ಮಂಗಳೂರು (ಕರಾವಳಿ ಟೈಮ್ಸ್) : ಎಂತಹ ಕಠಿಣ ಪರಿಸ್ಥಿತಿ ಬಂದರೂ ಪ್ರವಾದಿಗಳ ಜೀವನ ಸೂತ್ರದಂತೆ ಬದುಕು ಸಾಗಿಸೋಣ, ಸಮಾಜದಲ್ಲಿ ಶಾಂತಿ ಸಹಬಾಳ್ವೆಗೆ ಒತ್ತು ಕೊಡೋಣ ಎಂದು ಅರ್ಕುಳ ಜುಮಾ ಮಸೀದಿ ಅಧ್ಯಕ್ಷ ಸಾಜಿದ್ ಒಡೆಯರ್ ಸಲಹೆ ನೀಡಿದರು.
ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಸಂದೇಶ ನೀಡಿದ ಅವರು ಕೊರೊನಾ ವಕ್ಕರಿಸಿ ಜಗತ್ತು ತತ್ತರಿಸಿದ ಈ ಸಂದರ್ಭದಲ್ಲಿ ಪ್ರವಾದಿ ಅನುಯಾಯಿಗಳಿಗೆ ಈ ಸಮಾಜದ ಮೇಲೆ ವಿಶೇಷ ಜವಾಬ್ದಾರಿ ಇದೆ. ರಸ್ತೆಯಲ್ಲಿ ಕಲ್ಲು ಬಿದ್ದಿದ್ದನ್ನು ಕಂಡರೆ ತೆರವುಗೊಳಿಸಿ ಎಂದು ಭೋದನೆ ಮಾಡಿರುವ ಪ್ರವಾದಿಯವರು ಈ ವಚನದ ಮೂಲಕ ಅನುಯಾಯಿಗಳಿಗೆ ಸಮಾಜದ ಮೇಲಿನ ಜವಾಬ್ದಾರಿಯನ್ನು ಸಾರಿದ್ದಾರೆ. ಹಾಗಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗೋಣ ಎಂದರು.
ಸರಕಾರದ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ನಾಡಿನ ಜನತೆಯ ಸೇವೆಯನ್ನು ಮಾಡುತ್ತಾ, ಕೆಟ್ಟ ಚಟಗಳಿಂದ ದೂರವಿದ್ದು, ಕಡ್ಡಾಯ ಕರ್ಮ ವಿಧಿಗಳನ್ನು ಪಾಲಿಸಿ ಈಮಾನ್ ಗಟ್ಟಿಗೊಳಿಸುವತ್ತ ಗಮನ ಕೇಂದ್ರಿಕರಿಸಬೇಕು. ಈಮಾನ್ ಪ್ರಕಾಶ ಹೃದಯದಲ್ಲಿದ್ದವರಿಗೆ ಅನುದಿನವು ಹಬ್ಬ ಆಗಿದೆ ಎಂಬುವುದನ್ನು ಮರೆಯಬಾರದು ಎಂದರು.
ಕೊರೊನಾ ಮನುಕುಲಕ್ಕೆ ಪ್ರಕೃತಿ ಕೊಟ್ಟ ಎಚ್ಚರಿಕೆಯ ಕರೆಗಂಟೆಯಾಗಿದೆ, ಜಾತಿ ಮತ ಪಂಗಡ ಎಂದು ಕಿತ್ತಾಡದೇ, ಮನುಷ್ಯ ವರ್ಗ ನಾವೆಲ್ಲ ಎಂಬುವುದನ್ನು ಮರೆಯದೆ ಜೀವನ ಮಾಡೋಣ ಎಂದ ಅವರು ಶೀಘ್ರ ಮಹಾಮಾರಿಯಿಂದ ಜಗತ್ತು ಮುಕ್ತವಾಗಲಿ ಎಂದವರು ಆಶಿಸಿದರು.
0 comments:
Post a Comment