ಕಡಬ (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ವಿವಿಧೆಡೆ ಹಲವು ಮನೆಗಳಿಗೆ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಪಟ್ರೋಡಿ ಎಂಬಲ್ಲಿ ಹಲವು ಮರಗಳು ಧರಾಶಾಯಿಯಾಗಿದ್ದು, ತಂಗಪ್ಪ ಮೇಸ್ತ್ರಿ ಎಂಬವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ. ಪಕ್ಕದಲ್ಲೇ ಇದ್ದ ವಿಕ್ರಂ ಎಂಬವರ ಮನೆಗೂ ಹಾನಿಯಾಗಿದ್ದು, ಹುಕ್ರ ಎಂಬವರ ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಹಲವು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಪರಿಸರದಲ್ಲಿನ ಹಲವು ರಬ್ಬರ್ ಮರಗಳು, ಅಡಿಕೆ, ತೆಂಗು ಸೇರಿದಂತೆ ಅಪಾರ ಕೃಷಿ ನಾಶವಾಗಿವೆ. ಉಳಿದಂತೆ ಕಡಬ, ಬಿಳಿನೆಲೆ, ಪಂಜ, ಸುಬ್ರಹ್ಮಣ್ಯ, ನೆಲ್ಯಾಡಿ, ಇಚಿಲಂಪಾಡಿ, ಆಲಂಕಾರು, ಆತೂರು ಪರಿಸರದಲ್ಲಿ ಕೃಷಿಗೆ ಹಾನಿಯಾಗಿವೆ. ಕೊಯಿಲ ಗ್ರಾಮದ ಬಡ್ಡಮೆ, ಆನೆಗುಂಡಿ, ಕೊಯಿಲ ಮೊದಲಾದ ಪ್ರದೇಶದಲ್ಲಿ ಮನೆಗಳಿಗೆ ಹಾನಿಯಾಗಿದ್ದು, ರೈತರ ಕೃಷಿ ತೋಟಕ್ಕೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಗಾಳಿ, ಗುಡುಗು, ಮಿಂಚಿನ ಅಬ್ಬರಕ್ಕೆ ಕೊಯಿಲ ಮತ್ತು ರಾಮಕುಂಜ ಗ್ರಾಮ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿರುವುದಾಗಿ ವರದಿಯಾಗಿದೆ. ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮೂಸಾನ್ ಎಂಬವರ ಮನೆಯ ಮಾಡಿನ ಹಂಚು ಹಾರಿ ಹೋಗಿದೆ. ಮನೆಯ ಎದುರು ಭಾಗದಲ್ಲಿ ಸಿಮೆಂಟು ಶೀಟ್ ಮೂಲಕ ವಿಸ್ತರಿಸಿ ಕಟ್ಟಲಾಗಿದ್ದ ಹೊರ ಚಾವಡಿಯ ಮಾಡು ಸಂಪೂರ್ಣ ನೆಲಕ್ಕಪ್ಪಳಿಸಿದೆ. ಇದೇ ಪರಿಸರದಲ್ಲಿ ಪಿ.ಎಸ್. ಅಬೂಬಕ್ಕರ್ ಎಂಬವರ ಮನೆಯ ಮಾಡಿನ ಶೀಟು ನೆಲಕ್ಕುರುಳಿದೆ. ಶರೀಫ್ ಎಂಬವರ ಮನೆಯ ಮೇಲೆ ಮಾವಿನ ಮರ ಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ.
ಕೊಯಿಲ ಗ್ರಾಮದ ಗಂಡಿಬಾಗಿಲುನಿಂದ ರಾಮಕುಂಜ ಗ್ರಾಮದ ಕುಂಡಾಜೆ ತನಕ 13 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದೆ. ಇನ್ನಷ್ಟು ವಿದ್ಯುತ್ ಕಂಬಗಳ ಮೇಲೆ ಮರದ ಗೆಲ್ಲುಗಳು ಬಿದ್ದು ತಂತಿ ತುಂಡಾಗಿ ಬಿದ್ದಿದೆ. ಈ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
0 comments:
Post a Comment