ಸುಳ್ಯ (ಕರಾವಳಿ ಟೈಮ್ಸ್) : ರಾಜ್ಯದ ಸಹಕಾರಿ ಸಂಘಗಳಲ್ಲಿ ಕಳೆದ ವರ್ಷ ಪಡೆದ ಶೂನ್ಯ ಬಡ್ಡಿ ದರದ ಬೆಳೆ ಸಾಲಕ್ಕೆ ಸಂಬಂಧಪಟ್ಟಂತೆ ಸರಕಾರ ಕಳುಹಿಸಿದ ಹೊಸ ನಿಯಮಾವಳಿಗಳನ್ನು ತಕ್ಷಣ ಹಿಂಪಡೆದು ಕಳೆದ ವರ್ಷ ಸಾಲ ನೀಡುವಾಗ ಇದ್ದ ನಿಯಮಗಳಂತೆಯೇ ಈ ಸಾಲಿನಲ್ಲಿ ನವೀಕರಿಸುವಂತೆ ಸರಕಾರ ಆದೇಶ ಹೊರಡಿಸಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಮ್ ಭಟ್ ಬೆಟ್ಟ ಆಗ್ರಹಿಸಿದ್ದಾರೆ.
ಈ ಬಗ್ಗೆ ಸಹಕಾರ ಸಚಿವರಿಗೆ ಮನವಿ ಸಲ್ಲಿಸಿರುವ ಅವರು ಸಾಲ ನೀಡುವಾಗ ಶೂನ್ಯ ಬಡ್ಡಿ ದರದಲ್ಲಿ ನೀಡಿ ಮರುಪಾವತಿ ಸಂದರ್ಭದಲ್ಲಿ ಬಡ್ಡಿ ಪಾವತಿಸುವಂತೆ ಆದೇಶಿಸುವುದು ರೈತರ ಹಿತಕ್ಕೆ ಮಾರಕ ಮತ್ತು ರೈತ ಪರ ಎಂದು ಹೇಳಿಕೊಳ್ಳುವ ಸರಕಾರದ ನೀತಿಗಳು ರೈತರ ಪರವಾಗಿ ಇರಬೇಕೇ ಹೊರತು ರೈತ ವಿರೋಧಿಯಾಗಿರಬಾರದು ಎಂದವರು ತಿಳಿಸಿದ್ದಾರೆ.
2019-20ರಲ್ಲಿ ಸಾಲ ನೀಡುವಾಗ ಮೂರು ಲಕ್ಷ ರೂಪಾಯಿ ತನಕ ಎಲ್ಲಾ ರೈತರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದ್ದು, ಹೊಸ ನಿಯಮಾವಳಿಯಂತೆ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗಲಿದ್ದು ಉಳಿದವರು ಶೇಕಡಾ 7 ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ ಮತ್ತು ಆದಾಯ ತೆರಿಗೆ ಪಾವತಿಸುವ ಮತ್ತು ಪಿಂಚಣಿ ಪಡೆಯುವ ರೈತರನ್ನು ಈ ಸೌಲಭ್ಯದಿಂದ ಹೊರಗಿಡಲಾಗಿದೆ. ಇದೂ ಸರಿಯಲ್ಲ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment