ಮಂಗಳೂರು (ಕರಾವಳಿ ಟೈಮ್ಸ್) : ಸರಕಾರದ ಸುತ್ತೋಲೆಯಂತೆ ಶಾಲಾ ಫೀಸು ಪಾವತಿಸಲು ಸಾಧ್ಯವಿಲ್ಲದ ಅಥವಾ ಪಾವತಿಸಲು ನಿರಾಕರಿಸುವ ಪೋಷಕರಿಂದ ಮುಂದಿನ ಆದೇಶದವರೆಗೆ ಯಾವುದೇ ಕಾರಣಕ್ಕೂ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಖಾಸಗಿ ಶಾಲೆಗಳಿಗೆ ಸೂಚಿಸಿದ್ದಾರೆ.
ಶಾಲೆಗಳು ಫೀಸು ಕಟ್ಟುವ ವಿಷಯದಲ್ಲಿ ವಿದ್ಯಾರ್ಥಿ ಪೋಷಕರಿಗೆ ಯಾವುದೇ ರೀತಿಯ ಒತ್ತಡ ಹೇರಬಾರದು. ಶುಲ್ಕವನ್ನು ಪಾವತಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿರುವ ಕುರಿತು ಯಾವುದೇ ದೂರುಗಳು ಬಂದಲ್ಲಿ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಕ್ಷಣ ಹಕ್ಕು ಕಾಯಿದೆಯಡಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವು ಖಾಸಗಿ ಶಾಲೆಯವರು ಶಾಲಾ ಶುಲ್ಕವನ್ನು ವಸೂಲು ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪೋಷಕರಿಂದ ದೂರವಾಣಿ ಮೂಲಕ ಹಲವು ದೂರುಗಳು ಬರುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಯವರಿಗೆ ತಿಳಿಸುವುದೇನೆಂದರೆ ಶಾಲಾ ಶುಲ್ಕ ವಸೂಲಾತಿ ಕುರಿತಂತೆ ಯಾವುದೇ ವಿದ್ಯಾರ್ಥಿ ಪೋಷಕರಿಗೆ ಒತ್ತಡ ಹೇರುವಂತಿಲ್ಲ. ಒಂದು ವೇಳೆ ಈ ಕುರಿತು ದೂರು ದಾಖಲಾದಲ್ಲಿ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಕ್ಷಣ ಹಕ್ಕು ಕಾಯಿದೆಯಡಿ ಶಿಸ್ತು ಕ್ರಮ ವಹಿಸಲಾಗುವುದು. ಅಲ್ಲದೇ, ಅಂತಹ ಶಾಲೆಗಳ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment