ಕೆ ಪಡೆಯಬಹುದು. ಆದರೆ ಝಕಾತ್ ನೀಡುವಾಗ ನಾನು ಮರಳಿ ಪಡೆಯುತ್ತೇನೆಂಬ ಸಂಕಲ್ಪ ಮಾಡಿರಬೇಕು.

ನೀಡಬೇಕಾದ ಫಿತ್ರ್ ಝಕಾತ್‍ನ ಪ್ರಮಾಣ

    ಒಂದು ಸ್ವಾಅï ಅಥವಾ ನಾಲ್ಕು ಮುದ್ದ್ ಫಿತ್ರ್ ಝಕಾತ್ ನೀಡಬೇಕು. ಒಂದು ಮುದ್ದ್ ಅಂದರೆ ಸಾಧಾರಣವಾಗಿ ಮಿತ ರೂಪದಲ್ಲಿರುವ ಎರಡು ಕೈಗಳನ್ನು ಹಿಡಿದು ಒಂದು ಸಲ ಮೊಗೆದು ತೆಗೆದರೆ ಅದರಲ್ಲಿ ಹಿಡಿಯುವಷ್ಟು ಅಥವಾ ಒಂದು ಬೊಗಸೆ. ತೂಕ ಪ್ರಕಾರ ಮುದ್ದ್ ಅಂದರೆ 650 ಗ್ರಾಂ. ನಾಲ್ಕು ಮುದ್ದ್ ಆಗುವಾಗ 2 ಕಿಲೋ 600 ಗ್ರಾಂ ಆಗುತ್ತದೆ. ಅಳತೆ ಪ್ರಕಾರ ಒಂದು ಮುದ್ದ್ ಅಂದರೆ 800 ಮಿ.ಲೀ.  ಹಾಗಾದರೆ ಒಂದು ಸ್ವಾಅï ಅಂದರೆ ಸುಮಾರು 3200 ಮಿ.ಲೀ. ಆಗುತ್ತದೆ.

    ಇನ್ನು ಒಂದು ಸ್ವಾಅï ನೀಡಲು ಸಾಧ್ಯವಿಲ್ಲ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ನೀಡಲು ಆತನ ಬಳಿ ಇರುವುದಾದರೆ ತನ್ನಲ್ಲಿ ಇದ್ದಷ್ಟನ್ನು ನೀಡಬೇಕು. ತಾನು ಖರ್ಚು ನೀಡುವ ಎಲ್ಲರ ಝಕಾತ್ ನೀಡಲು ಸಾಧ್ಯವಿಲ್ಲದವನು ಯಥಾಕ್ರಮ ಸ್ವಶರೀರ, ಪತ್ನಿ, ಪ್ರಾಯಪೂರ್ತಿಯಾಗದ ಮಕ್ಕಳು, ತಂದೆ, ತಾಯಿ, ಕೆಲಸವಿಲ್ಲದ ಅಥವಾ ಬಡವರಾದ ಪ್ರಾಯಪೂರ್ತಿಯಾದ ತನ್ನ ಮಕ್ಕಳು ಹೀಗೆ ಕ್ರಮಪ್ರಕಾರವಾಗಿ ನೀಡಲು ಸಾಧ್ಯವಿರುವಷ್ಟು ಮಂದಿಯ ಫಿತ್ರ ಝಕಾತ್ ನೀಡಬೇಕು.

ಖರ್ಚು ನೀಡಲು ತನ್ನ ಮೇಲೆ ಕಡ್ಡಾಯವಿಲ್ಲದವನ ಝಕಾತ್ ತಾನು ನೀಡಬಹುದೇ?

    ಈ ರೀತಿ ನೀಡುವುದರಿಂದ ಝಕಾತ್ ಸಂದಾಯವಾಗುತ್ತದೆ. ಆದರೆ ಅವನ ಸಮ್ಮತಿ ಬೇಕು. ಸಮ್ಮತಿ ಪ್ರಕಾರ ಅವನ ಝಕಾತ್ ಸಂದಾಯ ಮಾಡುವಾಗ ಒಂದೋ ಆ ವ್ಯಕ್ತಿ ನಿಯ್ಯತ್‍ಗೈಯಬೇಕು. ಅಲ್ಲದಿದ್ದರೆ ನಿಯ್ಯತ್ತಿನ ಪರಮಾಧಿಕಾರವನ್ನು ಅವನು ಝಕಾತ್ ನೀಡುವವನಿಗೆ ವಹಿಸಿಕೊಟ್ಟಿರಬೇಕು.

ಫಿತ್ರ್ ಝಕಾತಾಗಿ ನೀಡಲು ಯೋಗ್ಯ ಧಾನ್ಯಗಳು

    ರಮಳಾನ್ ಸಮಾಪ್ತಿ ಮತ್ತು ಶವ್ವಾಲ್ ಆರಂಭ ನಿಮಿಷಗಳಲ್ಲಿ ಫಿತ್ರ್ ಝಕಾತ್ ಕಡ್ಡಾಯವಾದವನು ಎಲ್ಲಿರುವುದೋ ಆ ಊರಿನಲ್ಲಿ ಸಾಮಾನ್ಯವಾಗಿ ಅಲ್ಲಿನ ಬಡ ಜನತೆ ಸ್ವೀಕರಿಸಿರುವ ಮುಖ್ಯ ಆಹಾರ ಧಾನ್ಯವನ್ನೇ ಫಿತ್ರ್ ಝಕಾತ್ ಆಗಿ ನೀಡಬೇಕು. ಝಕಾತ್ ಸಂದಾಯ ಮಾಡುವವನು ವಿವಿಧ ಅನ್ನಾಹಾರಗಳನ್ನು ಆ ಸಮಯದಲ್ಲಿ ಸೇವಿಸುತ್ತಿದ್ದಾನೆ ಎಂಬುದಕ್ಕೆ ಇಲ್ಲಿ ಮಹತ್ವವಿಲ್ಲ. ಧಾನ್ಯಕ್ಕೆ ಬದಲಾಗಿ ಅದರ ಮೌಲ್ಯವನ್ನು ನೀಡಿದರೆ ಝಕಾತ್ ಸಂದಾಯವಾಗಲಾರದು. ಫಿತ್ರ್ ಝಕಾತ್ ಕಡ್ಡಾಯವಾದ ಸಮಯದಲ್ಲಿ ಝಕಾತ್ ಸಂದಾಯ ಮಾಡುವವನು ಎಲ್ಲಿರುವನೋ ಆ ಊರಿನ ಜನತೆಗೇ ಝಕಾತನ್ನು ಹಂಚಬೇಕು.

ಝಕಾತ್‍ನ ಅವಕಾಶಿಗಳು

    ಬಡವರು, ನಿರ್ಗತಿಕರು, ನವ ಮುಸ್ಲಿಮರು, ಸಾಲಗಾರರು, ಯಾತ್ರಿಕರು. ಅವಕಾಶಿಗಳ ಪೈಕಿ ಈ ಐದು ವಿಭಾಗವನ್ನೇ ಇಂದು ಅಧಿಕ ಸ್ಥಳಗಳಲ್ಲೂ ಕಾಣ ಸಿಗುವುದು. ಫಿತ್ರ್ ಝಕಾತ್ ವಿತರಿಸಲ್ಪಡುವ ಊರಿನಲ್ಲಿ ಮೇಲೆ ಪ್ರಸ್ತಾಪಿಸಲ್ಪಟ್ಟ ವಿಭಾಗಗಳಿಂದ ಯಾರೆಲ್ಲಾ ಇದ್ದಾರೋ ಅವರಿಗೆಲ್ಲಾ ನೀಡಬೇಕು. ಝಕಾತ್‍ನ ಅವಕಾಶಿಗಳಾಗಿರುವ ಉಳಿದ ಮೂರು ವಿಭಾಗಗಳೆಂದರೆ : 1. ಝಕಾತನ್ನು ಶೇಖರಿಸುವವರು ಅಥವಾ ಆ ಕಾರ್ಯದಲ್ಲಿ ದುಡಿಯುವ ಕಾರ್ಮಿಕರು. 2. ಯೋಧರು 3. ದಾಸರು.

ಎಷ್ಟು ಮಂದಿಗೆ ಝಕಾತ್ ನೀಡಬೇಕು?

    ಝಕಾತಿನ ಅವಕಾಶಿಗಳಿಂದ ಯಾವುದಾದರೂ ಒಂದು ವಿಭಾಗದಲ್ಲಿನ ಮೂರು ಮಂದಿಗೆ ನೀಡಿದರೆ ಸಾಕೆಂದೂ, ಅಥವಾ ಅವಕಾಶಿಗಳಲ್ಲಿನ ಯಾವುದಾದರೂ ಒಬ್ಬ ವ್ಯಕ್ತಿಗೆ ನೀಡಿದರೆ ಸಾಕೆಂದೂ ಹೇಳುವ ಎರಡು ಬಗೆಯ ಅಭಿಪ್ರಾಯಗಳು ಶಾಫಿಈ ಮದ್ಸ್‍ಹಬ್‍ನ ವಿದ್ವಾಂಸರಲ್ಲಿ ಕಾಣಬಹುದು. ಒಬ್ಬ ವ್ಯಕ್ತಿಗೆ ನೀಡಿದರೆ ಸಾಕೆಂಬುದು ಇತರ ಮೂರು ಮದ್ಸ್‍ಹಬ್‍ಗಳ ಒಟ್ಟಾಭಿಪ್ರಾಯ.

ಪ್ರಾರ್ಥನೆ

    ಝಕಾತ್ ಸ್ವೀಕರಿಸುವವನು ಅದನ್ನು ತನಗೆ ನೀಡಿದ ವ್ಯಕ್ತಿಗೆ ಬೇಕಾಗಿ ಈ ರೀತಿ ಪ್ರಾರ್ಥಿಸಲು ಸುನ್ನತ್ತಿದೆ. ‘ನೀಡಿದರಲ್ಲಿ ಅಲ್ಲಾಹನು ನಿಮಗೆ ಪ್ರತಿಫಲ ನೀಡಲಿ. ಈ ಝಕಾತನ್ನು ಅಲ್ಲಾಹು ತಮಗೆ ಶುದ್ದಿಯನ್ನಾಗಿಸಲಿ. ಬಾಕಿಯಿರುವುದರಲ್ಲಿ ಅಲ್ಲಾಹನು ನಿಮಗೆ ಸಮೃದ್ದಿಯನ್ನು ನೀಡಲಿ’.

    ಝಕಾತ್ ಸಂದಾಯ ಮಾಡಿದ ಬಳಿಕ ಮಾಲಿಕನು ಹೀಗೆ ಪ್ರಾರ್ಥಿಸಲು ಸುನ್ನತ್ತಿದೆ : ‘ನಮ್ಮ ರಕ್ಷಕರ್ತಾ! ನಮ್ಮಿಂದ ನೀನು ಸ್ವೀಕರಿಸು. ನೀನು ಕೇಳುವವನೂ, ಅರಿಯುವವನೂ ಆಗಿರುವಿ’.

    ಫಿತ್ರ್ ಝಕಾತ್ ನೀಡಲ್ಪಟ್ಟ ವ್ಯಕ್ತಿಯಿಂದ ಅದನ್ನು ನೀಡಿದವನು ಬೆಲೆ ಕೊಟ್ಟು ಖರೀದಿಸುವುದು ಕರಾಹತ್ತಾಗಿದೆ. ‘ಇವನು ವಾಂತಿ ಮಾಡಿದ್ದನ್ನು ಪುನಃ ತಿನ್ನುವ ನಾಯಿಗೆ ಸಮಾನ’ ಎಂದು ಹದೀಸ್‍ಗಳು ಉಲ್ಲೇಖಿಸಿವೆ.

    ಫಿತ್ರ್ ಝಕಾತ್ ಎಂಬುದು ಈ ಸಮುದಾಯಕ್ಕೆ ಅಲ್ಲಾಹನು ನೀಡಿದ ಪ್ರತ್ಯೇಕ ಸತ್ಕರ್ಮವಾಗಿದೆ. ಒಬ್ಬನು ಫಿತ್ರ್ ಝಕಾತ್ ನೀಡಿದ ಬಳಿಕ ನಿಯ್ಯತ್ (ಸಂಕಲ್ಪ) ವಿಷಯದಲ್ಲಿ ಸಂಶಯಪಟ್ಟು (ಝಕಾತ್ ನೀಡುವಾಗ ನಾನು ನಿಯ್ಯತ್ ಮಾಡಿದ್ದೇನೇಯೋ, ಇಲ್ಲವೋ ಎಂದು) ನಾನು ನಿಯ್ಯತ್‍ಗೈದಿದ್ದೇನೆಂದು ಅವನಿಗೆ ಕಾಲಕ್ರಮೇಣ ತಿಳಿದರೆ ಪುನಃ ಝಕಾತ್ ನೀಡಬೇಕೆಂದಿಲ್ಲ. ಇಲ್ಲದಿದ್ದರೆ ಪುನಃ ಸಂಕಲ್ಪಿಸಿ ಫಿತ್ರ್ ಝಕಾತ್ ನೀಡಬೇಕು.

    ಝಕಾತನ್ನು ಸಣ್ಣ ಮಕ್ಕಳಿಗೂ ಪಡೆಯಬಹುದು. ಪ್ರಾಯ ಪೂರ್ತಿಯಾಗಬೇಕೆಂಬ ನಿಬಂಧನೆಯಿಲ್ಲ. ಆದರೆ ಸಣ್ಣ ಮಕ್ಕಳಿಗೆ ಲಭಿಸುವ ಝಕಾತನ್ನು ಅವರ ರಕ್ಷಕರ್ತರು ಸ್ವೀಕರಿಸಬೇಕು.

ಪೆರ್ನಾಳ್ ನಮಾಝ್

    ಮುಸ್ಲಿಂ ಸಮೂಹಕ್ಕೆ ಅಲ್ಲಾಹನು ನೀಡಿದ ಎರಡು ಈದ್ ಹಬ್ಬಗಳ ದಿನಗಳಲ್ಲಿ ಹಲವು ಒಳಿತುಗಳನ್ನು ಮಾಡಬೇಕಿದೆ. ದಾನ ಧರ್ಮ ನೀಡುವುದು, ತಕ್ಬೀರ್ ಹೆಚ್ಚುಸುವುದು, ಪ್ರತ್ಯೇಕವಾಗಿ ಎರಡು ರಕ್‍ಅತ್ ಈದ್ ನಮಾಝ್ ನಿರ್ವಹಿಸುವುದು ಆ ದಿನದ ಪ್ರಮುಖ ಆರಾಧನೆಯಾಗಿದೆ. ಕೆಲವೊಂದು ವೈಶಿಷ್ಟ್ಯತೆಗಳನ್ನು ಹೊರತುಪಡಿಸಿದರೆ ಈ ನಮಾಝ್ ಇತರ ನಮಾಝ್‍ಗಳಂತೆ ನಿರ್ವಹಿಸಲ್ಪಡುತ್ತದೆ. ಈದ್ ನಮಾಝ್ ಪ್ರಬಲ ಸುನ್ನತ್ತಾಗಿದೆ. ಫರ್ಲ್ ಕಿಫಾಯ (ಸಾಮೂಹ್ಯ ಬಾಧ್ಯತೆ) ಎಂಬ ಅಭಿಪ್ರಾಯ ಕೂಡಾ ಇದೆ. ಹಿಜ್‍ರ 2ನೇ ವರ್ಷದ ಈದುಲ್ ಫಿತ್ರ್‍ನಂದು ಪ್ರಥಮವಾಗಿ ಈದ್ ನಮಾಝನ್ನು ನಿರ್ವಹಿಸಲಾಯಿತು.

    ಪೆರ್ನಾಲ್ ನಮಾಝನ್ನು ಜಮಾಅತ್ತಾಗಿ ನಿರ್ವಹಿಸಲು ಸುನ್ನತ್ತಿದೆ. ಹಾಜಿಗಳಿಗೆ ಬಲಿ ಪೆರ್ನಾಲ್ ನಮಾಝನ್ನು ಏಕಾಂಗಿಯಾಗಿ ನಿರ್ವಹಿಸುವುದೇ ಉತ್ತಮ. ಅಗತ್ಯವಿಲ್ಲದೆ ಒಂದಕ್ಕಿಂತ ಹೆಚ್ಚು ಈದ್ ಜಮಾಅತನ್ನು ನಡೆಸುವುದು ಕರಾಹತ್ತಾಗಿದೆ.

    ಈ ಬಾರಿ ಕೋವಿಡ್-19 ವೈರಸ್‍ನಿಂದಾಗಿ ಮಸೀದಿಗಳು ಬಂದ್ ಆಗಿರುವ ಹಿನ್ನಲೆಯಲ್ಲಿ ಸರಕಾರದ ಆದೇಶದಂತೆ ಹಾಗೂ ಮೊಹಲ್ಲಾ ಖಾಝಿಗಳ ತೀರ್ಮಾನದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿಯೇ ಈದ್ ನಮಾಝ್ ನಿರ್ವಹಿಸಬೇಕಾಗಿದೆ. ಸುಬ್‍ಹಿ ನಮಾಝ್ ಬಳಿಕ ಸೂರ್ಯೋದಯದ ಬಳಿಕ ಸೂರ್ಯ ಸುಮಾರು ಏಳು ಗೇಣುದ್ದ ಮೇಲೇರಿದ ಬಳಿಕ ಅಂದರೆ ಸುಮಾರು 20 ನಿಮಿಷಗಳ ಬಳಿಕ ಪೆರ್ನಾಳ್ ನಮಾಝ್ ನಿರ್ವಹಿಸಬಹುದಾಗಿದೆ.

    ಮನೆಯಲ್ಲೇ ಪ್ರತಿಯೊಬ್ಬರೂ ಎರಡು ರಕಅತ್ ಪೆರ್ನಾಳ್ ನಮಾಝ್ ನಿರ್ವಹಿಸಬೇಕು, ಇಮಾಂ ಜಮಾಅತ್ ಸಾಧ್ಯವಾದರೆ ಹಾಗೆ ನಿರ್ವಹಿಸಬಹುದು. ಸಾಮಾನ್ಯ ಸುನ್ನತ್ ನಮಾಝ್‍ಗಳಿಗಿಂತ ಈದ್ ನಮಾಝ್ ಸ್ವಲ್ಪ ಭಿನ್ನವಾಗಿದೆಯಷ್ಟೆ. ಇತರ ನಮಾಝ್‍ಗಳಂತೆ ಕಡ್ಡಾಯ ಕರ್ಮಗಳನ್ನು, ಐಚ್ಚಿಕ ಕರ್ಮಗಳನ್ನು ಇಲ್ಲಿಯೂ ಪಾಲಿಸಲ್ಪಡುತ್ತದೆ. ‘ಈದುಲ್ ಫಿತ್ರ್ ನಮಾಝನ್ನು ನಾನು ನಿರ್ವಹಿಸುತ್ತೇನೆ’ ಎಂದು ಸಂಕಲ್ಪಿಸಿ ನಮಾಝಿಗೆ ಪ್ರವೇಶಿಸಬೇಕು. ನಂತರ ಸಾಧಾರಣ ನಮಾಝಿನಂತೆ ‘ವಜ್ಜಹ್ತು’ ಓದಬೇಕು. ಬಳಿಕ ಏಳು ತಕ್ಬೀರ್‍ಗಳನ್ನು ಹೇಳಬೇಕು. ಪ್ರತಿಯೊಂದು ತಕ್ಬೀರ್‍ನೆಡೆಯಲ್ಲಿ ‘ಸುಬ್‍ಹಾನಲ್ಲಾಹ್, ವಲ್‍ಹಂದುಲಿಲ್ಲಾಹಿ ವಲಾಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್’ ಎಂಬ ದ್ಸಿಕ್ರನ್ನು ಹೇಳುವುದು ಸುನ್ನತ್ತಿದೆ.

    ಏಳು ತಕ್ಬೀರ್‍ಗಳು ಮುಗಿದ ಬಳಿಕ ಫಾತಿಹಾ ಓದಬೇಕು. ಎರಡನೇ ರಕ್‍ಅತ್‍ನಲ್ಲಿ ಫಾತಿಹಾಕ್ಕಿಂತ ಮೊದಲು ಐದು ತಕ್ಬೀರ್ ಉಚ್ಚರಿಸಬೇಕು. ಪ್ರತೀ ತಕ್ಬೀರ್‍ನೆಡೆಯಲ್ಲಿ ಮೇಲಿನ ದ್ಸಿಕ್ರನ್ನು ಪುನರಾವರ್ತಿಸಬೇಕು.

    ಇಮಾಂ ನಿಶ್ಚಿತ ತಕ್ಬೀರ್‍ಗಳಿಗಿಂತ ಕಡಿಮೆ ತಕ್ಬೀರ್ ಹೇಳಿದರೆ ಮಅಮೂಮಿಗೆ ಅವನನ್ನು ಅನುಸರಿಸಬೇಕೆಂದಿಲ್ಲ. ಪೂರ್ಣವಾಗಿ ಎಲ್ಲಾ ತಕ್ಬೀರ್‍ಗಳನ್ನು ಹೇಳಬಹುದು. ಇಮಾಂ ನಿಶ್ಚಿತ ತಕ್ಬೀರ್‍ಗಳಿಗಿಂತ ಹೆಚ್ಚು ಹೇಳಿದರೆ ಮಅಮೂಮ್ ಅಲ್ಲೂ ಅವನನ್ನು ಅನುಸರಿಸಬೇಕೆಂದಿಲ್ಲ. ಕಾರಣ ಏಳು ಮತ್ತು ಐದಕ್ಕಿಂತ ಅಧಿಕಗೊಳಿಸಲು ಯಾವುದೇ ಸೂಚನೆ ಇಲ್ಲ. ಇನ್ನು ಅಧಿಕ ತಕ್ಬೀರ್‍ಗಳಲ್ಲಿ ಅವನನ್ನು ಅನುಸರಿಸಿದರೆ ಮಅಮೂಮಿನ ನಮಾಝಿಗೆ ಧಕ್ಕೆಯೂ ಇಲ್ಲ. 

ಖಳಾ ಆದರೆ?

    ಪೆರ್ನಾಳ್ ನಮಾಝ್ ಖಳಾ ಆದರೆ ಅದನ್ನು ಖಳಾ ಪೂರೈಸುವ ಸಮಯದಲ್ಲಿ ಮೇಲೆ ವಿವರಿಸಿದ ರೂಪದಲ್ಲಿ ತಕ್ಬೀರ್ ಸಹಿತ ನಿರ್ವಹಿಸಬೇಕು. ಕಾರಣ ಪೆರ್ನಾಳ್ ನಮಾಝ್‍ನ ತಕ್ಬೀರ್ ಸಮಯದ ಚಿಹ್ನೆಯಲ್ಲ. ಅದು ನಮಾಝ್‍ನ ಪ್ರತ್ಯೇಕತೆಯಾಗಿದೆ. ಎಲ್ಲಾ ತಕ್ಬೀರ್‍ಗಳಲ್ಲೂ ಕೈ ಮೇಲಕ್ಕೆತ್ತಿ ಕಟ್ಟಬೇಕು. ಎರಡು ರಕಅತಿನಲ್ಲಿರುವ ಈ ತಕ್ಬೀರ್‍ಗಳು ಸುನ್ನತ್ತೇ ಹೊರತು ಕಡ್ಡಾಯವಲ್ಲ. ಮರೆತರೆ ಸುಜೂದ್‍ನಿಂದ ಪರಿಹರಿಸಲ್ಪಡುವ ‘ಅಬ್‍ಆಳ್’ ಸುನ್ನತ್ ಕೂಡಾ ಅಲ್ಲ. ತಕ್ಬೀರ್‍ಗಳನ್ನು ಉಪೇಕ್ಷಿಸುವುದು ಮತ್ತು ನಿಶ್ಚಿತ ತಕ್ಬೀರ್‍ಗಳಿಗಿಂತ ಹೆಚ್ಚು ಹೇಳುವುದು ಕರಾಹತ್ತಾಗಿದೆ. ಒಂದನೇ ರಕ್‍ಅತ್‍ನಲ್ಲಿ ಏಳು ತಕ್ಬೀರ್‍ಗಳನ್ನು ಉಪೇಕ್ಷಿಸಿದರೆ ಅದನ್ನು ಎರಡನೇ ರಕ್‍ಅತ್‍ನಲ್ಲಿ ಹೇಳುವಂತಿಲ್ಲ.

ತಕ್ಬೀರ್ ಮರೆತರೆ?

    ತಕ್ಬೀರ್‍ಗಳನ್ನು ಹೇಳಲು ಮರೆತು ಫಾತಿಹಾದಲ್ಲಿ ಪ್ರವೇಶಿಸಿದರೆ ಬಳಿಕ ಮತ್ತೆ ತಕ್ಬೀರ್‍ಗೆ ಮರಳುವಂತಿಲ್ಲ.  ಫಾತಿಹಾದಲ್ಲಿ ಪ್ರವೇಶಿಸುವುದರೊಂದಿಗೆ ತಕ್ಬೀರ್‍ನ ಪುಣ್ಯವು ನಷ್ಟ ಹೊಂದುತ್ತದೆ. ತಕ್ಬೀರ್ ಹೇಳದೆ ‘ಅಊದ್ಸ್’ ಮಾತ್ರ ಓದಿದ್ದಾದರೆ ಬಳಿಕ ತಕ್ಬೀರನ್ನು ಉಚ್ಚರಿಸಬಹುದು. ಇಮಾಂ ತಕ್ಬೀರ್ ಹೇಳದೆ ಫಾತಿಹಾದಲ್ಲಿ ಪ್ರವೇಶಿಸಿದರೂ ಮಅಮೂಮನಿಗೆ ತಕ್ಬೀರ್‍ನ ಪುಣ್ಯವು ನಷ್ಟವಾಗುತ್ತದೆ. ತಕ್ಬೀರ್‍ಗಳನ್ನು ಇಮಾಂ ಮತ್ತು ಮಅಮೂಮ್ ಜೋರಾಗಿ ಹೇಳಬೇಕು.

ಸೂರತ್

    ಪ್ರಥಮ ರಕ್‍ಅತ್‍ನಲ್ಲಿ ಸೂರತುಲ್ ಖಾಫ್ ಮತ್ತು ಎರಡನೇ ರಕ್‍ಅತ್‍ನಲ್ಲಿ ಸೂರತ್ ಇಖ್‍ತರಬ ಓದಲು ಸುನ್ನತ್ತಿದೆ. ಸೂರತು ಸಬ್ಬಿಹಿಸ್ಮ, ಸೂರತುಲ್ ಹಲ್ ಅತಾಕ ಅದೇ ರೀತಿ ಸೂರತುಲ್ ಕಾಫಿರೂನ ಮತ್ತು ಸೂರತುಲ್ ಇಖ್ಲಾಸನ್ನೂ ಓದಬಹುದು. ಈ ಸೂರಾ ಕಂಠಪಾಠ ಇಲ್ಲದವರು ಕಂಠಪಾಠ ಇರುವ ಬೇರೆ ಸೂರಾಃ ಪಠಿಸಿದರೂ ಸಾಕು.

ಈದ್ ಖುತ್ಬಾ 


    ಪೆರ್ನಾಳ್ ನಮಾಝ್ ನಿರ್ವಹಣೆಯ ಬಳಿಕ ಎರಡು ಖುತ್ಬಾ ಓದಲು ಸುನ್ನತ್ತಿದೆ. ಜುಮುಅ ಖುತ್ಬಾದಂತೆ ಕಡ್ಡಾಯ ಮತ್ತು ಐಚ್ಚಿಕ ಕಾರ್ಯಗಳನ್ನು ಇಲ್ಲೂ ಪಾಲಿಸಬೇಕು. ಹಂದ್, ಸ್ವಲಾತ್, ತಕ್ವಾದ ವಸಿಯ್ಯತ್ ಎರಡೂ ಖುತ್ಬಾಗಳಲ್ಲಿರಬೇಕು. ಯಾವುದಾದರೊಂದರಲ್ಲಿ ಆಯತೊಂದನ್ನು ಓದಬೇಕು. ಎರಡನೇ ಖುತ್ಬಾದಲ್ಲಿ ವಿಶ್ವಾಸಿಗಳಿಗೆ ಪ್ರಾರ್ಥಿಸಬೇಕು.

    ನಿಲ್ಲುವಿಕೆ, ಖುತ್ಬಾಗಳೆಡೆಯಲ್ಲಿನ ಕುಳಿತ, ಶುದ್ದಿ, ಔರತ್ ಮುಚ್ಚುವಿಕೆ ಯಾವುದೂ ಪೆರ್ನಾಳ್ ಖುತ್ಬಾಕ್ಕೆ ಕಡ್ಡಾಯವಿಲ್ಲ. ಇದೆಲ್ಲವೂ ಸುನ್ನತ್ ಮಾತ್ರ. ಆಯತ್ ಓದುವ ವೇಳೆ ಅವನು ಹಿರಿಯ ಅಶುದ್ದಿಯುಳ್ಳವನಾಗಿದ್ದರೆ ಅವನ ಖುತ್ಬಾ ಅಸಿಂಧುವಾಗುತ್ತದೆ.

    ಖುತ್ಬಾ ಅರಬಿ ಭಾಷೆಯಲ್ಲಾಗಿರಬೇಕು, ಖುತ್ಬಾದ ಸ್ಥಳದಲ್ಲಿ ಹಾಜರಿರುವವರಿಗೆ ಕೇಳುವಂತಿರಬೇಕು. ಆದರೆ ಪೆರ್ನಾಳ್ ಖುತ್ಬಾ ಒಬ್ಬನಿಗೆ ಕೇಳಿಸಿದರೂ ಸಾಕಾಗುತ್ತದೆ.

    ಈದುಲ್ ಫಿತ್ರ್‍ನ ಖುತ್ಬಾದಲ್ಲಿ ಫಿತ್ರ್ ಝಕಾತ್ ಸಂಬಂಧಿತ ಕಾರ್ಯಗಳನ್ನು ಈದುಲ್ ಅಳ್‍ಹಾದ ಖುತ್ಬಾದಲ್ಲಿ ಉಳ್‍ಹಿಯ್ಯತ್ ಕುರಿತಾದ ವಿಷಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಒಂದನೇ ಖುತ್ಬಾವನ್ನು ಒಂಭತ್ತು ತಕ್ಬೀರ್‍ನಿಂದಲೂ, ಎರಡನೇ ಖುತ್ಬಾವನ್ನು ಏಳು ತಕ್ಬೀರ್‍ನಿಂದಲೂ ಆರಂಭಿಸಬೇಕು.

    ಈ ಬಾರಿ ಮನೆಯಲ್ಲೇ ನಮಾಝ್ ನಿರ್ವಹಿಸುವುದರಿಂದ ಖುತುಬಾ ಸಾಧ್ಯವಾದವರು ಮೇಲಿನ ನಿಬಂಧನೆಗಳನ್ನು ಪಾಲಿಸುವ ಮೂಲಕ ನಿರ್ವಹಿಸಬಹುದು. ಸಾಧ್ಯವಾಗದವರು ಕೇವಲ 2 ರಕಅತ್ ಈದ್ ನಮಾಝ್ ನಿರ್ವಹಿಸಿದರೂ ಸಾಕು.

ತಕ್ಬೀರ್

    ಈದುಲ್ ಫಿತ್ರ್‍ನಲ್ಲಿ ಮುನ್ನಾ ದಿನ ಸೂರ್ಯಾಸ್ತ ಸಮಯದಿಂದ ಹಿಡಿದು ಮರುದಿನ ಈದ್ ನಮಾಝ್‍ಗೆ ಕೈಕಟ್ಟುವ ತನಕ ನಿರಂತರವಾಗಿ ತಕ್ಬೀರ್ ಹೇಳಲು ಸುನ್ನತ್ತಿದೆ. ಇದಕ್ಕೆ ‘ಅತ್ತಕ್ಬೀರುಲ್ ಮುರ್ಸಲ್’ ಎನ್ನಲಾಗುತ್ತದೆ. ಈದುಲ್ ಫಿತ್ರ್‍ನಲ್ಲಿ ನಮಾಝ್‍ನ ಬಳಿಕ ತಕ್ಬೀರ್ ಹೇಳಲು ಸುನ್ನತ್ತಿಲ್ಲ. ಈದುಲ್ ಅಳ್‍ಹಾದಲ್ಲಿ ಇದು ಸುನ್ನತ್ತಿದೆ. ಈ ತಕ್ಬೀರ್‍ಗೆ ‘ಅತ್ತಕ್ಬೀರುಲ್ ಮುಖಯ್ಯದ್’ ಎನ್ನಲಾಗುವುದು.
  • Blogger Comments
  • Facebook Comments

0 comments:

Post a Comment

Item Reviewed: ಫಿತ್ರ್ ಝಕಾತ್ ಹಾಗೂ ಈದ್ ನಮಾಝ್ Rating: 5 Reviewed By: karavali Times
Scroll to Top