ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಲಾಕ್‍ಡೌನ್ ಅವಧಿಯಲ್ಲಿ ಉದ್ಯೋಗ, ವ್ಯಾಪಾರವಿಲ್ಲದೇ ಜನ ಸಾಮಾನ್ಯರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದಿನದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇಂದು ಒಂದೊತ್ತಿನ ಊಟಕ್ಕಾಗಿ ಕೈಚಾಚುವ ಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂಕಷ್ಟದ ಈ ಸಂದರ್ಭದಲ್ಲಿ ಲಾಕ್‍ಡೌನ್ ಅವಧಿಯ ಮೂರು ತಿಂಗಳುಗಳ ಕಾಲದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಒತ್ತಾಯಿಸಿ ಡಿವೈಎಫ್‍ಐ ದೇರಳಕಟ್ಟೆ ಘಟಕದ ವತಿಯಿಂದ ತೊಕ್ಕೊಟ್ಟು-ಚೆಂಬುಗುಡ್ಡೆಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಕಷ್ಟ ಕಾಲದಲ್ಲಿ ಮೆಸ್ಕಾಂ ಸಂಸ್ಥೆ ಜನ ಸಾಮಾನ್ಯರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಗ್ರಾಹಕರ ಜೊತೆ ನಿಲ್ಲಬೇಕು. ಮೂರು ತಿಂಗಳ ವಿದ್ಯುತ್ ದರ ಮನ್ನಾ ಮಾಡುವುದರ ಜೊತೆಗೆ ಆರು ತಿಂಗಳವರೆಗೆ ಬಿಲ್ಲು ಪಾವತಿಸಲು ಬಲವಂತಪಡಿಸದೇ ಸಮಯಾವಕಾಶ ನೀಡಬೇಕು ಎಂದು ಡಿವೈಎಫ್‍ಐ ದೇರಳಕಟ್ಟೆ ಸಮಿತಿಯ ನಿಯೋಗ ಅಧಿಕಾರಿಗಳನ್ನು ಒತ್ತಾಯಿಸಿತು.
ನಿಯೋಗದಲ್ಲಿ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡ್, ಡಿವೈಎಫ್‍ಐ ದೇರಳಕಟ್ಟೆ ಸಮಿತಿ ಅಧ್ಯಕ್ಷ ನವಾಝ್, ಉಪಾಧ್ಯಕ್ಷ ಜಗದೀಶ್, ಕೋಶಾಧಿಕಾರಿ ಬಾಝಿಕ್, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ, ಡಿವೈಎಫ್‍ಐ ದೇರಳಕಟ್ಟೆ ಘಟಕದ ಸದಸ್ಯರಾದ ಕಿಶೋರ್, ಅಶ್ರಫ್, ಸಫ್ವಾನ್ ಮೊದಲಾದವರು ಇದ್ದರು.
0 comments:
Post a Comment