ಬಂಟ್ವಾಳದಲ್ಲಿ ವ್ಯಾಪಕಗೊಳ್ಳುತ್ತಿರುವ ಅಕ್ರಮ ಮರಳುಗಾರಿಕೆ : ಸೂಕ್ತ ಕ್ರಮ ಕೈಗೊಳ್ಳಲು ಮಾಜಿ ಸಚಿವರಿಂದ ಜಿಲ್ಲಾಧಿಕಾರಿಗೆ ಆಗ್ರಹ - Karavali Times ಬಂಟ್ವಾಳದಲ್ಲಿ ವ್ಯಾಪಕಗೊಳ್ಳುತ್ತಿರುವ ಅಕ್ರಮ ಮರಳುಗಾರಿಕೆ : ಸೂಕ್ತ ಕ್ರಮ ಕೈಗೊಳ್ಳಲು ಮಾಜಿ ಸಚಿವರಿಂದ ಜಿಲ್ಲಾಧಿಕಾರಿಗೆ ಆಗ್ರಹ - Karavali Times

728x90

30 May 2020

ಬಂಟ್ವಾಳದಲ್ಲಿ ವ್ಯಾಪಕಗೊಳ್ಳುತ್ತಿರುವ ಅಕ್ರಮ ಮರಳುಗಾರಿಕೆ : ಸೂಕ್ತ ಕ್ರಮ ಕೈಗೊಳ್ಳಲು ಮಾಜಿ ಸಚಿವರಿಂದ ಜಿಲ್ಲಾಧಿಕಾರಿಗೆ ಆಗ್ರಹಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ಮಟ್ಟ ಹಾಕುವಂತೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಥ ರೈ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರಿಗೆ ಲಿಖಿತವಾಗಿ ಮನವಿ ಮಾಡಿಕೊಂಡಿದ್ದಾರೆ.

    ತಾಲೂಕಿನ ಮಣಿನಾಲ್ಕೂರು, ಕಡೇಶ್ವಾಲ್ಯ, ಕರ್ಪೆ ಮೊದಲಾದೆಡೆಗಳಲ್ಲಿ ವ್ಯಾಪಕ ಅಕ್ರಮ ಮರಳುಗಾರಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕಡೇಶ್ವಾಲ್ಯದಲ್ಲಿ ಮರಳುಗಾರಿಕೆ ಪಡೆದ ಗುತ್ತಿಗೆದಾರ ಇತರೆಡೆಗಳಲ್ಲೂ ಅಕ್ರಮ ಮರಳುಗಾರಿಕೆಗೆ ಸಹಕರಿಸುತ್ತಿದ್ದು ಅವರ ಮೂಲಕವೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ರಾಜಾರೋಷವಾಗಿ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆಯಾಗಲೀ, ಕಂದಾಯ ಇಲಾಖೆಯಾಗಲೀ, ಪೆÇಲೀಸ್ ಇಲಾಖೆಯಾಗಲೀ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದರೆ ಇದರಲ್ಲಿ ರಾಜಕೀಯ ಪ್ರಭಾವ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟ. ಈಗಾಗಲೇ ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರಿಗೆ ದೂರಿಕೊಂಡರೂ ರಾಜಕೀಯ ಪ್ರಭಾವಕ್ಕೆ ಒಳಗಾಗಿರುವ ಇಲಾಖಾಧಿಕಾರಿಗಳಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.

    ಅಕ್ರಮ ಮರಳುಗಾರಿಕೆ ದಂಧೆ ಮಾಡುವ ವ್ಯಕ್ತಿಗಳು ಕ್ಷೇತ್ರದ ಶಾಸಕರ ನಿಕಟವರ್ತಿಗಳಾಗಿದ್ದು ಅವರ ಒತ್ತಡದಿಂದಾಗಿ ಇಲಾಖೆಯು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ರಾಜಧನ ನಷ್ಟವಾಗುತ್ತಿದೆ. ಈ ಹಿಂದೆ ಅಧಿಕಾರ ಇಲ್ಲದಿದ್ದಾಗ ಅಕ್ರಮ, ರಾಜಧನ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ರಾಜಾರೋಷವಾಗಿ ಭಾಷಣ ಬಿಗಿಯುತ್ತಿದ್ದ ಇಂದಿನ ಬಂಟ್ವಾಳ ಶಾಸಕರು ಇದೀಗ ತಮ್ಮ ಆಪ್ತರೆನಿಸಿಕೊಂಡವರೇ ವ್ಯಾಪಕ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಸರಕಾರಕ್ಕೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿ ರಾಜಧನವನ್ನು ಬೇಕಾಬಿಟ್ಟಿ ಸ್ವಾಹಾ ಮಾಡುತ್ತಿರುವಾಗ ಈ ಬಗ್ಗೆ ಇನ್ನೂ ತುಟಿ ಬಿಚ್ಚುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿರುವ ಮಾಜಿ ಸಚಿವ ರಮಾನಾಥ ರೈ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳು ನಿಷ್ಪಕ್ಷವಾಗಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ವ್ಯಾಪಕಗೊಳ್ಳುತ್ತಿರುವ ಅಕ್ರಮ ಮರಳುಗಾರಿಕೆ : ಸೂಕ್ತ ಕ್ರಮ ಕೈಗೊಳ್ಳಲು ಮಾಜಿ ಸಚಿವರಿಂದ ಜಿಲ್ಲಾಧಿಕಾರಿಗೆ ಆಗ್ರಹ Rating: 5 Reviewed By: karavali Times
Scroll to Top