ಹಾಶೀರ್ ಪೇರಿಮಾರ್ |
ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆ ಕೊರೋನಾ ಹಾಟ್‍ಸ್ಪಾಟ್ ಆಗಿರುವ ಹೊರತಾಗಿಯೂ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಸಡಿಲಿಕೆ ಮಾಡಿದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ನಗರದ ಬೋಳೂರಿನ 51 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢವಾಗುತ್ತಲೇ ಲಾಕ್‍ಡೌನ್ ಸಡಿಲಗೊಂಡ ಜಿಲ್ಲೆಯ ಜನ ಮತ್ತಷ್ಟು ಆತಂಕಗೊಳ್ಳುವಂತಾಗಿದೆ ಎಂದು ಮಂಗಳೂರು ಯುವ ಕಾಂಗ್ರೆಸ್ ಕಾರ್ಯದರ್ಶಿ, ಪುದು ಗ್ರಾ.ಪಂ. ಸದಸ್ಯ ಹಾಶೀರ್ ಪೇರಿಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ನಿಯಂತ್ರಣ ಹಾಗೂ ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡುತ್ತಿರುವುದಕ್ಕೆ ಕಾರಣ ಕಂಡು ಹುಡುಕುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದ ಅವರು ಸರಕಾರದ ಪಟ್ಟಿಯಂತೆ ನಮ್ಮ ಜಿಲ್ಲೆ ಆರೆಂಜ್ ವಲಯದಲ್ಲಿದೆ. ಕೊರೋನಮುಕ್ತ ಅಲ್ಲದಿದ್ದರೂ, ಜಿಲ್ಲಾದ್ಯಂತ ಲಾಕ್‍ಡೌನ್ ನಿಯಮ ಸಡಿಲಿಸಿದ್ದು, ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ವಾಹನ ಓಡಾಟ, ವ್ಯಾಪಾರ ವಹಿವಾಟುಗಳಿಗೆ ಮತ್ತು ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವು ಜಿಲ್ಲೆಯ ಜನರ ಆತಂಕವನ್ನು ಹೆಚ್ಚು ಮಾಡಿದೆ.
ಮದ್ಯ ಖರೀದಿಯ ಸಂದರ್ಭದಲ್ಲಿ ಬಹತೇಕ ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಜನ ಪಾಲಿಸಿದಂತೆ ಕಾಣುತ್ತಿಲ್ಲ. ಇದರಿಂದಾಗಿ ಕೊರೋನಾ ಸೋಂಕು ಉಲ್ಭಣಿಸಿದರೆ ಅದರ ಪೂರ್ಣ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತವೇ ಹೊರಬೇಕಾಗುತ್ತದೆ. ಸಂಧಿಗ್ದ ಪರಿಸ್ಥಿತಿಯ ಗಂಭೀರತೆ ಅರಿಯದ ಜಿಲ್ಲಾಡಳಿತದ ಕ್ರಮಕ್ಕೆ ಜನತೆ ಭಯಭೀತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹಾಶೀರ್ ಪೇರಿಮಾರ್ ಜಿಲ್ಲಾಡಳಿತ ತಕ್ಷಣ ಕೈಗೊಂಡಿರುವ ಕ್ರಮದ ಮರುಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
0 comments:
Post a Comment